-->
ನನ್ನ ನೆಚ್ಚಿನ ಗುರುಗಳು : ನರೇಂದ್ರ ಕುಮಾರ್ ಕೋಟ - ಲೇಖನ : ಶರ್ಮಿಳಾ ಕೆ.ಎಸ್

ನನ್ನ ನೆಚ್ಚಿನ ಗುರುಗಳು : ನರೇಂದ್ರ ಕುಮಾರ್ ಕೋಟ - ಲೇಖನ : ಶರ್ಮಿಳಾ ಕೆ.ಎಸ್

ಲೇಖನ : ಶರ್ಮಿಳಾ ಕೆ.ಎಸ್       
9ನೇ ತರಗತಿ      
"ಶಮ್ಮಿ ನಿಲಯ" ಪಾಂಡೇಶ್ವರ, ಸಾಸ್ತಾನ
ಬ್ರಹ್ಮಾವರ ತಾಲ್ಲೂಕು, ಉಡುಪಿ ಜಿಲ್ಲೆ 
                                    
          
       ಕೋಟ ಎಂದ ತಕ್ಷಣ ಎಲ್ಲರ ನೆನಪಿನಲ್ಲಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೋಟ ಶಿವರಾಮ ಕಾರಂತ, ಕೋಟ ವೈಕುಂಠ, ಕೋಟ ಲಕ್ಷ್ಮೀ ನಾರಾಯಣ ಕಾರಂತ, ಕೋಟ ಶ್ರೀನಿವಾಸ ಪೂಜಾರಿ, ಅವರ ಸಾಲಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿ ಸಾಹಿತ್ಯಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆಯ ಶಿಖರವನ್ನು ಏರಿರುವ ಮಗದೊಂದು ಹೆಸರೇ ನರೇಂದ್ರ ಕುಮಾರ್ ಕೋಟ. ಹೊನ್ನಾವರದಲ್ಲಿ ಎ. ಎಲ್ ನಾಯ್ಕ ಹಾಗೂ ಇಂದಿರಾ ದಂಪತಿಗಳಿಗೆ ಇವರು 15/6/1970 ರಲ್ಲಿ ಜನಿಸಿದರು.         
           ಕಡು ಬಡತನದಲ್ಲಿ ಬೆಳೆದ ಇವರು ಹೈಸ್ಕೂಲಿನ ನಂತರ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡವರು. ಇಂದಿಗೆ ಇವರು 31 ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಹೊಸ ಆವಿಷ್ಕಾರಗಳ ಚಿಂತಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಲಯದಲ್ಲಿ ಅಪ್ಪಟ ಅಪರಂಜಿ. ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಗಳ ಮೂಲಕ ಮನೆಮಾತಾದವರು.

         ಸದಾ ಹೊಸತನದ ತುಡಿತ, ಮುಖದಲ್ಲಿ ಸದಾ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ನೆಚ್ಚಿನ ಗುರುವಾಗಿ, ಹಲವರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಪಾದರಸದಂತೆ ದಿನನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಅವರೇ ಸಾಹಿತಿ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ. ಇವರು ತನ್ನನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಏನಾದರೂ ಹೊಸತನ ಅನ್ವೇಷಣೆ ಮಾಡುವ ಚಿಂತಕರು. ತನ್ನ ಮಾತಿನ ಶೈಲಿಯಲ್ಲಿ ಎಲ್ಲರನ್ನು ಸೆಳೆಯುವ ಇವರು ಹಲವಾರು ಟಿವಿ ಸಂದರ್ಶನ ಮಾಡಿದ್ದಾರೆ. 

             ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ನ ರುವಾರಿ ಇವರೇ. ಇವರು ವೀಕ್ಷಕ ವಿವರಣೆಗಾರ, ನಿರೂಪಕ, ಭಾಷಣಕಾರ, ಕಥೆಗಾರ, ಕವಿ, ಲೇಖಕ, ಪ್ರಕಾಶಕ, ಜನಪದ ಕ್ಷೇತ್ರಕಾಯಕ, ಕಾದಂಬರಿಗಾರ, ವಿಮರ್ಶಕ, ಸಂಶೋಧಕ, ನಿರ್ದೇಶಕ, ನಾಟಕ ರಚಕ, ಸಂದರ್ಶಕ, ಸಂಘಟಕ, ಸಮನ್ವಯ, ಕಿರು ಚಿತ್ರಗಳ ನಟ, ಚಿತ್ರ ಸಂಭಾಷಣೆಗಾರ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಂಡ ವಿಶಿಷ್ಟ ಚಲನಚಿತ್ರ "ಸುಗಂಧಿ"ಯ ನಿರ್ಮಾಪಕ. 

          ಪ್ರತಿ ಕಾರ್ಯಕ್ರಮದಲ್ಲೂ ವಿನೂತನ ಪ್ರಯೋಗ ಮಾಡುವ ಸವ್ಯಸಾಚಿ, ಮಾಧ್ಯಮದ ಮೂಲಕ ಸಾವಿರಕ್ಕೂ ಮಿಕ್ಕಿದ ಪ್ರತಿಭಾವಂತರನ್ನು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ ತಾನು ಬೆಳೆದ ನಿಸ್ವಾರ್ಥ ಸೇವಾ ಸಹೃದಯಿ. ಕವನ, ಕಥೆ, ಕಾದಂಬರಿ, ಜಾನಪದ, ವ್ಯಕ್ತಿತ್ವ ವಿಕಸನ ನಾಟಕಕ್ಕೆ ಸಂಬಂಧಿಸಿದ 26ಕ್ಕೂ ಹೆಚ್ಚು ಕೃತಿಗಳು. ಕೋಟ ಶಿವರಾಮ ಕಾರಂತರ ಕುರಿತಾದ  ಇವರ ಸಂಪಾದಕತ್ವ 5 ಕೃತಿಗಳ ಆಪ್ತ ಕೊಡುಗೆ. "ನೆನಪಿನಂಗಳದಲ್ಲಿ ಕಾರಂತರು" ಟೆಲಿ ಚಿತ್ರ, ವ್ಯಕ್ತಿತ್ವ ವಿಕಸನ ಪೂರಕವಾದ ಸಂವಾದ ಧಾರಾವಾಹಿ "ಬದುಕಿನ ಚುಕ್ಕಿಗಳು", ಇವರದ್ದೇ ಪರಿಕಲ್ಪನೆಯಲ್ಲಿ ಪ್ರಾದೇಶಿಕ ಚಾನೆಲ್ ಗಳಲ್ಲಿ ಸೊಗಸಾಗಿ ಮೂಡಿಬಂದ "ಹೃದಯದ ಹಾಡು", "ಮನತುಂಬಿ ಹಾಡುವೆನು", "ಹಾಡೊಮ್ಮೆ ಹಾಡಬೇಕು", "ಕನ್ನಡ ಎನ್ನುವುದು ಜೀವನದಿ", "ಮೌನ ತಬ್ಬಿತು ನೆಲವನು", ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವ "ಹಲೋ ಸ್ಟೂಡೆಂಟ್", "ಹೊಂಬೆಳಕು", "ಚೇತನ", ನೆನಪುಗಳ ಅನಾವರಣ ಮಾಡುವ "ಸವಿ ಸವಿ ನೆನಪು", "ನನ್ನ ಬದುಕಿನ ಪುಟಗಳು", "ಗಿರ್ಗಿಟ್ಟಿ", "ಕಾರಂತ ಮಹಾಸಾಗರ", "ಸಿಬ್ಲು", "ಚಿಂತನ ದೀವಿಗೆ". 

      ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ನೂರಾರು ಧ್ವನಿ ಸಾಂದ್ರಿಕೆಗಳು "ಕಾಣದ ಕಡಲಿಗೆ", "ಕಾರಂತ ಕಂಡಂತೆ", "ನುಡಿಕೇತನ", "ಹೆಗ್ಗುರುತು", ಹೇಳಿದಷ್ಟು ಸಾಲದು..... ನನ್ನ ನರೇಂದ್ರ ಕುಮಾರ್ ಸರ್ ಹಲವಾರು ಸಂಘಟನೆಯಲ್ಲಿ ನಿತ್ಯ ನಿರತರು. 

