ಶಿಕ್ಷಣಕ್ಕೆ ಪೂರಕ ಮಕ್ಕಳ ಬೇಸಿಗೆ ಶಿಬಿರ - ಲೇಖನ
Wednesday, June 28, 2023
Edit
ಲೇಖನ : ಮಮತಾ ಕೆ ಸುಳ್ಯ
ಸಮೂಹ ಸಂಪನ್ಮೂಲ ವ್ಯಕ್ತಿ
ಸುಳ್ಯ ಕ್ಲಸ್ಟರ್
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳಲ್ಲಿ ಸಂಬಂಧಗಳು, ಗೆಳೆತನ, ಪರಿಚಯ ಇವುಗಳೆಲ್ಲವುಗಳು ವಿಸ್ತಾರವಾಗುವುದು ಮಕ್ಕಳ ಬೇಸಿಗೆ ಶಿಬಿರಗಳಲ್ಲಿ. ರಾಜ್ಯದ ಬೇರೆ ಬೇರೆ ಊರುಗಳಿಂದ ಬರುವ ನೂರು ಮನಸ್ಸಿನ ಆಸಕ್ತಿ ಇರುವ, ವಿವಿಧ ಸಂಸ್ಕೃತಿ, ಆಚಾರ - ವಿಚಾರಗಳಿಂದ ಕೂಡಿದ ಮಕ್ಕಳು ಒಂದೇ ಸೂರಿನಡಿ ಸೇರಿ ವೈಯಕ್ತಿಕವಾಗಿ ಮತ್ತು ಗುಂಪಿನಲ್ಲಿ ಸೇರಿ ಕಲಿಯುವ ಕಲೆ ನಿಜಕ್ಕೂ ಅನನ್ಯವಾದದು. ಶಿಬಿರದಲ್ಲಿ ಬೇರೆ ಬೇರೆ ವಯೋಮಾನದ ವಿದ್ಯಾರ್ಥಿಗಳು ಪರಸ್ಪರ ಸಹಾಯ, ಸಹಕಾರ ಸಹನೆಯಿಂದ ಒಂದುಗೂಡಿಕೊಂಡು ಕಲಿಕೆಯನ್ನು ಕರಗತ ಮಾಡಿಕೊಳ್ಳುವ ವಿಶೇಷವಾದಂತಹ ಒಂದು ರೀತಿಯ ಕಲಿಕೆ ವಿದ್ಯಾರ್ಥಿಗಳಿಗೆ ಅನುಭವವೇದ್ಯವಾಗಿದೆ.
ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ವಿವಿಧ ರೀತಿಯ ಕೌಶಲಗಳು, ಕ್ರಿಯಾಶೀಲತೆ ಇವೆಲ್ಲವುಗಳ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆ ಎರೆಯುವ ರೀತಿ ನಿಜವಾಗಿಯೂ ಮೆಚ್ಚುಗೆಯನ್ನು ಗಳಿಸುವಂಥದ್ದು.
ರಂಗಮನೆಯ ಅಂಗಳದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆಸಿದ ಮಕ್ಕಳ ಬೇಸಿಗೆ ಶಿಬಿರವು ವಿವಿಧ ಆಯಾಮಗಳೊಂದಿಗೆ ಸಂಪನ್ನಗೊಂಡಿದೆ. ನೂರಾರು ವಿದ್ಯಾರ್ಥಿಗಳು ತಮ್ಮ ಮನದಾಳದ ಅನಿಸಿಕೆಗಳಲ್ಲಿ ಹೃದಯದ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ಸಿಗುವ ಸ್ವಾತಂತ್ರ್ಯ, ಕಲಿಕೆ ಶಾಲೆಗಳಲ್ಲೂ ನಿರಂತರವಾಗಿ ಸಿಗಬೇಕೆಂದು ಬಯಸುತ್ತಾರೆ. ಹೊಸತನದ ಕಲಿಕೆಗಾಗಿ ದಿನದಿಂದ ದಿನಕ್ಕೆ ಕುತೂಹಲದಿಂದ ಕಾಯುತ್ತಾರೆ.
