-->
ಅಕ್ಕನ ಪತ್ರ - 49 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 49 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 49 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


     ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ತಂಗಿ ಜೆನಿಶಾ ಮಾಡುವ ಪ್ರಣಾಮಗಳು. ನೀವು ಭಾಗವಹಿಸಿದ್ದಂತೆ ನಾನು ಕೂಡ ಈ ರಜೆಯಲ್ಲಿ ರಜಾ ಶಿಬಿರದಲ್ಲಿ ಭಾಗವಹಿಸಿದ್ದೇನೆ. 5 ವರ್ಷದವರಿಂದ ಹಿಡಿದು 10 ನೇ ತರಗತಿಯವರೆಗೆ ಸುಮಾರು 105 ಮಕ್ಕಳು ಶಿಬಿರದಲ್ಲಿ  ಭಾಗವಹಿಸಿದ್ದರು. 105 ಮಕ್ಕಳನ್ನು 4 ಗುಂಪುಗಳಾಗಿ ವಿಂಗಡಿಸಿ 4 ಗುಂಪುಗಳ ನಡುವೆ ಅನೇಕ ಚಟುವಟಿಕೆಗಳನ್ನು ಹಾಗೂ ಸ್ಪರ್ಧೆಗಳನ್ನು ನಡೆಸಿ ಅಂಕಗಳನ್ನು ನೀಡಲಾಗುತ್ತಿತ್ತು. ಪ್ರತಿ ಗುಂಪಿನವರು ತಮ್ಮ ಗುಂಪು ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ಗೆಲ್ಲುವಂತೆ ಮಾಡಲು ಏನೇನೋ ಕಸರತ್ತುಗಳನ್ನು ಮಾಡುತ್ತಿದ್ದರು. ಶಿಬಿರದ ಮೊದಲ ದಿನ ಯಾರಿಗೂ ಯಾರ ಪರಿಚಯವೂ ಇರಲಿಲ್ಲ. ಆದೇ ಕೊನೆಯ ದಿನ ಗುಂಪಿನ ಯಾರಿಗೂ ಪರಿಚಯ ಇಲ್ಲದ ಯಾರೂ ಇರಲಿಲ್ಲ. ರಜಾ ಶಿಬಿರಗಳೇ ಹೀಗೆ ಅಲ್ಲವೇ.. ಬೇಗನೆ ಎಲ್ಲರ ನಡುವೆ ಸ್ನೇಹ ಸಂಬಂಧ ಬೆಳೆಸುತ್ತವೆ. ನಾನು ಶಿಬಿರದಲ್ಲಿ ಕಲಿತ ಪ್ರಮುಖ ವಿಷಯವೆಂದರೆ ಸಮಯ ಪ್ರಜ್ಞೆ. ಕೊಟ್ಟ ಸಮಯ ಮುಗಿಯುತ್ತಿದ್ದಂತೆ ಸರ್ ವಿಜಲ್ ಹಾಕುತ್ತಿದ್ದರು. ಆಗ ಗುಂಪಿನ ಎಲ್ಲಾ ಸದಸ್ಯರು ಗುಂಪಿನಲ್ಲಿ ವೃತ್ತಾಕಾರವಾಗಿ ಕುಳಿತುಕೊಳ್ಳಬೇಕಾಗಿತ್ತು. ಆದರೆ ಸಣ್ಣ ಮಕ್ಕಳು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಲೇ ಇರುತ್ತಿದ್ದರು. ಗುಂಪಿನ ಅಂಕಗಳನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಗುಂಪಿನ 10ನೇ 9ನೇ ತರಗತಿಯ ಮಕ್ಕಳು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಓಡೋಡಿ ಬಂದು ಕುಳಿತುಕೊಳ್ಳುತ್ತಿದ್ದ ಕ್ಷಣ ನೆನಪಾಗುತ್ತಲೇ ನನಗೆ ಈಗಲೂ ನಗು ಬರುತ್ತದೆ. ಶಿಬಿರದಲ್ಲಿ ಕಲಿತ ಸಮಯ ಪಾಲನೆ, ತಾಳ್ಮೆ, ಪರಸ್ಪರ ಗೌರವಿಸುವುದು ಇನ್ನೂ ಅನೇಕ ವಿಷಯಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನು ಕೇವಲ 2 ವಾರಗಳ ರಜೆ ಮಾತ್ರ ಉಳಿದಿವೆ. ಆದರೆ ನಾನು ಮುಂದಿನ ವರ್ಷದ ರಜಾ ಶಿಬಿರಕ್ಕಾಗಿ ಹಾಗೂ ನಿಮ್ಮ ಮುಂದಿನ ಪತ್ರಕ್ಕಾಗಿಯೂ ಕಾಯುತ್ತಿದ್ದೇನೆ. ಧನ್ಯವಾದಗಳು ಅಕ್ಕ.
......................................... ಜೆನಿಶಾ ಪಿರೇರಾ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ಅಕ್ಕನ ಪತ್ರ 49ಕ್ಕೆ ಶಿಶಿರನ ಉತ್ತರ
   ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. "ಈ ರಜಾ ದಿನಗಳನ್ನು ಹೇಗಪ್ಪಾ ಕಳೆಯೋದು" ಎಂದು ಹೇಳಿಕೊಂಡು ಟಿ.ವಿ, ಪೋನ್ ಜೊತೆಗೆ ಕಾಲ ಕಳೆಯುವ ಬದಲು ರಜೆಯ ಪ್ರತಿ ಕ್ಷಣಗಳನ್ನು ವಿವಿಧ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಕಳೆದರೆ ಮಾತ್ರ ರಜೆಯ ಮಜಾ ದೊರಕುವುದು.
