ಹಕ್ಕಿ ಕಥೆ : ಸಂಚಿಕೆ - 97
Tuesday, May 2, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಒಂದು ದಿನ ನನ್ನ ಮಿತ್ರರೂ ಉತ್ತಮ ವನ್ಯಜೀವಿ ಛಾಯಾಗ್ರಾಹಕರೂ ಆದ ರಾಧಾಕೃಷ್ಣ ಪೈಗಳು “ನಾಳೆ ಬೆಳಗ್ಗೆ ಸಿಗ್ತೀರಾ ಮಾಷ್ಟ್ರೇ ನಮ್ಮದೊಂದು ಹಿರಿಯರ ಜಾಗ ಇದೆ, ಅದರ ಸುತ್ತಲೂ ಕಾಡು ಇದೆ, ನಾಳೆ ಆ ಕಡೆ ಹೋಗ್ತೇನೆ, ನೀವೂ ಬನ್ನಿ ಜೊತೆಗೆ ಪಕ್ಷಿ ವೀಕ್ಷಣೆಗೆ ಹೋಗೋಣ” ಎನ್ನುವ ಆಹ್ವಾನ ನೀಡಿದರು. ನನಗೂ ಅಂದು ಬೆಳಗ್ಗೆ ಬಿಡುವು ಇತ್ತು, ಹಾಗಾಗಿ ಬರ್ತೇನೆ ಎಂದು ಒಪ್ಪಿಗೆ ನೀಡಿದೆ. ಮರುದಿನ ಬೆಳಗ್ಗೆ ಸುಮಾರು ಆರೂವರೆ ಗಂಟೆಗೆ ನಿಗದಿಮಾಡಿಕೊಂಡ ಜಾಗದಲ್ಲಿ ರಾಧಾಕೃಷ್ಣ ಪೈಗಳು ಆಗಲೇ ತಯಾರಾಗಿದ್ದರು. ಅವರ ಕಾರಿನಲ್ಲಿ ಕುಳಿತು ಹೊರಟೆವು.
ಗುಡ್ಡಗಾಡು ಜಾಗ, ತಿರುವು ಮುರುವಿನ ರಸ್ತೆ, ಏರುತ್ತಾ ಇಳಿಯುತ್ತಾ ತಿರುಗುತ್ತಾ ನಮ್ಮ ಗುರಿ ತಲುಪಿದೆವು. ಮುಖ್ಯ ರಸ್ತೆಯಿಂದ ಸ್ವಲ್ಪ ಒಳಗೆ ಕಾರು ನಿಲ್ಲಿಸಿ, ಇಲ್ಲಿಂದ ಮುಂದೆ ನಡೆಯೋಣ, ಕ್ಯಾಮರಾ ತೆಗೀರಿ ಎಂದರು ಪೈಗಳು. ಗುಡ್ಡದಿಂದ ನಿಧಾನಕ್ಕೆ ಇಳಿಯುತ್ತಾ ಸಾಗುವ ದಾರಿ, ಸುತ್ತಲೂ ಸಾಕಷ್ಟು ಕಾಡು ಬೆಳೆದಿತ್ತು. ಕೆಳಗಿನ ಕಣಿವೆಯಲ್ಲಿ ಅಡಿಕೆ ತೋಟ ಕಾಣುತ್ತಿತ್ತು. ಬೆಳಗ್ಗಿನ ಮಂಜು ಇನ್ನೂ ಕರಗಿರಲಿಲ್ಲ. ಸುತ್ತಮುತ್ತಲೂ ನೋಡುತ್ತಾ ಇದ್ದಾಗ ಸ್ವಲ್ಪದೂರದಲ್ಲಿ ಮರದ ಕಡೆಗೆ ಯಾವುದೋ ಹಕ್ಕಿ ಜೋಡಿ ಹಾರಿ ಬಂದು ಕುಳಿತದ್ದು ಕಾಣಿಸಿತು. ನನ್ನ ಕ್ಯಾಮರಾ ಅಷ್ಟು ದೂರಕ್ಕೆ ಜೂಮ್ ಆಗುತ್ತಿರಲಿಲ್ಲ. ಬೈನಾಕುಲರ್ ಜೊತೆಗಿತ್ತು. ಅದರ ಮೂಲಕ ನೋಡಿದರೆ ಆಶ್ಚರ್ಯ.
