ಪ್ರೀತಿಯ ಪುಸ್ತಕ : ಸಂಚಿಕೆ - 62
Friday, June 9, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 62
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಮಕ್ಕಳಿಗೆ ಕೊಡೆ ಬರೇ ಮಳೆಗೆ ಹಿಡಿಯುವ ವಸ್ತು ಅಲ್ಲ. ಆಟದ ವಸ್ತು ಕೂಡಾ. ಅದಕ್ಕೆ ಸರಿಯಾಗಿ ಅದೆಷ್ಟೋ ಬಣ್ಣದ, ಗಾತ್ರದ ಕೊಡೆಗಳು ಬರುತ್ತಲೇ ಇರುತ್ತವೆ. ಈ ಕಥೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅವಳ ಮತ್ತು ಅವಳ ನೀಲಿ ಬಣ್ಣದ ಕೊಡೆಯ ಕಥೆ ಹೇಳುತ್ತಾಳೆ. ಅವಳ ಪ್ರೀತಿಯ ಹೊಸಾ ಕೊಡೆ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುತ್ತಾಳೆ. ದಾರಿಯಲ್ಲಿ ಸಿಗುವ ಒಬ್ಬ ಅಂಕಲ್ ಅವಳ ಹತ್ತಿರ ಕೊಡೆ ಚೆನ್ನಾಗಿದೆ ನನಗೆ ಕೊಡು ಅಂತ ಕೇಳುತ್ತಿರುತ್ತಾರೆ. ಆದಿನ ಬಹಳ ಮಳೆ ಬಂದು ನೆಲ ಹಸಿಯಾಗಿ ಇರುತ್ತದೆ. ಜಾರಿ ಬೀಳುತ್ತಾಳೆ, ಮೈಕೈಯೆಲ್ಲಾ ಒದ್ದೆಯಾಗಿ ಬಿಡುತ್ತದೆ, ಮಣ್ಣೂ ಮೆತ್ತಿಕೊಳ್ಳುತ್ತದೆ. ಬೇಸರವೆಂದರೆ, ನೀಲಿ ಕೊಡೆ ಮೋರಿಯಲ್ಲಿ ಬಿದ್ದು ನೀಲಿ ಹೋಗಿ ಕಪ್ಪಾಗಿರುತ್ತದೆ. ಇವಳಿಗೆ ಬೇಸರವೇ ಬೇಸರ. ಅಂಕಲ್ ಅವಳನ್ನು ಶಾಲೆಗೆ ತಲಪಿಸುತ್ತಾರೆ. ಅವಳು ಆ ಕಪ್ಪು ಕೊಡೆ ಬೇಡವೆಂದು ಬಿಟ್ಟೇ ಹೋಗಿರುತ್ತಾಳೆ. ಆಮೇಲೆ ಅವಳಿಗೆ ತಾನು ಕಳೆದುಕೊಂಡ ಕೊಡೆ ಹೇಗೆ ಸಿಗುತ್ತದೆ. ಮನೆಯಲ್ಲಿ ಅಮ್ಮ ಅಪ್ಪ ಏನು ಹೇಳುತ್ತಾರೆ. ಅನ್ನುವುದು ನೀವು ಓದಿ ನೋಡಿದರೆ ಗೊತ್ತಾಗುತ್ತದೆ. ಕಥೆಯ ಎಲ್ಲಾ ಅಂಶಗಳು ಚಿತ್ರಗಳಲ್ಲಿ ಕೂಡಾ ಚೆನ್ನಾಗಿ ಬಂದಿವೆ. ಓದುವಿರಿ ತಾನೇ.....?
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್
ಲೇಖಕರು: ಆನಂದ ಪಾಟೀಲ
ಕಲಾವಿದರು: ಅಶೋಕ ರಾಜಗೋಪಾಲನ್
ಬೆಲೆ: ರೂ.50/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************