    ಯಾವುದೇ ರಜೆಯನ್ನು ಅವಿಸ್ಮರಣೀಯ ರಜೆಯನ್ನಾಗಿಸಲು ಬೇಸಿಗೆ ಶಿಬಿರಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅವು ನಮ್ಮನ್ನು ಕ್ರಿಯಾಶೀಲರನ್ನಾಗಿಸುವ ದಾರಿ ದೀಪಗಳು ಎಂದರೆ ತಪ್ಪಾಗಲಾರದು. ಶಿಬಿರಗಳು ಮಕ್ಕಳಿಗೆ ವಿವಿಧ ಚಟುವಟಿಕೆಗಳೊಡನೆ ಜೀವನ ಪಾಠಗಳನ್ನು ಕಲಿಸುವ ಮಹೋನ್ನತ ಕೆಲಸವನ್ನು ಮಾಡುತ್ತದೆ.
      ಈ ವರುಷ ಹಲವಾರು ಕಾರಣಗಳಿಂದ ಶಿಬಿರಗಳಿಗೆ ಹೋಗಲಾಗದಿದ್ದರೂ ಇದರ ಮೊದಲು ನಾನು ಕೆಲವು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿರುವೆನು. ಅಲ್ಲಿ ಕುದ್ರೋಳಿ ಗಣೇಶ್, ಜೀವನ್ ರಾಮ್ ಸುಳ್ಯ, ಗೋಪಾಲ್ ಅಂಚನ್, ತಾರಾನಾಥ್ ಕೈರಂಗಳ, ಭಾಸ್ಕರ್ ನೆಲ್ಯಾಡಿ, ವಿವೇಕ್ ಪಡಿಯಾರ್, ನಾದಾ ಮಣಿನಾಲ್ಕೂರ್, ಶಿವಗಿರಿ ಕಲ್ಲಡ್ಕ ಮುಂತಾದ ಒಳ್ಳೊಳ್ಳೆ ಮನಸ್ಸುಳ್ಳ ಸಂಪನ್ಮೂಲ ವ್ಯಕ್ತಿಗಳ ಪರಿಚಯವಾಯಿತು. ಅಲ್ಲಿ ಪರಿಚಯವಾದ ಪ್ರತಿಯೊಬ್ಬ ವ್ಯಕ್ತಿಯು ಇಂದಿಗೂ ನನಗೆ ಒಂದೊಂದು ಬಗೆಯಲ್ಲಿ ಆದರ್ಶವಾಗಿರುವರು. ಅವರು ಹೇಳಿದ ಹಿತವಚನಗಳು, ನೀತಿ ಕತೆಗಳು ನನಗೆ ಎಂದೆಂದಿಗೂ ಮರೆಯಲಾಗದು. ಅವರು ನಾಟಕ, ಹಾಡು, ಚಿತ್ರಕಲೆ, ಕೊಲೇಜ್ ವರ್ಕ್, ಕ್ಲೇ ಮೋಡಲ್, ಪೇಪರ್ ಕ್ರಾಫ್ಟ್ ಮುಂತಾದ ಚಟುವಟಿಕೆಗಳನ್ನು ಕಲಿಸಿ ನನಗೆ ಅವುಗಳ ಮೇಲೆ ಆಸಕ್ತಿ ಮೂಡಿಸಿ ನನ್ನನ್ನು ಆ ಚಟುವಟಿಕೆಗಳಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದರು. ಅದರಲ್ಲೂ ಜೀವನ್ ಸಾರ್ ಕಲಿಸಿದ "ಆನೆ ಬಂದಿತ್ತೂ ಅಣ್ಣಾ ಆನೆ ಬಂದಿತ್ತೂ" ಎಂಬ ಅಭಿನಯ ಗೀತೆಯನ್ನು ಶಾಲೆಯಲ್ಲಿ ಪ್ರಸ್ತುತ ಪಡಿಸಿದ್ದಾಗ ಶಿಕ್ಷಕರಿಂದ ದೊರೆತ  ಪ್ರಸಂಶನೀಯ ನುಡಿಗಳನ್ನು ನಾನು ಎಂದೂ ಮರೆಯಲಾರೆ.
     ಬೇಸಿಗೆ ಶಿಬಿರಗಳು ನನಗೆ ಅನೇಕ ಜೀವನ ಪಾಠಗಳನ್ನು ಕಲಿಸಿದೆ. ಅದು ನೀಡಿದ ಸಂತೋಷ  ವರ್ಣನಾತೀತ. ನಾನು ಮೊದಲ ಬಾರಿ ಬೇಸಿಗೆ ಶಿಬಿರಕ್ಕೆ ಹೋದಾಗ ನನಗೆ ಪರಿಚಯವಿಲ್ಲದ ಧೀರಜ್ ಅಣ್ಣನೊಡನೆ 7 ದಿನ ವಸತಿ ನಿಲಯದಲ್ಲಿ ಕಳೆಯಬೇಕಾಗಿತ್ತು. ನಾನು ಯಾರ ಸಹಾಯವಿಲ್ಲದೆ ಬೆಳಿಗ್ಗೆ ಬೇಗ ಏಳುವುದು, ಕೋಣೆಯ ಸ್ವಚ್ಛತೆಯನ್ನು ಕಾಪಾಡುವುದು, ಸಮಯಕ್ಕೆ ಸರಿಯಾಗಿ ತಯಾರಾಗುವುದು, ಒಬ್ಬಂಟಿಯಾಗಿರುವುದು ಮುಂತಾದುವುಗಳನ್ನು ಕಲಿತೆ. ಒಟ್ಟಿನಲ್ಲಿ ಹೇಳುವುದಾದರೆ ಬೇಸಿಗೆ ಶಿಬಿರಗಳು ಕಲಿಸಿದ ಒಂದೊಂದು ವಿಚಾರಗಳು ನನ್ನ ಜೀವನದ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಇಂತಹ ಶಿಬಿರಗಳಿಗೆ ಸೇರಲು ಪ್ರೋತ್ಸಾಹಿಸಿದ  ತಂದೆ ತಾಯಿಗೆ ನನ್ನ ಹೃದಯಾಂತರಾಳದ ಧನ್ಯವಾದಗಳು.
    ಮುಂದಿನ ಪತ್ರವು ಸರಣಿಯ ಕೊನೆಯ ಪತ್ರ ಎಂಬ ಮಾತನ್ನು ಓದಿದಾಗ ನನ್ನ ಮನದಲ್ಲಿ ಬೇಸರ ಮೂಡಿತು. ನಿಮ್ಮ ಪತ್ರ ಎಂದೆಂದಿಗೂ ಹೊಸ ವಿಚಾರಗಳಿಂದ  ಕೂಡಿರುತ್ತಿತ್ತು. ಆ ಪತ್ರಕ್ಕೆ ಮರು ಪತ್ರ ಬರೆಯುವ ಸಲುವಾಗಿ ಆ ವಿಚಾರದ ಕುರಿತು ಹಿರಿಯರ ಬಳಿ ಕೇಳುವುದು, ಪುಸ್ತಕ, ಲೇಖನಗಳನ್ನು ಓದಲಾರಂಭಿಸಿದೆ. ಇದರಿಂದ ಆ ವಿಚಾರದ ಬಗ್ಗೆ ನನ್ನ ಜ್ಞಾನ ಹೆಚ್ಚಾಗುತ್ತಿತ್ತು. ಮೊದಮೊದಲು ತಂದೆ ತಾಯಿಯ ಒತ್ತಾಯದಿಂದ ಪತ್ರ ಬರೆಯುತ್ತಿದ್ದ ನಾನೂ ಈಗ ನನ್ನ ಸ್ವಯಂ ಸ್ಫೂರ್ತಿಯಿಂದ ಪತ್ರ ಬರೆಯುತ್ತಿದ್ದೇನೆ. ಪತ್ರಗಳು ಪ್ರಕಟವಾದಾಗ ಮನದಲ್ಲಿ ಮೂಡುವ ಸಂತೋಷವನ್ನು ನಾನು ಎಂದಿಗೂ ವಿವರಿಸಲಾರೆ.  ನಿಮ್ಮ ಪತ್ರದ ಸಂಚಿಕೆ ಮುಗಿಯುತ್ತಿದೆ ಎಂಬ ಬೇಸರವಿದ್ದರು ಇನ್ನೇನಾದರೂ ಹೊಸ ಚಟುವಟಿಕೆಯನ್ನು ಅಕ್ಕ ನಮಗೆ ನೀಡುವರೆಂಬ ಆಶಯದೊಂದಿಗೆ ನನ್ನ ಪತ್ರವನ್ನು ಕೊನೆಗೊಳಿಸುವೆನು. ವಂದನೆಗಳು  ಅಕ್ಕ
................................................ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್.ಎನ್.ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೇ ಅಕ್ಕಾ,
   ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು. ರಜೆ  ಸಿಕ್ಕಿದ ಕೂಡಲೇ ಆನ್ಲೈನ್ ನಲ್ಲಿ ಭಗವದ್ ಗೀತೆ ಕ್ಲಾಸ್ ಗೆ ಸೇರಿದನು. ನಮ್ಮ ಮನೆಯ ಪಕ್ಕದಲ್ಲಿ ಬೇಸಿಗೆ ಶಿಬಿರವು ಇಲ್ಲದ ಕಾರಣ ನನಗೆ  ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಸಾದ್ಯವಾಗಲಿಲ್ಲ. ಮನೆಯಲ್ಲಿಯೇ ತಮ್ಮನೊಂದಿಗೆ ಚೆಸ್ಸ್ , ಲಗೋರಿ, ಕಣ್ಣಾ ಮುಚ್ಚಾಲೆ, ಕಡ್ಡಿ ಆಟ, ಮೊದಲಾದ ಆಟವನ್ನು ಆಡಿದೆನು.
