-->
ಬದಲಾಗೋಣವೇ ಪ್ಲೀಸ್ - 96

ಬದಲಾಗೋಣವೇ ಪ್ಲೀಸ್ - 96

ಬದಲಾಗೋಣವೇ ಪ್ಲೀಸ್ - 96
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

        
      ಹೊಸ ಮನೆ ಕಟ್ಟುವ ಆಲೋಚನೆಯಿದ್ದ ನನಗೆ, ಯಾರ ಮನೆಗೂ ಹೋದರೂ ಮನೆಯ ಹೊಸತನ, ವಿವಿಧ ವಿನ್ಯಾಸಗಳು, ಮನೆಯೊಳಗಿನ ಹಾಗೂ ಮನೆ ಹೊರಗಿನ ರಚನೆ, ಸುಣ್ಣ-ಬಣ್ಣದಲ್ಲಿನ ವಿಶೇಷತೆ, ಹಸಿರ ಪ್ರೀತಿ, ಒಳಗಿನ ಗೃಹಾಲಂಕಾರ, ಕೋಣೆಗಳ ರಚನೆ..... ಹೀಗೆ ಎಲ್ಲವನ್ನು ವಿಶೇಷ ಆಸಕ್ತಿಯಿಂದ ಗಮನಿಸುವ ಅಭ್ಯಾಸವಿತ್ತು. ನಾನು ಕಂಡಂತೆ ಒಂದರಂತೆ ಇನ್ನೊಂದು ಮನೆಯಿಲ್ಲ. ಒಬ್ಬೊಬ್ಬರದ್ದು ಒಂದೊಂದು ಆದ್ಯತೆ. ಮನೆ ಕಟ್ಟುವ ಮೊದಲಿದ್ದ ಆಲೋಚನೆಗಳೇ ಬೇರೆ. ಮನೆ ಕಟ್ಟಿ ಗೃಹಪ್ರವೇಶ ಮಾಡಿದ ಮೇಲಿನ ವಾಸ್ತವವೇ ಬೇರೆ. ಕೆಲವು ಮನೆಗಳಲ್ಲಿ ಗೃಹಪ್ರವೇಶದ ದಿನಗಳಲ್ಲಿದ್ದ ಸಂಭ್ರಮ ಈಗಲೂ ಅದೇ ರೀತಿಯಲ್ಲಿ ಮುಂದುವರೆಯುತ್ತಿದೆ. ಕೆಲವರಲ್ಲಿ ಆ ಸಂಭ್ರಮ ಉಳಿದಿಲ್ಲ. ಮತ್ತದೇ ದೂರುಗಳು-ನೋವುಗಳು. ಕೆಲವು ಮನೆಯಲ್ಲಿ ಬಾಹ್ಯ ಆಕರ್ಷಣೆಗೆ ಆದ್ಯತೆ ಇದ್ದರೆ ಇನ್ನೂ ಕೆಲವುಗಳಲ್ಲಿ ಆಂತರಿಕ ಗಟ್ಟಿತನಕ್ಕೆ ಆದ್ಯತೆ . ಕೆಲವು ಮನೆಯ ಅಂಗಳ ಸಸ್ಯಮಯವಾಗಿದ್ದು ಹಸಿರು ಪ್ರೀತಿಯಿಂದ ಕಂಗೊಳಿಸುತ್ತಿದ್ದರೆ ಕೆಲವು ಮನೆಗಳು ಕಾಂಕ್ರೀಟ್ ಬಿಸಿಯಿಂದ ಬರಡಾಗಿದ್ದವು. ಕೆಲವು ಮನೆಗಳು ಒಂದೇ ಬಣ್ಣಗಳಿಂದ ಶಾಂತವಾಗಿ ಕಾಣುತ್ತಿದ್ದರೆ ಕೆಲವು ಮನೆಗಳು ಬಹುವರ್ಣಗಳಿಂದ ಕಲರ್ ಪುಲ್ ಆಗಿ ಕಾಣುತ್ತಿತ್ತು . ಕೆಲವು ಮನೆಗಳು ತನ್ನ ಅಗತ್ಯ ನಿರ್ವಹಣೆಯಿಂದಾಗಿ ಸುಂದರವಾಗಿ ತಂಪಾಗಿ ಸ್ವಚ್ಛಮಯವಾಗಿ ಕಂಡು ಬಂದರೆ ಇನ್ನು ಕೆಲವು ಮನೆಗಳು