-->
ಓ ಮುದ್ದು ಮನಸೇ ...…...! ಸಂಚಿಕೆ - 30

ಓ ಮುದ್ದು ಮನಸೇ ...…...! ಸಂಚಿಕೆ - 30

ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190

                   
            
         ಕಿರಣ್ ಮತ್ತು ಕಾರ್ತಿಕ್ ಅವಳಿ-ಜವಳಿ ಮಕ್ಕಳು. ಇಬ್ಬರೂ ಓಟ್ಟಿಗೆ ನಿಂತರೆ ಯಾರು ಕಿರಣ್ ಮತ್ತು ಯಾರು ಕಾರ್ತಿಕ್ ಎಂದು ಗುರುತಿಸೋದೇ ಕಷ್ಟ. ಇಬ್ಬರೂ ಅಷ್ಟು ತದ್ರೂಪಿಗಳು. ಹಾಕುವ ಬಟ್ಟೆ, ನಡೆಯುವ ಶೈಲಿ, ಹಾವ-ಭಾವ ಎಲ್ಲವೂ ಒಂದೇ ತರ. ಇನ್ನು ಎಲ್ಲಾ ಚಟುವಟಿಕೆಗಳಿಂದ ಹಿಡಿದು ಅಭ್ಯಾಸದಲ್ಲಿಯೂ ಸಮರು. ಇಬ್ಬರಿಗೂ ಹದಿಮೂರು ತುಂಬಿ ಹದಿನಾಲ್ಕು ಆರಂಭವಾಗಿದೆ. ಮುಂದಿನ ವರ್ಷ ಎಂಟನೇ ತರಗತಿ.

      ಶಾಲೆಗೆ ರಜೆ ಆರಂಭ ಆದಾಗಿಂದ ಒಂದೇ ಹಟ.... ನಾವು ಅಜ್ಜಿ ಮನೆಗೆ ಹೋಗ್ತೇವೆ ಅಂತ. ಅಜ್ಜಿ ಮನೆಯಲ್ಲಿ ಮಾಮನ ಮಕ್ಕಳಿಬ್ಬರಿದ್ದಾರೆ. ಅಜ್ಜಿಗೆ ವಯಸ್ಸಾಗಿದೆ. ನೀವಿಬ್ಬರೂ ಅಲ್ಲಿಗೆ ಹೋದರೆ ಅತ್ತೆ ಒಬ್ಬರಿಗೇ ನಿಮ್ಮನ್ನು ಸಂಬಾಳಿಸೋದು ಕಷ್ಟವಾಗತ್ತೆ. ಅಂತು ಇಂತು ಕಿರಣ್ ಅಜ್ಜಿ ಮನೆಗೆ ಕಾರ್ತಿಕ್ ಬೆಂಗಳೂರಿನಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗೋದು ಎನ್ನುವ ತೀರ್ಮಾನವಾಯಿತು. ಅಪ್ಪ ಇಬ್ಬರನ್ನೂ ಅಲ್ಲಿಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಅತ್ಯಂತ ಉತ್ಸಾಹದಿಂದ ಅಜ್ಜಿ ಮನೆಗೆ ಬಂದಿದ್ದ ಕಿರಣ್ ಬಂದ ದಿನದಿಂದಲೇ ಮಾವನ ಮಕ್ಕಳಿಬ್ಬರೊಟ್ಟಿಗೆ ಕೂಡಿಕೊಂಡು ಆಟೋಟಗಳಲ್ಲಿ ಮುಳುಗಿದ. ಮಾವನ ಮಕ್ಕಳ ಗೆಳೆಯರೂ ಇವರನ್ನು ಸೇರಿಕೊಂಡರು.