     ಹಲವಾರು ರಿಯಾಲಿಟಿ ಶೋ ಗಳ ಸಂಯೋಜಕರು "ಸಂಗೀತ ಜಾತ್ರೆ", "ನೃತ್ಯ ಮೇಳ", "ಚಿತ್ರಸಂತೆ", ಇವರದೇ ಕನಸಿನ ಚಿತ್ತಾರಗಳು. ಕಾರ್ಯಕ್ರಮಗಳಿಗೆಲ್ಲ ವಿನೂತನ ಹೆಸರಿಡುವ ಮೂಲಕ ಪ್ರಶ್ನೆ ಹೆಡೆಯೆತ್ತಿ ನಿಲ್ಲುವಂತೆ ಮಾಡುವ ಮನೋಹರಿ. ಸಮಗ್ರ ವ್ಯಕ್ತಿತ್ವ ವಿಕಸನ ಸಂಸ್ಥೆ "ಉಸಿರು" ಇಲ್ಲಿ ಇವರದೇ ಉಸಿರು........ 

     ಇವರ ಕೃತಿಗಳೆಂದರೆ:- "ಹೊಸಹೂಗುಕೋಲೆ", "ಪರೀಕ್ಷೆ ಎದುರಿಸುವುದು ಹೇಗೆ?", "ದೆವ್ವ ","ನಿಹಾರಿಕ", "ಅಜೋಲಾ", "ಎಳೆನಾಗರ", "ಮಿಡಿ ನಾಗರ", "ಮಗಳೇ ನೀ ಇದ್ದರೆ ಮನೆ ಚಂದ", "ಇದು ಕವನವಲ್ಲ", "ಅಮ್ಮ", "ಯಶಸ್ಸು ನಿರಂತರ ಪಯಣ", "ಕೋಳಿ ಪಡೆ", "ಬಾಸಿಂಗ", "ಬಿಂಬಾಲಿ", "ಬಾಲುಮಾಮನ ಬನ್ನಿ ಮರ", "ಭಕ", "ನೆನಪುಗಳು ನಿರಂತರವಾಗಿರಲಿ", "ಸೋಲು ಅಂತಿಮವಲ್ಲ", "ಗರ್ನಾಲ್", "ಪದಗಳೇ ಬಂಗಾರ", "ಪ್ರೀತಿಯಿಂದ ದೂರ ಹೋಗಬಹುದಿತ್ತು", "ಬಲಿ" ಮೊದಲಾದವು.           
  
      ಇಷ್ಟೇ ಅಲ್ಲದೆ 200ಕ್ಕೂ ಮಿಕ್ಕಿದ ಕವನಗಳು, 23 ಕಥೆಗಳು,150 ಲೇಖನಗಳು,16 ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, 
ವಾರಪತ್ರಿಕೆಯಲ್ಲಿ ಇವರ ಲೇಖನ, ಕವನಗಳು, ರಾರಾಜಿಸುತ್ತಿರುತ್ತದೆ. 

       ಸದಾ ನಗುತ್ತಾ ಯಾರ ತಂಟೆಗೂ ಹೋಗದೆ ತಾಳ್ಮೆಯಿಂದ ವ್ಯವಹರಿಸುವ ಇವರು ಮೌನವಾಗಿ ಕೆಲವೊಂದು ಸಾಧನೆಗಳನ್ನು ಮಾಡುತ್ತಾ.ಯಾವುದೇ ಹಮ್ಮು ಬಿಮುಗಳಿಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿಕೊಂಡು ಸಾಧನೆ ಮಾಡಿದರು. ಇದರ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ. ಅವುಗಳಲ್ಲಿ ಪ್ರಮುಖವಾಗಿ :- ಭಾರತ ಸರಕಾರದ "ಯುವಪುರಸ್ಕಾರ", ರಾಜ್ಯಮಟ್ಟದ "ಕಾವ್ಯಶ್ರೀ ಪುರಸ್ಕಾರ", "ರಾಜೇಂದ್ರ ಶೆಟ್ಟಿ ಸ್ಮಾರಕ", ರಾಷ್ಟ್ರಮಟ್ಟದ "ರವಿರೋಹಿಡ್ಕರ್ ಪುರಸ್ಕಾರ", "ಕಾರಂತ ಸದ್ಭಾವನ ಪುರಸ್ಕಾರ", "ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ", ರಾಷ್ಟ್ರ ಮಟ್ಟದ "ಆರ್ಯಭಟ ಪುರಸ್ಕಾರ", ಉಡುಪಿ ಜಿಲ್ಲಾ "ಉತ್ತಮ ಶಿಕ್ಷಕ ಪ್ರಶಸ್ತಿ", "ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ", "ಅನಿತಾ ಕೌಲ್ ರಾಜ್ಯ ಮಟ್ಟದ ಪುರಸ್ಕಾರ", "ರವೀಂದ್ರನಾಥ್ ಟಾಗೋರ್ ರಾಷ್ಟ್ರೀಯ ಪುರಸ್ಕಾರ", "ಯುವರತ್ನ ಪುರಸ್ಕಾರ". 

