ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 9
Friday, May 12, 2023
Edit
ಲೇಖಕರು : ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನನ್ನ ಮನಸ್ಸು ಸುಮಾರು 63-64ವರ್ಷಗಳ ಹಿಂದೆ ಸರಿಯಿತು. ಅದೊಂದು ದಿನ ಶಾಲಾ ವಾರ್ಷಿಕೋತ್ಸವದ ಸಂಭ್ರಮದ ಘಳಿಗೆ. ದೊಡ್ಡ ಬಿದಿರಿಗೆ ಹಗ್ಗದಲ್ಲಿ ಬಣ್ಣಬಣ್ಣದ ಕಾಗದಗಳನ್ನು ಅಂಟಿಸಿ ಬಿದಿರಿನ ತುದಿಗೆ 10-15 ಸಾಲುಗಳಲ್ಲಿ ಬಣ್ಣದ ಕಾಗದ ಪತಾಕೆ ಕಟ್ಟಿದ್ದರು. ಆವಾಗ ನಾನು ಸಣ್ಣ ತರಗತಿಯಲ್ಲಿದ್ದೆ. ನೆನಪಿದೆ ನನ್ನ ಪ್ರೀತಿಯ ಗುರುಗಳಾದ ಶ್ರೀ ಸುಬ್ರಾಯ ಭಟ್ಟರು ನಮ್ಮನ್ನೆಲ್ಲ ಆ ತೋರಣದ ಕೆಳಗೆ ನಿಲ್ಲಿಸಿ ತುಳುವಿನಲ್ಲಿ.. "ತೂಲೆ ಜೋಕ್ಲೆ.. ಇತ್ತೆ ಕಪ್ಪೆ ಬಲ್ಪಿನ ಪಂತೊ. ನಿಕ್ಲು ಮುಲ್ಪ ಪಾಡಿನ ಗೆರೆತ ಮಿತ್ತ್ ಕುಲ್ಲೋಡು. ನಾರಾಯಣ ಈ ದಾಯ್ತಾ ಮಿತ್ತ್ ತೂಪುನೆ.. ಇಂಚಿ ಕೇನ್ ಮಗೆ ಆವಾ... ಯಾನ್ ಬಿಗಿಲಿ ಉರಿತ್ತಿ ಕೂಡ್ಲೇ ಬಲಿಪ್ಪೊಡು...ಆವಾ...?" ಎಂದು ಹೇಳಿದಾಗ ನನ್ನ ಗಮನವೆಲ್ಲ ಮೈದಾನದ ನಡುವೆ ನೆಟ್ಟ ಬಿದಿರಿನ ತುದಿ ಮತ್ತು ಗಾಳಿಗೆ ಪಟಪಟ ಹಾರುವ ಬಣ್ಣದ ಕಾಗದಗಳ ಮೇಲಿತ್ತು. ಗುರುಗಳು "ನಾರಾಯಣ, ಶೀನಪ್ಪ, ಬಾಳಪ್ಪ.. ಸುಂದರ... ಬಲೆ ಈ ಗೆರೆಟ್ ಕುಳ್ಳುಲೆ.. ಯಾನ್ ಬಿಗಿಲ್ ಉರಿಪ್ಪುನಗ ಇಂಚ ಬಲಿಪ್ಪುಡೊ..." ಎಂದು ಹೇಳಿ ಬಿಗಿಲಿ ಊದಿಯೇ ಬಿಟ್ಟರು. ಶೀನಪ್ಪ, ಬಾಳಪ್ಪ ಉಳಿದವರೆಲ್ಲ ಓಡಿದರು. ನಾನು ಮಾತ್ರ ಗೆರೆಯಲ್ಲಿ ಕುಳಿತೇ ಬಾಕಿ. ನನ್ನ ಹತ್ತಿರ ಬಂದ ಶ್ರೀ ಸುಬ್ರಾಯ ಗುರುಗಳು -"ನಾರಾಯಣ ನನೊಂಜಿ ಸರ್ತಿ ಆಟ ನಡಪ್ಪುಂಡು.. ಈ ಸರ್ತಿ ಬಲಿಪ್ಪೊಡೇ.. ಗೆಂದ್ಂಡ ಬಹುಮಾನ ಉಂಡು..." ಎಂದು ಹೇಳಿ ನನ್ನನ್ನು ಆಟದ ಕಡೆಗೆ ಗಮನ ಹರಿಸುವಂತೆ ಮಾಡಿದರು. ನಾವು ಗೆರೆಯಲ್ಲಿ ಕುಳಿತೆವು. ಗುರುಗಳು ಬಿಗಿಲಿ ಊದಿದರು. ನಾವು ಓಡಿಯೇ ಬಿಟ್ಟೆವು. ಗುರಿಯಹತ್ತಿರ ನಿಂತಿದ್ದ ದೊಡ್ಡ ಇಬ್ಬರು ಮಕ್ಕಳು ನನ್ನನ್ನು, ಶೀನಪ್ಪನನ್ನು ಹಿಡಿದುಕೊಂಡು ಬಂದು ಗುರುಗಳ ಹತ್ತಿರ ನಿಲ್ಲಿಸಿ.. "ಶೀನಪ್ಪ ಪ್ರಥಮ, ನಾರಾಯಣ ದ್ವಿತೀಯ.." ಎಂದು ಹೇಳಿದಾಗ ನನಗಾದ ಸಂತೋಷವನ್ನು ಹೇಳಲು ನನ್ನಲ್ಲಿ ಆಗ ಪದಗಳೇ ಇರಲಿಲ್ಲ. ಮನೆಯವರಿಗೆಲ್ಲ ಸಂತೋಷ. ಸಂಜೆ ಸಭಾಕಾರ್ಯಕ್ರಮ... ಬಹುಮಾನ ವಿತರಣೆಯ ಪಟ್ಟಿಯನ್ನು ಇನ್ನೊಬ್ಬ ಗುರುಗಳಾದ ಶ್ರೀ ಲಿಂಗಪ್ಪ ಸರ್ ಆಗಿನ ಉದ್ದದ ಮೈಕದಲ್ಲಿ ಗಟ್ಟಿಯಾಗಿ ಕೇಳುವಂತೆ ಓದಿದಾಗ ಆಹಾ ಏನು ಸಂತೋಷ. ಶ್ರೀ ಅಣ್ಣಪ್ಪ ಗುರುಗಳು ಸ್ಟೇಜ್ ನ ಬಳಿ ನಿಂತು ನಮ್ಮನ್ನು ಮೇಲೆ ಹತ್ತಿಸುತ್ತಿದ್ದರು. ನನ್ನ ಹೆಸರು ಕರೆದಾಗ ಮನೆಯವರೆಲ್ಲಾ ಗಟ್ಟಿಯಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕಡ್ಡಿ ಪೆಟ್ಟಿಗೆ ಬಹುಮಾನ. ಇದು ನನಗೆ ಸಿಕ್ಕಿದ ಮೊದಲ ಗೌರವ.. ಸ್ಟೇಜ್ ನಲ್ಲಿ ಏಳೆಂಟು ಗ್ಯಾಸ್ ಲೈಟುಗಳ ಬೆಳಕು. ಸುತ್ತಮುತ್ತ ಕಡ್ಲೆ ಮಿಠಾಯಿ ಮಣಿಸರಕು ಸಂತೆ. ಸೋಜಿ ಶರಬತ್ತು.. ಇದು ನನ್ನ ಹುಟ್ಟೂರಿನ ಬೆಟ್ಟಂಪಾಡಿ ಶಾಲೆಯ ಅಂದಿನ ಆ ದಿನದ ನೆನಪುಗಳ ಸುರುಳಿ... ಸುರುಳಿ. ಇನ್ನೂ ಕೆಲವು ವಿಷಯಗಳಿವೆ. ಮುಂದೆ ನಾನು ಅದೇ ಶಾಲೆಗೆ ಅಧ್ಯಾಪಕನಾಗಿ ವರ್ಗಾವಣೆಗೊಂಡು ಬಂದು 20-25ವರ್ಷ ಸೇವೆ ಸಲ್ಲಿಸಿದೆ.
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************