       ಉರಿ ಬಿಸಿಲಿನ ಬೇಗೆಯಲ್ಲಿ ಕಾಯುವ ದೇಹವನ್ನು ಕರಿಕಲ್ಲುಗಳ ನಡುವೆ ಜುಳು ಜುಳು ಹಾದು ಆಳೆತ್ತರದ ಗುಂಡಿಯೊಂದರಲ್ಲಿ ಬಂದು ಸೇರುವ ತಣ್ಣನೆ ನೀರಿನಲ್ಲಿ ಈಜಾಡುವುದೇ ಚಂದ. ಆನೆಗುಂಡಿ ಅದರ ಹೆಸರು. ಆನೆಗುಂಡಿ ಅಂತ ಯಾಕ್ ಕರಿತಾರೆ ಇದನ್ನ..? ಕಿರಣ್ ಕೇಳಿದ. ಹುಡುಗರ ಗುಂಪಲ್ಲೊಬ್ಬನಂದ ರಾಜರ ಕಾಲದಲ್ಲಿ ಆನೆಗಳನ್ನು ಇಲ್ಲಿಗೆ ವಿರಾಮಕ್ಕೆಂದು ಕರೆತರುತ್ತಿದ್ದರಂತೆ. ಹಾಗೆ ಬಂದ ಆನೆಗಳು ಈ ಗುಂಡಿಯಲ್ಲಿ ಸ್ನಾನ ಮಾಡುತ್ತಿದ್ದವಂತೆ. ಅಂತು ಇಂತು ಎಲ್ಲರೂ ಆನೆಗುಂಡಿ ತಲುಪಿದರು. ಅಷ್ಟರಲ್ಲಾಗಲೇ ಹಲವಾರು ಹುಡುಗರು ನೀರಿಗಿಳಿದಿದ್ದರು. ಕೆಲವರು ದಡದಿಂದ ಗುಂಡಿಗೆ ಅಡ್ಡಲಾಗಿ ಬಾಗಿದ್ದ ನೇರಳೇ ಮರವೇರಿ ಅದರಿಂದ ನೇರವಾಗಿ ನೀರಿಗೆ ದುಮುಕುತ್ತಿದ್ದರು.        ಇನ್ನು ಕೆಲವರು ಒಂದು ಬಂಡೆಯಿಂದ ಇನ್ನೊಂದಕ್ಕೆ. ಕಿರಣ್ ಗೆ ಉತ್ಸಾಹ ಹೆಚ್ಚಾಯಿತು. ಅಂಗಿ ಚಡ್ಡಿ ಬಿಚ್ಚಿ ತಂದಿದ್ದ ಟವೇಲ್ ನಲ್ಲಿ ಅವುಗಳನ್ನು ಸುತ್ತಿ ಪಕ್ಕದಲ್ಲಿದ್ದ ಗಿಡದ ಮೊಟರಿನ ಮೇಲೆ ಎಸೆದ. ಅಲ್ಲಿಂದ ಓಡಿ ಬಂದವನೇ ನೀರಿಗೆ ಜಿಗಿದ. ನೀರಲ್ಲಿ ಸಂಪೂರ್ಣ ಮುಳುಗಿದ ಮೇಲೆದ್ದ ಮತ್ತೆ ಮುಳುಗಿದ. ಆಹಾ... ಅದೆಂತಹ ಖುಷಿ..! ಅಲ್ಲಿಂದ ಈಜುತ್ತಾ ಇನ್ನೊಂದು ದಡ ಸೇರಿದ, ಮತ್ತೊಂದು, ಮೊಗದೊಂದು, ನೇರಳೇ ಮರವೇರಿ ನೀರಿಗೆ ದುಮುಕಿದ. ಗೆಳೆಯರು ಕೂಗಿದರು, ಮುಟ್ಟಾಟ ಆಡೋಣ ಬರ್ತೀಯಾ? ಮುಟ್ಟುವವರು ನೀರಿನಾಳದಲ್ಲಿ ಮುಳುಗಿಕೊಂಡು ಹೋಗಿಯೇ ಬೇರೆಯವರನ್ನ ಮುಟ್ಟಬೇಕು. ಕಿರಣ್ ಅದರಲ್ಲಿ ನಿಸ್ಸೀಮ. ಒಂದೆರೆಡು ನಿಮಿಷ ಉಸಿರು ಹಿಡಿದಿಡುವ ಕೌಶಲ್ಯ ಅವನಿಗಿದೆ. ಆಟ ಶುರುವಾಯಿತು, ಈಗ ಕಿರಣ್ ನ ಸರದಿ. ನೀರಲ್ಲಿ ಮುಳುಗಿದ ಕಿರಣ್ ಅತ್ತಿತ್ತ ತಿರುಗಿದ. ಹತ್ತಾರು ಹುಡುಗರು ಒಮ್ಮೆಲೇ ನೀರಿಗೆ ದುಮುಕಿದ್ದರಿಂದ ನೀರು ಕೆಂಪಾಗಿದೆ. ಯಾರೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಎರಡೂ ಕಾಲುಗಳನ್ನು ನೆಲಕ್ಕೂರಿ ಮುಂದೆ ಜಿಗಿದ. ಮರಿ ಮೀನುಗಳು, ಅರ್ಧಂಬರ್ಧ ಕೊಳೆತ ಎಲೆಗಳು ಇವನ ಈಜಿನ ಸೆಳೆತಕ್ಕೆ ಗಿರ-ಗಿರ ತಿರುಗಿ ಹಿಂದೆ ಸರಿಯುತ್ತಿದ್ದವು. ಸ್ವಲ್ಪ ಮುಂದೆ ಸಾಗಿದ ಉಸಿರುಗಟ್ಟಿತು ಮತ್ತೆ ನೀರ ಮೇಲೆದ್ದು ದೀರ್ಘವಾದ ಉಸಿರೆಳುದುಕೊಂಡು ಹುಡುಗರಿದ್ದ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮತ್ತೆ ಮುಳುಗಿದ. ನೀರಿನೊಳಗೆ ಮುಳುಗಿದ ನಂತರ ತನ್ನ ದಿಕ್ಕು ಬದಲಿಸಿ ಯಾರಿಗೂ ಗೊತ್ತಾಗದಂತೆ ಗೆಳೆಯರನ್ನು ಔಟ್ ಮಾಡುವ ಉಪಾಯ ಹೂಡಿದ. ಎಲ್ಲಿ ಮುಳುಗುತ್ತಾನೆ ಎಲ್ಲಿ ಮೇಲೇಳುತ್ತಾನೆ ಯಾರಿಗೂ ತಿಳಿಯುತ್ತಿಲ್ಲ. ನೀರಿನ ಆಳದಲ್ಲಿ ನೆಲಕ್ಕಂಟಿಕೊಂಡವನಂತೆ ಈಜುತ್ತಿದ್ದ ಕಿರಣ್ ಗೆ ದೋಫ್ ಎಂದು ಮೇಲಿಂದ ಏನೋ ಬಿದ್ದ ಶಬ್ಧ ಕೇಳಿತು. ನೀರಿನಡಿಯಿಂದಲೇ ಮುಂದೆ ನೋಡಿದ. ಬಂಡೆಯ ಮೇಲೊಂದರಿಂದ ಆಳ ನೀರಿಗೆ ದುಮುಕಿದ ರಭಸಕ್ಕೆ ಹುಡುಗನೊಬ್ಬನ ತಲೆ ನೀರಿನೊಳಗೆ ಐದಾರು ಅಂಗುಲ ಕೆಳಗಿದ್ದ ಚೂಪಾದ ಬಿಣಚುಗಲ್ಲಿಗೆ ಬಡಿಯಿತು. ಹುಡುಗನ ತಲೆಯಿಂದ ರಕ್ತ ಹರಿಯಿತು. ಹುಡುಗ ನೀರು ಕುಡಿದ ಕೈ ಕಾಲು ಆಡಿಸುತ್ತ ನೀರಿನ ಆಳ-ಆಳಕ್ಕೆ ಮುಳುಗಿದ. ತನ್ನ ಕಣ್ಣ ಮುಂದೆ ಕ್ಷಣಾರ್ಧದಲ್ಲಿ ನಡೆದು ಹೋದ ಈ ಘಟನೆಯನ್ನು ನೋಡಿದ ಕಿರಣ್ ತಡ ಮಾಡದೆ ಮುಂದೆ ಈಜಿ ಅವನನ್ನು ಮೇಲೆತ್ತಲು ಕೈ ಹಿಡಿದ. ಸಾವಿನ ಸುಳಿಯಲ್ಲಿ ಒದ್ದಾಡುತ್ತಿದ್ದ ಹುಡುಗ ಕಿರಣ್ ನ ಕೈಯ್ಯನ್ನು ಗಟ್ಟಿಯಾಗಿ ಹಿಡಿದು ಎಳೆಯಲಾರಂಭಿಸಿದ. ಹುಡುಗನನ್ನು ಬದುಕಿಸಲು ಮುಂದಾಗಿದ್ದ ಕಿರಣ್ ಕೂಡಾ ಸಂಕಷ್ಟದಲ್ಲಿ ಸಿಲುಕಿದ. ಇವೆಲ್ಲವೂ ನೀರಿನ ಆಳದಲ್ಲಿ ನಡೆಯುತ್ತಿದ್ದರಿಂದ ಬೇರೆ ಯಾರಿಗೂ ಇದರ ಅರಿವು ಆಗಲೇ ಇಲ್ಲ. ಯಾರ ಸಹಾಯವೂ ಸಿಗಲಿಲ್ಲ. ನೀರಿನಲ್ಲಿ ಮುಳುಗುತ್ತಿರುವವರ ಜುಟ್ಟು ಹಿಡಿದು ಎಳೆಯಬೇಕೆಂದು ಯಾರೋ ಹೇಳಿದ್ದು ಕಿರಣ್ ನ ತಲೆಗೆ ಹೊಳೆಯಿತು. ಹೇಗೋ ಅವನ ಕೈ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಹುಡುಗನ ಜುಟ್ಟನ್ನು ಬಿಗಿಯಾಗಿ ಹಿಡಿದು ತನ್ನ ಎರೆಡೂ ಕಾಲುಗಳನ್ನು ನೆಲಕ್ಕೊತ್ತಿ ಮೇಲಕ್ಕೆ ದೇಹವನ್ನು ತಳ್ಳಿದ. ಹುಡುಗನ ಜೊತೆ-ಜೊತೆ ಕಿರಣ್ ಕೂಡ ಮೇಲೆ ಬಂದ. ಪಕ್ಕದಲ್ಲೇ ಇದ್ದ ಹುಡುಗರು ಇಬ್ಬರನ್ನೂ ಮೇಲಕ್ಕೆಳೆದುಕೊಂಡರು.

      ಹುಡುಗ ನಿತ್ರಾಣನಾಗಿದ್ದ. ನೀರು ನುಂಗಿದ್ದ ಅವನ ಹೊಟ್ಟೆ ಉಬ್ಬರಿಸಿಕೊಂಡಿತ್ತು. ಮರದ ನೆರಳಿಗೆ ಹುಡುಗನನ್ನು ಅಂಗಾತ ಮಲಗಿಸಿ ಹೊಟ್ಟೆಯನ್ನು ಹಿಡಿದು ಅಮುಕಿದರು. ಬಾಯಿಂದ ನೀರು ಹೊರ ಚಿಮ್ಮಿತು. ಅವನಿಗೆ ಪ್ರಜ್ಞೆ ಬಂತು. ತಲೆಯಿಂದ ಸೋರುತ್ತಿದ್ದ ರಕ್ತಕ್ಕೆ ಟವೇಲ್ ಕಟ್ಟಿ ಬೈಕ್ ಮೇಲೆ ಕೂರಿಸಿ ಅವನನ್ನು ಆಸ್ಪತ್ರೆಗೆ ಸಾಗಿಸಿದರು. ಉತ್ತಮವಾಗಿ ಈಜು ಕಲಿತಿದ್ದ ಕಿರಣ್ ಎದೆಗುಂದದೆ ಹುಡುಗನನ್ನು ರಕ್ಷಿಸಿದ್ದ. ಆದರೆ ಅವನ ಕಣ್ಣ ಮುಂದೆ ನಡೆದ ಈ ಘಟನೆ ಅವನಿಗೆ ಒಂದು ಉತ್ತಮ ಪಾಠ ಕಲಿಸಿತು. ಗೊತ್ತಿಲ್ಲದ ಕೆಲಸವನ್ನು ಗೊತ್ತಿಲ್ಲದ ಸ್ಥಳದಲ್ಲಿ ಯಾವತ್ತೂ ಮಾಡ ಬಾರದು. ಅಜಾಗರೂಕ ವರ್ತನೆ, ಅತಿಯಾದ ಆನಂದ, ಅಪಾಯ ತಂದೊಡ್ಡುತ್ತವೆ. ಹುಡುಗಾಟಿಕೆಯಿಂದಾಗಿ ಜೀವವನ್ನೆ ಕಳೆದು ಕೊಳ್ಳಬೇಕಾಗುತ್ತದೆ ಎನ್ನುವುದರ ಅರಿವು ಈ ಘಟನೆಯಿಂದಾಗಿ ಕಿರಣ್ ಗೆ ಮನವರಿಕೆಯಾಗಿತ್ತು. ಅಬ್ಭಾ ದೊಡ್ಡ ಅನಾಹುತದಿಂದ ಬಚಾವಾದೆವು ಎನ್ನುತ್ತ ಹುಡುಗರು ಒಣಗಿಹಾಕಿದ್ದ ಟವೇಲ್ ಅನ್ನು ತಲೆಯ ಮೇಲೆ ಹೊದ್ದು ಮನೆಯತ್ತ ಹೆಜ್ಜೆ ಇಟ್ಟರು.

