ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 50
Sunday, May 21, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 50
ನಮಸ್ತೆ ಮಕ್ಕಳೇ, ಹೇಗಿದ್ದೀರಿ...? ಬೇಸಗೆ ರಜೆ ಮುಗಿಯುತ್ತಿದೆ.. ಆದರೆ ಬಿಸಿಲಿನ ಪ್ರಖರತೆ ಹಾಗೆಯೇ ಇದೆ! ಮತ್ತೆ ಶಾಲೆ.. ಕಾಲೇಜಿನ ಅಂಗಳಗಳು ನಮಗಾಗಿ ಕಾಯುತ್ತಿವೆ...
ನಮ್ಮ ಮನೆಗೆ ದೂರದೂರಿನಿಂದ ಬಹಳ ದಿನಗಳ ನಂತರ ಯಾರಾದರೂ ಬಂದಾಗ ಅವರು ನಮಗೇನಾದರೂ ತಂದಿರುತ್ತಾರೆ. ಆ ಖುಷಿ ಅವರನ್ನು ಇನ್ನೂ ಹೆಚ್ಚು ಇಷ್ಟಪಡಲು ಕಾರಣವಾಗುತ್ತದೆ. ನಾವೂ ಈಗ ಬರಿದಾಗಿ ತೆರಳುವ ಹಾಗಿಲ್ಲ! ಶಾಲೆಯ ವಾತಾವರಣ ನಮ್ಮಿಂದ ಹೊಸತನ್ನು ಬಯಸುತ್ತಿದೆ. ಯಾವ ಹೊಸತನ್ನು ಕಲಿತಿದ್ದೀರಿ...? ನಿಮ್ಮ ಗೆಳೆಯ ಗೆಳತಿಯರಿಗೆ ಈ ಖುಷಿಯನ್ನು ಹಂಚುವುದು ಹೇಗೆ...?
ಇದು ನನ್ನ ಬದಲಾವಣೆ... ಕಾರಣ ಈ ಸಲದ ಸ್ವರೂಪ ಶಿಬಿರ. ನಾನು..... ನಿನ್ನೆಯ ನಾನಲ್ಲ....!
ನನ್ನ ಈ ದಿನ ನಿನ್ನೆಯ ಹಾಗಿರಲು ಬಿಡುವುದೂ ಇಲ್ಲ...! ನಾನು ರೂಬಿಕ್ ಕ್ಯೂಬ್ solve ಮಾಡುವುದನ್ನು ಕಲಿತಿದ್ದೇನೆ. ನನ್ನ ಎಲ್ಲ ಸಮಯವೂ ನನಗೆ ಅಮೂಲ್ಯವಾಗತೊಡಗಿದೆ. ಸುಮ್ಮನಿರಲು ಆಗುವುದೇ ಇಲ್ಲ. ಓದ್ತೇನೆ. ಬರೆಯುತ್ತೇನೆ. ಆಲೋಚನೆಗಳಿಗೆ ಶಕ್ತಿ ತುಂಬುತ್ತಿದ್ದೇನೆ. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸುತ್ತಿದ್ದೇನೆ. ಕಲಿತದ್ದನ್ನು ಆಗಾಗ ನೆನಪಿಸಿಕೊಳ್ಳುತ್ತೇನೆ. ಯಾವ ಕಲಿಕೆಯೂ ಅಸಾಧ್ಯವಲ್ಲ ಎನ್ನುವುದು ಅರಿವಾಗಿದೆ. ಬದುಕನ್ನು ಸಂಭ್ರಮಿಸಲು ಇಷ್ಟು ಸಾಕಲ್ವಾ?
"ಕೇವಲ ಕ್ರಿಯಾಶೀಲವಾಗಿರುವುದು ಮಾತ್ರವೇ ನೀವು ಒಂದು ನೂರು ವರ್ಷಗಳ ಕಾಲ ಬದುಕಲು ಬಯಸುವಂತೆ ಮಾಡುವುದು". ಇದೊಂದು ಜಪಾನೀ ಗಾದೆ. ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ ಬರೆದ ಇಕಿಗಾಯ್ ಎನ್ನುವ ಪುಸ್ತಕ ದೀರ್ಘ ಹಾಗೂ ಸಂತಸಭರಿತ ಜೀವನದ ಗುಟ್ಟನ್ನು ಬಿಚ್ಚಿಡುತ್ತದೆ. ಈ ಪುಸ್ತಕವನ್ನೊಮ್ಮೆ ಓದಿ. ನಮಗೆಲ್ಲಾ ವಿಚಾರಗಳು ಗೊತ್ತಿವೆ ಎಂದು ಅಂದುಕೊಂಡರೂ ಸಿಟ್ಟು, ಉದ್ವೇಗ, ಹತಾಷೆ, ಗೊಂದಲ.. ಎಲ್ಲವೂ ನಮ್ಮ ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ. ಇದರ ಜೊತೆಗಿನ ಯುದ್ಧದಲ್ಲಿ ನಾವು ಸೋಲುತ್ತೇವೆ. ಮತ್ತೇನು ಗೊತ್ತಿರೋದು ನಮಗೆ...?
