ಹಕ್ಕಿ ಹೇಳಿದ ಪಾಠ - ಕಥೆ ರಚನೆ : ಹರ್ಷಿತ್ ಅಶೋಕ ಭಟ್ಟ , 7ನೇ ತರಗತಿ
Monday, May 1, 2023
Edit
ಕಥೆ ರಚನೆ : ಹರ್ಷಿತ್ ಅಶೋಕ ಭಟ್ಟ
7ನೇ ತರಗತಿ
ಡಾ. ಎ ವಿ ಬಾಳಿಗ ಆಂಗ್ಲ ಮಾಧ್ಯಮ ಶಾಲೆ
ಕುಮಟಾ, ಉತ್ತರ ಕನ್ನಡ ಜಿಲ್ಲೆ
ಒಂದು ದಿನ ನಾನು ತೋಟಕ್ಕೆ ಹೋಗುತ್ತಿದ್ದೆ. ಆ ತೋಟದಲ್ಲಿ ಹಲವಾರು ಮಾವಿನ ಮರಗಳಿದ್ದವು. ಆ ಮರದಲ್ಲಿ ಹಲವಾರು ಹಳದಿ ಬಣ್ಣದ ಮಾವಿನ ಹಣ್ಣುಗಳಾಗಿದ್ದವು. ತೋಟವು ಮರ, ಗಿಡಗಳಿಂದ ಹಚ್ಚಹಸಿರಿನಿಂದ ಕೂಡಿತ್ತು. ಮಾವಿನ ಮರದ ಮೇಲೆ ಪಕ್ಷಿಗಳು ಕುಳಿತು ಮಾವಿನ ಹಣ್ಣನ್ನು ತಿನ್ನುತ್ತಿದ್ದವು. ನಾನು ಮಾವಿನ ಹಣ್ಣನ್ನು ತಿನ್ನುತ್ತ ಮುಂದೆ ಹೋಗುತ್ತಿದ್ದೆ. ಹೀಗೆ ಹೋಗುತ್ತಿರುವಾಗ ದಾರಿಯ ಪಕ್ಕದಲ್ಲಿ ಒಂದು ಒಣಗಿದ ಅಡಿಕೆ ಮರವನ್ನು ನೋಡಿದೆ. ಅಡಿಕೆ ಮರದ ಬಳಿ ಹಕ್ಕಿಯು ಹುಲ್ಲುಕಡ್ಡಿಯನ್ನು ಕಚ್ಚಿಕೊಂಡು ಅಡಿಕೆ ಮರದ ಪೊಟರೆಯೊಳಗೆ ಹೋಯಿತು. ನಾನು ಕುತೂಹಲದಿಂದ ಇದು ಯಾವ ಹಕ್ಕಿ ಇರಬಹುದು ಎಂದು ಯೋಚಿಸಿದೆ. ಮನೆಗೆ ಬಂದು ಹಕ್ಕಿಗಳ ಪುಸ್ತಕವನ್ನು ನೋಡಿದಾಗ ನನಗೆ ಮಡಿವಾಳ ಹಕ್ಕಿಯೆಂದು ತಿಳಿಯಿತು. ನಾಲ್ಕು ದಿನ ಕಳೆದ ಬಳಿಕ ನಾನು ಹಕ್ಕಿಯ ಗೂಡನ್ನು ನೋಡಲು ಹೋಗಿದ್ದೆ. ಆ ಮರದಲ್ಲಿ ಹಕ್ಕಿಯ ಸುಂದರವಾದ ಗೂಡನ್ನು ನೋಡುವ ಆಸೆ ನನಗಾಗಿತ್ತು. ಅಡಿಕೆ ಮರದಲ್ಲಿ ಹಕ್ಕಿಯು ಗೂಡನ್ನು ಕಟ್ಟಿತ್ತು. ಆ ಗೂಡಿನಲ್ಲಿ ಹಕ್ಕಿಯು ಕಂದು ಬಣ್ಣದ ನಾಲ್ಕು ಮೊಟ್ಟೆಯನ್ನು ಇಟ್ಟಿತ್ತು. ನಾನು ದಿನ ಬಿಟ್ಟು ದಿನ ಗೂಡನ್ನು ನೋಡಲು ಕುತೂಹಲದಿಂದ ಹೋಗುತ್ತಿದ್ದೆ. ಆಗ ಹಕ್ಕಿಯು ಮೊಟ್ಟೆಗೆ ಕಾವನ್ನು ಕೊಡುತ್ತಿತ್ತು.
