-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 62

ಸ್ಫೂರ್ತಿಯ ಮಾತುಗಳು : ಸಂಚಿಕೆ - 62

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                   
     ಮಿಥ್ಯ ಗ್ರಹಣ ಮತ್ತು ಮಿಥ್ಯ ಸಂಗ್ರಹಣ ಎಂದೊಡನೆ ಗಾಬರಿಯಾಗಬೇಡಿ. ಯಾವುದೇ ಖಗೋಳ ಗ್ರಹಣಗಳ ಬಗ್ಗೆ ಬರೆಯುತ್ತಿಲ್ಲ. ತಪ್ಪು ಗ್ರಹಿಹಿಕೆಯನ್ನೇ ಮಿಥ್ಯ ಗ್ರಹಣ ಎಂದು ಹೇಳುತ್ತೇವೆ. ಇಂತಹ ಹಲವು ತಪ್ಪುಗ್ರಹಿಕೆಗಳು ನಮ್ಮೊಳಗೆ ಸಂಚಯವಾದಾಗ ಅದು ಮಿಥ್ಯ ಸಂಗ್ರಹಣವಾಗುತ್ತದೆ. ಮಿಥ್ಯ ಗ್ರಹಣ ಮನುಜ ಸಹಜ ಗುಣ. ಕಾಲ್ಪನಿಕ ಗ್ರಹಣ ಮಿಥ್ಯವಾಗುವ ಸಂದರ್ಭಗಳು ಅಸಂಖ್ಯ.
      ಯಾರಾದರೂ ನಮ್ಮ ಮನೆಗೆ ಬರುವಾಗ ಮನೆಯವರ ಯೋಚನಾ ಲಹರಿಗಳು ಹಲವು ಕೋನಗಳಲ್ಲಿ ಹರಡಲಾರಂಭಗೊಳ್ಳುತ್ತವೆ. ಆದರೆ ಆ ಯೋಚನೆಗಳಲ್ಲಿ ನಿಜವಾದ ಗ್ರಹಿಕೆ ಬಹುತೇಕ ಇರುವುದೇ ಇಲ್ಲ. ಇವನು, “ಸಾಲ ಪಡೆಯಲು ಬಂದಿರಬಹುದು, ಏನಾದರೂ ನೆರವು ಕೇಳಲು ಬಂದಿರಬಹುದು, ಉತ್ಪಾದನೆಗಳನ್ನು ಮಾರಾಟ ಮಾಡಲು ಬಂದಿರಬಹುದೇ? ನಿಧಿ ಸಂಗ್ರಹದ ಉದ್ದೇಶ ಇರಬಹುದೇ? ಏನಾದರೂ ಸಮಸ್ಯೆ ಪರಿಹಾರದ ಕಾರಣದಿಂದ.....” ಹೀಗೆ ಮನದೊಳಗೋಡುವ ನಾನಾ ಅಮಿತ ಮಿಥ್ಯ ಗ್ರಹಿಕೆಗಳು ಅಂತಿಮಗೊಳ್ಳಲು ಅವನು ಬಾಯಿ ತೆರೆಯುವ ತನಕ ಕಾಯಲೇ ಬೇಕು. ಅವನೊಳಕ್ಕೆ ಇಣುಕಿ ನೋಡುವ ಮಾಯಾ ತಂತ್ರ ನಮಗರಿಯದು. ಈಗ ಅವನು ಹೇಳ ತೊಡಗುತ್ತಾನೆ, “ನಮ್ಮ ಮನೆಯಲ್ಲಿ ಎರಡು ಟಿ.ವಿ.ಗಳಿವೆ. ಎರಡನ್ನೂ ಉಪಯೋಗಿಸುವಂತಹ ವ್ಯವಸ್ಥೆ ನಮ್ಮ ಮನೆಯಲ್ಲಿಲ್ಲ. ಅದನ್ನು ಉಪಯೋಗಿಸದೆ ಎತ್ತಿಟ್ಟರೆ ಹಾಳಾಗಿ ಹೋಗುತ್ತದೆ. ಅದನ್ನು ನೀವು ಹೇಳುವವರಿಗೆ ಕೊಡೋಣ ಎಂದು ಅಂದುಕೊಂಡಿದ್ದೇನೆ. ದಯವಿಟ್ಟು ನಿಮ್ಮ ಅಭಿಪ್ರಾಯ ಕೊಡಿ.” ಈಗ ನಮ್ಮ ಗ್ರಹಿಕೆ ಅಡಿಮೇಲಾದ ಕಾರಣದಿಂದ ಮೈಮೇಲೆ ಬೆವರು ಜಿನುಗಲಾರಂಭವಾಗುತ್ತದೆ. ಇಂತಹ ಕೆಲವಾದರೂ ಮಿಥ್ಯ ಗ್ರಹಣದ ಎಡವಟ್ಟುಗಳು ನಮ್ಮ ಬದುಕಿನಲ್ಲಿ ನಡೆಯುತ್ತಲೇ ಇರುತ್ತವೆ.
      ಹಳೆಯ ಉಡುಪಿನಲ್ಲಿ ಬಂದಾಗ ಉಡುಪಿನ ಆಧಾರದಲ್ಲಿ ನಮ್ಮ ಗ್ರಹಿಕೆ ವ್ಯತಿರಿಕ್ತವಾಗುವುದಿದೆ. ಕಾಲ್ನಡಿಗೆಯಲ್ಲಿ ಬಂದರೆ ನಮ್ಮ ಗ್ರಹಿಕೆ ಈತನಿಗೆ ಏನೋ ದಾರಿದ್ರ್ಯ ಇರಬಹುದೆಂದು ಅವನನ್ನು ಅಣಕಿಸಲಾರಂಭಿಸುತ್ತದೆ. ಅದೇ ಧಾಟಿಯಲ್ಲೇ ನಮ್ಮ ವ್ಯವಹಾರವೂ ಇರುತ್ತದೆ. ಮನೆಯ ಯಾರೋ ಒಬ್ಬರು ಅನಿವಾರ್ಯವಾಗಿ ಅವನೊಡನೆ ಮಾತನಾಡುತ್ತಾರೆ. ಯಾವಾಗ ಈತ ಹೋಗಲಿಲ್ಲ ಎಂದು ಮನದೊಳಗೆ ತವಕಿಸುವುದೂ ಇದೆ. ಮನೆಯಲ್ಲಿ ಉಳಿದವರೆಲ್ಲ ಅವನನ್ನು ನಗಣ್ಯವಾಗಿಯೇ ಕಾಣುವುದಿದೆ. ಅದೇ ನಗಣ್ಯನಾಗಿರುವ ವ್ಯಕ್ತಿಯೊಬ್ಬ ಯಾರದೋ ಟೊಯೋಟಾ ಗಾಡಿಯಲ್ಲಿ ಬಂದು ಮನೆಯಂಗಳಕ್ಕಿಳಿದೊಡನೆ ಆತ ಅಪರಿಚಿತನಾಗಿದ್ದರೂ ಮನೆ ಮಂದಿ ಸ್ವಾಗತಿಸುವ, ಗೌರವಿಸುವ, ಉಪಚರಿಸುವ ವಿಧಾನವೇ ವಿಶೇಷವಾಗಿರುತ್ತದೆ. ಮಿಥ್ಯಗ್ರಹಣ ನಮ್ಮನ್ನೇ ಮಿಥ್ಯಗೊಳಿಸುತ್ತದೆ. 
      ಒಂದು ಸರಕಾರಿ ಶಾಲೆಗೆ ಕುಳ್ಳು ದೇಹದ ಕುರೂಪಿ ಅಧ್ಯಾಪಕರೊಬ್ಬರ ನೇಮಕವಾಗುತ್ತದೆ. ಅವರನ್ನು ನೋಡಿದೊಡನೆಯೇ ಊರವರು ಇಂಥಹವರನ್ನೂ ನೇಮಿಸುವುದೇ? ಇವರು ಮಕ್ಕಳಿಗೆ ಏನು ಕಲಿಸಿಯಾರು? ತರಗತಿಯಲ್ಲಿ ಅಶಿಸ್ತು ತಾಂಡವವಾಡಬಹುದು. ಮಕ್ಕಳು ಈ ಅಧ್ಯಾಪಕರನ್ನು “ಕ್ಯಾರೇ” ಮಾಡಲಿಕ್ಕಿಲ್ಲ ಎಂದು ಪರಸ್ಪರ ಮಾತನಾಡ ತೊಡಗಿದರು. ಆ ದಿನ ತರಗತಿಗೆ ಈ ಅಧ್ಯಾಪಕರ ಮೊದಲ ಪ್ರವೇಶವಾಗುತ್ತದೆ. ಹೆತ್ತವರು ಮಾತಾನಾಡುವುದನ್ನು ಆಲಿಸಿದ್ದ ಮಕ್ಕಳು ಅವರ ಕೆಲಸದಲ್ಲೇ ಲೀನರಾಗಿದ್ದರು. ಎದ್ದು ನಿಲ್ಲಲೂ ಇಲ್ಲ, ಅವರೆಡೆಗೆ ಗಮನ ನೀಡಲೂ ಇಲ್ಲ. ವಿದ್ಯಾರ್ಥಿಗಳು ತನ್ನನ್ನು ಕೀಳಾಗಿ ಗ್ರಹಿಸಿದ್ದಾರೆಂಬುದು ಅಧ್ಯಾಪಕರಿಗೆ ಅರ್ಥವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಅಧ್ಯಾಪಕರು ಛಂಗನೆ ನೆಗೆದು ಮೇಜನ್ನೇರಿ ಕುಳಿತರು. ತೊಡಗೆ ಕೈಯಿಂದ ತಾಳ ಹೊಡೆಯುತ್ತಾ ಪಂಪ ಭಾರತದ ಕೆಲವು ಪದ್ಯಗಳನ್ನು ರಸವತ್ತಾಗಿ ಮತ್ತು ಅರ್ಥವತ್ತಾಗಿ ಹಾಡಿದರು. ಮಕ್ಕಳ ಗಮನ ಅಧ್ಯಾಪಕರ ಮೇಲೆ ನೆಟ್ಟಿತು. ತರಗತಿಯೊಳಗೆ ಸಂಪೂರ್ಣ ಮೌನ. ಪುರಾಣ ಕಥನ ಮುಗಿದೊಡನೆ ಮೇಜಿನಿಂದ ಕೆಳಗೆ ಧುಮುಕಿದರು. ಪಂಜೆಯವರ ಹಾವೇ ಹಾವೊಳು ಹೂವೆ ಎಂಬ ಗೀತೆಯನ್ನು ಇಂಪಾಗಿ ಹಾಡುತ್ತಾ ಅಭಿನಯಿಸಿದರು. ಈ ಹಾಡಿನ ರಚನೆಯ ಕಾಲದಲ್ಲಿದ್ದ ಬ್ರಿಟಿಷರನ್ನು ನಾಗರ ಹಾವಿಗೆ ಹೋಲಿಸಿ, ಬ್ರಿಟಿಷರನ್ನು, “ಈ ದೇಶ ಬಿಟ್ಟು ಪೋ ಪೋ” ಎಂಬ ಭಾವನೆಯ ಹಾಡು ಇದು ಎಂದು ವಿವರಿಸಿದರು. ಅಂದು ಕಲಿಸಲಿದ್ದ ಪಾಠವೂ ಅದುವೇ ಆಗಿತ್ತೆಂಬುದು ವಿಶೇಷ. ಮಕ್ಕಳು ಈ ತನಕ ಇಂತಹ ಉತ್ತಮ ಪಾಠ ನೋಡಿಯೂ ಇರಲಿಲ್ಲ; ಆಲಿಸಿಯೂ ಇರಲಿಲ್ಲ. ಜೀವಮಾನವಿಡೀ ಮರೆಯದಂತಹ ಅಮೋಘ ಪಾಠ ಮಕ್ಕಳಿಗೆ ಅಂದು ದೊರೆಯಿತು. ಒಬ್ಬರನ್ನು ಹೊರನೋಟದಿಂದ ಕೀಳಂದಾಜಿಸುವ ಮಿಥ್ಯಗ್ರಹಣ ಅಥವಾ ಮಿಥ್ಯ ಸಂಗ್ರಹಣ ಖಂಡಿತಾ ಸರಿಯಲ್ಲ ಎಂಬ ನೀತಿಯೊಳಗೆ ಬಾಳೋಣ.
............ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article