ಡಾ| ಜೀವನ್ ರಾಂ ಸುಳ್ಯ ನೀನಾಸಂ ರಂಗಭೂಮಿ ಕಲಾವಿದರು, ಯಕ್ಷರಂಗಾಯಣದ ರಂಗನಿರ್ದೇಶಕರು ಆಗಿರುವ ಇವರು ಅನೇಕ ಮಕ್ಕಳ ನಾಟಕವನ್ನು ನಿರ್ದೇಶನ ಮಾಡಿರುತ್ತಾರೆ. ಮಕ್ಕಳ ಮೇಲಿರುವ ಪ್ರೀತಿ, ಕಾಳಜಿಯಿಂದ ಮನೆಯಂಗಳದಲ್ಲಿ ಮಕ್ಕಳ ಶಿಬಿರ ಆರಂಭಿಸಿ ಸುಮಾರು ಮೂವತ್ತೇಳು ವರುಷಗಳನ್ಪು ಕಂಡಿದೆ. ರಂಗಮನೆಯಲ್ಲಿ ಆರಂಭಿಸಿದ ಕನಸಿನ ಕೂಸು ಇಂದು ಸುಮಾರು ಇಪ್ಪತ್ತೆರಡು ವರ್ಷಗಳನ್ನು ಪೂರೈಸಿದೆ. ಇವರು ಮಕ್ಕಳೊಂದಿಗೆ ಮಕ್ಕಳಾಗಿ, ಒಂದು ರೀತಿಯಲ್ಲಿ ಮನೆಯ ಸದಸ್ಯನ ಹಾಗೆ ಆಪ್ತವಾಗುತ್ತಾರೆ. ಸಕಲ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು ಮಕ್ಕಳ ಜೊತೆ ಕುಣಿತ, ಹಾಡು, ಭಾವಾಭಿನಯ, ಮುಖವಾಡ ತಯಾರಿಕೆ, ಮಕ್ಕಳಿಗೆ ನೀಡುವ ಸ್ವಾತಂತ್ರ್ಯ, ಪ್ರೀತಿಯ ಮಾತು ಎಲ್ಲವೂ ಮನಸ್ಸಿಗೆ ಇಷ್ಟವಾಗುತ್ತದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಸಂಭ್ರಮಪಡುತ್ತಾರೆ. ರಂಗು ರಂಗಿನ ಕನಸುಗಳನ್ನು ಹೊತ್ತಿರುವ ಮಕ್ಕಳಿಗೆ ರಂಗಮನೆ ಮಕ್ಕಳ ಶಿಬಿರವು ಒಂದಿಲ್ಲೊಂದು ವೈವಿಧ್ಯತೆಯನ್ನು ಹೊಂದಿದೆ. ಮಕ್ಕಳಲ್ಲಿ ವೇದಿಕೆಯ ಮೇಲೆ ನಿಂತು ಮಾತಾಡುವ ಧೈರ್ಯ, ಶಿಬಿರದಲ್ಲಿ ಉಂಟಾದ ಅನುಭವ ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ. ತಿನ್ನುವ ಅನ್ನದ ಮಹತ್ವವನ್ನು ಅರಿತುಕೊಂಡಿದ್ದಾರೆ.
ವರ್ತಮಾನಕಾಲದ ವಿದ್ಯಾರ್ಥಿಗಳು ಯಾಂತ್ರಿಕ ಬದುಕನ್ನು ನಡೆಸುವ ಕಾಲಘಟ್ಟದಲ್ಲಿ ಪರಸ್ಪರ ಸ್ನೇಹ, ಹೊಂದಾಣಿಕೆಯನ್ನು ಮರೆತು ಸ್ವಾರ್ಥತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಮೊಬೈಲ್ ಗೇಮ್, ಟಿ ವಿ, ಕಂಪ್ಯೂಟರ್ ಮುಂದೆ ಸಮಯ ಕಳೆಯುತ್ತಿದ್ದಾರೆ. ಆದ್ದರಿಂದ ಎಳೆಯ ವಯಸ್ಸಿನ ಮಕ್ಕಳು ಸ್ವತಂತ್ರರಾಗಿ ಬದುಕುವುದನ್ನು ಕಲಿಸುವ ಮತ್ತು ಜ್ಞಾನವನ್ನು ಕಟ್ಟಿಕೊಡುವ ಇಂತಹ ಶಿಬಿರಗಳು ಮಕ್ಕಳಿಗೆ ದಾರಿದೀಪವಾಗಿದೆ. ಮಕ್ಕಳಿಗೆ ಹೇಳಿಕೊಡುವ ಕ್ರಾಫ್ಟ್, ಡ್ರಾಯಿಂಗ್, ವರ್ಲಿ ಆರ್ಟ್, ಕೊಬ್ಬರಿ ಆರ್ಟ್, ಪಪ್ಪೆಟ್ ಶೋ, ಮಿಮಿಕ್ರಿ, ಮುಖವಾಡ ತಯಾರಿಕೆ, ಸಾಂಝಿ ಕಲೆ, ಮೋಜಿನ ಆಟಗಳು, ನಾಟಕ, ರಂಗಭೂಮಿಯ ಕಲಿಕೆ, ರಂಗಗೀತೆಗಳು, ಹಕ್ಕಿಪ್ರಪಂಚ, ಮಕ್ಕಳ ಸಿನೇಮಾ, ಗಾಳಿಪಟ ತಯಾರಿಕೆ, ಕಥಾ ಪ್ರಪಂಚ ಹೀಗೆ ಹತ್ತು ಹಲವು ವಿಷಯಗಳನ್ನು ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕರಗತ ಮಾಡಿಕೊಂಡರು. ಮಕ್ಕಳು ಎಂಟು ದಿನಗಳ ಕಾಲ ಸಾಂಸ್ಕೃತಿಕ ಲೋಕದಲ್ಲಿ ವಿಹರಿಸಿದರು. ಎಂಟನೆಯ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಪರಿಸರದ ಬಗ್ಗೆ ವಿಶೇಷ ಕಾಳಜಿಯುಳ್ಳ ಮಕ್ಕಳ ಏಳು ಕಿರು ನಾಟಕಗಳು ಪ್ರದರ್ಶನಗೊಂಡವು. ಹೆತ್ತವರು ಮತ್ತು ನೆರೆದವರು ಕರತಾಡನದದೊಂದಿಗೆ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಿದರು.
ವಯಸ್ಕರಿಗೆ ಕೂಡ ಕಲಿಕೆ ಮತ್ತು ಅನುಭವದ ಜೊತೆಗೆ ಸಂತಸವನ್ನು ನೀಡಿದೆ. ಮಕ್ಕಳ ಸಂತಸವನ್ನು ಅವರು ಶಿಬಿರದಲ್ಲಿ ಆದ ಅನುಭವ ಹಂಚಿಕೊಳ್ಳುವಾಗ ವಿ.ಗಾಯತ್ರಿ ರವರು ಬರೆದ "ತುಂಗಾ" ಪುಸ್ತಕ ನೆನಪಾಗುತ್ತದೆ ಮತ್ತು ಸಂತೋಷವಾಗುತ್ತದೆ. ಮಕ್ಕಳ ಸಂಭ್ರಮ ನೋಡಿ ಹೆತ್ತವರಿಗೂ ಖುಷಿಯನ್ನು ಕೊಟ್ಟಿದೆ. ಹೆತ್ತವರು ಅವರ ಮಾತುಗಳಲ್ಲಿ ಇಂತಹ ಶಿಬಿರ ಸಿಕ್ಕಿರುವುದು ನಮ್ಮ ಮಕ್ಕಳ ಸೌಭಾಗ್ಯ, ಮನೆಗೆ ಬಂದಾಗ ಮಕ್ಕಳ ಖುಷಿ ನಮಗೂ ಖುಷಿ ಕೊಟ್ಟಿದೆ ಎಂದು ಹರುಷದಿಂದ ನುಡಿಯುತ್ತಾರೆ. ಜೀವನ್ ರಾಂ ರವರ ರಂಗಮನೆಯ ಶಿಬಿರದಲ್ಲಿ ಸಂಚಾಲಕರ ಕಾರ್ಯವೈಖರಿ, ಚಟುವಟಿಕೆಗಳ ಆಯೋಜನೆ, ಸ್ವಯಂ ಸೇವಕರು, ಹಿತೈಷಿಗಳು, ಶಿಷ್ಯಂದಿರು ಶಿಬಿರದ ಯಶಸ್ಸಿಗೆ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ರೀತಿ ಅಭಿನಂದನೆಗೆ ಅರ್ಹವಾದುದು. ಇದಕ್ಕಿಂತಲೂ ಮಿಗಿಲಾಗಿ ದಿನದ ಮೂರು ಹೊತ್ತು ನೀಡಿರುವ ಭೂರಿಭೋಜನ, ತಿಂಡಿ ಎಲ್ಲವೂ ಮಕ್ಕಳಿಗೆ ಅತೀವ ಸಂತೋಷವನ್ನು ನೀಡಿದೆ. ಇಂತಹ ಶಿಬಿರಗಳು ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ದೊರೆಯುವಂತಾಗಲಿ ಎಂದು ಆಶಿಸೋಣ....
ಸಮೂಹ ಸಂಪನ್ಮೂಲ ವ್ಯಕ್ತಿ
ಸುಳ್ಯ ಕ್ಲಸ್ಟರ್.
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************