      ಇದಲ್ಲದೆ 1999 ರಿಂದ 2000ರಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಗಾಯನ ಸ್ಪರ್ಧೆಯಲ್ಲಿ ತೃತೀಯ, 2000ದಲ್ಲಿ ಉಡುಪಿ ಜಿಲ್ಲಾ ಮೊದಲನೆಯ ಶಿಕ್ಷಕ ಸಾಹಿತ್ಯ ಸಮ್ಮೇಳನದ ಆಶು ಕವಿತಾ ರಚನೆಯಲ್ಲಿ ದ್ವಿತೀಯ, ಹಾಗೂ ಆಶುಭಾಷಣದಲ್ಲೂ ದ್ವಿತೀಯ, 2000 ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ನಡೆಸಿದ ಜಿಲ್ಲಾ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಸ್ಥಾನ ಗಳಿಸಿದ್ದಾರೆ. ಹಾಗೂ ಒಂದು ಸಾವಿರಕ್ಕಿಂತ ಹೆಚ್ಚು ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಮಾಧ್ಯಮದಲ್ಲಿ 20ಕ್ಕೂ ಮಿಕ್ಕಿದ ಕಾರ್ಯಕ್ರಮಗಳ ಆಯೋಜನೆ, ಮಂಗಳೂರು ಆಕಾಶವಾಣಿಯಲ್ಲಿ 20ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜನೆ, ಐದು ಕಿರು ಚಿತ್ರಗಳ ನಿರ್ಮಾಣ, ಹಾಗೂ ಒಂದು ದೊಡ್ಡ ಚಿತ್ರ ನಿರ್ಮಾಣ. 

     ಹೀಗೆ ಇವರ ಸಾಧನೆಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಒಲಿದು ಬಂದಿದೆ. ಕೋಟಾದ ಕಾರಂತ ಥೀಂ ಪಾರ್ಕ್ ಗೆ ಹೊಸ ಬೆಳಕು ನೀಡಿದವರಲ್ಲಿ ಪ್ರಮುಖರು ಇವರು. ಸದಾ ಶೈಕ್ಷಣಿಕ ಚಿಂತನೆಗೆ ಕಾರ್ಯಕಲ್ಪ ನೀಡುವ, ಬಿಡುವಾದ ಸಾಹಿತ್ಯಿಕ, ಸಾಂಸ್ಕೃತಿಕ, ವಾತಾವರಣವನ್ನು ನಿರ್ಮಿಸಿ ಡಾ. ಶಿವರಾಮ ಕಾರಂತರನ್ನು ಹೊಸ ಪೀಳಿಗೆಗೆ ಪರಿಚಯಿಸಿದ್ದಾರೆ. ಇವರು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
........................................ ಶರ್ಮಿಳಾ ಕೆ.ಎಸ್       
9ನೇ ತರಗತಿ      
"ಶಮ್ಮಿ ನಿಲಯ" ಪಾಂಡೇಶ್ವರ, ಸಾಸ್ತಾನ
ಬ್ರಹ್ಮಾವರ ತಾಲ್ಲೂಕು, ಉಡುಪಿ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article