    ಪುಸ್ತಕ ಓದುವುದು, ಚಿತ್ರಗಳನ್ನು ಬಿಡಿಸುವುದು, ಅಮ್ಮ ಮತ್ತು ಅಪ್ಪನ ಕೆಲಸಕ್ಕೆ ಸಹಾಯ ಮಾಡಿದೆನು.  ಕಸದಿಂದ ರಸ ಎನ್ನುವಂತೆ  ಬೇಡದ ಪೇಪರ್ ನಿಂದ ಒಂದು ಮನೆಯನ್ನು ಮಾಡಿದೆನು. ಅಜ್ಜನ ಮನೆಯಲ್ಲಿ ರಾತ್ರಿಯಿಂದ ಬೆಳಗಿನ ಜಾವದ ತನಕ ಭೂತ ಕೋಲ ನೋಡಿದೆನು. ತುಂಬಾ ಸುಂದರವಾದ ನಮ್ಮೂರ ಜಾತ್ರೆ  ನೋಡಿದೆವು. ಅದರಲ್ಲಿ ರಥೋತ್ಸವ ನನಗೆ ತುಂಬಾ ಸಂತಸವನ್ನು ನೀಡಿತು. ಚಿಕ್ಕಮ್ಮ ನ ಮನೆಯಿಂದ ಹನುಮ ಗಿರಿ ದೇವಾಲಯ ಮತ್ತು ಕಣ್ಣೂರ್ ವಿಸ್ಮಯಕ್ಕೆ
ಹೋದೆವು. ಅಲ್ಲಿ ತುಂಬಾ ಸಂತೋಷವಾಯಿತು. ಧನ್ಯವಾದಗಳು ಅಕ್ಕಾ......
.........................................ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. 
*******************************************       ನನ್ನ ಪ್ರೀತಿಯ ಅಕ್ಕನಿಗೆ ಸಿಂಚನ ಮಾಡುವ ಕೋಟಿ ಕೋಟಿ ನಮಸ್ಕಾರಗಳು. ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. 
      ನಮ್ಮ ಮನೆಯಲ್ಲಿ ಕಸದ ತೊಟ್ಟಿಯನ್ನು ಇಟ್ಟಿದ್ದೇವೆ. ನಾನು ಮೊನ್ನೆ ಕೊಣಾಜೆ ಗೆ ಹೋಗುವಾಗ ಒಂದು ಅರಣ್ಯ ಪ್ರದೇಶದಲ್ಲಿ ಕಾಡುಗಳಲ್ಲಿ ತುಂಬಾ ಕಸವನ್ನು ಬದಿಬದಿಗೆ ಹಾಕಿದ್ದಾರೆ. ಕೆಲವರು ಯಾರಿಗೂ ಗೊತ್ತಾಗದಂತೆ ಬದಿಗೆ ಹೋಗಿ ಎಸೆಯುತ್ತಾರೆ.  ಇದು ನಿಜವಾಗಿಯೂ ತಪ್ಪು. ಇದರಿಂದಾಗಿ ನಮಗೆ ತುಂಬಾ ತೊಂದರೆಗಳಾಗುತ್ತಿವೆ. ನನ್ನ ಅಜ್ಜಿ ಮನೆಯಲ್ಲಿ ಕಸವನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ. ಕೆಲವೊಂದು ಕಸಗಳಿಂದ ಕ್ರಾಫ್ಟ್ ಗಳನ್ನು ಕೂಡಾ ಮಾಡುತ್ತೇನೆ. ನೀವು ಕೂಡ ಕಸದಿಂದ ರಸ ವನ್ನು ನಿಮ್ಮ ಮನೆಯಲ್ಲಿ ಕೂಡ ಮಾಡಿರಿ. ಉದಾಹರಣೆಗೆ ನಾನು ಇಲ್ಲಿ ನನ್ನ ಮನೆಯಲ್ಲಿ ಮಾಡಿದ ಒಂದು ಕ್ರಾಫ್ಟಿನ ಬಗ್ಗೆ ನಿಮಗೆ ತಿಳಿಸುತ್ತೇನೆ. ಉದಾಹರಣೆಗೆ ನನ್ನ ಮನೆಯಲ್ಲಿ ಮನೆಯಲ್ಲಿ ಪೆನ್ಸಿಲ್ ನ ಕಸ ತುಂಬಾ ಇದ್ದವು ಅದರಲ್ಲಿ ಅಲಂಕಾರವನ್ನು ಮಾಡಿದ್ದೇನೆ. ನೀವು ಕೂಡ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ ನಿಮಗೆ ಹಾಗೆಂದು ಗೊತ್ತಾಗದಿದ್ದರೆ ಯೂಟ್ಯೂಬ್ ನ ಸಹಾಯದಿಂದ ಮಾಡಿ. ಅಕ್ಕ ನಿಮ್ಮ ಈ ಒಂದು ಪತ್ರವನ್ನು ಓದಿ ನನಗೆ ತುಂಬಾ ಖುಷಿ ಎನಿಸಿತು. ನೀವು ಮುಂದಿನ ವಾರ ಕೂಡ ಪತ್ರವನ್ನು ಬರೆಯುತ್ತೀರಿ ಎಂದು ನಾನು ಕಾಯುತ್ತಿರುತ್ತೇನೆ. ನಮಸ್ಕಾರಗಳು.
