-->
ಹಕ್ಕಿ ಕಥೆ : ಸಂಚಿಕೆ - 99

ಹಕ್ಕಿ ಕಥೆ : ಸಂಚಿಕೆ - 99

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
     ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ನಾನು ಸರಕಾರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಮಗೊಂದು ತರಬೇತಿಗೆ ನಿಯೋಜನೆ ಮಾಡಿದ್ದರು. ಕೇವಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಮಾತ್ರ ಈ ತರಬೇತಿ ಇತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲನಾಯಕನ ಹಟ್ಟಿಯ ಹತ್ತಿರ ಖುದಾಪುರ ಎಂಬ ಹಳ್ಳಿ, ಆ ಹಳ್ಳಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ತರಬೇತಿ ಕೇಂದ್ರ. ಅಲ್ಲಿ ನಮಗೆ ಹತ್ತು ದಿನಗಳ ತರಬೇತಿ. ಚಳ್ಳಕೆರೆ ತಲುಪಿ, ಅಲ್ಲಿಂದ ಖುದಾಪುರದ ಕಡೆಗೆ ಹೋಗುವ ಬಸ್ಸು ಹತ್ತಿ ಹೊರಟೆವು. ಏರುತಗ್ಗುಗಳಿಲ್ಲದ ಬಟಾ ಬಯಲು. ಜೂನ್ ತಿಂಗಳ ಸಮಯ. ಕರಾವಳಿಯಲ್ಲಿ ಆಗಲೇ ಮಳೆ ಪ್ರಾರಂಭ ಆಗಿದ್ದರೂ ಇಲ್ಲಿ ಮಳೆಯ ಸುಳಿವೇ ಇರಲಿಲ್ಲ. ನೆಲವೆಲ್ಲ ಕಾದು ಕೆಂಪಗೆ ಕಾಣುತ್ತಿತ್ತು. ಮರಗಳೂ ಬಹಳ ವಿರಳ. ದಖ್ಖನ್ ಪ್ರಸ್ಥಭೂಮಿ ಎಂದು ನಾವು ನಮ್ಮ ಶಾಲಾ ದಿನಗಳಲ್ಲಿ ಓದಿದ್ದರೂ ಅದು ಹೇಗಿರುತ್ತದೆ ಎಂಬ ನಿಜವಾದ ಅನುಭವ ನಮಗೆ ಆಗಲಾರಂಭವಾಗಿತ್ತು. 
       ಬೆಳಗ್ಗಿನಿಂದ ಸಂಜೆಯವರೆಗೂ ಬಹಳ ಸೊಗಸಾದ ತರಗತಿಗಳನ್ನು ನಡೆಸುತ್ತಿದ್ದರು. ತರಬೇತಿ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ನಮ್ಮ ಹಾಸ್ಟೆಲ್ಗಳು ಇದ್ದವು. ಹಾಸ್ಟೆಲ್ನಿಂದ ಬೆಳಗ್ಗೆ ಬರುವಾಗ ಸಂಜೆ ಹೋಗುವಾಗ ಬಯಲುನಾಡಿನ ಸುಂದರ ದೃಶ್ಯವನ್ನು ಕಣ್ಣುತುಂಬಿಕೊಳ್ಳುವುದು ಸಾದ್ಯವಾಗುತ್ತಿತ್ತು. ಅಲ್ಲಿನ ಮ್ಯಾನೇಜರ್ ಗಜಾನನ ಎಂಬವರ ಪರಿಚಯವಾಯಿತು. ನನ್ನ ಫೋಟೋಗ್ರಫಿಯ ಆಸಕ್ತಿ ತಿಳಿದು ಬೆಳಗ್ಗೆ ವಾಕಿಂಗ್ ಹೋಗ್ತೇವೆ ನೀವೂ ಬನ್ನಿ, ಇಲ್ಲಿ ಹಲವಾರು ಬಗೆಯ ಹಕ್ಕಿಗಳು ನೋಡಲು ಸಿಗುತ್ತವೆ ಎಂದು ಕರೆದರು. ಬಯಲು ಸೀಮೆಯಲ್ಲಿ ಏನೂ ಇರುವುದಿಲ್ಲ, ಅಲ್ಲಿ ನೀರಿಗೂ ಬರಗಾಲ ಏನೂ ಬೆಳೆಯುವುದಿಲ್ಲ ಎಂದುಕೊಂಡಿದ್ದ ನನಗೆ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಬದುಕುವ ಅನೇಕ ಗಿಡ ಮರ ಪ್ರಾಣಿ ಪಕ್ಷಿಗಳನ್ನು ನೋಡಿ ಆಶ್ಚರ್ಯವಾಯಿತು. ಅತ್ಯಂತ ಅಪರೂಪದ, ಸುಂದರ ಕೊಂಬಿನ ಕೃಷ್ಣಮೃಗಗಳೂ ಅಲ್ಲಿ ಸ್ವಚ್ಛಂದವಾಗಿ ಮೇಯುವುದನ್ನು ನೋಡಿ ಬಹಳ ಸಂತೋಷವಾಯಿತು. 