ಸಂಬಂಧ ಉಳಿಯಲೂ ಅಳಿಯಲೂ ನಮ್ಮ ಮಾತು ಮತ್ತು ಮುಖದ ಭಾವನೆಯೇ ಕಾರಣ..! ಪರಿಸ್ಥಿತಿ ಹೇಗೆಯೇ ಇದ್ದರೂ ಮನಸ್ಥಿತಿ ಸರಿಯಿದ್ದರೆ ಇಂತಹ ಗೊಂದಲಗಳನ್ನು ಕಡಿಮೆ ಮಾಡಬಹುದು..!
ಸ್ನೇಹಿತರಿಬ್ಬರೂ ಒಂದು ಕಡೆ ಕುಳಿತುಕೊಂಡು ಅಭ್ಯಾಸ ಮಾಡುತ್ತಿದ್ದರು. ಒಬ್ಬನಿಗೆ ಬಾಯಾರಿಕೆಯಾಯಿತು. ನೀರು ಕುಡಿಯುವಾಗ ಸ್ವಲ್ಪ ನೀರು ಇನ್ನೊಬ್ಬ ಮಿತ್ರನ ಪುಸ್ತಕಕ್ಕೆ ಚೆಲ್ಲಿತು. ಆಗ ಅವನು ತನ್ನ ಗೆಳೆಯನನ್ನು ಉದ್ದೇಶಿಸಿ, "'ಒಳ್ಳೆಯದಾಯಿತು. ನಿನಗೆ ಶಾಯಿಯನ್ನು ಕುಡಿಯುವ ಅಭ್ಯಾಸವಿಲ್ಲ. ಇಲ್ಲದಿದ್ದರೆ ಒಳ್ಳೆ ಫಜೀತಿಯಾಗುತ್ತಿತ್ತು!" ಮೊದಲನೆಯ ಮಿತ್ರನಿಗೆ ಆಶ್ವರ್ಯ! ಆಗ ಆ ಗೆಳೆಯನು "ಇದು ನೀರಾಗಿದ್ದ ಕಾರಣ ಸ್ವಲ್ಪ ಸಮಯದಲ್ಲಿ ಒಣಗಿ ಹೋಗಬಹುದು. ಶಾಯಿ ಕುಡಿಯುತ್ತಿದ್ದರೆ ನನ್ನ ಪುಸ್ತಕವೇ ಹಾಳಾಗಿ ಹೋಗುತ್ತಿತ್ತು!" ಅವರಿಬ್ಬರ ನಗು ಆ ವಾತಾವರಣವನ್ನು ತಿಳಿಯಾಗಿಸಿತು.
ಇಂತಹ ಗುಣದ ಬದಲಾವಣೆಗಳು ನಮ್ಮಲ್ಲಿ ಸಾಧ್ಯವಾಗಬೇಕು ಮತ್ತು ಅದು ಇನ್ನೊಬ್ಬರಿಗೆ ಅರಿವಿಗೆ ಬರಬೇಕು. ಅವರ ಮೇಲೆಯೂ ನಮ್ಮ ವ್ಯಕ್ತಿತ್ವ ಪ್ರಭಾವ ಬೀರಿ, ಯಾವುದಾದರೊಂದು ಹೊಸತನಕ್ಕೆ ನಾವು ಕಾರಣವಾದರೆ ನಮ್ಮ ಹುಟ್ಟು ಸಾರ್ಥಕವಾಗುತ್ತದೆ. ಬಹಳಷ್ಟು ಮಕ್ಕಳಿಗೆ ಅಪ್ಪ ಅಮ್ಮನಿಗೆ ಬೇಕಾದಷ್ಟು, ಶಿಕ್ಷಕರಿಗೆ ಬೇಕಾದಷ್ಟು ಅಂಕವನ್ನು ಸಂಪಾದಿಸಿ ಕೊಡಲಾಗುವುದಿಲ್ಲ. ಹಾಗೆ ಕೊಟ್ಟವರೆಲ್ಲರೂ ಮಹತ್ವವಾದದ್ದೇನನ್ನೂ ಸಾಧಿಸಲೂ ಇಲ್ಲ. ಯಾವುದೋ ಒಂದು ಉದ್ಯೋಗ ಮಾಡಿಕೊಂಡು ಬದುಕುತ್ತಿದ್ದಾರೆ ಅಷ್ಟೇ. ಪರೀಕ್ಷೆಯಲ್ಲಿ ಫೇಲಾದವರ ಉದ್ದೇಶವೂ Rank ಪಡೆದವರ ಉದ್ದೇಶವೂ ಬದುಕಲು ದಾರಿಯನ್ನು ಕಂಡುಕೊಳ್ಳುವುದಷ್ಟೇ. ಆದರೆ ನಾವು ಇತರರಿಗಿಂತ ಹೇಗೆ ಭಿನ್ನ ವಾಗಿ ಎಲ್ಲವನ್ನೂ ಸಂಭ್ರಮಿಸುತ್ತೇವೆ ಎನ್ನುವುದು ಈ ಬದುಕಿಗೆ ಸ್ಫೂರ್ತಿಯಾಗುತ್ತದೆ...! ಮತ್ತು ಹೆಚ್ಚು ಮೌಲ್ಯಯುತವಾಗುತ್ತದೆ...!
