ನಿಷ್ಪಾಪಿ ಸಸ್ಯಗಳು : ಸಂಚಿಕೆ - 04
Wednesday, June 28, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 04
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ....? ಸಾಮಾನ್ಯವಾಗಿ ಮೃಗಶಿರಾ ನಕ್ಷತ್ರದಲ್ಲಿ ಭಾರಿ ಮಳೆ ಸುರಿದು ನೆರೆ ಬರುತ್ತಿತ್ತು. ಆದರೆ ಈ ಸಲ ಇನ್ನೂ ಸರಿಯಾಗಿ ಮಳೆಗಾಲವೇ ಆರಂಭ ಆಗಿಲ್ಲ. ಅರಬೀ ಸಮುದ್ರ ಸನಿಹವೇ ಇದ್ದರೂ ಕರಾವಳಿ ಭಾಗಗಳಲ್ಲಿ ಬಾವಿಗಳು ಇನ್ನೂ ತುಂಬಿಲ್ಲ. ಆರ್ದ್ರಾ ನಕ್ಷತ್ರದಲ್ಲೂ ಮಳೆ ಬಾರದೇ ಹೋದರೆ ಬರಗಾಲ ನಿಶ್ಚಿತ ಎನ್ನುವ ನಂಬಿಕೆಯಿದೆ. "ಆರ್ದ್ರಾ ಹೊಯ್ದರೆ ಮಾತ್ರ ದಾರಿದ್ರ್ಯ ಹೋಗುತ್ತದೆ" ಎನ್ನುವುದು ಹಿರಿಯರ ಅನುಭವದ ನುಡಿ.
ಮುಂಗಾರಿನ ಮಳೆ ಸೋಕಿದ ಕೆಲವೇ ದಿನಗಳೊಳಗೆ ಹಲವಾರು ಜಾತಿಯ, ಹಲವಾರು ರೀತಿಯ ಪುಟಾಣಿ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಸಿರೇ ಆಗಿದ್ದರೂ ಎಲ್ಲ ಹಸಿರುಗಳು ಬೇರೆ ಬೇರೆಯೇ ಆಗಿರುವುದು ಪ್ರಕೃತಿಯ ವೈಶಿಷ್ಟ್ಯ. ಈ ಬಾರಿ ಮುಸಲಧಾರೆಗೆ ಮೈಯ್ಯೊಡ್ಡ ಬೇಕಾಗಿದ್ದ ಸಸ್ಯಗಳು ಅಶರೀರವಾಗಿವೆ.
ಮಳೆಯ ಮಗುವಾಗಿ ಒಣ ಜಮೀನು, ಗುಡ್ಡಗಳ ಇಳಿಜಾರುಗಳಲ್ಲಿ ಕುರುಚಲು ಗಿಡಗಳಗಳನ್ನೊಳಗೊಂಡ ಸಸ್ಯಾವರಣಗಳಲ್ಲಿ ವಿರಳವಾಗಿ ಅಥವಾ ಹುಲ್ಲಿನ ಜೊತೆ ಬೆಳೆಯುವ ಒಂದು ಅಪರೂಪದ ಸಸ್ಯ ಪುರುಷ ರತ್ನ.
ಇಂದು ಅವನತಿಯ ಅಂಚಿನಲ್ಲಿರುವ ಈ ಸಸ್ಯವು ಏಷ್ಯಾ ಮೂಲದ್ದಾಗಿದೆ. ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಚೀನಾಗಳಲ್ಲಿ ಕಂಡು ಬರುವ ಈ ಸಸ್ಯವು ಕಳೆ ಸಸ್ಯದಂತೆ ಕಂಡರೂ ಆಕರ್ಷಕವಾಗಿದೆ. ಪುಟ್ಟದಾಗಿ ಕೋಮಲವಾಗಿರುವ ಈ ನಿಷ್ಪಾಪಿ ಸಸ್ಯವನ್ನು ಗುರುತಿಸುವುದೇ ಸವಾಲಿನ ಕೆಲಸ.
ನಮ್ಮ ಸುತ್ತಮುತ್ತ ನೆಲದಿಂದ ಸುಮಾರು ಐದು ಹತ್ತು ಸೆ.ಮೀ. ನಷ್ಟು ಎತ್ತರ ಬೆಳೆಯುವ ಪುರುಷರತ್ನವು ಮೂವತ್ತು ಸೆ.ಮೀ ವರೆಗೂ ಬೆಳೆಯುವ ಸಸ್ಯವಾಗಿದೆ. ತೊಟ್ಟಿರದ ಸರಳವಾದ ನೀಳ ಎಲೆಗಳು ಕಾಂಡದ ಮೇಲೆ ಪರ್ಯಾಯ ವಾಗಿ ಜೋಡಿಸಲ್ಪಟ್ಟಿದ್ದು ಎಲೆಗಳ ಕಂಕುಳಲ್ಲಿ ತಿಳಿಗೆಂಪು ಅಥವಾ ನೀಲಿ ಮಿಶ್ರಿತ ಕೆಂಪು ವರ್ಣದ ಪುಟ್ಟ ಒಂಟಿ ಹೂಗಳಿರುತ್ತವೆ. ಸಣ್ಣ ತೊಟ್ಟಿನ ಈ ಪುಷ್ಪದ ಒಂದು ದಳ ಇತರ ದಳಗಳಿಗಿಂತ ದೊಡ್ಡದಾಗಿರುತ್ತದೆ. ನಡು ಮಧ್ಯಾಹ್ನ ದಾಟಿದರೆ ಈ ಹೂಗಳೂ ಮುದುಡಿ ಉದುರುತ್ತವೆ. ಹೂಗಳ ಸಹಾಯದಿಂದ ಈ ಗಿಡವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
ಹೈಬಾಂಥಸ್ ಇನ್ನೆಸ್ಪರ್ಮಸ್ (ennespermus) ಎಂಬ ವೈಜ್ಞಾನಿಕ ಹೆಸರಿರುವ ಈ ಸಸ್ಯವು ವಯೋಲೇಸಿಯ (Violaceae) ಕುಟುಂಬಕ್ಕೆ ಸೇರಿದೆ.
ಚರಾಟ, ರತ್ನಪುರುಷ, ಸಿರಂಟಿ ಗಿಡವೆಂದು ಕನ್ನಡದಲ್ಲಿ ಕರೆಯಲ್ಪಡುವ ಈ ಸಸ್ಯವು ಔಷಧೀಯ ಗಣಿಯಾಗಿದೆ. ಮಾನಸಿಕ ಖಿನ್ನತೆ, ತಲೆನೋವು, ವಿಷ ಜಂತುಗಳ ಕಡಿತ, ಮೂತ್ರಕೋಶದ ರೋಗ, ಆನೆಕಾಲು, ಅಸ್ತಮಾದಂತಹ ಕಾಯಿಲೆಗಳಿಗಲ್ಲದೆ ಹೆಸರೇ ಸೂಚಿಸುವಂತೆ ಪುರುಷರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಬಳಕೆಯಾಗುತ್ತದೆ.
ಇಂತಹ ಸಸ್ಯಗಳನ್ನು ಗುರುತಿಸುವುದು ನಮ್ಮ ಹವ್ಯಾಸವಾದರೆ ಎಷ್ಟು ಖುಷಿಯಲ್ಲವೇ..?ಅವುಗಳ ರಕ್ಷಣೆ ಮಾಡುವುದೂ ನಮ್ಮ ಕರ್ತವ್ಯವಾಗಬೇಕು... ಏನಂತೀರಾ...
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************