ಮರ ಯಾವುದು ಹಕ್ಕಿ ಯಾವುದು ಎಂದು ಪ್ರತ್ಯೇಕಿಸುವುದು ತೀರಾ ಕಷ್ಟ ಎನ್ನುವ ಬಣ್ಣ. ಕಂದು ಬಣ್ಣದ ಮೈತುಂಬಾ ಕಪ್ಪು ಪಟ್ಟೆಗಳು, ಒಂದು ಹಕ್ಕಿಗೆ ಮಾತ್ರ ಕಣ್ಣಿನ ಹಿಂದೆ ಕೆಂಪು ಬಣ್ಣ (ಅದು ಗಂಡು ಹಕ್ಕಿ ಇರಬೇಕು). ಕಪ್ಪು ಬಣ್ಣದ ಕೊಕ್ಕು. ಮರದಲ್ಲೊಂದು ಒಣಗಿದ ಗೆಲ್ಲು, ಅದರಲ್ಲಿ ಒಂದಷ್ಟು ಗೆದ್ದಲು ಹಿಡಿದಿತ್ತು. ಆ ಗೆದ್ದಲು ಗೂಡಿನಿಂದ ಒಂದೊಂದಾಗಿ ಗೆದ್ದಲಿನ ಮೊಟ್ಟೆ ಮತ್ತು ಹುಳಗಳನ್ನು ಹುಡುಕಿ ತಿನ್ನುತ್ತಿದ್ದವು. ಬಹಳ ಚುರುಕಾಗಿ ಗೆಲ್ಲಿನ ಎಲ್ಲಾ ಬದಿಗಳಲ್ಲೂ ಓಡಾಡಿ ಯಾವುದೇ ದಿಕ್ಕಿನಲ್ಲೂ ಆರಾಮಾಗಿ ಕುಳಿತು ಹುಳುಗಳನ್ನು ತಿನ್ನುತ್ತಿದ್ದವು. ಸ್ವಲ್ಪಹೊತ್ತಿನಲ್ಲಿ ಗೆದ್ದಲು ಹಿಡಿದ ಮರದ ಟೊಳ್ಳಾದ ಜಾಗಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಮರವನ್ನು ಕುಟ್ಟುವ ರೀತಿ, ಮರದಮೇಲೆ ಕುಳಿತುಕೊಳ್ಳುವ ಅವುಗಳ ಚಾತುರ್ಯ ನೋಡಿದಾಗ ಇವುಗಳು ಮರಕುಟಿಗ ಹಕ್ಕಿಗಳು ಎಂಬುದು ಸ್ಪಷ್ಟವಾಯಿತು. ಇರುವ ಬೆಳಕಿನಲ್ಲಿ ತೆಗೆದ ಫೋಟೋ ತಂದು ಮನೆಯಲ್ಲಿ ಸಲೀಂ ಅಲಿಯವರ ಪುಸ್ತಕ ತೆರೆದು ಅವುಗಳ ಬಗ್ಗೆ ಓದಿದಾಗ ಆಶ್ಚರ್ಯವಾಯಿತು. ಮರದ ಮೇಲೆ ದೊಡ್ಡದಾಗಿ ಗೂಡುಕಟ್ಟುವ ಕ್ರಿಮಾಟೊಗಾಸ್ಟರ್ ಎಂಬ ಜಾತಿಯ ಇರುವೆಗಳೆಂದರೆ ಈ ಹಕ್ಕಿಗೆ ಬಹಳ ಮೆಚ್ಚಿನ ಆಹಾರವಂತೆ. ಗೂಡನ್ನು ಕುಕ್ಕಿ ಇರುವೆಯ ಮೊಟ್ಟೆಗಳನ್ನು ಸ್ವಾಹಾ ಮಾಡುವುದಲ್ಲದೆ, ಈ ಇರುವೆಗಳ ಗೂಡನ್ನೇ ಮೊಟ್ಟೆ ಇಟ್ಟು ಮರಿಮಾಡಲು ಬಳಸುತ್ತವೆಯಂತೆ. ಗೂಡಿನಲ್ಲಿ ಇರುವೆಗಳು ಇದ್ದಾಗಲೇ ತಮ್ಮ ಮೊಟ್ಟೆ ಇಡಲು ಬೇಕಾದಷ್ಟು ದೊಡ್ಡ ತೂತು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ. ಈ ಆಕ್ರಮಣಕಾರಿ ಇರುವೆಗಳ ಗೂಡಿಗೆ ಬೇರಾವ ಹಾವು ಹಲ್ಲಿಗಳು ಬರುವ ಸಾಧ್ಯತೆ ಇಲ್ಲದ ಕಾರಣ ತಮ್ಮ ಮರಿಗಳ ಸುರಕ್ಷತೆಗೆ ಈ ಹಕ್ಕಿ ಕಂಡುಕೊಂಡಿರುವ ಉಪಾಯವಂತೂ ಅತೀವಿಶಿಷ್ಟ. ತನ್ನ ಆಹಾರವಾದ ಇರುವೆಯ ಗೂಡನ್ನೇ ತನ್ನ ಸಂತಾನಾಭಿವೃದ್ಧಿಗೂ ಬಳಸುವ ಈ ಹಕ್ಕಿಯ ಜಾಣ್ಮೆ ಮೆಚ್ಚಲೇಬೇಕಾದದ್ದು ಅಲ್ಲವೇ.
ಕನ್ನಡ ಹೆಸರು: ಕಂದು ಮರಕುಟಿಗ
ಇಂಗ್ಲೀಷ್ ಹೆಸರು: Rufous Woodpecker
ವೈಜ್ಞಾನಿಕ ಹೆಸರು: Micropternus brachyurus
ಚಿತ್ರ ಕೃಪೆ : ಅವಿನಾಶ್ ಅಡಪ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************