      ಇನ್ನು ಬೆಂಗಳೂರಿನ ಚಿಕ್ಕಪ್ಪನ ಮನೆಗೆ ಬಂದಿದ್ದ ಕಾರ್ತಿಕ್ ಚಿಕ್ಕಪ್ಪನ ಮಗನೊಟ್ಟಿಗೆ ಪ್ರತಿದಿನ ಕ್ರಿಕೆಟ್ ಆಡೋಕೆ ಅಂತ ಅವರ ಏರಿಯಾದಲ್ಲಿ ಪಾಳುಬಿದ್ದಿದ್ದ ಒಂದು ಜಾಗದಲ್ಲಿ ಸುತ್ತಲಿನ ಒಂದಿಷ್ಟು ಹುಡುಗರೊಟ್ಟಿಗೆ ಸೇರುತ್ತಿದ್ದ. ಒಂದೇ ಜಾಗದಲ್ಲಿ ಎರಡು ತಂಡಗಳು ಕ್ರಿಕೆಟ್ ಆಡುತ್ತಿದ್ದವು. ಒಂದು ಹೈ ಫೈ ಇಂಗ್ಲೀಶ್ ಮಾತಾಡುವ ಬೋರ್ನ್ ವಿಟಾ ಮಕ್ಕಳ ಗುಂಪು ಇನ್ನೊಂದು ಪಕ್ಕಾ ಲೋಕಲ್ ಹುಡುಗರದ್ದು. ಆಗಾಗ ಈ ಎರಡೂ ಗುಂಪುಗಳ ನಡುವೆ ಪಂದ್ಯಾಟ ನಡೆಯುತ್ತಿತ್ತು. ಹಾಗಾಗಿ ಇವನಿಗೆ ಎರಡೂ ಕಡೆಯ ಹುಡುಗರ ಪರಿಚಯ ಮತ್ತು ಗೆಳೆತನ ಸಿಕ್ಕಿತು. ಆಟ ಮುಗಿದ ಮೇಲೆ ಒಂದಿಷ್ಟು ಹೊತ್ತು ಅಲ್ಲೇ ಕೂತು ಹರಟೋದು, ತಮಾಷೆ, ಅದು ಇದು ಎಲ್ಲವೂ ನಡೆಯುತ್ತಿತ್ತು. ಸಿಗರೇಟ್ ಸೇದೋದು, ಎಣ್ಣೆ ಹೊಡೆಯೋದಂದರೆ ಅಲ್ಲಿನ ಹುಡುಗರಿಗೆ ಪ್ರತಿಷ್ಟೆ. ಯಾರು ಇದನ್ನು ಮಾಡೋದಿಲ್ಲವೋ ಅವರಿಗೆ ಪ್ರತಿದಿನ ಚೇಷ್ಟೆ ತಪ್ಪಿದ್ದಲ್ಲ. ಅಲ್ಲಿನ ಹುಡುಗರ ಗುಂಪಿನಲ್ಲಿ ಸದಸ್ಯತ್ವ ಬೇಕಂದ್ರೆ ಇರಬೇಕಾದ ಮಿನಿಮಮ್ ಎಲಿಜಿಬಿಲಿಟಿ ಇದು. ತಾನೂ ಇದನ್ನ ಮಾಡಬಲ್ಲೆ ಎನ್ನೋದನ್ನ ತೋರಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ. ಕದ್ದು ಮುಚ್ಚಿ ಸಿಗರೇಟ್ ಸೇದೋದರಲ್ಲಿ ಇರೋ ಮಜಾನೇ ಬೇರೆ ಚಿಕ್ಕಪ್ಪನ ಮಗ ಹುರಿದುಂಬಿಸಿದ.