ನಾಲ್ಕೈದು ದಿನಗಳ ನಂತರ ಆ ಮೊಟ್ಟೆ ಒಡೆಯಿತು. ಮೊಟ್ಟೆಯಿಂದ ಚಿಕ್ಕ ಚಿಕ್ಕ ಹಕ್ಕಿಯ ಮರಿಯೂ ಹೊರಗೆ ಬಂದಿತ್ತು. ಹಕ್ಕಿಯು ಮರಿಗಳಿಗೆ ಆಹಾರವನ್ನು ನೀಡಲು ಗೂಡಿನ ಒಳಗೆ ಹೊರಗೆ ಹಾರುತ್ತಿತ್ತು. ಹಕ್ಕಿಯು ಸಣ್ಣ ಸಣ್ಣ ಹುಳುಗಳನ್ನು ಕಚ್ಚಿಕೊಂಡು ಬಂದು ಮರಿಗಳಿಗೆ ಗುಟುಕು ನೀಡುತ್ತಿತ್ತು. ಸ್ವಲ್ಪ ದಿನದ ನಂತರ ಹಕ್ಕಿಯ ಗೂಡನ್ನು ನೋಡಲು ನಾನು ತೋಟಕ್ಕೆ ಹೋಗಿದ್ದೆ. ದೂರದಿಂದ ನೋಡಿದಾಗ ಹಕ್ಕಿಯು ಗೂಡಿನಿಂದ ಒಳಗೆ ಹೊರಗೆ ಗಾಬರಿಯಿಂದ ಕೂಗುತ್ತಾ ಹಾರಾಡುತ್ತಿದ್ದವು. ನಾನು ಏನಾಯಿತೆಂದು ನೋಡಲು ಹೋದರೆ... ಅಬ್ಬಾ ಆ ಗೂಡಿನಲ್ಲಿ ಹಾವು ಹಕ್ಕಿಮರಿಯನ್ನು ತಿನ್ನಲು ಬಂದಿತ್ತು. ಹಕ್ಕಿಯು ಗಾಬರಿಗೊಂಡು ತನ್ನ ಮರಿಯನ್ನು ರಕ್ಷಿಸಲು ಕಾಲಿನಿಂದ ಹಾವಿನ ಬಾಲವನ್ನು ಹಿಡಿದು ಅದರ ಚುಂಚಿನಿಂದ ಹಾವಿಗೆ ಚುಚ್ಚಿತು. ಹಾವು ಹೆದರಿಕೆಯಿಂದ ಸಾವಕಾಶವಾಗಿ ಹೋಯಿತು.
ಮರಿ ಹಕ್ಕಿಯು ಹಾರುವಷ್ಟರಲ್ಲಿ ಮತ್ತೆ ಆ ಗೂಡಿಗೆ ಮತ್ತೆ ಹಾವು ಬಂದು ನಾಲ್ಕು ಮರಿಗಳಲ್ಲಿ ಎರಡು ಮರಿಗಳನ್ನು ತಿಂದುಕೊಂಡು ಹೋಯಿತು. ತಾಯಿಪಕ್ಷಿ ತನ್ನ ಮರಿ ಇಲ್ಲದಿರುವುದನ್ನು ನೋಡಿ ಅಡಿಕೆ ಮರದ ಸುತ್ತಲು ಕೂಗುತ್ತ ಹಾರುತ್ತಾ ಇದ್ದಿತ್ತು. ಇದನ್ನು ನೋಡಿ ನನಗೆ ದುಃಖವಾಯಿತು. ತಾಯಿಯನ್ನು ನೋಡಿ ನನಗೆ ನನ್ನ ತಂದೆತಾಯಿ ನಮಗಾಗಿ ಎಷ್ಟು ಕಷ್ಟ ಪಡುತ್ತಾರೆ ಎಂದು ಅರಿವಾಯಿತು.
ನೀತಿ : ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ.
7ನೇ ತರಗತಿ
ಡಾ. ಎ ವಿ ಬಾಳಿಗ ಆಂಗ್ಲ ಮಾಧ್ಯಮ ಶಾಲೆ
ಕುಮಟಾ , ಉತ್ತರ ಕನ್ನಡ ಜಿಲ್ಲೆ
*******************************************