-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 64

ಸ್ಫೂರ್ತಿಯ ಮಾತುಗಳು : ಸಂಚಿಕೆ - 64

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                        
     ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾದ ಅಂಶಗಳೇ ಮಳೆ ಮತ್ತು ನೀರಿನ ಅವ್ಯವಸ್ಥೆಗಳಿಗೆ ಕಾರಣವಾಗುತ್ತಿವೆ. ಭೂ ಒಡಲಿನೊಳಗಿರುವ ಇಂಧನಗಳ ಖನನ ಮತ್ತು ಅರಣ್ಯ ನಾಶಗಳಿಂದಾಗಿ ಜಾಗತಿಕ ತಾಪಮಾನ ಅತಿಯಾಗಿ ಏರುತ್ತಿದೆ. ಸಕಾಲಕ್ಕೆ ಮಳೆ ಬರಬೇಕು, ಭೂಮಿಯೊಳಗೆ ನೀರು ಇಳಿಯಬೇಕು, ಮರಗಿಡಗಳನ್ನು ಪುನರ್ ಸಮೃದ್ಧಗೊಳಿಸಬೇಕು. ಈ ಮೂಲಕ ಜಾಗತಿಕ ತಾಪಮಾನದ ಏರಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯ. ಜಾಗತಿಕ ತಾಪಮಾನ ಹತೋಟಿಗೆ ಬಾರದಿದ್ದರೆ ಮುಂದೆ ಜಲಕ್ಕಾಗಿ ಯುದ್ಧಗಳೆ ಸಂಭವಿಸುತ್ತವೆ.
       ನಮ್ಮ ಪರಿಸರದಲ್ಲಿ ಬಿದ್ದ ಮಳೆಯ ನೀರು ಏನಾಗುತ್ತಿದೆ ಎಂಬುದನ್ನು ಅವಲೋಕಿಸೋಣ. ನಗರಗಳಲ್ಲಿ ಮಳೆ ಬಿದ್ದೊಡನೆ ಕೃತಕ ನೆರೆ ಸೃಷ್ಟಿಯಾಗುತ್ತದೆ. ಹಳ್ಳಿಯ ಕೆರೆ ತೋಡುಗಳು ತುಂಬಿ ಹರಿಯುತ್ತವೆ, ನಾಶ ನಷ್ಟಗಳನ್ನುಂಟು ಮಾಡುತ್ತಾ ಸಾಗರವನ್ನು ಸೇರುತ್ತದೆ. ಶತ ಶತಮಾನಗಳ ಹಿಂದೆ ಭೂಮಿಯ ಮೇಲೆ ಬಿದ್ದ ನೀರಿನ ಬಹುಭಾಗ ಭೂಮಿಯೊಳಕ್ಕೆ ಇಳಿಯುತ್ತಿದ್ದುದರಿಂದ ನೆರೆಗಳುಂಟಾಗುವುದು ವಿರಳವಾಗಿತ್ತು. ಭೂಮಿಯೊಳಕ್ಕೆ ಇಂಗಿದ ನೀರಿನಿಂದಾಗಿ ಭೂಗರ್ಭದೊಳಗೆ ಜಲಸಮೃದ್ಧಿಯಾಗುತ್ತಿತ್ತು. ಕುಡಿಯುವ ನೀರಿಗೆ ಸಮಸ್ಯೆಗಳಾಗುತ್ತಿರಲಿಲ್ಲ. ಮನುಷ್ಯರು ಪ್ರಕೃತಿಯನ್ನು ನಾಶಗೊಳಿಸುತ್ತಿರುವುದರಿಂದ ನೀರು ಭೂಮಿಯೊಳಗೆ ಇಂಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಭೂಗರ್ಭದೊಳಗಿನ ಜಲ ಮಟ್ಟ ಇಳಿಯುತ್ತಾ ಇದೆ. ಜಲಮಟ್ಟವನ್ನು ಏರಿಸುವ ಪ್ರಯತ್ನ ನಮ್ಮಿಂದ ಅನಿವಾರ್ಯವಾಗಿ ತುರ್ತಾಗಿ ಆಗಲೇ ಬೇಕಾಗಿದೆ.
