ಜೀವನ ಸಂಭ್ರಮ : ಸಂಚಿಕೆ - 86
Sunday, May 21, 2023
Edit
ಜೀವನ ಸಂಭ್ರಮ : ಸಂಚಿಕೆ - 86
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇದು ನನ್ನ ಬಾಲ್ಯದಲ್ಲಿ ನಡೆದ ಘಟನೆ. ಬಹುಶಃ ಎಂಟನೇ ತರಗತಿ ಓದುತ್ತಿದ್ದೆ ಅಂತ ನೆನಪು. ನಾನು ಓದುತ್ತಿದ್ದ ಶಾಲೆ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿ ಇತ್ತು. ಆಗ ನನ್ನೂರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ನಾವು ಮೂರು ಜನ ಗೆಳೆಯರು ನಡೆದುಕೊಂಡು ಹೋಗುತ್ತಿದ್ದೆವು. 8ನೇ ತರಗತಿ ಫಲಿತಾಂಶ ಬಂದಿತ್ತು. ಫಲಿತಾಂಶ ನೋಡಿಕೊಂಡು ಉತ್ತೀರ್ಣರಾದುದರಿಂದ ಸಂತೋಷದಿಂದ ನಡೆದುಕೊಂಡು ಬರುತ್ತಿದ್ದೆವು. ಬರುವ ದಾರಿಯಲ್ಲಿ ಒಂದು ಮಾವಿನ ಮರವಿತ್ತು. ಮರದ ತುಂಬಾ ಮಾವಿನ ಹಣ್ಣುಗಳು ಬಿಟ್ಟಿದ್ದವು. ಒಳ್ಳೆಯ ಮಾವಿನ ಫಲ ಬಂದಿತ್ತು. ನಾವು ಮೂರು ಜನ ಆ ಹಣ್ಣುಗಳನ್ನು ನೋಡಿದೆವು. ಬಹಳ ಸಂತೋಷವಾಯಿತು. ನನ್ನ ಜೊತೆ ಜವರಯ್ಯ ಎಂಬ ಗೆಳೆಯನಿದ್ದ. ಆತ ಒರಟ ಮತ್ತು ಮರ ಹತ್ತುವುದರಲ್ಲಿ ನಿಪುಣ. ಆತ ಸುತ್ತಮುತ್ತ ನೋಡಿದ. ಯಾರೂ ಕಾಣಲಿಲ್ಲ. ನಾನು ಹೋಗಿ ಮರ ಹತ್ತಿ ಮಾವಿನ ಹಣ್ಣು ಕಿತ್ತು ತರುತ್ತೇನೆ ಎಂದು ಹೇಳಿದ. ನಮಗೆ ಭಯ. ಉಳಿದ ನಾವಿಬ್ಬರು ಬೇಡ ಎಂದು ಆತನಿಗೆ ಹೇಳಿದೆವು. ಆತ ನಮ್ಮ ಪುಕ್ಕಲತನವನ್ನು ಜರೆದು, ಮಾವಿನಹಣ್ಣು ತರಲು ಹೋದ. ನಾವು ಭಯದಿಂದ ಮುಂದೆ ಬಂದವು. ಆತ ಕೆಲವು ಸಮಯವಾದರೂ ಬಾರದಿರುವುದರಿಂದ ಒಂದು ಸೇತುವೆ ಮೇಲೆ ಕುಳಿತು. ಆತನಗಾಗಿ ಕಾಯುತ್ತಾ ಕುಳಿತಿದ್ದೆವು. ಸ್ವಲ್ಪ ಸಮಯದ ನಂತರ ಆತ ಅಳುತ್ತಾ ಬಂದನು. ನಾವು ಕೇಳಿದವು, ಏಕೆ? ಅಳುತ್ತಿದ್ದೀಯ ಎಂದು. ಆತ ಹೇಳಿದ, ಈತ ಮರ ಹತ್ತಿ ನಮಗೆ ಮತ್ತು ಆತನಿಗೆ ಎಂದು ಸುಮಾರು ದೋರುಮಾವಿನ ಕಾಯಿ (ಹಣ್ಣಿಗೆ ಸಮೀಪವಿರುವ ಕಾಯಿ) ಗಳನ್ನು ಕಿತ್ತು ಕೆಳಗಿಳಿದಿದ್ದನಂತೆ. ಆತ ಆ ಮಾವಿನ ಕಾಯಿಯಲ್ಲಿ ಒಂದು ಚೆನ್ನಾಗಿ ಹಣ್ಣಾಗಿತ್ತು, ಅದನ್ನು ಬಾಯಿಗೆ ಇಡುವಷ್ಟರಲ್ಲಿ, ಆ ಮಾವಿನ ಗಿಡದ ಮಾಲೀಕ ಬಂದು ನೋಡಿದ. ಮಾವಿನಹಣ್ಣು ಕದಿಯುತ್ತಿದ್ದೀಯ ಎಂದು ಅವನನ್ನು ಹಿಡಿದು, ಅಲ್ಲೇ ಇದ್ದ ಕೋಲಿನಿಂದ ಬೆನ್ನಿಗೆ ಚೆನ್ನಾಗಿ ಬಾರಿಸಿದ್ದನು. ಮೈಯಲ್ಲಿ ಬಾಸುಂಡೆಗಳು ಬಂದಿದ್ದವು. ಆ ಹಣ್ಣನೆಲ್ಲ ಕಿತ್ತುಕೊಂಡು ಕಳುಹಿಸಿದನು. ಹೀಗಾಯ್ತು ಎಂದು ಹೇಳಿದನು. ನಂತರ ನಾವು ಮೂರು ಜನ ಊರಿಗೆ ಬಂದೆವು. ಆದ ಘಟನೆ ಯಾರಿಗೂ ಹೇಳಲಿಲ್ಲ.
