-->
ಸಂಚಾರಿಯ ಡೈರಿ : ಸಂಚಿಕೆ - 40

ಸಂಚಾರಿಯ ಡೈರಿ : ಸಂಚಿಕೆ - 40

ಸಂಚಾರಿಯ ಡೈರಿ : ಸಂಚಿಕೆ - 40
ಲೇಖಕರು : ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

       
       ಬೆಂಗಳೂರಿನಲ್ಲಿ ‌ಒಂದು ತಿಂಗಳು ತರಬೇತಿಯೊಂದರ ಕಾರಣಕ್ಕಾಗಿ ತಂಗಿದ್ದ ನನಗೆ ಸೀದಾ ಮನೆಗೆ ಹೋಗೋದು‌ ಅಷ್ಟಾಗಿ ಇಷ್ಟ ಇದ್ದಿರಲಿಲ್ಲ. ಇನ್ನೂ ರಜೆ ಉಳಿದಿದ್ದರಿಂದ, ಎಲ್ಲಾದರೂ ಏಕಾಂಗಿ ‌ಪರ್ಯಟನಾ ಸಾಹಸ ಕೈಗೆತ್ತಿಕೊಳ್ಳುವ ಹುಮ್ಮಸ್ಸು ಮನಸ್ಸಲ್ಲಿತ್ತು. ಮೊದಲೇ Wanderlust ಮನೋಸ್ಥಿತಿಯ‌ವನಾಗಿ ತಿರುಗಾಡೋ ವಾಂಛೆ ಉತ್ತುಂಗದಲ್ಲಿತ್ತು‌. ಹಾಗೋ ಹೀಗೋ ಯೋಚನೆ ಮಾಡಿ, ಮುಂಬೈ ತೆರಳುವ ಯೋಜನೆ ಹಾಕಿಬಿಟ್ಟಿದ್ದೆ. ನಿದ್ರಾ ವರ್ಧಕ ಐರಾವತ ಬಸ್ಸಿನ‌ ಪ್ರಯಾಣ ಮರುದಿನ ತಲುಪಿಸಿತ್ತು. ಆಗ ಮುಂಬಯಿನ ಡೊಂಬಿವಲಿಯ ಚಿಕ್ಕಪ್ಪನ ಮನೆಯೆದುರು ಪ್ರತ್ಯಕ್ಷವಾಗಿದ್ದೆ. ಮುಂಬಯಿಗೆ ತೆರಳುವ ಯೋಚನೆ ಯೋಜನೆ ಹಠಾತ್ ನಿರ್ಧಾರವೇ ಆಗಿತ್ತು. ಅದಕ್ಕಂತೂ‌ ಉದ್ದೇಶಗಳೂ ಅಸ್ಪಷ್ಟವಾಗಿತ್ತು..! ಹಿಂದಿನ ದಿನವೆಲ್ಲಾ ಧೋ ಎಂದು‌ ಸುರಿದ ತುಹಿನ‌ ನಾ ಬಂದ ದಿವಸ ಬಹಳಷ್ಟು ವಿರಾಮ ತೆಗೆದುಕೊಂಡಿತ್ತು. ಬೆಂಗಳೂರಿನಲ್ಲಿ ನಾನು ಕಳಕೊಂಡಿದ್ದ ಊರಿನ ಶೈಲಿಯ ಊಟ ಚಿಕ್ಕಪ್ಪನ ಮನೆಯ‌ ಕೆಂಪಕ್ಕಿ ಅನ್ನ, ಊರ ಉಪ್ಪಿನಕಾಯಿ, ಒಣಮೀನಿನ ಘಮಲಿನ‌ ಮೂಲಕ ಪುಳಕಿತಗೊಳಿಸಿತ್ತು.
     ಮುಂಬಯಿನ ಮನೇಲಿ ‌ಮೂರ್ನಾಲ್ಕು ದಿನ‌ ಕಳೆದ ಮೇಲೆ ನನ್ನ ಪ್ಲಾನ್ ಇಡಗುಂಜಿ ಮಹಾಗಣಪತಿಯ‌ ದರ್ಶನಕ್ಕಾಗಿ ‌ಎಂದಿತ್ತು. ಅದಕ್ಕಾಗಿ‌ ಬೇಕಾದ ಪೂರ್ವ ತಯಾರಿ ‌ನಡೆಸತೊಡಗಿದ್ದೆ.

    ಕಳೆದ ಸಾರಿ ಮುಂಬಯಿನಿಂದ ‌ಮಂಗಳೂರಿಗೆ ರೈಲಿನಲ್ಲಿ ಮರಳುವಾಗ, ಉತ್ತರ ಕನ್ನಡ ಜಿಲ್ಲೆಯ ಹಸಿರೈಸಿರಿಗೆ ನನ್ನ‌ ಮನ ಸೋತಿತ್ತು. ಮಂಗಳೂರಿಗೆ ಮಾಡಿಸಿದ್ದ ಟಿಕೆಟ್ ಇತ್ತಾದರೂ‌‌, ಮನಸ್ಸಿನ ‌ಕರೆಗೆ ಓಗೊಟ್ಟು ಗೋಕರ್ಣ ನಿಲ್ದಾಣದಲ್ಲಿ ಇಳಿದುಬಿಟ್ಟಿದ್ದೆ. ಅಂದು ಜಿಟಿಜಿಟಿ‌ ಮಳೆಯ‌ ತಂಪು ವಾತಾವರಣ ಮತ್ತೊಮ್ಮೆ ಬರುವಂತಹ ಪ್ರಫುಲ್ಲ ಭಾವ ಮೂಡಿಸಿತ್ತು.
 ಅಂದು ಗೋಕರ್ಣ ದೇವಸ್ಥಾನ, ಸಮುದ್ರ ತೀರಕ್ಕೆ ತೆರಳಿದ್ದೆ. ಅದೇ ಪ್ರೇರಣೆಯಿಂದ ಈ ಬಾರಿ ಇಡಗುಂಜಿ ಹೋಗುವ ಮನಸ್ಸಾಗಿತ್ತು‌. ಅದಕ್ಕೆಂದೆ ಹೊನ್ನಾವರ ಟಿಕೆಟ್ ಮಾಡಿಸಿದ್ದೆ. 
                  
