-->
ಬದಲಾಗೋಣವೇ ಪ್ಲೀಸ್ - 98

ಬದಲಾಗೋಣವೇ ಪ್ಲೀಸ್ - 98

ಬದಲಾಗೋಣವೇ ಪ್ಲೀಸ್ - 98
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

           
      ಅಯ್ಯೋ! ಕಾಪಾಡಿ... ಅಯ್ಯೋ! ಕಾಪಾಡಿ.... ಯಾರಾದರೂ ನನ್ನನ್ನು ಬದುಕಿಸಿ... ನಂಗೆ ಉಸಿರುಗಟ್ಟುತ್ತಿದೆ.... ನಿತ್ರಾಣದಿಂದ ನಿಲ್ಲಲಾಗುತ್ತಿಲ್ಲ..... ದಯವಿಟ್ಟು ಯಾರಾದರೂ ಸಹಾಯ ಮಾಡಿ....
     ಹಾಸಿಗೆಯ ಮೇಲೆ ತೀವ್ರ ಚಳಿ ಜ್ವರದಿಂದ ನರಳಿ ನೋವು ತಡೆಯಲಾಗದೆ ಗಡಗಡನೆ ಆಕೆ ನಡುಗುತ್ತಿದ್ದಾಳೆ. ದೇಹವನ್ನು ಮುಟ್ಟಲಾಗದಷ್ಟು ಬಿಸಿ ಏರಿದೆ. ವಿಪರೀತ ತಲೆನೋವು. ದಿನವಿಡಿ ಸ್ಫೂರ್ತಿಯಾಗಿ ಕ್ರಿಯಾಶೀಲವಾಗಿದ್ದ ಅವಳ ಮುಖದ ಚೈತನ್ಯ ಮಾಸಿದೆ. ಒಂದೇ ಸವನೆ ಉಸಿರುಗಟ್ಟಿ ಸಾವಿನ ದಡದತ್ತ ಮುಖ ಮಾಡಿದಂತೆ ಗೋಚರಿಸುತ್ತಿದ್ದಾಳೆ. ಯಾರು ಕೂಡಾ ಹತ್ತಿರ ಬರುತ್ತಿಲ್ಲ. ಯಾರೂ ಸಹಾಯ ಮಾಡುತ್ತಿಲ್ಲ. ಕೆಲವರು ಜ್ವರ ಬಂದ ವಿಚಾರ ಕೇಳಿ ಅಲ್ಲಿಂದಲೇ ಕಾಲ್ಕಿತ್ತಿದ್ದಾರೆ. ಸಾವಿರಾರು ಜನರಿಗೆ ಬೆಳಕಾಗಿದ್ದ ಆ ಬೆಳಕಿಗೆ ಈಗ ಬೆಳಕಾಗುವವರು ಯಾರು ? ಅರೇ.... ಏನ್ಮಾಡುವುದು...!! ಹಾಗೆ ಸುಮ್ಮನಿದ್ದರೆ ಸಾವು ಖಚಿತ. ಉಳಿಸಬೇಕಾದರೆ ಚಿಕಿತ್ಸೆ ನೀಡಲೇಬೇಕು. ಅದಕ್ಕೆ ವೈದ್ಯರು ಬೇಕಾಗಿದ್ದಾರೆ. ಜ್ವರ ಗುರುತಿಸಿ ಸೂಕ್ತ ಚಿಕಿತ್ಸೆ ನೀಡೋ ವೈದ್ಯರು ತುರ್ತಾಗಿ ಬೇಕಾಗಿದ್ದಾರೆ. ಸಾಯುವ ಮುನ್ನ ಬದುಕುಳಿಸಿ ಧೈರ್ಯ ತುಂಬೋ ವೈದ್ಯರು ಬೇಕಾಗಿದ್ದಾರೆ. ನಿಸ್ವಾರ್ಥ ಮನೋಭಾವದ ವೈದ್ಯರು ಬೇಕಾಗಿದ್ದಾರೆ. ಹಣದಾಸೆ ಬಿಟ್ಟು ಸೇವೆಯಾಸೆ ಇರುವ ವೈದ್ಯರು ಬೇಕಾಗಿದ್ದಾರೆ. ಅವರು ಎಲ್ಲಿದ್ದಾರೆ....? ಹೇಗಿದ್ದಾರೆ....? ಕರೆತರುವ ಬಗೆ ಹೇಗೆ....? ಎಲ್ಲರೂ ಚಿಂತಾಕ್ರಾಂತರಾಗಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಬೇಕಾಗಿದೆ. ಪ್ರತಿಕ್ರಿಯೆ ತಡವಾದರೆ ಅಥವಾ ನಿರ್ಲಕ್ಷ್ಯಗೊಳಗಾದರೆ ಪರಿಣಾಮ ಗಂಭೀರವಾದದ್ದು. ಮರು ಸರಿಪಡಿಸಲಾಗದ್ದು ಹಾಗೂ ವ್ಯರ್ಥ ಆಲಾಪವಾದದ್ದು. ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ...!!