       ಭೂಮಿಯಿಂದ ಸಿಗುವ ಜಲ ಪ್ರಮಾಣ ಕಡಿಮೆಯಾಗುತ್ತಾ ಇದೆ. ಇಂದು ನಾವು ಕುಡಿಯುವ ನೀರೂ ಶುದ್ಧವಿಲ್ಲ. ಬಾಟಲಿ ಮತ್ತು ಕ್ಯಾನ್ ಮೂಲಕ ವಿಕ್ರಯವಾಗುತ್ತಿರುವ ನೀರು ದಾಹ ಇಂಗಿಸ ಬಹುದಾದರೂ ಆರೋಗ್ಯವನ್ನು ವರ್ಧಿಸದು. ಸಾರ್ವಜನಿಕ ನಲ್ಲಿಗಳಲ್ಲಿ ನೀರಿಗಾಗಿ ಕೊಡ ಇರಿಸಲು ನಡೆಯುವ ‘ಸಮರ’ ಎಲ್ಲರಿಗೂ ನಿತ್ಯ ದೃಶ್ಯ. ಅಪೇಕ್ಷಿತ ಜಲ ಸಿಗದೆ ಒದ್ದಾಡಲಿರುವ ಭವಿಷ್ಯದ ದಿನಗಳಲ್ಲಿ ನೀರಿಗಾಗಿ ಜಗಳಗಳಷ್ಟೇ ಅಲ್ಲ ಯುದ್ದಗಳೇ ಘಟಿಸುತ್ತವೆ.
     ಭೂಮಿಯ ಜಲಮಟ್ಟ ಏರಿಸಲು ನಾವು ಏನು ಮಾಡಬೇಕು? ನಮ್ಮನ್ನು ನಾವೇ ಜಲಯಜ್ಞ ಮತ್ತು ಅರಣ್ಯ ಯಜ್ಞದಲ್ಲಿ ಸಂಪೂರ್ಣವಾಗಿ ತೊಡಗಿಸಿದರೆ ಜಲಮಟ್ಟದ ಏರಿಕೆ ಆಗಲಾರಂಭವಾಗುತ್ತದೆ. ಅರಣ್ಯ ಯಜ್ಞ ಎಂದರೆ ಗಿಡಗಳನ್ನು ನೆಟ್ಟು ಬೆಳೆಸುವುದು. ಮರಗಳು ಬೆಳೆದಂತೆ ಬೇರುಗಳು ಭೂಮಿಯ ಆಳಕ್ಕೆ ಇಳಿಯುತ್ತದೆ, ತದ್ರೀತಿಯಲ್ಲಿ ಅಗಲಕ್ಕೂ ಹರಡುತ್ತವೆ. ಭೂಮಿಯ ನೀರಿನ ಮಟ್ಟವನ್ನು ಏರಿಸುವಲ್ಲಿ ಈ ಬೇರುಗಳ ಪಾತ್ರ ಹಿರಿದು. ಭೂಮಿಯಿಂದ ಬೇರುಗಳ ಮೂಲಕ ನೀರನ್ನು ಹೀರುವ ಗಿಡ ಮರಗಳು ತಮ್ಮ ಅಗತ್ಯಕ್ಕಿಂತ ಹೆಚ್ಚು ನೀರನ್ನು ಭೂಮಿಯೊಳಗಿಳಿಸಿ ಪ್ರತಿ ವರ್ಷವೂ ಉಳಿತಾಯವಾಗುತ್ತಾ ಇರುತ್ತದೆ. ಈ ಉಳಿತಾಯ ಭೂಜಲ ಮಟ್ಟ ಏರಲು ಕಾರಣವಾಗುತ್ತದೆ. ಮನೆಯ ಸುತ್ತ ಮುತ್ತ ಹೂವಿನ ಗಿಡ, ತರಕಾರಿ ಗಿಡ, ಬಾಳೆ, ತೆಂಗು ಮೊದಲಾದುವುಗಳನ್ನು ನೆಡುವುದರಿಂದ ಭೂ ಜಲಮಟ್ಟ ಹೆಚ್ಚಲು ಅವಕಾಶವಾಗುತ್ತದೆ. ಪ್ರತಿ ವರ್ಷ ಹೆಚ್ಚು ಹೆಚ್ಚು ಗಿಡ ನೆಟ್ಟು ಅರಣ್ಯೀಕರಣಗೊಳಿಸುವುದು ನಮ್ಮ ತಪಸ್ಸಾಗಬೇಕು. ಜಲಯುದ್ಧ ತಪ್ಪಿಸಿ ನಮ್ಮ ಮುಂದಿನ ಪೀಳಿಗೆ ಶಾಂತಿಯಿಂದ ಬದುಕಲು ನಾವೆಲ್ಲರೂ ಕಾರಣರಾಗಬೇಕು.