........................................... ಸಿಂಚನಾ  ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
******************************************      ನಮಸ್ತೆ ಅಕ್ಕಾ, ನಾನು ಶಾರ್ವಿ ಮಂಗಳೂರು. ಮಕ್ಕಳ ಜಗಲಿಯಲ್ಲಿ  ನೀವು ಬರೆದ ಪತ್ರ ನಾವೆಲ್ಲರೂ ಓದಿದೆವು. ನಿಮ್ಮ ಪತ್ರವನ್ನು ಓದಿ ತುಂಬಾನೇ ಸಂತೋಷವಾಯಿತು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಬೇಸಿಗೆ ಶಿಬಿರಗಳು ನಡೆಯುತ್ತಿರುತ್ತದೆ. ಹೆಚ್ಚಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಾರೆ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುದರಿಂದ ಮಕ್ಕಳಲ್ಲಿ ಶಿಸ್ತು,   ಶ್ರದ್ಧೆ, ಸಂಯಮ, ಸಮಯ ಪ್ರಜ್ಞೆ, ಮತ್ತು ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಶಿಬಿರದಿಂದ ಉಪಯುಕ್ತವಾಗುತ್ತದೆ. ನಾನು ಕೂಡ ಪ್ರತಿ ವರ್ಷ ಶಿಬಿರಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ನಾನು  ನನ್ನ ಗೆಳತಿಯರೊಡನೆ ಶಿಬಿರಕ್ಕೆ ಹೋಗುವುದು. ಅಲ್ಲಿ ಬೆಳಗಿನ ಉಪಹಾರ, ಮಧ್ಯಾನ್ಹದ ಊಟ, ಅವರು ಹೇಳಿ ಕೊಡುವಂತಹ ಚಿತ್ರಕಲೆ, ಕ್ರಾಫ್ಟ್, ನೀತಿಕಥೆಗಳು ಹಾಗೂ ಇನ್ನು ಹಲವಾರು ಚಟುವಟಿಕೆಗಳಿಂದ ಹೊಸ ಅನುಭವವನ್ನು ನಾನು ಪಡೆದುಕೊಳ್ಳುತ್ತಿದ್ದೆ. ಎಲ್ಲಾ ಮಕ್ಕಳು ರಜೆಯಲ್ಲಿ ಸಮಯವನ್ನು ದುರುಪಯೋಗಪಡಿಸಿಕೊಳ್ಳದೆ ಇಂತಹ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಸಮಯವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಧನ್ಯವಾದಗಳು ಅಕ್ಕಾ....
................................... ಶಾರ್ವಿ ಮಂಗಳೂರು. 
10ನೇ ತರಗತಿ. 
ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ
ಕುಲಶೇಖರ, ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
******************************************                             ನಮಸ್ತೆ ಅಕ್ಕ ನಾನು ಶ್ರಾವ್ಯ..... ಬೇಸಿಗೆ ರಜೆ ಆರಂಭವಾಗಿದೆ. ಆದರೆ ಮುಂದಿನ ವಿದ್ಯಾಭ್ಯಾಸದ ಸಿದ್ಧತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಸೇರಿಕೊಂಡೆ. ಅಲ್ಲೇ ಹತ್ತಿರದಲ್ಲಿ ಶಾಲಾ ಮಕ್ಕಳಿಗಾಗಿ  ಬೇಸಿಗೆ ಶಿಬಿರ ನಡೆಯತ್ತಿತ್ತು. ಅಲ್ಲಿ ಪುಟ್ಟ ಪುಟ್ಟ ಮಕ್ಕಳು ಬಣ್ಣ ಕಾಗದ ಕತ್ತರಿ ಹಿಡಿದು ಆಸಕ್ತಿಯಿಂದ ಶಿಕ್ಷಕರ ಸುತ್ತಾ ನಿಂತು ನೋಡುತ್ತಿದ್ದರು. ಶಾಲೆಯಲ್ಲಿ ಇರುವುದಕ್ಕಿಂತಲೂ ಹೆಚ್ಚು ಆಸಕ್ತರಾಗಿರುತ್ತಿದ್ದ ಮಕಳ್ಳನು ನೋಡಲು ತುಂಬಾ ಖುಷಿ ಆಗುತ್ತಿತ್ತು. ನಾವು ಬಿಡುವಿರುವಾಗ ಆ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದೆವು. ಇಂತಹ ಶಿಬಿರಗಳು ನಮ್ಮಂತಹ ವಿದಾರ್ಥಿಗಳಿಗೆ ಅಗತ್ಯ ಮತ್ತು ಶಾಲೆಯ ಓದು-ಪರೀಕ್ಷೆಗಳ ಒತ್ತಡಗಳನ್ನೆಲ್ಲ ಮರೆಮಾಡುತ್ತದೆ. ಅಷ್ಟು ಮಾತ್ರವಲ್ಲದೆ, ಹೊಸ ಹೊಸ ವಿಚಾರಗಳನ್ನು ಕಲಿಯಲು ಅವಕಾಶ ಮಾಡಿಕೊಡುತ್ತದೆ. ಧನ್ಯವಾದ....
