-->
ಸಂಚಾರಿಯ ಡೈರಿ : ಸಂಚಿಕೆ - 41

ಸಂಚಾರಿಯ ಡೈರಿ : ಸಂಚಿಕೆ - 41

ಸಂಚಾರಿಯ ಡೈರಿ : ಸಂಚಿಕೆ - 41
ಲೇಖಕರು : ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

       
     ಅನ್ನದ ಥಾಲಿ ಮುಂದಿತ್ತು, ಹೊಟ್ಟೆ ಹಸಿದಿತ್ತು !! ಹೊರಗಿನ ವಾತಾವರಣ ಅತ್ತ ಸೆಕೆಯೂ ಅಲ್ಲ, ಚಳಿಯೂ ಅಲ್ಲ ! ಬಿಸಿಬಿಸಿ ಅನ್ನಕ್ಕೆ ನೆಂಚಿಕೊಳ್ಳಲು ಸೋರೆಕಾಯಿಯ ಬೇಯಿಸಿದ ಬಳ್ಳಿ ಕೊಟ್ಟಿದ್ದರು..! ಏನಪ್ಪಾ ಇಷ್ಟು ಉದ್ದಕ್ಕಿದೆ ಅಂತಾ ರುಚಿ ನೋಡಿದಾಗ ನನಗಾಶ್ಚರ್ಯವಾಗಿತ್ತು? ಅರೇ! ಇದೇನಿದು ಉಪ್ಪು ಹಾಕೋಕೇ ಮರೆತಿರಾ ಎಂದು ಕೇಳಿದಾಗ, ಅಯ್ಯೋ ನಾವು ಇದನ್ನೇ ಇಷ್ಟ ಪಡೋದು, ಉಪ್ಪು ಖಾರ ಹಾಕಿದ್ರೆ ಏನ್ ಮಜಾನೂ ಇರಲ್ಲ, ನಾವು ಬುಡಕಟ್ಟು ಜನಾಂಗದವರು ಬಾಯಿಲ್ಡ್ ಸಬ್ಜಿಯನ್ನ ಇಷ್ಟಪಡುತ್ತೇವೆ ಎಂದು ಬಿಟ್ಟರು.
     ಅದು ನನಗೆ ಅಚ್ಚರಿಯೆನಿಸಿದರೂ ಈಶಾನ್ಯ ರಾಜ್ಯಗಳ ಬಹುತೇಕ ಬುಡಕಟ್ಟು ಜನಾಂಗಗಳಲ್ಲಿ ಈಗಲೂ ಕೂಡಾ ಒಂದು ಹೊತ್ತಿನ‌ ಊಟ ಉಪ್ಪು ಖಾರ ಇಲ್ಲದೆ ತಿನ್ನುವ ಪರಿಪಾಠ ಇದೆ. ಅದು ಬರೀ ಸೋರೆಕಾಯಿ, ಕುಂಬಳಕಾಯಿ ಸೊಪ್ಪುಗಳು ಮಾತ್ರವಲ್ಲ! ಕಾಡಿನಲ್ಲಿ ಸಿಗುವ ವಿವಿಧ ಬಗೆಯ ಸೊಪ್ಪುಗಳನ್ನ ಬೇಯಿಸಿ ತಿನ್ನುವ ಪರಂಪರೆ ಮೈಗೂಡಿಸಿಕೊಂಡು ಬಂದಿದ್ದಾರೆ. ಆಧುನಿಕತೆಯ ಗಾಳಿಗೆ ಸೋಕಿದ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರೂ, ಒಂದು ಬಾಯಿಲ್ಡ್ ಸಬ್ಜಿ ಮಾಡಿಟ್ಟುಕೊಂಡಿರುತ್ತಾರೆ.
     ಅಸ್ಸಾಂನ ಮಿಶಿಂಗ್, ಕಾರ್ಬಿ, ಬೋರೋ ಜನಾಂಗಗಳು ಬೇಯಿಸಿದ ಸೊಪ್ಪಿಗೆ ಒಗರಿನ ರಸ ಹಾಕುತ್ತಾರೆ. ಅರುಣಾಚಲ ಪ್ರದೇಶದ ನ್ಯಿಶಿ, ಗಾಲೋ, ತಾಗಿನ್ ಜನರು ಬ್ಯಾಂಬೂ ಟೆಂಙಾ (ಬಿದಿರಿನ ಕಳಲೆಯ ಅಂಶ) ಸೇರಿಸುತ್ತಾರೆ. ಮೇಘಾಲಯದ ಗಾರೋ, ಖಾಸಿ ಜನಾಂಗದವರು ಬೇಯಿಸಿಟ್ಟುಕೊಂಡ ಸೊಪ್ಪಿಗೆ ಬಾಳೆ ಎಲೆಯನ್ನ ಸುಟ್ಟು ಅದರ ಪುಡಿ ಬೆರೆಸುತ್ತಾರೆ. ತ್ರಿಪುರಾದ ಕೊಕ್ಬರಕ್ ಜನಾಂಗದವರೂ ಸಹ ಇಷ್ಟ ಪಟ್ಟು ಸೇವಿಸುವ ಆಹಾರ ಪದಾರ್ಥ‌ ಇದಾಗಿದೆ..
    ಸೊಪ್ಪುಗಳಲ್ಲಿರುವ ಕ್ಷಾರಗುಣ ಹಾಗೇಯೇ ಉಳಿದುಕೊಂಡು, ಖಾರ-ಹುಳಿಯಿಂದ ತಾಮಸ ಗುಣಗಳು ಹೆಚ್ಚಾಗದಂತೆ ಕಡಿಮೆ ಬೇಯಿಸಿ ತಿನ್ನುವ ಈ ವಿಧಾನ ನಿಜವಾಗಿಯೂ ಅನುಕರಣೀಯ..! ಬಹುಶಃ ಈಶಾನ್ಯ ರಾಜ್ಯದ ಬುಡಕಟ್ಟು ಜನಾಂಗಗಳ ಸೌಂದರ್ಯಕ್ಕೆ ಇದೂ ಒಂದು ರಹಸ್ಯವಾಗಿರಬಹುದೇ..? ಗೊತ್ತಿಲ್ಲ!!
......................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************


Ads on article

Advertise in articles 1

advertising articles 2

Advertise under the article