     ಮರಗಿಡಗಳಲ್ಲದೆ ಹುಲ್ಲು ಹಾಸುಗಳು, ನೆಲದ ಮೇಲೆ ಚದರಿರುವ ತರಗೆಲೆ, ಸಾವಯವ ಕಸ ಕಡ್ಡಿ ಇತ್ಯಾದಿಗಳೂ ಭೂಮಿಯೊಳಗೆ ನೀರಿಂಗಲು ಸಹಕರಿಸುತ್ತವೆ. ವೇಗವಾಗಿ ಓಡುವ ನೀರು ನಡೆಯುವಂತಾಗಲು ಈ ಕಸ ಕಡ್ಡಿಗಳು, ಚಿಕ್ಕ ಪುಟ್ಟ ಗುಂಡಿಗಳು ಸಹಕಾರಿಯಾಗುತ್ತವೆ. ನಡೆಯುವ ನೀರನ್ನು ದಪ್ಪನೆಯಾಗಿ ಹರಡಿದ ಕಸದ ಮೂಲಕ ಭೂಮಿಯೊಳಗೆ ಪೂರಣ ಮಾಡಬಹುದು. ಗಿಡಗಳ ಹತ್ತಿರ ತೊಟ್ಟಿಲು ಗುಂಡಿ ಮಾಡಿದರೆ ಆ ತೊಟ್ಟಿಲು ಗುಂಡಿಗಳಿಂದ ಬೇರುಗಳ ಮೂಲಕ ನೀರು ಭೂಗರ್ಭವನ್ನು ಸೇರುತ್ತದೆ. ಕೃತಕವಾಗಿ ತಯಾರಿಸಿದ ಇಂಗು ಗುಂಡಿಗಳ ಮೂಲಕವೂ ನೀರನ್ನು ಭೂಮಿಯೊಳಗೆ ದೊಡ್ಡ ಪ್ರಮಾಣದಲ್ಲಿ ಕಳುಹಿಸಬಹುದು. ಛಾವಣಿಯ ನೀರನ್ನು ಶುಚಿಗೊಳಿಸಿ ತೆರೆದ ಬಾವಿಗೆ ಹಾಕುವುದರಿಂದಲೂ ನೀರಿಂಗಿಸಲು ಸಾಧ್ಯವಿದೆ. ನೀರಿಂಗಿಸುವುದರಲ್ಲಿ ನಾನಾ ತಂತ್ರಗಳಿವೆ. ಮಳೆ ನೀರಿನ ಕೊಯ್ಲು ಮೂಲಕವೂ ಆ ನೀರನ್ನು ದೈನಂದಿನ ಖರ್ಚುಗಳಿಗೆ ಬಳಕೆ ಮಾಡಬಹದು. “ಬಹುದು” ಗಳು ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ನಿರಂತರವಾಗಿ ನಾವೂ ನೀವೂ ಮಾಡುತ್ತಿರಬೇಕು.
     ಇಲಿ ಹೆಗ್ಗಣಗಳ ಬಿಲಗಳಿಗೆ ಮಳೆಯ ನೀರನ್ನು ಹಾಯಿಸಬಹುದು. ಈ ನೀರು ಭೂಮಿಯೊಳಗೆ ಇಳಿಯಲು ಸಾಧ್ಯವಾಗುತ್ತದೆ. ಶಾಲೆ, ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತುಳಸಿ, ಅಲಂಕಾರದ ಗಿಡಗಳು, ಸಾಧ್ಯವಾದರೆ ಹಲಸು, ಮಾವು, ಅಶ್ವತ್ಥ, ಆಲ, ಪೇರಳೆ, ನೆಲ್ಲಿ, ಚಿಕ್ಕು ಮೊದಲಾದ ಗಿಡಗಳನ್ನು ನೆಟ್ಟರೆ ನೀರಿಂಗುವುದರ ಜೊತೆಗೆ ನಮಗೂ ಪ್ರಾಣಿ ಪಕ್ಷಿಗಳಿಗೂ ಆಹಾರ ದೊರೆಯುತ್ತದೆ.
