-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 13

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 13

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 13
ಲೇಖಕರು : ಪ್ರೇಮನಾಥ್ ಮರ್ಣೆ
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ ಮೀನಕಳಿಯ
ಬೈಕಂಪಾಡಿ, ಮಂಗಳೂರು ಉತ್ತರ
Mob : +91 99642 14605
             
          25 ವರ್ಷಗಳ ಹಿಂದಿನ ಘಟನೆ. ಶಿಕ್ಷಕ ವೃತ್ತಿಗೆ ಸೇರಿದ ಆರಂಭದ ದಿನಗಳು. ಆತ ಎರಡನೇ ತರಗತಿಯ ವಿದ್ಯಾರ್ಥಿ. ತರಗತಿಯ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ತೊಂದರೆ ಕೊಡ್ತಾ ಇದ್ದ. ಆತನ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರ್ತಾ ಇದ್ದ ಹಾಗೆ, ತರಗತಿಯ ಅಧ್ಯಾಪಕನಾಗಿ ಗದರಿಸಿ ಬೆತ್ತದ ರುಚಿಯನ್ನು ತೋರಿಸಿದ್ದೆ. ಜೋರಾಗಿ ಅಳುತ್ತಿದ್ದ ಆತನ ಬಗ್ಗೆ ಕನಿಕರ ಉಂಟಾದರೂ ಉಳಿದ ವಿದ್ಯಾರ್ಥಿಗಳ ರಕ್ಷಣೆಯು ನನ್ನ ಜವಾಬ್ದಾರಿಯಾಗಿತ್ತು. ಮರುದಿನ ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಿತ್ತು. ಕೆಲವರು ಹಾಡಿದ್ರು. ಕೆಲವರು ನೃತ್ಯ ಮಾಡಿದ್ರು. ಕೆಲವರು ಸ್ಕಿಟ್ ಗಳನ್ನು ಮಾಡಿದ್ರು. ಕೊನೆಯಲ್ಲಿ ಒಬ್ಬ ಮಹಮ್ಮದ್ ರಫಿ ಅವರ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದ. ಆ ಹಾಡನ್ನು ಕೇಳಿದ ತಕ್ಷಣ ನನ್ನ ಕಿವಿಗಳು ನೆಟ್ಟಗಾದವು. ಸರಾಗವಾಗಿ ಸುಶ್ರಾವ್ಯವಾಗಿ ಹಾಡಿದ ಆ ಬಾಲಕ ಮುನ್ನಾ ದಿನ ನನ್ನಿಂದ ಪೆಟ್ಟು ತಿಂದಂತಹ ವಿದ್ಯಾರ್ಥಿಯಾಗಿದ್ದ. ಆ ಹಾಡಿನ ಮಾಧುರ್ಯವನ್ನು ಕೇಳಿ ನಾನು ಆತನ ಸಂಗೀತಕ್ಕೆ ಮಾರು ಹೋಗಿದ್ದೆ. ಯಾವುದೇ ಸಂಗೀತದ ಹಿನ್ನೆಲೆ ಇಲ್ಲದಿದ್ದರೂ ಆತ ತನ್ನ ಸ್ವರ ವಿಸ್ತಾರವನ್ನು ಮಾಡುವ ರೀತಿ ಸಂಗೀತ ಕಲಿತವರನ್ನೂ ಮೀರಿಸುವಂತಿತ್ತು. ಆತನನ್ನು ತಬ್ಬಿಕೊಂಡುಬಿಟ್ಟೆ. "ಯಾರು ಕಲಿಸಿದ್ದೋ ಈ ಹಾಡು? ಎಷ್ಟು ಚೆನ್ನಾಗಿ ಹಾಡಿದ್ದಿ?" ಅಂದೆ. ನಾನೇ ಕ್ಯಾಸೆಟ್ ಕೇಳಿ ಕಲಿತದ್ಥು" ಅಂದ. "ಭೇಷ್.. ತುಂಬಾ ಚೆನ್ನಾಗಿ ಹಾಡಿದ್ದಿಯಾ" ಅಂದೆ. ಆತನ ಅಮ್ಮ ನಮ್ಮದೇ ಶಾಲೆಯ ಮುಖ್ಯ ಅಡುಗೆಯವರಾದ ಕಾರಣ ಅವರಲ್ಲೂ ಆತನ ಹಾಡಿನ ಕುರಿತು ಪ್ರಶಂಸೆ ಮಾಡಿದ್ದೆ. ಒಂದು ಪ್ರಶಂಸೆಯ ಆ ಮಾತು ಕೆಲಸ ಮಾಡಿತ್ತು. ಆತ ನನಗೆ ಇನ್ನೂ ಹತ್ತಿರವಾದ. ನನಗೆ ಮತ್ತೆ ಬೆತ್ತದ ಅಗತ್ಯವೇ ಬರಲಿಲ್ಲ. ತರಗತಿಯ ಮಕ್ಕಳಿಗೆ ಅವನಿಂದ ಮತ್ತೆ ತೊಂದರೆಯಾಗಲೇ ಇಲ್ಲ. ಎಲ್ಲರೂ ಆತನ ಹಾಡನ್ನು ಕೇಳಲು ತರಗತಿಯಲ್ಲಿ ತುದಿಗಾಲಲ್ಲಿ ನಿಲ್ತಾ ಇದ್ರು. ನಾವು ಸಂಗೀತ ತರಗತಿ ಆರಂಭಿಸಿಯೇ ಬಿಟ್ಟೆವು. ಆ ವರ್ಷದ ಪ್ರತಿಭಾ ಕಾರಂಜಿಯಲ್ಲಿ ಸಂಗೀತದ ಎಲ್ಲಾ ವಿಭಾಗಗಳನ್ನು ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ತರುವುದರೊಂದಿಗೆ ಇಡೀ ಶಾಲೆಗೆ ಟೀಮ್ ಚಾಂಪಿಯನ ಶಿಪ್ ಬರುವಲ್ಲಿ ಆತನು ಕಾರಣನಾಗಿದ್ದ. ಎಲ್ಲರಿಂದಲೂ 'ಭವಿಷ್ಯದ ಮಹಮ್ಮದ್ ರಫಿ' ಯೆಂದೇ ಪ್ರಶಂಸೆಗೊಳಗಾಗುತ್ತಿದ್ದ. 
      ಮುಂದಿನ 5 ವರುಷ ನಮ್ಮ ಶಾಲೆ ಸಾಂಸ್ಕೃತಿಕ ವಾಗಿ ಗುರುತಿಸಲು ಕಾರಣನಾಗಿದ್ದ. ಪ್ರೌಢಶಾಲೆಗೆ ಆತನ ದಾಖಲಾತಿಗಾಗಿ ಎರಡು ಶಾಲೆಗಳ ನಡುವೆ ಫೈಪೋಟಿಯೂ ನಡೆದಿತ್ತು. ಒಂದಷ್ಟು ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತದ ಆರಂಭಿಕ ಪಾಠಗಳನ್ನು ಕಲಿತು ಆತ ತನ್ನ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಗುರುತಿಸಲ್ಪಡುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದ. ಈಗ ಆತ ಹವ್ಯಾಸಿ ಗಾಯಕ. ಎರಡು ಮುದ್ದಾದ ಮಕ್ಕಳ ತಂದೆ. "ಟಿ.ವಿ.ಯಲ್ಲಿ ಸಂಗೀತ ಪ್ರಸಾರವಾಗುತ್ತಿದ್ದಂತೆಯೇ ಅಪ್ಪನಂತೆ ಆ.... ಅನ್ನುತ್ತಾ ಕಣ್ಣಗಲಿಸಿಕೊಂಡು ಮಿಸುಕಾಡದೆ ಹತ್ತಿರ ಹೋಗಿ ಕುಳಿತುಕೊಳ್ಳುತ್ತವೆ" ಅಂತ ಮಕ್ಕಳ ಅಜ್ಜಿ ತನ್ನ ಮಗನ ಬಾಲ್ಯದ ಆಸಕ್ತಿಯನ್ನು ಮತ್ತು ಮೊಮ್ಮಕ್ಕಳ ಸಂಗೀತ ಪ್ರೀತಿಯನ್ನೂ ನೆನಪಿಸಿಕೊಳ್ಳುತ್ತಾರೆ. 
    ಮಕ್ಕಳ ಸಂಗೀತಾಸಕ್ತಿಯ ಪೋಷಣೆಗೆ ಸಿಧ್ಧತೆ ನಡೆದಿದೆ. ಜಾತಿ, ಧರ್ಮದ ಬೇಧವಿಲ್ಲದೆ ಸಂಗೀತದ ಒಲವು ಆ ಕುಟುಂಬದ ಕೈ ಹಿಡಿದಿದೆ. ಅದು ಮುಂದಿನ ಪೀಳಿಗೆಗೂ ವ್ಯಾಪಿಸಲಿ ಅಂತ ನಾನೂ ಆಶಿಸಿದೆ. ಮೊನ್ನೆಯಷ್ಟೇ ಆತನ ಫೋನ್ ಬಂದಿತ್ತು. "ಸರ್ ಬೆಂಗಳೂರಿನಲ್ಲಿ ಒಂದು ಪ್ರತಿಷ್ಠಿತ ಹೋಟೆಲ್ನಲ್ಲಿ ಉದ್ಯೋಗದಲ್ಲಿದ್ದೇನೆ. ಬೆಂಗಳೂರಿಗೆ ಬಂದಾಗ ಬೇರೆಲ್ಲೂ ಹೋಗ್ಬೇಡಿ ಸರ್. ನಮ್ಮ ಹೋಟೆಲ್ ಗೇ ಬನ್ನಿ. ಬಿಡುವಿಲ್ಲದಿದ್ರೂ ಹಾಡಿನ ಅಭಿರುಚಿಯನ್ನು ಮುಂದುವರೆಸಿದ್ದೇನೆ. ಸ್ಟುಡಿಯೋ ರೆಕಾರ್ಡಿಂಗ್ ಮಾಡ್ತಿದ್ದೇನೆ. ನಿಮಗೊಂದು ಹಾಡಿನ ತುಣುಕನ್ನು ಕಳುಹಿಸಿದ್ದೇನೆ.. ಆಲಿಸಿ ಅಭಿಪ್ರಾಯ ತಿಳಿಸಿ" ಅಂದಿದ್ದಾನೆ. 
.................................... ಪ್ರೇಮನಾಥ್ ಮರ್ಣೆ
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ ಮೀನಕಳಿಯ
ಬೈಕಂಪಾಡಿ, ಮಂಗಳೂರು ಉತ್ತರ
Mob : +91 99642 14605
******************************************   


Ads on article

Advertise in articles 1

advertising articles 2

Advertise under the article