-->
ರಜೆಯೆಂಬ ಹವ್ಯಾಸಗಳ ಹೆಬ್ಬಾಗಿಲು...!

ರಜೆಯೆಂಬ ಹವ್ಯಾಸಗಳ ಹೆಬ್ಬಾಗಿಲು...!

ಲೇಖನ : ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ
       

        ಅಬ್ಬಾ! ಇಡೀ ವರ್ಷ ಓದಿದ್ದನ್ನು ಕೆಲವೇ ಗಂಟೆಗಳಲ್ಲಿ ಪರೀಕ್ಷೆಗೆ ಹರಕೆ ಒಪ್ಪಿಸಿ ಹಗುರವಾದ ಮನದೊಂದಿಗೆ ಬೇಸಿಗೆ ರಜೆಗೆ ಕಾಲಿಟ್ಟಿದ್ದೀರಿ ಮಕ್ಕಳೇ, ರಜೆಗೆ ನಿಮ್ಮ ತಯಾರಿಗಳು ಕೆಲವು ಇರಬಹುದು.. ಇನ್ನಷ್ಟು ಚೆನ್ನಾಗಿ ಈ ರಜೆಯನ್ನು ಕಳೆಯಲು ಏನೇನು ಮಾಡಬಹುದೆಂದು ನೋಡೋಣ....
         ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಅವಕಾಶವಾಗಲಿ ಈ ರಜೆ! ನಿಮಗಿರುವ ಆಸಕ್ತಿಗಳಿಗೆ ಒಂದಿಷ್ಟು ಸಮಯ ನೀಡಿ - ಹೊಸ ಹಾಡು ಹಾಡುವುದು, ಆಡದಿರುವ ಹಳೆಯ ಆಟ ಕಲಿತು ಆಡುವುದು, ಚಿತ್ರ ಬಿಡಿಸಿ ಬಣ್ಣ ತುಂಬುವುದು, ನಿಮ್ಮ ಸುತ್ತಲಿನ ಪ್ರಕೃತಿ ವೀಕ್ಷಣೆ- ಚಾರಣದಂತಹ ಹವ್ಯಾಸ ಬೆಳಸಿಕೊಳ್ಳುವುದು, ಬೆಳಿಗ್ಗೆ ಸಂಜೆ ಹಾಡುವ- ಹಾರುವ ಪಕ್ಷಿಗಳನ್ನು ನೋಡುತ್ತಾ ಗುರುತಿಸಲು ಕಲಿಯುವುದು, ನಿಮ್ಮ ಮನೆಯಂಗಳದ ಹೂವಿಗೆ ಮುತ್ತಿಡುವ ಚಿಟ್ಟೆ ಯಾವುದೆಂದು ಗುರುತಿಸುವುದು, ಆಗಸದಲಿ ಹೊಳೆಯುವ ನಕ್ಷತ್ರಗಳನ್ನು ನೋಡುತ್ತಾ ಗುರುತಿಸಲು ಹೆಸರಿಸಲು ಕಲಿಯುವುದು, ಹೊಸ ಭಾಷೆಯೊಂದನ್ನು ಕಲಿಯುವುದು, ಮನೆಯ ಹಿರಿಯರೊಂದಿಗೆ ಮಾತನಾಡುತ್ತಾ ಮೊಬೈಲು ಕಲಿಸಲಾಗದ, ತಿಳಿಸಲಾಗದ ಪರಂಪರಾಗತ ಜ್ಞಾನವನ್ನು ಒಳಗಿಳಿಸಿಕೊಳ್ಳುವುದು... ಇಂತಹಾ ಇನ್ನೆಷ್ಟೋ ಅವಕಾಶಗಳಿವೆ ರಜೆಯನ್ನು ಖುಷಿಯಾಗಿ ಕಳೆಯಲು! ಕಲಿಯುತ್ತಾ ಬೆಳೆಯಲು!