     ನೀರನ್ನು ಭೂಮಿಗಿಳಿಸಲು ಶ್ರಮ ಪಟ್ಟಿದ್ದೇವೆ ಎಂದು ಬೇಕಾಬಿಟ್ಟಿಯಾಗಿ ನೀರೆತ್ತಿ ಪೋಲು ಮಾಡಬಾರದು. ನೀರಿನ ಮಿತಬಳಕೆಗೂ ನಾವು ಗಮನ ಹರಿಸದಿದ್ದರೆ ಭೂಮಿಯೊಳಗೆ ಜಲಮಟ್ಟ ಏರುತ್ತಾ ಹೋಗದು. ಬ್ಯಾಂಕಿಗೆ ಹಣ ಹೆಚ್ಚು ಜಮೆ ಮಾಡಿ ಕಡಿಮೆ ಖರ್ಚು ಮಾಡಿದರೆ ಮಾತ್ರವೇ ಉಳಿತಾಯ. ಜಲ ಪೂರಣಕ್ಕೂ ಬ್ಯಾಂಕಿನ ಉಳಿತಾಯ ಖಾತೆಯ ನೀತಿ ಅನ್ವಯಿಸುತ್ತದೆ. ನೀರಿನ ಮರುಬಳಕೆಯೂ ಜಲಸಂವರ್ಧನೆಗೆ ಭೂಮಿಕೆಯಾಗುತ್ತದೆ.
      ನಾನಾ ರೀತಿಯಲ್ಲಿ ನಿರಂತರ ನೀರಿನ ಪೋಲಾಗುವಿಕೆ ನಡೆಯುತ್ತದೆ.. ದಂತ ಮಾರ್ಜನ, ಸ್ನಾನ, ಗಡ್ಡ ತೆಗೆಯುವುದು ಮೊದಲಾದ ಸಂದರ್ಭಗಳಲ್ಲಿ ನಲ್ಲಿಗೆ ಚಾಲನೆ ನೀಡಿ; ಎಲ್ಲ ಕೆಲಸ ಮುಗಿಸಿದ ನಂತರ ನಲ್ಲಿ ನಿಲ್ಲಿಸಿದರೆ ನೀರು ಅನಗತ್ಯವಾಗಿ ಪೋಲಾಗುತ್ತದೆ. ನೀರನ್ನು ಬಾಲ್ದಿ ಮತ್ತು ಪಾಟೆ ಬಳಸಿ ಉಪಯೋಗಿಸಿದರೆ ನೀರು ಪೋಲಾಗುವುದು ಕಡಿಮೆಯಾಗುತ್ತದೆ. ನಲ್ಲಿಯಲ್ಲಿ ಹನಿ ಹನಿ ತೊಟ್ಟಿಕ್ಕುವುದು, ನೀರಿನ ಕೊಳವೆಯಲ್ಲಿ ಸೋರುವಿಕೆ ಮತ್ತು ಚಿಮ್ಮುವಿಕೆಯನ್ನು ಸಕಾಲದಲ್ಲಿ ತಡೆಗಟ್ಟಬೇಕು. ಜಲಯುದ್ಧಗಳಾಗದಂತೆ, ನಮ್ಮ ಪೀಳಿಗೆ ಸಂತಸಮಯವಾಗಿ ಬೆಳೆಯುವಂತೆ ಈ ಮಳೆಗಾಲದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ನಾವೆಲ್ಲರೂ ಭೂಮಿಗೆ ನೀರಿಂಗಿಸೋಣವೇ? 
ಸೂ: ನಿಮಗೆ ಜಲಮರುಪೂರಣ ಮಾಹಿತಿಯನ್ನು ನಮ್ಮಿಂದಲೂ (9448626093) ಪಡೆಯಬಹುದು. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article