.................................................. ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************         ಅಕ್ಕನಿಗೆ ಹಿತಶ್ರೀ ಬರೆಯುವ ಪತ್ರ 
     ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ತಂಗಿ ಹಿತಶ್ರೀ ಮಾಡುವ ನಮಸ್ಕಾರಗಳು. ನಾನು ಇಲ್ಲಿ  ಕ್ಷೇಮವಾಗಿರುವೆನು. ನೀವು ಅಲ್ಲಿ ಕ್ಷೇಮಾವಾಗಿರುವಿರಿ ಎಂದು ಭಾವಿಸುತ್ತೇನೆ. ಈಗ ನಮಗೆ ಬೇಸಿಗೆ ರಜೆ ಸಿಕ್ಕಿರುವುದರಿಂದ ನಾನು ಸ್ವಲ್ಪ ದಿನಗಳು ನಮ್ಮ ಮನೆಯಲ್ಲಿಯೇ ಬೇಸಿಗೆ ರಜೆಯನ್ನು ಕಳೆದೆನು. ಆನಂತರ ನನ್ನ ಅಕ್ಕನ ಮನೆಗೆ ಬಂದೆನು. ಮೊದಲ ದಿನ ನಾನು ಅಕ್ಕನ ಮಕ್ಕಳ ಜೊತೆ ಆಟ ಆಡಿದೆ. ಮರುದಿನ ನಾನು ನನ್ನ ಶಾಲೆಯಲ್ಲಿ ಕೊಟ್ಟಿರುವ ಎಲ್ಲಾ ಮನೆಗೆಲಸವನ್ನು ಮಾಡಿದೆ. ಆ ದಿನ ನಾವು ಎಲ್ಲರು ಒಟ್ಟಿಗೆ ಸೇರಿ ಮುಖ್ಯಪ್ರಾಣ  ದೇವಸ್ಥಾನಕ್ಕೆ ಹೋದೆವು. ಅಲ್ಲಿ ಒಂದು ನದಿ ಇತ್ತು. ಅದು ನೋಡಲು ತುಂಬಾ ಆಕರ್ಷಕವಾಗಿತ್ತು. ಹಾಗೂ ಅಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಹಾಗಾಗಿ ತುಂಬಾ ಸಂತೋಷವಾಯಿತು. ಹೀಗೆ ಒಂದು ವಾರ ರಜೆಯನ್ನು ಅಕ್ಕನ ಮನೆಯ ಸುಂದರ ವಾತಾವರಣದಲ್ಲಿ ಕಳೆದೆನು.‌‌ ಈಗ ನಾನು ಅಜ್ಜನ ಮನೆಗೆ ಬಂದಿದ್ದೇನೆ. ಇದಕ್ಕಿಂತ ಮೊದಲು ನನ್ನ ತಂಗಿ ಮೋಕ್ಷ ಬಂದಿದ್ದಳು. ಇಲ್ಲಿ         ಓದುವುದಕ್ಕಾಗಿ ತುಂಬಾ ಕಥೆ ಪುಸ್ತಕ, ಹಾಡು ಪುಸ್ತಕಗಳಿವೆ. ಈ ಪುಸ್ತಕವನ್ನು ಓದಿ ನಾನು ಈ ರಜೆ ದಿನಗಳನ್ನು ಸಂತೋಷದಿಂದ ಕಳೆಯುತ್ತೇನೆ. ಇಷ್ಟರವರೆಗೆ ನನಗೆ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿಸುವ ಅವಕಾಶ ಸಿಗಲಿಲ್ಲ. ಯಾಕೆಂದರೆ ನಮ್ಮ ಊರಿನಲ್ಲಿ ಶಿಬಿರಗಳನ್ನು ಆಯೋಜಿಸುವುದು ಕಡಿಮೆ. ನಾವು ಮನೆಯಲ್ಲಿ ಚಿತ್ರ ಬಿಡಿಸಿ ಮಕ್ಕಳ ಜಗಲಿಗೆ ನಿರಂತರವಾಗಿ ಕಳುಹಿಸಿರುತ್ತೇವೆ. ಮಕ್ಕಳ ಜಗಲಿಯು ಒಂದು online ಬೇಸಿಗೆ ಶಿಬಿರದಂತೆ ಇಲ್ಲಿ ಎಲ್ಲವೂ ಇದೆ. ಧನ್ಯವಾದಗಳು ಅಕ್ಕ
.................................................. ಹಿತಾಶ್ರೀ
6ನೇ ತರಗತಿ 
ಸ. ಉ. ಹಿ. ಪ್ರಾ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************    ಪ್ರೀತಿಯ ಅಕ್ಕನಿಗೆ ನಿಮ್ಮ ಪುಟ್ಟ ತಂಗಿ ಮೋಕ್ಷ ಮಾಡುವ ಪ್ರೀತಿಯ ನಮಸ್ಕಾರಗಳು. ನೀವು ಹೇಗಿದ್ದೀರಿ ಅಕ್ಕ....? ನಾನು ಕ್ಷೇಮವಾಗಿರುವೆನು. ಇದು ನಾನು ನಿಮಗೆ ಬರೆಯುವ  ಮೊದಲ ಪತ್ರ. ಈಗ ನಮಗೆ ಬೇಸಿಗೆ ರಜೆ ಸಿಕ್ಕಿರುವುದರಿಂದ ರಜೆ ಯಲ್ಲಿ ಅಜ್ಜಿ ಜೊತೆಗೆ ನಾನು ಅಜ್ಜನ ಮನೆಗೆ ಬಂದಿದ್ದೇನೆ. ನಾನು ಇಲ್ಲಿ ಮಾವನ‌ ಜೊತೆಗೆ ಹಾವು ಏಣಿ ಆಟ ಆಡಿದೆ. ಮಾರನೇ ದಿನ ಅಜ್ಜಿ ಮನೆಗೆ ನೆಂಟರು ಬಂದರು. ಅವರಲ್ಲಿ ಮೂವರು ನನಗೆ ಒಳ್ಳೆಯ ಗೆಳೆಯರಾದರು. ಅವರು ನಾನು ಸೇರಿ ಬೆಳಿಗ್ಗೆ ಬೇಗ ಎದ್ದು ಯೋಗ ಮಾಡಿದೆವು ನಂತರ ಮಣ್ಣಿನಲ್ಲಿ, ನೀರಿನಲ್ಲಿ ಚೆನ್ನಾಗಿ ಆಡಿದೆವು. ಅಂಟುಮಣ್ಣಿನಲ್ಲಿ ನಾನು ಗೊಂಬೆ, ಅರೆಯುವ ಕಲ್ಲು ಮಾಡಿ ಸಂಭ್ರಮಿಸಿದೆ. ನಾನು ಅಕ್ಕನವರೊಂದಿಗೆ ಲಗೋರಿ ಆಟ ಆಡಿದೆ. ನನಗೆ ತುಂಬಾ ಮಜವಾಗಿತ್ತು. ಮಾವ ನನಗೆ  ಮಾವಿನ ಮರಕ್ಕೆ ಜೋಕಾಲಿ ಕಟ್ಟಿ ಕೊಟ್ಟರು. ನಾನು ಅದರಲ್ಲಿ ಕೂತು ಸಂತೋಷಪಟ್ಟೆ. ನಾನು ಚಿತ್ರ ಪುಸ್ತಕದಲ್ಲಿ ಬೇರೆ ಬೇರೆ ಚಿತ್ರ ಬಿಡಿಸಿದೆ. ಅಕ್ಕನವರೊಂದಿಗೆ ಅಂತ್ಯಾಕ್ಷರಿ ಆ‌ಡಿದೆ. ನಿನ್ನೆ ನಾನು ಆಕಾಶದಲ್ಲಿ ಹಾರಾಡುವ ವಿಮಾನ ಮತ್ತು ಸಂಜೆ ಕಾಮನಬಿಲ್ಲು ‌ನೋಡಿದೆ. ನಿಮಗೆ ಪತ್ರ ಬರೆಯುವುದನ್ನೂ ಕಲಿತೆ. ಹೀಗೆ  ನಾನು ರಜೆಯನ್ನು ಸಂಭ್ರಮದಿಂದ ಕಳೆಯುತ್ತಿದ್ದೇನೆ. ಇಲ್ಲಿಗೆ  ನನ್ನ ಪತ್ರವನ್ನು ಕೊನೆಗೊಳಿಸುತ್ತೇನೆ ನಮಸ್ಕಾರಗಳು ಅಕ್ಕ.
..................................................... ಮೋಕ್ಷ
3ನೇ ತರಗತಿ 
ಸ. ಉ. ಹಿ. ಪ್ರಾ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
ಮಕ್ಕಳ ಜಗಲಿ....ಅಕ್ಕನ ಪತ್ರ...49
     ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು... ನಿಮ್ಮ ಬೇಸಿಗೆ ಶಿಬಿರದಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ಕೇಳಿ ತುಂಬಾ ಖುಷಿಯಾಯಿತು... ನಾನು ಯಾವುದೇ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲಾಗಲಿಲ್ಲ. ನಮ್ಮೂರಲ್ಲಿ ತುಂಬಾ ಕಾರ್ಯಕ್ರಮಗಳು ಇದ್ದ ಕಾರಣ ನಾನು ಈ ರಜೆಯಲ್ಲಿ ಸಕುಟುಂಬಿಕರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷಪಟ್ಟೆನು. ಅಕ್ಕಾ 50ನೇ ಸಂಚಿಕೆ ನಿಮ್ಮ ಕೊನೆಯ ಪತ್ರ ಎಂದು ಕೇಳಿ ಬೇಸರವಾಯಿತು. ನಿಮ್ಮ ಪತ್ರದ ಮೂಲಕ ಎಷ್ಟೋ ವಿಷಯಗಳನ್ನು ತಿಳಿದುಕೊಂಡು ಸಂತೋಷಪಡುತ್ತಿದ್ದೆ. ಕಥೆ ಓದಿ ಉತ್ಸಾಹಿತಳಾಗುತ್ತಿದ್ದೆ. ನಿಮ್ಮ ಸ್ಪೂರ್ತಿಯ ಮಾತುಗಳು ಖುಷಿ ಕೊಡುತ್ತವೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ. ಸಾಧ್ಯವಾದರೆ ಪತ್ರ ಬರೆಯುವುದನ್ನು ಮುಂದುವರಿಸಿ ಅಕ್ಕಾ... ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವೆನು. ಇಂತಿ ನಿಮ್ಮ ಪ್ರೀತಿಯ.....
................................................. ಲಹರಿ ಜಿ.ಕೆ.