ಮಾವಿನ ಹಣ್ಣನ್ನೇ ನೋಡಿದ್ದು ನಮ್ಮ ಕಣ್ಣುಗಳು. ಜವರಯ್ಯನ ಕಾಲು ಆತನನ್ನು ಮರದ ಹತ್ತಿರ ಕರೆದೊಯ್ಯಿತು. ಆತನ ಕೈ ಮಾವಿನ ಹಣ್ಣುಗಳನ್ನು ಕಿತ್ತಿತ್ತು. ಆ ಹಣ್ಣಿನ ರುಚಿ ನೋಡಿದ್ದು ಆತನ ನಾಲಿಗೆ ಏಟು ತಿಂದಿದ್ದು ಆತನ ಬೆನ್ನು. ನೋಡಿ ಆಸೆ ಪಟ್ಟ ತಪ್ಪಿಗೆ ನೋಡಿದ ಕಣ್ಣು ಕಣ್ಣೀರು ಸುರಿಸುತ್ತಿತ್ತು. ಮಾಡಿದ್ದುಣ್ಣೋ ಮಹಾರಾಯ ಎನ್ನುವಂತೆ ಆಗಿತ್ತು. ನಾವು ನೋಡಿದ್ದೆವು, ಸಂತೋಷಪಟ್ಟಿದ್ದೆವು. ಇದಕ್ಕೆಲ್ಲ ಕಾರಣ ಮನಸ್ಸು. ಮನಸ್ಸು ಎಷ್ಟು ಚತುರ ನೋಡಿ. ಮಾವಿನ ಹಣ್ಣನ್ನು ಕಣ್ಣು ನೋಡಿದ ತಕ್ಷಣ, ಹೋಗುವಂತೆ ಹೇಳಿದ್ದು ಮನಸ್ಸು. ಮರ ಹತ್ತುವಂತೆ ಹೇಳಿದ್ದು ಮನಸ್ಸು. ಹಣ್ಣು ಕೀಳುವಂತೆ ಹೇಳಿದ್ದು ಮನಸ್ಸು. ಕಿತ್ತನಂತರ ತಿನ್ನುವಂತೆ ಹೇಳಿದ್ದು ಮನಸ್ಸೇ. ಏಟು ತಿಂದ ನಂತರ ಅದೇ ಮನಸ್ಸು ಹೇಳುತ್ತದೆ. ಹೋಗಬೇಡ ಅಂತ ಹೇಳಲಿಲ್ಲವೇ...? ಕೇಳಿದರೂ ಹೋದೆ. ಏಟು ತಿಂದೆ. ಈಗ ಅನುಭವಿಸುವಂತೆ ಹೇಳುತ್ತದೆ ಇದೇ ಮನಸ್ಸು.
ಈ ಘಟನೆಯಾ ಸಾರಾಂಶವಿಷ್ಟೇ.... ಕಂಡ ಕಂಡದ್ದರ ಹಿಂದೆ ಹೋಗಬಾರದು. ಕಂಡದ್ದಕ್ಕೆ ಮನಸ್ಸು ಸೋಲಬಾರದು, ಬುದ್ಧ ಹೇಳಿದಂತೆ ಆಸೆಯೇ ದುಃಖಕ್ಕೆ ಮೂಲ. ಕಣ್ಣು ಮಾಡಿದ ತಪ್ಪಿಗೆ ಕಣ್ಣೀರು ಸುರಿಸಿತ್ತು. ಮಾಡಿದ್ದುಣ್ಣೋ ಮಹಾರಾಯ ಎಂದರೆ ಇದೇ ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************