     ಹೌದು.... ನಮ್ಮ ಅಮ್ಮ... ಭೂಮಿ ತಾಯಿಗೆ ಜ್ವರ ಬಂದಿದೆ. ತನ್ನೆಲ್ಲ ಮಕ್ಕಳನ್ನು ಪ್ರೀತಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಮಣ್ಣು- ಗಾಳಿ - ನೀರು - ಅನ್ನ - ಆಹಾರ - ಆಶ್ರಯ ನೀಡಿ ಸಾಕುತ್ತಿರುವ ನನ್ನಮ್ಮ ಭೂಮಿತಾಯಿಯ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಬೇಕಾಗಿದ್ದಾರೆ. ನನ್ನಮ್ಮ ಭೂಮಿತಾಯಿಯ ಉಷ್ಣಾಂಶವು ದಿನದಿಂದ ದಿನಕ್ಕೆ ಏರುತ್ತಿದೆ. ಸೆಖೆ ಹೆಚ್ಚಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಪರಿಸರ ಮಾಲಿನ್ಯಗಳಿಂದಾಗಿ ತಲೆನೋವು ವಿಪರೀತವಾಗಿದೆ. ನೀರಿಲ್ಲದೆ  ಬದುಕಲಾಗುತ್ತಿಲ್ಲ...!! ಜಾಗತಿಕ ತಾಪಮಾನದಿಂದಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆಕೆಗೆ ಉಸಿರು ಕೊಡುವ ಮರಗಳು - ಕಾಡುಗಳು ಮರೆಯಾಗಿದೆ. ಆಕೆಗೆ ಸತ್ವವಾಗಿದ್ದ ಸ್ವಾಭಾವಿಕ ಸಂಪನ್ಮೂಲಗಳು ಬರಿದಾಗುತ್ತಿದೆ. ಹೀಗೆ ಮುಂದುವರಿದರೆ ಭೂಮಿ ತಾಯಿಯ ಸಾವು (ಅವನತಿ) ಖಂಡಿತಾ. ಆದರೆ ಇನ್ನೂ ಕಾಲ ಮಿಂಚಿಲ್ಲ. ಆಕೆಗೆ ಬಂದಿರುವ ಜ್ವರಕ್ಕೆ   ಸೂಕ್ತ ಚಿಕಿತ್ಸೆ ಸಿಕ್ಕರೆ ಖಂಡಿತಾ ಬದುಕುತ್ತಾಳೆ. ಆಕೆ ಬದುಕಿದರೆ ಮಾತ್ರ ನಾವೂ ಬದುಕುತ್ತೇವೆ. ಆದರೆ  ಸ್ವಾರ್ಥಮಯ ಲೋಕದಲ್ಲಿ ಸೂಕ್ತ ಚಿಕಿತ್ಸೆ ನೀಡೋ ವೈದ್ಯರು ಎಲ್ಲಿದ್ದಾರೆ....? ಅವರನ್ನು ಹುಡುಕುತ್ತಾ ಹೋದರೆ ಕಾಲ ಮಿಂಚಿ ಭೂತಾಯಿ ಸತ್ತಾಳು. ಬನ್ನಿ ನಾವೆಲ್ಲರು ನಿಸ್ವಾರ್ಥದಿಂದ ಆಕೆಯ ಉಪಚರಿಸೋಣ. ಆಕೆಯ ಕೂಗಿಗೆ (ಕ್ರಿಯೆಗೆ) ತುರ್ತಾಗಿ ಪ್ರತಿಕ್ರಿಯೆ ನೀಡೋಣ. ಪ್ರತಿಕ್ರಿಯೆ ತಡವಾದಷ್ಟು ಅಪಾಯದ ಸಾಧ್ಯತೆ ಹೆಚ್ಚು. ಅಹಂ ಬಿಡೋಣ. ಇದಕ್ಕೆ ವೈದ್ಯಕೀಯ ಶಿಕ್ಷಣ ಕಲಿಯಬೇಕಾಗಿಲ್ಲ. ಇದಕ್ಕೆ ಬೇಕಾದ್ದು ಕೇವಲ ಮಾನಸಿಕ ಗಟ್ಟಿ ನಿರ್ಧಾರ ಮಾತ್ರ. ಈ ನಿರ್ಧಾರ ಮಾಡಿ ಭೂಮಿ ತಾಯಿಯನ್ನು ಜ್ವರದಿಂದ ಕಾಪಾಡೋಣ. ಈ ಕ್ಷಣ... ಅಥವಾ ಈ ಮಳೆಗಾಲದಲ್ಲಿ ಸ್ವಂತ ಅಥವಾ ಸರಕಾರಿ ಅಥವಾ ನೆರೆಹೊರೆಯ ಗೆಳೆಯರ ಜಾಗದಲ್ಲಿ ಕನಿಷ್ಠ ಹತ್ತು ಗಿಡಗಳನ್ನಾದರೂ ನೆಟ್ಟು ಬೆಳೆಸಿ ತಾಯಿಗೆ ಉಸಿರು ನಿಡೋಣ. ಪರಿಸರ ಸ್ವಚ್ಛತೆ ಮೂಲಕ ಆಕೆಗೆ ಬಂದಿರುವ ತಲೆನೋವು ಗುಣಪಡಿಸೋಣ. ನಮ್ಮಿಂದಾಗುವ ಯಾವುದೇ ರೀತಿಯ ಆರೋಗ್ಯಕರ ಸೇವೆಯಿಂದ ತಾಯಿಗೆ ಕೃತಜ್ಞರಾಗೋಣ. ತಾಯಿಯ ಪ್ರತಿಕ್ರಿಯೆಗೂ ತಕ್ಷಣವೇ ಪ್ರತಿಸ್ಪಂದಿಸೋಣ. ಭೂಮಿ ತಾಯಿಯ ಉಳಿವಿನ ಈ ನಿರ್ಧಾರದ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article