-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 61

ಸ್ಫೂರ್ತಿಯ ಮಾತುಗಳು : ಸಂಚಿಕೆ - 61

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                  
           ನಾನು ಶಾಲೆಗಳಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಅರಿವಿನ ಬಗ್ಗೆ ಮಾತು ಬೆಳೆಸುತ್ತೇನೆ. ಅವರಿಗೆ ಬಹಳ ಚೆನ್ನಾಗಿ ಎಂದರೆ ಗರಿಷ್ಠವಾಗಿ ಅರಿವಿರುವವರ ಬಗ್ಗೆ ತಿಳಿಸಲು ಸೂಚಿಸುತ್ತೇನೆ. ಅನೇಕರನ್ನು ಬಲ್ಲೆವೆಂದು ಅವರು ವಿವರಿಸುತ್ತಾರೆ. ವಿದ್ಯಾರ್ಥಿಗಳು ಹೆಸರಿಸಿದವರ ಕುರಿತಾಗಿ ಅವರ ಇಷ್ಟದ ಬಣ್ಣ, ತಿಂಡಿ, ವ್ಯಕ್ತಿ.. ಮೊದಲಾದುವುಗಳ ಅರಿವಿನ ಪ್ರಮಾಣವನ್ನು ಅವರಲ್ಲಿ ವಿಮರ್ಶಿಸಿದರೆ ವಿದ್ಯಾರ್ಥಿಗಳೆಲ್ಲರೂ ಮೌನವಾಗುತ್ತಾರೆ. ಆಗ ನೇರವಾದ ನನ್ನ ಪ್ರಶ್ನೆ, “ನಿಮ್ಮ ಇಷ್ಟದ ಪುಸ್ತಕ, ಸಿಹಿತಿಂಡಿ.... ಯಾವುದು?” ಎಂಬೀ ರೀತಿಯದಾಗಿರುತ್ತದೆ. ವಿದ್ಯಾರ್ಥಿಗಳು ಈಗ ನಿರುತ್ತರರಾಗುವುದಿಲ್ಲ. ಅವರು ತಮಗಿರುವ ಅರಿವನ್ನು ನಿರರ್ಗಳವಾಗಿ ತೆರೆದಿಡುತ್ತಾರೆ. ಹೌದು ನಮಗೆ ಹೆಚ್ಚು ಅರಿವು ಅಥವಾ ಪರಿಚಿತರು ನಾವೇ ಅಲ್ಲವೇ.
        ವಚನಕಾರ ಅಲ್ಲಮ ಪ್ರಭುಗಳು, ಹಿಂದಣ ಎಷ್ಟು ಪ್ರಳಯವಾಗಿಹುದೋ ನಾನರಿಯೆ, ಮುಂದಣ ಎಷ್ಟು ಪ್ರಳಯವಾಗಲಿದೆಯೋ ನಾನರಿಯೆ, ನನ್ನ ನಾನರಿಯದೊಡೆ ಅದೇ ಮಹಾಪ್ರಳಯವಯ್ಯಾ ಎಂದು ಹೇಳುತ್ತಾರೆ. ಪ್ರಳಯ ಎಂದರೆ ಇಲ್ಲಿ ಸರ್ವನಾಶ ಎಂದೇ ಅರ್ಥ. ನಮಗೆ ನಮ್ಮ ಅರಿವು ಇರದೇ ಇದ್ದರೆ ನಾವು ನಾಶವಾಗುತ್ತೇವೆ ಎಂಬುದೇ ಅಲ್ಲಮರ ವಚನದ ಒಳ ತತ್ವ. ಹನುಮಂತನಿಗೆ ತನ್ನ ಗುಣ ಮತ್ತು ಸಾಮರ್ಥ್ಯದ ಅರಿವಾಗಲು ಬೇರೆಯವರು ಹೇಳಬೇಕಿತ್ತಂತೆ. ರಾವಣನಲ್ಲಿರುವ ದುರ್ಗುಣಗಳನ್ನು ಯಾರು ಹೇಳಿದರೂ ಅವನು ಸುಗುಣನಾಗಲಿಲ್ಲ. ದುರಾಗ್ರಹದಿಂದ ಆತ ನಾಶವಾದ ಎಂಬುದು ಪುರಾಣ. 
        ಉತ್ತಮ ಗುಣಗಳು ದೈವಿಕತೆಯನ್ನುಂಟು ಮಾಡಿ ನಮ್ಮನ್ನು ಬಲಿಷ್ಠಗೊಳಿಸಿದರೆ ದುರ್ಗುಣಗಳು ನಮ್ಮನ್ನು ನಾಶಗೊಳಿಸುತ್ತವೆ. ನಾವು ನಮ್ಮನ್ನು ಅರಿತಾಗ ಮನೆ ಬೆಳಗುವ ದೀಪವಾಗುತ್ತೇವೆಯೇ ಹೊರತು ಮನಗಳನ್ನು ಉರಿಸುವ ಬೆಂಕಿಯಾಗಲಾರೆವು. ನಮ್ಮೊಳಗಿನ ಕೆಡುಕುಗಳನ್ನು ಹೊರತಳ್ಳಲು, ಒಳಿತುಗಳನ್ನು ಸಂಚಯಿಸಲು ನಮ್ಮನ್ನು ನಾವರಿಯಲೇ ಬೇಕು.