     ಆಟ ಮುಗಿಸಿ ಮನೆಗೆ ಬಂದ ಮೇಲೆ ಗಡಿಬಿಡಿಯಲ್ಲಿ ಸ್ನಾನ ಮಾಡಿ, ಊಟ ಮುಗಿಸಿ ಬೆಡ್ ರೂಮಿಗೆ ಓಡುತ್ತಿದ್ದರು. ಕ್ರಿಕೆಟ್ ಗೆಳೆಯರೊಟ್ಟಿಗೆ ಆನ್ ಲೈನ್ ನಲ್ಲಿ ಗೇಮ್ಸ್ ಆಡೋದು. ಸ್ವಲ್ಪ ದಿನಗಳ ನಂತರ ಬೆಟ್ಟಿಂಗ್ ಕಟ್ಟಿ ಕ್ರಿಕೆಟ್, ಆನ್ ಲೈನ್ ಗೇಮ್ಸ್ ಆಡೋದು ಶುರುವಾಯಿತು. ಪಾಕೆಟ್ ಮನಿ ಖಾಲಿಯಾದಾಗ ಚಿಕ್ಕಪ್ಪನ ಮಗ ಅಪ್ಪನ ಲಾಕರ್ ನಿಂದ ಉಪಾಯವಾಗಿ ಸಾವಿರ ರುಪಾಯಿ ಹಣ ಎಗರಿಸಿದ. ಗೆಳೆಯರು, ಆಟ, ಚಟ ಮತ್ತು ಹಣದ ಜೊತೆಜೊತೆಗೆ ಹೊಸ ಹೊಸ ಪದಬಳಕೆಯೂ ಶುರುವಾಯಿತು. ಪ್ರತಿದಿನ ಒಬ್ಬರಿಗೊಬ್ಬರು ಮೀಟ್ ಮಾಡುವಾಗಿಂದ ಹಿಡಿದು ಅಂತ್ಯದಲ್ಲಿ ಬೀಳ್ಕೊಡುವವರೆಗೆ ಬಳಸುವ ಪದಗಳೆಲ್ಲವೂ ಅಪ್ಪ ಅಮ್ಮಂದಿರ ಕುರಿತದ್ದೇ...!!