ನಿರ್ವಹಣೆ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ಕಸದ ತೊಟ್ಟಿಯಾಗಿ ಕಂಡು ಬಂದವು. ಕೆಲವು ಮನೆಗಳು ತನ್ನ ಬಜೆಟ್ ಗಿಂತ ಕಡಿಮೆಯಲ್ಲಿ ಕಟ್ಟಲ್ಪಟ್ಟು ಮನೆಯೊಡೆಯನಿಗೆ ನೆಮ್ಮದಿ ತಂದಿದ್ದರೆ ಕೆಲವು ಮನೆಗಳು ಬಜೆಟ್ ಮೀರಿ ಖರ್ಚಾಗಿ ಸಾಲ ಪಡೆದು ಮನೆಯೊಡೆಯನಿಗೆ ಸದಾ ಕಿರಿಕಿರಿ ಕೊಡುತ್ತಿರುವುದನ್ನು ನೋಡಿದೆ. ಕೆಲವು ಮನೆಗಳು ಬುನಾದಿ (ಫೌಂಡೇಶನ್) ಯಿಂದ ಸುಣ್ಣ ಬಣ್ಣದವರೆಗೂ ಯಜಮಾನನೇ ಸ್ವಯಂ ಆಸಕ್ತಿಯಿಂದ ನಿಂತು "ಇದು ನನ್ನ ಮನೆ" ಎಂಬ ಪ್ರೀತಿಯಿಂದ ಕಟ್ಟಿಸಲ್ಪಟರೆ ಕೆಲವು ಮನೆಗಳು ಕೇವಲ ಗುತ್ತಿಗೆದಾರನ ನಂಬಿಕೆಯಲ್ಲಿ ಕಟ್ಟಿಸಲ್ಪಟ್ಟಿರುವುದನ್ನು ಕಂಡೆ. ಹೀಗೆ ಹತ್ತಾರು ಅಂಶಗಳನ್ನು ಕಂಡೆ. ಕೊನೆಗೆ ನಾನು ನನಗೆ ಬೇಕಾದಂತೆ ವಿನ್ಯಾಸ ಮಾಡಿಕೊಂಡು ಮನೆಯನ್ನು ನಿರ್ಮಿಸಿದೆ. ನನ್ನ ಆಶೆ- ಆಸಕ್ತಿಯ ಆಯ್ಕೆಯ ಮನೆಯನ್ನು ನಾನೇ ಕಟ್ಟಬೇಕೇ ಹೊರತು ಬಾಡಿಗೆ ಮನೆಯಲ್ಲಿ ಅದನ್ನು ನಿರಿಕ್ಷಿಸಲು ಸಾಧ್ಯವಿಲ್ಲ.
        ನಮ್ಮ ಬದುಕು ಕೂಡಾ ನಮ್ಮ ಮನೆಯಿದ್ದಂತೆ. ಸರಿಯಾಗಿ ನಿರ್ವಹಿಸಿದರೆ ಸ್ವರ್ಗ. ನಿರ್ಲಕ್ಷ್ಯ ಮಾಡಿದರೆ ನರಕ. ಮನೆ ಕಟ್ಟುವಾಗ ಇದ್ದ ಪ್ರಾರಂಭಿಕ ಆಸಕ್ತಿಯು ಕೊನೆಯವರೆಗೂ ಕುಂದಬಾರದು. ಸದಾ ನನ್ನ ಬದುಕೆಂಬ ಪ್ರೀತಿಯು ಕೊನೆಯವರೆಗೂ ಇರಬೇಕು. ನಮ್ಮ ಬದುಕೆಂಬ ಮನೆಯನ್ನು ಹೇಗೆ ಕಟ್ಟುವುದು ಎಂಬುದು ನಮ್ಮ ಇಚ್ಛೆಗೆ ಬಿಟ್ಟದ್ದು. ನನ್ನ ಬದುಕು ನನ್ನ ಆಯ್ಕೆ. ಈ ಸಕಾರಾತ್ಮಕ ಆಯ್ಕೆಯ ಬದುಕು ನಮ್ಮದಾಗಲಿ. ಆ ನಿಟ್ಟಿನಲ್ಲಿ ಬದಲಾವಣೆಗೆ ಸಿದ್ಧರಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article