ಸಾಮಾನ್ಯವಾಗಿ ತಮ್ಮನ್ನು ಕೀಳಾಗಿಯೇ ಅಂದಾಜಿಸುವ ಮನಸ್ಥಿತಿ ಕೆಲವರಲ್ಲಿದೆ. ಕೆಲವೊಮ್ಮೆ ತಾವೇ ಸರಿ, ತಾವೇ ಮೇಲು ಎಂಬ ಮೇಲರಿಮೆಯೂ ಕೆಲವರಿಗೆ. ಮೇಲರಿಮೆ ಅಥವಾ ಕೀಳರಿಮೆ ಎರಡೂ ಸಲ್ಲದು. ಇವೆರಡರ ನಡುವಿನ ತಾಟಸ್ಥ್ಯ ನೀತಿಯನ್ನು ಅನುಸರಿಸುವುದು ನಮ್ಮ ಮೇಲ್ಮೆಗೆ ಯೋಗ್ಯವಾದ ಸೋಪಾನ. ಅಂತಹ ತಾಟಸ್ಥ್ಯ ನೀತಿ ಯಾವುದು? ತನ್ನನ್ನು ಅರಿಯುತ್ತಾ ಇತರರನ್ನೂ ಅರಿತು ಬಾಳುವುದೇ ತಟಸ್ಥ ಮತ್ತು ಯೋಗ್ಯ ನೀತಿ. ಮೇಲರಿಮೆ ಕೀಳರಿಮೆಗಳನ್ನು ಮೀರಿ ನಿಲ್ಲುವ, ತಾನು ಎಲ್ಲರಂತೆಯೇ, ಎಲ್ಲರೂ ತನ್ನಂತೆಯೇ ಎಂಬ ವಿನಯವು ಬದುಕಿಗೆ ವಿಜಯವನ್ನುಂಟುಮಾಡುತ್ತದೆ.
ಬದುಕಲು ಕಲಿಯಿರಿ ಎಂಬ ಮಾತಿನಲ್ಲಿ ‘ಬದುಕಲು ಬಿಡುವುದೇ ಬದುಕು’ ಎಂಬ ಸಾರವಿದೆ. ನಾವು ಎಲ್ಲರಂತೆ ಬಾಳಬೇಕು, ಎಲ್ಲರೂ ನಮ್ಮಂತೆಯೇ ಬದುಕಬೇಕೆಂಬ ಸಾಮರಸ್ಯದ ಚಿಂತನೆ ಎಲ್ಲರೆದೆಯೊಳಗೆ ಟಿಸಿಲೊಡೆದಾಗ ಬದುಕಿನ ಅರಿವಾದಂತಾಗುತ್ತದೆ. ಈ ಭೂಮಿಯಲ್ಲಿ ಗಾಳಿ, ನೀರು, ಬೆಳಕು, ಸಮಯ, ದೇಹ ಶಕ್ತಿ, ಚಿಂತನಾ ಶಕ್ತಿ ಎಲ್ಲರಿಗೂ ಸಮಾನವಾಗಿದೆ. ನಮ್ಮ ಆರ್ಥಿಕ ಸಂಪತ್ತು, ಸಾಧನೆಗಳು ಮತ್ತು ಕೀರ್ತಿಗಳು ನಮ್ಮ ಗಳಿಕೆಯೇ ಹೊರತು ಉಡುಗೊರೆಯಲ್ಲ. ಹಿರಿಯರಿಂದ ಪಡೆದ ಸಂಪತ್ತೂ ನಮ್ಮದಲ್ಲ, ಅವು ಪಿತ್ರಾರ್ಜಿತ ಮತ್ತು ಮುಂದಿನ ಪೀಳಿಗೆಗೆ ರವಾನಿಸಲಿರುವ ಸಂಪತ್ತೆಂಬ ಅರಿವಿನೊಂದಿಗೆ ನಮ್ಮ ಗಳಿಕೆಯನ್ನೇ ನೆಚ್ಚ ಬೇಕೆಂಬ ಅರಿವೂ ನಮಗಿರಲಿ. “ಪಾಪಕರವಾದ ಗಳಿಕೆ ನಾಶ ಮೂಲ. ಪುಣ್ಯಕರವಾದುದೇ ಪ್ರಗತಿ ಮೂಲ” ಈ ಅರಿವೇ ನಮಗೆ ದಾರಿದೀಪವಾಗಿರಲಿ.... ನಮಸ್ಕಾರ
............ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article