9ನೇ ತರಗತಿ
ತುಂಬೆ ಆಂಗ್ಲ ಮಾಧ್ಯಮ ಶಾಲೆ ತುಂಬೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************     ನಮಸ್ತೆ ಅಕ್ಕಾ ನಾನು ನಿಭಾ..... ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ನಾನು ಕೂಡ 4ನೇ ತರಗತಿಯಲ್ಲಿರುವಾಗ ಬೇಸಿಗೆ ಶಿಬಿರಕ್ಕೆ ಹೋಗಿದ್ದೆ. ಅದು 3 ದಿನದ ಉಚಿತ ಬೇಸಿಗೆ ಶಿಬಿರವಾಗಿತ್ತು. ಅದನ್ನು ನಡೆಸಿದವರು ಈಗ ಗಿಚ್ಚಿಗಿಲಿಗಿಲಿಯಲ್ಲಿ ಮಿಂಚುತ್ತಿರುವ ಧನರಾಜ್ ಆಚಾರ್ ಆಗಿದ್ದರು. ಅಲ್ಲಿ ನಮಗೆ ನಟನೆ ಆಟ ಕ್ರಾಫ್ಟ್ ಚಿತ್ರಕಲೆ ವಿಜ್ಞಾನ ಮುಂತಾದವುಗಳನ್ನು ತಿಳಿಸಿಕೊಟ್ಟಿದ್ದರು. ಜೊತೆಗೆ ಸ್ವಚ್ಛತೆ, ಸಾಮಾಜಿಕ ಜ್ಞಾನಗಳ ಬಗ್ಗೆ ಅರಿವು ಮೂಡಿಸಿದ್ದರು. ಅಂದು ನಾವು ತುಂಬಾ ಆನಂದಿಸಿದೆವು. ಹಾಗೇ ನಮ್ಮ ಮನೆಯಲ್ಲಿ ಎಲ್ಲರೂ ಮತ ಚಲಾಯಿಸಿದ್ದಾರೆ. ಹಾಗೇ ಇಲ್ಲಿ ಈಗೀಗ ಸ್ವಲ್ಪ ಮಳೆಯಾಗುತ್ತಿದೆ. ನಿಮ್ಮ ಕಡೆ ಮಳೆ ಹೇಗಿದೆ ಎಂದು ಮುಂದಿನ ಪತ್ರದಲ್ಲಿ ತಿಳಿಸಿ ಅಲ್ಲಿಯವರೆಗೂ ಕಾಯುತ್ತಿರುತ್ತೇನೆ. ಧನ್ಯವಾದಗಳು
...................................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************        ಹರಿ ಓಂ ಅಕ್ಕ ನಾನು ಶಾನ್ವಿ ಶೆಟ್ಟಿ ಓಂ ಜನ ಹಿತಾಯ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ. ಹೇಗಿದ್ದೀರ ಅಕ್ಕ, 
         ಅಕ್ಕ ನಿಮ್ಮ ಪತ್ರ ಓದಿದೆ ನಮ್ಮ ಶಾಲೆಯಲ್ಲಿ ಕೂಡ  SPYSS  ಯೋಗದ ವತಿಯಿಂದ 12ದಿನಗಳ ಮಕ್ಕಳ ವಸಂತ ಶಿಬಿರ ತರಬೇತಿಯನ್ನು ನಡೆಸಿದ್ದರು. ನಮಗೂ ಒಳ್ಳೆಯ ವಿಷಯಗಳನ್ನೆಲ್ಲಾ ತಿಳಿಸಿ ಕೊಟ್ಟಿದ್ದಾರೆ. ನಮಗೆ ರಜಾ ಮುಗಿದದ್ದೇ  ಗೊತ್ತಾಗಿಲ್ಲ ನಮಗೆ 2 ತಾರೀಕಿಗೆ ಶಾಲೆ ಆರಂಭವಾಗಿದೆ ಅಕ್ಕ. ತುಂಬಾ ಬರೆಯಲಿಕ್ಕಿದೆ ಅಕ್ಕ.  ಹಾಗಾಗಿ ಒಮ್ಮೊಮ್ಮೆ ಪತ್ರ ಬರೆಯಲಿಕ್ಕೆ ಸಮಯವಿರುವದಿಲ್ಲ. ಕ್ಷಮಿಸಿ ಅಕ್ಕ.
ಧನ್ಯವಾದ ಅಕ್ಕ
................................................. ಶಾನ್ವಿ ಶೆಟ್ಟಿ    
10ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************      ನಮಸ್ತೆ ಅಕ್ಕಾ, ನಾನು ಧೀರಜ್. ಕೆ. ಆರ್.
ನಾನು ಶಿಬಿರಕ್ಕೆಂದು ಯಾವುದಕ್ಕೂ ಹೋಗಿಲ್ಲ. ಆದರೆ ಅಳದಂಗಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಸಮ್ಮೇಳನವನ್ನು ಏರ್ಪಡಿಸಿದ್ದರು. ಅದರ ಆಹ್ವಾನವು ನನಗೆ ಬಂದಿತ್ತು. ಆಮಂತ್ರಣ ಸಂಸ್ಥೆಯ ರೂವಾರಿಗಳಾದ ವಿಜಯ್ ಕುಮಾರ್ ಜೈನ್ ಸರ್ ಈ ಸಮ್ಮೇಳನದ ಸಂಚಾಲಕರಾಗಿದ್ದರು. ನಾನು ಮತ್ತು ನನ್ನ ತಮ್ಮ ಈ ಕಾರ್ಯಕ್ರಮಕ್ಕೆ ವೀಕ್ಷಕರಾಗಿ ಹೋಗಿದ್ದೆವು. ನಮ್ಮನ್ನು ಗುರುತಿಸಿ ಗೌರವ ಸ್ಮರಣಿಕೆಯನ್ನು ನೀಡಿದರು. ರಾಜ್ಯದ ಅನೇಕ ತಂಡಗಳು ಹಾಗೂ ಅನೇಕ ಮಕ್ಕಳು ವೈಯಕ್ತಿಕವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ನನಗಂತೂ ಆ ಸಮ್ಮೇಳನಕ್ಕೆ ಹೋಗಿ ತುಂಬಾ ಖುಷಿಯಾಯಿತು. ಮುಂದಿನ ಪಾತ್ರಕ್ಕಾಗಿ ಕಾಯುತ್ತಿರುತ್ತೇನೆ.
ಧನ್ಯವಾದಗಳು ಅಕ್ಕಾ.
........................................ ಧೀರಜ್.ಕೆ.ಆರ್
ಪ್ರಥಮ ಪಿ.ಯು.ಸಿ
ಪುತ್ತೂರು ತಾಲ್ಲೂಕು. ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article