        ನಾನು ಮಲೆನಾಡಿನ ಮಡಿಲಿನಲ್ಲಿ ಬಾಲ್ಯ ಕಳೆದಿದ್ದು ಹೀಗೆಯೇ.. ಈ ಹವ್ಯಾಸಗಳು ಅಂದಿನಿಂದ ಇಂದಿನವರೆಗೆ ನನ್ನ ಜೀವನದೊಳಗೆ ತುಂಬಿದ ಜ್ಞಾನ ಹಾಗೂ ಸಂತೋಷ ಅಳತೆಗೆ ಸಿಗಲಾರದಷ್ಟು ಅಪರಿಮಿತ. ಅಂತಹ ಸಂತೋಷ ನಿಮಗೂ ಸಿಗಲಿ ಎಂಬ ಉದ್ದೇಶದಿಂದ ಈ ಬರಹ ಬರೆಯುತ್ತಿದ್ದೇನೆ- ನೀವೂ ಕಲಿತು ಖುಷಿಯಾಗಿರಿ.
        ನಗರದ ಕಾಂಕ್ರೀಟ್‌ ಕಾಡಿನಲ್ಲಿ ರಜೆ ಕಳೆಯುವ ಬದಲು ನಿಮ್ಮ ಅಜ್ಜ-ಅಜ್ಜಿಯರಿರುವ ಮೂಲ ಮನೆಗಳಲ್ಲಿ ಕೆಲವು ದಿನ ರಜೆ ಕಳೆಯಿರಿ. ಮೊಬೈಲ್ ಬದಿಗಿಟ್ಟು ಬೆಳಿಗ್ಗೆ ಬೇಗನೆ (ಕನಿಷ್ಠ ಆರು ಗಂಟೆಗಾದರೂ) ಏಳಿ, ಬೆಳಗಿನ ತಂಗಾಳಿಯಲ್ಲಿ ಅಂಗಳದಲ್ಲಿ ಅಡ್ಡಾಡುತ್ತಾ ಪ್ರಕೃತಿಯಲ್ಲಿ ಸೂರ್ಯನ ಬೆಳಗು ಮೂಡಿಸುವ ಚೈತನ್ಯವನ್ನು ಗಮನಿಸಿ. ದೇವರ ಪೂಜೆಗೆ ಹೂವು ಬಿಡಿಸುವ ಕ್ರಮವಿದ್ದರೆ ಹಿರಿಯರಿಗೆ ಸಹಕರಿಸಿ.. ಅವುಗಳ ಹೆಸರು ತಿಳಿಯಿರಿ, ಮಾಲೆ ಕಟ್ಟಲು ಕಲಿಯಿರಿ. ಅಂಗಳದ ಗಿಡಗಳ ಪರಿಚಯದ ನಂತರ ಮನೆಯ ಹಿರಿಯ ಹೆಂಗಸರ ಬಳಿ ಕುಳಿತು ಅವುಗಳ ಔಷಧೀಯ ಗುಣಗಳ ಮತ್ತು ಔಷಧಿ ತಯಾರಿಕೆಯ ಕ್ರಮದ ಬಗ್ಗೆ ಚರ್ಚಿಸಿ. ತಿಳಿಯಿರಿ. ಮನೆಯಂಗಳದ ಗಿಡಗಳು ಮನೆಯೊಡತಿಯ ಆಪ್ತಮಿತ್ರರಿದ್ದಂತೆ. ಅವು ಔಷಧಿಗಳ ತವರು.. ಯಾವ ಗಿಡ ಹೇಗೆ ಬಳಸಿದರೆ ಯಾವುದಕ್ಕೆ ಮದ್ದು ಎಂಬ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ಹೀಗೆಯೇ ಹರಿದು ಉಳಿಯಬೇಕು. ಅವುಗಳ ಪರಿಚಯದ ಹಾಗೆಯೇ ಮನೆಯ ಹಿರಿಯರ ಜೊತೆಗೆ ಸುತ್ತಮುತ್ತಲಿನ ಸ್ಥಳಗಳ ಭೇಟಿ - ಅಲ್ಲಿ ಕಾಣುವ ಹೊಸ ಮರ-ಗಿಡಗಳ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಪ್ರತಿ ರಜೆಗೂ ಮುಂದುವರಿಯಲಿ. ಕೊರೋನಾದಂತಹ ಮಹಾಮಾರಿ ಬಂದಾಗ ಎಷ್ಟೋ ಜನರು ಅವರ ಅಂಗಳದಲ್ಲಿದ್ದ ತುಳಸಿ- ನೆಲನೆಲ್ಲಿ- ಅಮೃತಬಳ್ಳಿಗಳ ಪರಿಚಯ ಮಾಡಿಕೊಂಡರು. ಈ ಜ್ಞಾನ ಮತ್ತು ಅವುಗಳ ಬಳಕೆ ನಿತ್ಯ ಜೀವನದ ಭಾಗವಾಗಿದ್ದ ನಮ್ಮ ಹಿರಿಯರು ಕ್ಯಾನ್ಸರ್ ನಂತಹ ಖಾಯಿಲೆಯ ನರಳೂ ಸೋಂಕದೆ ಬದುಕಿದ್ದರು. ಆಹಾರವೇ ಔಷಧಿಯಾಗಿರಬೇಕೇ ಹೊರತು ಆಹಾರದಷ್ಟೇ ಔಷಧಿ ನುಂಗುವ ಬದುಕು ನಮ್ಮದಾಗಬಾರದು ಅಲ್ಲವೇ...?
       ಬೆಳಿಗ್ಗೆ ಸಂಜೆ ಪ್ರಕೃತಿಯ ಮಡಿಲಿನಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ಕೂಗು ಕೇಳಿ, ಹುಡುಕಿ ನೋಡಿ, ಗುರುತಿಸಲು ಕಲಿಯಿರಿ. ಕಾಗೆಯಂತೆಯೇ ಕಾಣುವ ಕೋಗಿಲೆಗೆ ಕಣ್ಣು ಕೆಂಪಾಗಿರುತ್ತದೆ, ಅದೇ ಬಣ್ಣದ ಕಾಜಾಣ ವಿವಿಧ ಹಕ್ಕಿಗಳ ಸ್ವರ ಅನುಕರಿಸುತ್ತಾ ತನ್ನ ವಿಶಿಷ್ಟವಾದ ಎರಡು ಉದ್ದಗರಿಗಳ ಬಾಲದಿಂದ ಗುರುತಿಸಲ್ಪಡುತ್ತದೆ. ಹೀಗೆ ಪಕ್ಷಿಯ ಸ್ವರ ಕೇಳಿದರೂ ನೆಲಕ್ಕೆ ಬಿದ್ದ ಗರಿ ಕಂಡರೂ ಇದು ಈ ಹಕ್ಕಿ ಎಂದು ಗುರುತಿಸುವಷ್ಟು ಜಾಣರಾದರೆ ನಿಮ್ಮ ಸಹಪಾಠಿಗಳು ನಿಮ್ಮ ಸ್ನೇಹಿತರು ನಿಮ್ಮನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಷ್ಟು ನೀವು ಬೆಳೆಯಬಹುದು.
        ನಿಮ್ಮ ಕಣ್ಣಳತೆಯಲ್ಲಿ ಹಾರಾಡುವ ಪ್ರತಿ ಚಿಟ್ಟೆಯೂ ತನ್ನ ಮೊಟ್ಟೆಯನ್ನಿಡಲು ಬೇರೆ ಬೇರೆ ಪ್ರಬೇಧದ ಗಿಡಗಳನ್ನು ಆರಿಸುತ್ತದೆ. ಮಕರಂದ ಕುಡಿಯಲು ತನ್ನ ಆಯ್ಕೆಯ ಗಿಡದ ಹೂವುಗಳನ್ನು ಹುಡುಕುತ್ತದೆ. ಅವುಗಳ ಬಣ್ಣ, ರೆಕ್ಕೆಯ ಗಾತ್ರ ಹಾಗೂ ವಿನ್ಯಾಸ ಗಮನಿಸಿ ಗುರುತಿಸಲು ಸುಲಭವಾಗಿ ಕಲಿಯಬಹುದು.