     ಒಂದಿನ ಮಧ್ಯಾಹ್ಯದ ಊಟ ಮುಗಿದ ಮೇಲೆ ಇಬ್ಬರೂ ಹೋಗಿ ಮೊದಲು ಕೂದಲು ಕಟ್ಟಿಂಗ್ ಮಾಡಿಸಿಕೊಳ್ಳಿ. ತಲೆಗೂದಲು ಉದ್ದ ಬೆಳೆದಿದೆ ಅಂದರು ಚಿಕ್ಕಪ್ಪ. ಆದಿನ ಸಂಜೆಯೇ ಇಬ್ಬರೂ ಕಟಿಂಗ್ ನವನತ್ತ ಓಡಿದರು. ಒಬ್ಬ, ನಂಗೆ ಕ್ಯಾಪ್ ಕಟ್ಟಿಂಗ್ ಇನ್ನೊಬ್ಬ, ನಂಗೆ ಸ್ಪೈಕ್ ಕಟ್ಟಿಂಗ್. ಒಬ್ಬನಿಗೆ ತಲೆಯ ಕೆಳಾರ್ಧವನ್ನು ಸಂಪೂರ್ಣ ಬೋಳಿಸಿ ಮೇಲ್ಭಾಗವನ್ನು ಸೋಗೆ ಮನೆಯ ಕುಟೀರದಂತೆ ಬಿಡಲಾಯಿತು. ಇನ್ನೊಬ್ಬನಿಗೆ ತಲೆಯ ಹಿಂದೆ ಕೆಳಭಾಗದಲ್ಲಿ ಚೂಪಾದ ಆಕಾರ ಮಾಡಿ ಎರಡೂ ಕಿವಿಗಳ ಮೇಲೆ ಸ್ವಲ್ಪ ಮೇಲೆ ಬೆಕ್ಕು ಪರಚಿದಂತೆ ಎರೆಡೆರೆಡು ಗೀಟು ಹಾಕಲಾಯಿತು. ಕನ್ನಡಿಗೇ ಬೇಜಾರಾಗುವಷ್ಟು ತಿರುಗಿ ಮುರುಗಿ ನೋಡಿದ್ದೇ ನೋಡಿದ್ದು ಏನೋ ಒಂತರಾ ಹುರುಪು. ಇದೆಂತಹ ವೇಷ ನಿಮ್ದು, ಅಮ್ಮ ಕುಟುಕಿದರು.