ಪ್ರತಿದಿನವನ್ನೂ ಪ್ರೀತಿಯಿಂದ ಸ್ವಾಗತಿಸಬೇಕಾದರೆ ಏನನ್ನಾದರೂ ಕಲಿಯುವ ಸಾಧಿಸುವ ಗುರಿಯನ್ನಿಟ್ಟುಕೊಳ್ಳಬೇಕಾಗುತ್ತದೆ. ನಾನು ಈ ದಿನ ಸ್ವರಶ್ರೀ ಅವರು ಬರೆದ "ಸಂಪೂರ್ಣ ಲಕ್ಷ್ಯ" ಎನ್ನುವ ಪುಸ್ತಕ ವನ್ನು ಓದಬೇಕು.... ಇದುವರೆಗಿನ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳ ಹೆಸರನ್ನು ಕಲಿತುಕೊಳ್ಳಬೇಕೆನ್ನುವುದು ನನ್ನ ಈ ದಿನದ ಗುರಿ. ಹಾಗೆ ಕಲಿತುಕೊಂಡು ಲಾಭವೇನಾದರೂ ಇದೆಯೇ.... ಗೊತ್ತಿಲ್ಲ. ಆದರೆ ಹೆಚ್ಚು ಹೆಚ್ಚು ಹೊಸತನ್ನು ಕಲಿತುಕೊಂಡಷ್ಟು ಪ್ರಬುದ್ಧವಾಗಿ ಮಾತನಾಡಿದಷ್ಟು ನನ್ನನ್ನು ಇತರರು ಹೆಚ್ಚು ಗೌರವದಿಂದ ಮತ್ತು ವಿಶೇಷವಾಗಿ ಕಾಣುತ್ತಾರೆ ಎನ್ನುವ ಖುಷಿ ನನ್ನನ್ನು ಇನ್ನಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಇಂತಹ ಆನಂದವನ್ನು ನೀವೂ ಅನುಭವಿಸಿ.
ಸರಿ ಮಕ್ಕಳೇ... ಈ ದಿನ ತುಂಬಾ ಮಾತನಾಡಿದೆ ಅಲ್ವಾ...? ಈ ಪತ್ರ ಸರಣಿಯ ಕೊನೆಯ ಸಂಚಿಕೆ ಇದು. ಮಕ್ಕಳ ಜಗಲಿ ಎನ್ನುವ ವಿಭಿನ್ನ ಪರಿಕಲ್ಪನೆಯ ಈ ವೇದಿಕೆಯ ಮೂಲಕ ಎಲ್ಲರಿಗಿಂತ ಹೆಚ್ಚಿನ ಪ್ರೀತಿ ನನಗೆ ಸಿಕ್ಕಿದೆ. ಎಲ್ಲೆಲ್ಲೋ ಇರುವ ನಮ್ಮ ನಡುವೆ ಬಾಂಧವ್ಯದ ಸೇತುವೆಯಾದವರು ತಾರನಾಥ ಕೈರಂಗಳ ಸರ್. ಅವರಿಗೆ ಅತ್ಯಂತ ಪ್ರೀತಿಯ ಧನ್ಯವಾದಗಳು. ಅವರ ಮೇಲಿನ ಗೌರವ ಮತ್ತು ಪ್ರತಿಯೊಬ್ಬ ಓದುಗ ಸ್ನೇಹಿತರಾದ ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಆತ್ಮೀಯರೆಲ್ಲರ ಪ್ರೀತಿಯೇ ಇದುವರೆಗೆ ಬರೆಸಿಕೊಂಡು ಬಂದಿರುವುದು.