      ಆಗಸದಲ್ಲಿ ಕಾಣುವ ಗ್ರಹಗಳನ್ನು, ನಕ್ಷತ್ರಗಳನ್ನು, ಉಪಗ್ರಹಗಳನ್ನು, ಉಲ್ಕೆಗಳನ್ನು ಗುರುತಿಸಲು ಕಲಿತರೆ ಅದರಷ್ಟು ಖುಷಿ ಕೊಡುವ ಹವ್ಯಾಸ ಇನ್ನಿಲ್ಲ ಎನಿಸಿಬಿಡುತ್ತದೆ. ಕನಿಷ್ಠ ಶುಕ್ರ ಗ್ರಹ, ಧ್ರುವ ನಕ್ಷತ್ರ ಮತ್ತು ಅರುಂಧತಿ ನಕ್ಷತ್ರಗಳನ್ನು ಆದರೂ ಗುರುತಿಸಲು ಹಿರಿಯರ ಸಹಾಯ ಪಡೆಯಿರಿ. ಗ್ರಹಗಳು ನಕ್ಷತ್ರಗಳಂತೆ ಮಿನುಗುವುದಿಲ್ಲ ಎಂದು ಪುಸ್ತಕದಲ್ಲಿ ಓದಿರುತ್ತೀರಿ. ಆಕಾಶ ಕೆಲವು ಕ್ಷಣ ದಿಟ್ಟಿಸಿ ನೋಡಿ ಮಿನುಗದ ಗ್ರಹಗಳನ್ನು ಕಂಡುಹಿಡಿಯಲು ಯತ್ನಿಸಿ.
       ಅರೇ, ಇಷ್ಟೆಲ್ಲ ಒಮ್ಮಲೇ ಹೇಗೆ ಕಲಿಯುವುದು? ಎಂಬ ಪ್ರಶ್ನೆಯೂ ಎದ್ದಿರಬಹುದು. 'ಕಲಿಯುವ ಆಸಕ್ತಿ ಇದೆ, ಕಲಿಸಲು ಯಾರಿಲ್ಲ' ಎಂಬ ಕೊರಗೂ ಇರಬಹುದು. ಹಾಗಾದಾಗ ನಿಮಗೆ ತಂತ್ರಜ್ಞಾನದ ಸಹಾಯ ಅಗತ್ಯ. ಗಿಡ- ಮರ- ಹಕ್ಕಿ-ಚಿಟ್ಟೆಗಳನ್ನು ಗುರುತಿಸಲು ಅವುಗಳ ಚಿತ್ರ ಮೊಬೈಲ್ ಸಹಾಯದಿಂದ ತೆಗೆದು Google Lens App ಸಹಾಯ ಪಡೆದು ಗುರುತಿಸಿ ಅದರ ಬಗೆಗೆ Wikipedia ನೀಡುವ ಮಾಹಿತಿ ಓದಿಕೊಳ್ಳಬಹುದು. ಆಕಾಶದ ಗ್ರಹ ನಕ್ಷತ್ರಗಳ ವೀಕ್ಷಣೆಗೆ Stellarium App ಬಳಸಬಹುದು, ನೀವು ಆಕಾಶದ ಯಾವ ಭಾಗದತ್ತ ಮೊಬೈಲ್ ಹಿಡಿಯುತ್ತೀರೋ ಆ ಭಾಗದ ಆಕಾಶ ಕಾಯಗಳ ಹೆಸರು ಮೊಬೈಲ್ ಪರದೆಯಲ್ಲಿ ಮೂಡುವುದರಿಂದ ಗುರುತಿಸುವುದು ಬಹಳ ಸುಲಭ.
       ಮೊಬೈಲ್ ಕಲಿಕೆಯ ಸಾಧನವಾಗಲಿ, ಸಾಧ್ಯತೆಗಳ ಹೆಬ್ಬಾಗಿಲಾಗಲಿ, ರಜೆ ನಿಮಗೆ ಖುಷಿಕೊಡುವ ಜ್ಞಾನ ಕಟ್ಟಿಕೊಡಲಿ, ನಿಮ್ಮ ಹೆಜ್ಜೆಗಳು ಪ್ರಕೃತಿಯ ಮಡಿಲಿನೆಡೆಗಿರಲಿ ಮಕ್ಕಳೇ, ಖುಷಿಯಾಗಿರಿ!
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
Mob : 9449946810
********************************************


Ads on article

Advertise in articles 1

advertising articles 2

Advertise under the article