       ಮಾರನೇ ದಿನ ಕ್ರಿಕೆಟ್ ಮ್ಯಾಚ್ ಇದೆ. ಬೋರ್ನ್ ವಿಟಾ ಮಕ್ಕಳಿಗೂ ಮತ್ತು ಲೊಕಲ್ ಹುಡಗರಿಗೂ ಬೆಟ್ಟಿಂಗ್ ಮ್ಯಾಚ್ ಅದು. ಹಟ ಮಾಡಿ ಅಪ್ಪನ ಕೈಯ್ಯಲ್ಲಿ ಹೊಸ ಶೂ ತರಿಸಿಕೊಂಡ ಚಿಕ್ಕಪ್ಪನ ಮಗ. ಮ್ಯಾಚ್ ಆರಂಭವಾಯಿತು. ಕಾರ್ತಿಕ್ ಮತ್ತವನ ಚಿಕ್ಕಪ್ಪನ ಮಗ ಲೋಕಲ್ ಹುಡುಗರ ತಂಡದಲ್ಲಿದ್ದರು. ಅವರದ್ದೇ ಬ್ಯಾಟಿಂಗ್. ಮೊದಲ ಬ್ಯಾಟ್ಸ್ ಮ್ಯಾನ್ ಆಗಿ ಕಾರ್ತಿಕ್ ಹೋದ. ಮೊದಲ ಓವರಿನ ಮೊದಲ ಬಾಲ್ ಕಾರ್ತಿಕ್ ನಿಂತಿದ್ದ ಸ್ಥಳದಿಂದ ಸ್ವಲ್ಪ ದೂರ ಎಡಗಡೆ ಬಿದ್ದು ಗಿರ್ಗಿಟ್ಳೆ ತಿರುಗಿ ಒಳಕ್ಕೆ ನುಸುಳಿತು. ಕಾರ್ತಿಕ್ ಬ್ಯಾಟ್ ಎತ್ತುವುದರೊಳಗೆ ಚೆಂಡು ನೇರವಾಗಿ ಕೀಪರ್ ಕೈ ಸೇರಿತು. ಕೀಪರ್ ಕಿರುಚಿದ ಔಟ್... ಔಟ್...! ಹಿಂದೆ ಮುಂದೆ ನೋಡುವಷ್ಟರಲ್ಲಿ ಅಂಪೈರ್ ಬಲಗೈ ಮೇಲೆತ್ತಿ ಔಟ್ ಸಿಗ್ನಲ್ ನೀಡಿದ. ಬ್ಯಾಟಿಂಗ್ ಸ್ಥಳದಿಂದ ಹಿಂದಕ್ಕೆ ಸ್ವಲ್ಪ ದೂರದಲ್ಲಿ ಮರದ ನೆರಳಿನಲ್ಲಿ ಕುಳಿತಿದ್ದ ಲೋಕಲ್ ಹುಡುಗರು ನಾಟ್ ಔಟ್ ಎನ್ನುತ್ತಾ ಪಿಚ್ ನ ಕಡೆ ಮುಗಿಬಿದ್ದರು. ಮಾತಿಗೆ ಮಾತು ಬೆಳೆಯಿತು. ಹೊಸ ಹೊಸ ಶಬ್ಧಗಳು ಎರಡೂ ಕಡೆಯವರ ಬಾಯಲ್ಲಿ ಪಟ-ಪಟನೆ ಹೊರಚಿಮ್ಮಿದವು. ತಮ್ಮ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ತೋರಿಸಿಕೊಳ್ಳಲು ಇದಕ್ಕಿಂತ ಬೇರೆ ಸಮಯ ಸಿಗಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಮೈಮೇಲೆ ಬಿದ್ದರು, ಎಳೆದಾಡಿದರು. ಗೊಂದಲಕ್ಕೊಳಗಾದ ಕಾರ್ತಿಕ್ ಜಗಳ ನಿಲ್ಲಿಸಲು ಕೈಯಲ್ಲಿದ್ದ ಬ್ಯಾಟ್ ಎಸೆದು ಮುಂದೆ ಬಂದ. ಹಿಂದಿನಿಂದ ಲೊಟ್ ಎನ್ನುವ ಶಬ್ದ ಕಿವಿಗೆ ಬಿತ್ತು. ತಿರುಗಿ ನೋಡಿದ ಬೋರ್ನ್ ವಿಟಾ ತಂಡದ ಕಡೆಯ ಹುಡುಗನೊಬ್ಬ ದೊಪ್ ಎಂದು ಕೆಳಗೆ ಬಿದ್ದ ತಲೆಯಿಂದ ರಕ್ತ ಚಿಮ್ಮಿತು. ಲೋಕಲ್ ಹುಡುಗರ ಗುಂಪಿನ ಹುಡುಗನೊಬ್ಬನ ಕೈಯ್ಯಲ್ಲಿ ರಕ್ತ ಮೆತ್ತಿದ್ದ ಬ್ಯಾಟ್ ಇತ್ತು. ಮುಕ್ಕಾಲು ಹುಡುಗರು ಅಲ್ಲಿಂದ ಓಟ ಕಿತ್ತರು. ಕಾರ್ತಿಕ್ ಗೆ ಏನು ಮಾಡಬೇಕೆಂದು ತೋಚಲಿಲ್ಲ. ಹುಡುಗನೊಬ್ಬನ ಬೈಕ್ ಮೇಲೆ ಗಾಯಗೊಂಡಿದ್ದ ಹುಡುಗನನ್ನು ಕುಳ್ಳಿರಿಸಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟ. ಶ್ರೀಮಂತರ ಮಗ ಬೇರೆ ಏನಾಗತ್ತೋ ಏನೋ ಗೊತ್ತಿಲ್ಲ. ಚಿಕ್ಕಪ್ಪನಿಗೆ ಗೊತ್ತಾದರೆ ನಮ್ಮ ಕಥೆ ಅಷ್ಟೆ. ಕಾರ್ತಿಕ್ ನ ಕಣ್ಣ ಮುಂದೆ ನಡೆದ ಈ ಘಟನೆ ಅವನಿಗೊಂದು ಪಾಠ ಕಲಿಸಿತ್ತು. ಗೊತ್ತಿಲ್ಲದ ಸ್ಥಳದಲ್ಲಿ ಗೊತ್ತಿಲ್ಲದವರೊಟ್ಟಿಗೆ ಎಂದೂ ಸೇರಬಾರದು. ಕೆಟ್ಟವರ ಸಹವಾಸ ಕೆಟ್ಟದ್ದನ್ನೇ ಕಲಿಸುತ್ತದೆ ಮತ್ತು ಕಷ್ಟವನ್ನೇ ತರುತ್ತದೆ. ದುರಾಭ್ಯಾಸ, ದುರ್ವರ್ತನೆಗಳು ಯಾವತ್ತೂ ಒಳ್ಳೇದಲ್ಲ. ಗೆಳೆಯರು ಒಳ್ಳೆಯವರಾಗಿದ್ದರೆ ಚೆಂದ. ಇಲ್ಲದಿದ್ದರೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಅರ್ಧ ಹಾಳಾಗಿದ್ದ ಕಾರ್ತಿಕ್ ತನ್ನ ತಪ್ಪಿನ ಅರಿವಾಗಿ ಚಟಗಳಿಂದ ದೂರ ಇದ್ದು, ಒಳ್ಳೆಯ ಭಾಷೆ ಕಲಿತು, ಮೊಬೈಲ್ ಬಿಟ್ಟು ಒಳ್ಳೆಯ ಹುಡುಗನಾಗುವ ನಿರ್ಧಾರ ಮಾಡಿದ.
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************


Ads on article

Advertise in articles 1

advertising articles 2

Advertise under the article