      ಒಂದು ದಿನ ಪ್ರಯೋಗಾಲಯ ತರಗತಿಗಳು ಬೇಗನೆ ಮುಗಿದು ಬಿಡುವಾದ್ದರಿಂದ ಅಲ್ಲೇ ಅಡ್ಡಾಡಿಕೊಂಡು ಬರೋಣ ಎಂದು ನನ್ನ ಕ್ಯಾಮರಾ ತೆಗೆದುಕೊಂಡು ಹೊರಟೆ. ಅಲ್ಲೇ ಸ್ವಲ್ಪದೂರ ಒಣಭೂಮಿಯಲ್ಲಿ ಯಾವುದೋ ಪುಟ್ಟ ಹಕ್ಕಿ ನಡೆದಾಡಿದ ಹಾಗೆ ಕಾಣಿಸಿತು. ಆದರೆ ನೆಲದ ಮೇಲೆ ಹೊಟ್ಟೆ ಊರಿ ಅದು ಕುಳಿತುಬಿಟ್ಟರೆ ಹಕ್ಕಿ ಎಲ್ಲಿದೆ ಎಂದು ಗುರುತಿಸುವುದೇ ಕಷ್ಟವಾಗುತ್ತಿತ್ತು. ಸುಮಾರು ಗುಬ್ಬಚ್ಚಿಯ ಗಾತ್ರದ ಹಕ್ಕಿ. ದೇಹವೆಲ್ಲಾ ಮರಳು ಮಣ್ಣಿನಂತೆ ಬೂದು ಬಣ್ಣ. ಕತ್ತು, ಎದೆ ಮತ್ತು ಹೊಟ್ಟೆಯ ಭಾಗಗಳು ಕಪ್ಪು ಬಣ್ಣ, ತಲೆಯಮೇಲೂ ಅದೇ ಬೂದುಬಣ್ಣ. ಗುಬ್ಬಚ್ಚಿಯಂತಹ ಕೊಕ್ಕು. ನೆಲದಮೇಲೆ ಬಿದ್ದಿರಬಹುದಾದ ಸಣ್ಣಪುಟ್ಟ ಕಾಳುಗಳನ್ನು ಹೆಕ್ಕಿ ತಿನ್ನುತ್ತಿತ್ತು. ಕೆಲವೊಮ್ಮೆ ಎತ್ತರಕ್ಕೆ ಹಾರಿ ಆಕಾಶದಲ್ಲಿ ಸರ್ಕಸ್ ಮಾಡಿ ಮತ್ತೆ ನೆಲದಮೇಲೆ ಕುಳಿತುಬಿಡುತ್ತಿತ್ತು. ಹೆಣ್ಣು ಹಕ್ಕಿಗೆ ಎದೆ ಮತ್ತು ಕತ್ತಿನ ಸುತ್ತ ಈ ಕಪ್ಪುಬಣ್ಣ ಇರಲಿಲ್ಲ. ಹಕ್ಕಿ ಯಾವುದೆಂದು ತಿಳಿಯಲು ಬೇಕಾಗಿ ಒಂದೆರಡು ಫೋಟೋ ತೆಗೆದುಕೊಂಡು ಊರಿಗೆ ಬಂದ ನಂತರ ಪುಸ್ತಕದಲ್ಲಿ ಇದರ ಬಗ್ಗೆ ಹುಡುಕಿದೆ.
       ಭಾರತದ ಹಿಮಾಲಯ ಮತ್ತು ಪಶ್ಚಿಮಘಟ್ಟಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಕಡೆ ಈ ಹಕ್ಕಿ ನೋಡಲು ಸಿಗುತ್ತದೆ. ಒಣಭೂಮಿಗಳಲ್ಲಿ, ಹೊಲಗಳಲ್ಲಿ ಈ ಹಕ್ಕಿ ವಾಸಮಾಡುತ್ತದೆ. ಗುಬ್ಬಚ್ಚಿಯಂತೆ ಕಾಳುಗಳೇ ಇದರ ಮುಖ್ಯ ಆಹಾರ. ಹೊಲಗಳಲ್ಲಿ ಅಥವಾ ಒಣಭೂಮಿಯ ಕುರುಚಲು ಪೊದೆಗಳ ನಡುವೆ, ಈ ಹಕ್ಕಿ ಗೂಡು ಮಾಡಿ ಸಂತಾನಾಭಿವೃದ್ದಿ ಮಾಡುತ್ತದೆ. ಗುಬ್ಬಚ್ಚಿಯ ಜಾತಿಯಲ್ಲೂ ಎಷ್ಟೊಂದು ವಿಧಗಳು ಎಂದು ತಿಳಿದು ನಿಜಕ್ಕೂ ನನಗೆ ಆಶ್ಚರ್ಯವಾಯಿತು.
ಕನ್ನಡ ಹೆಸರು: ಕರಿ ಎದೆ ನೆಲಗುಬ್ಬಿ
ಇಂಗ್ಲೀಷ್ ಹೆಸರು: Ashy-crowned sparrow-lark
ವೈಜ್ಞಾನಿಕ ಹೆಸರು: Eremopterix griseus
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article