ನಿಮ್ಮೆಲ್ಲರ ಜೊತೆಗೆ ನಾನು ಬಹಳಷ್ಟು ಕಲಿತಿದ್ದೇನೆ... ಬೆಳೆದಿದ್ದೇನೆ. ಕ್ರಿಯಾಶೀಲವಾಗುತ್ತಿದ್ದೇನೆ. ಕೆಲವೊಂದು ಪತ್ರಗಳಿಗೆ ಪ್ರೇರಣೆಯಾದವರು, ಸಲಹೆ ನೀಡಿದವರು... ಶಕ್ತಿ ತುಂಬಿದವರು... ನನ್ನ ಆಪ್ತರು. ಜೀವನ ಪ್ರೀತಿಗೆ ಕಾರಣವಾದ ನಿಮಗೆಲ್ಲರಿಗೂ ಅಂತರಾಳದ ನಮನಗಳು. ಆಂತರ್ಯದೊಳಗೆ ನಿಮ್ಮ ಪ್ರೀತಿಯ ಬುತ್ತಿ ಯನ್ನು ಬೆಚ್ಚಗೆ ಬಚ್ಚಿಡುತ್ತಾ ಸ್ವಲ್ಪ ಸಮಯದವರೆಗೆ ವಿರಮಿಸುತ್ತಿದ್ದೇನೆ.
ಕಳೆದ ಬಾರಿಯ ಪತ್ರಕ್ಕೆ ಅಕ್ಕರೆಯ ನುಡಿಗಳನ್ನು ಪೋಣಿಸಿದ ಜೆನಿಶಾ ಪಿರೇರಾ, ಶಿಶಿರ್, ಸಾತ್ವಿಕ್ ಗಣೇಶ್, ಸಿಂಚನಾ ಶೆಟ್ಟಿ, ಶಾರ್ವಿ, ಶ್ರಾವ್ಯ, ಹಿತಾಶ್ರೀ,
ಲಹರಿ ಜಿ ಕೆ, ನಿಭಾ, ಶಾನ್ವಿ ಶೆಟ್ಟಿ, ಧೀರಜ್, ಮೊದಲ ಬಾರಿಗೆ ಉತ್ತರಿಸಿದ ಪುಟಾಣಿ ಮೋಕ್ಷಾ.... ಹಾಗೂ ಓದಿದ, ಓದಿಸಿದ ಬರೆದ.... ಬರೆಸಿದ... ಪ್ರತಿಯೊಬ್ಬ ಕನ್ನಡದ ಮನಸ್ಸುಗಳಿಗೆ ಪ್ರೀತಿಯ ವಂದನೆಗಳು.
ಓದುವುದರ ಅಭ್ಯಾಸ ಹೆಚ್ಚಾಗಲಿ..
ಬರೆಯಿರಿ... ಹೆಚ್ಚು ಹೆಚ್ಚು ಪ್ರಬುದ್ಧತೆ ಮೈಗೂಡಲಿ. ಶುಭವಾಗಲಿ. ಆರೋಗ್ಯಜೋಪಾನ. ಇನ್ನೊಮ್ಮೆಭೇಟಿಯಾಗೋಣ. ನಿಮಗೆಲ್ಲರಿಗೂ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************
ದಿನಾಂಕ 04-07-2021 ರಿಂದ 21-05-2023 ರವರೆಗೆ 'ಮಕ್ಕಳ ಜಗಲಿ' ಡಿಜಿಟಲ್ ಪತ್ರಿಕೆಯಲ್ಲಿ......... "ಅಕ್ಕನ ಪತ್ರ" - ಅಂಕಣದ ಮೂಲಕ ನಿರಂತರ 50 ಸಂಚಿಕೆಗಳನ್ನು ನೀಡಿರುವ ಶಿಕ್ಷಕಿ, ಯುವ ಬರಹಗಾರ್ತಿ ತೇಜಸ್ವಿ ಅಂಬೆಕಲ್ಲು ನಿಮಗೆ ಮಕ್ಕಳ ಜಗಲಿಯ ಬಳಗದ ಪರವಾಗಿ ಪ್ರೀತಿಪೂರ್ವಕ ಧನ್ಯವಾದಗಳು.
ಅಕ್ಕನಪತ್ರವು ಬಹಳಷ್ಟು ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸುವಲ್ಲಿ ಯಶಸ್ವಿಯಾಗಿದೆ ಹಾಗೂ ಮಕ್ಕಳ ಭಾವನಾತ್ಮಕ ಸಂಬಂಧಕ್ಕೆ ಬೆಸುಗೆಯಾಗಿದೆ... ಕೃತಜ್ಞತೆಗಳೊಂದಿಗೆ
.................................... ತಾರಾನಾಥ್ ಕೈರಂಗಳ
ಸಂಪಾದಕರು, ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ
******************************************