       ಹೊನ್ನಾವರ ‌ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಿಂದ ಹೊನ್ನಾವರ ಬಸ್ ನಿಲ್ದಾಣಕ್ಕೆ ಟೆಂಪೋ ಟ್ರಾವೆಲರ್‌ಗಳು‌‌ ಲಭ್ಯವಿದ್ದವು. ಬಸ್ ನಿಲ್ದಾಣದಲ್ಲಿ ಇಡಗುಂಜಿಗೆ ಬಸ್ ಇದ್ದಿದ್ದು 12.30ಕ್ಕೆ! ಅಲ್ಲಿಗೆ ನಾನು ದೇವರ ಮಹಾ ಪೂಜೆ ತಪ್ಪಿಸಿಕೊಳ್ಳುವುದು‌‌ ಖಚಿತ ಎಂದೆನಿಸಿತ್ತು. ಆದರೂ‌ ಪರವಾಗಿಲ್ಲ ಅನ್ನುತ್ತಾ ಗಣಪನೇ ಈ ಅಗಣಿತ ಸಮಯ‌ ಪಾಲನೆಯ ಗಣಿತ ಬಲ್ಲನು‌ ಎಂದುಕೊಂಡೆ. ದೇವಸ್ಥಾನ ನಾನು‌ ತಲುಪೋ‌ ಹೊತ್ತಿಗೆ ಮುಚ್ಚಿತ್ತು. ಆಗ ಅಲ್ಲೇ ಇದ್ದ ಅಂಗಡಿ ಮಾಲಿಕರೊಬ್ಬರು‌ "ದೇವಾಲಯ ಮೂರು ಗಂಟೆಗೆ ಮತ್ತೆ ತೆರೆಯುತ್ತೆ, ನೀವೀಗ ಅನ್ನಪ್ರಸಾದ ಸೇವಿಸಲು ಮೇಲ್ಗಡೆ ತೆರಳಿ" ಎಂದರು. ನಾನು‌‌ ಹ್ಞೂಂ-ಗುಟ್ಟಿ ಪಾಯಸದೂಟ ಸವಿದೆ. ವಿನಾಯಕನ ದರ್ಶನಕ್ಕಾಗಿ ‌ಅಪರಾಹ್ನದ ಸಮಯ ಕೆಲವು‌‌ ಜನ‌ ಸೇರಿದ್ದರು. ದೇವರ ದರ್ಶನವೂ ಸುಸೂತ್ರವಾಗಿ ನಡೆಯಿತು. ಬೆಳ್ಳಿ ಕವಚಧಾರಿ ಗಣಪ ದ್ವಿಭುಜನಾಗಿ, ವಿಘ್ನ ನಾಶ ಮಾಡುತ್ತಿದ್ದ. ದೇವರೆದುರಲ್ಲಿ‌ ನಿಂತಾಗ ಏನೋ ಉಲ್ಲಾಸ, ಏನೋ ಸಂತೋಷ ಮೂಡಿತ್ತು. ರಮ್ಯ - ರಮಣೀಯ ಪರಿಸರದ ನಡುವಿನಲ್ಲಿದ್ದ ದೇಗುಲ ಭಕ್ತಿ ಪರಾಕಾಷ್ಠೆಯ ಸಾಕ್ಷಿ ಎನಿಸಿತ್ತು. ಕೆಲವು ಭಕ್ತರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಗಣಪನಿಗೆ ಹಬ್ಬವೋ ಹಬ್ಬ! ‌ಮರಳಿ ಬಂದಿದ್ದು ಮಾತ್ರ ನಾನು ಸೀದಾ‌ ಭಟ್ಕಳಕ್ಕೆ. ಅಲ್ಲಿ ಸಿಕ್ಕ‌‌ ಸಲಹೆಯಂತೆ ‌ಕುಂದಾಪುರ ತೆರಳುವ ಎಕ್ಸ್‌ಪ್ರೆಸ್‌ ‌ಬಸ್ ಮೂಲಕ ಮಂಗಳೂರು ಬಸ್ ಹಿಡಿಯಬಹುದು ಎಂದಾಗಿತ್ತು. ಅದೇ ಥರಾ ಮಂಗಳೂರಿಗೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಸೇರಿದ್ದೆ. ಸುಧೀರ್ಘ ‌ತಿರುಗಾಟಕ್ಕೆ ತಾತ್ಕಾಲಿಕ ವಿರಾಮ ಇಟ್ಟಿದ್ದೆ..
......................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************Ads on article

Advertise in articles 1

advertising articles 2

Advertise under the article