ಜೀವನ ಸಂಭ್ರಮ : ಸಂಚಿಕೆ - 84
Sunday, May 7, 2023
Edit
ಜೀವನ ಸಂಭ್ರಮ : ಸಂಚಿಕೆ - 84
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಹಿಂದಿನ ಲೇಖನದಲ್ಲಿ ನಾವು ಪರಿಪೂರ್ಣತೆ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಜಗತ್ತಿನಲ್ಲಿ ಯಾವುದೇ ಸ್ಥಳ, ವಸ್ತು, ವ್ಯಕ್ತಿ ಮತ್ತು ಜೀವಿ ಪರಿಪೂರ್ಣವಲ್ಲ. ಇಲ್ಲಿರುವ ಪ್ರತಿಯೊಂದು ವಸ್ತು, ವ್ಯಕ್ತಿ, ಜೀವಿ ಮತ್ತು ಸ್ಥಳ ಕಾಲದಿಂದ ಪರಿಮಿತ, ದೇಶದಿಂದ ಪರಿವಿತ, ವಸ್ತುವಿನಿಂದ ಪರಿಮಿತ, ಆವಸ್ಥೆಯಿಂದ ಪರಿಮಿತ ಹಾಗೂ ಗುಣದಿಂದ ಪರಿಮಿತವಾಗಿದೆ. ಪರಿಪೂರ್ಣ ವ್ಯಕ್ತಿ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಅದು ಸಾಧ್ಯನೂ ಇಲ್ಲ. ಈಗ ಇಲ್ಲೊಂದು ಹೂವಿದೆ. ಸುಂದರವಾಗಿದೆ. ಪರಿಮಳ ಕೊಡುತ್ತಿದೆ. ಆದರೆ ಬೇಗನೆ ಬಾಡುತ್ತದೆ. ಬಾಡುವುದು ಆ ಹೂವಿನ ದೋಷ. ಈ ದೋಷ ಗುರುತಿಸಿದರೆ ಸಂತೋಷವಾಗುವುದಿಲ್ಲ. ಹಾಗಾಗಿ ದೋಷವನ್ನು ಒಪ್ಪಿಕೊಳ್ಳುವುದೇ ನೀತಿ.
ಒಂದು ಘಟನೆ. ಇಟಲಿ ದೇಶದಲ್ಲಿ ಮೈಕಲ್ ಎಂಜಿಲೋ ಎಂಬ ಶ್ರೇಷ್ಠ ಶಿಲ್ಪಕಾರ, ಕಲಾಕಾರ ಇದ್ದನು. ಆತ ಒಂದು ಸುಂದರ ಚಿತ್ರ ಬರೆದು ಸ್ನೇಹಿತರಿಗೆ ತೋರಿಸಿದನು. ಸ್ನೇಹಿತರು ಅದನ್ನು ನೋಡಿ ಈ ಚಿತ್ರ ಜಗತ್ತಿನಲ್ಲೇ ಶ್ರೇಷ್ಠವಾದದ್ದು, ಇದರಲ್ಲಿ ಒಂದೇ ಒಂದು ದೋಷ ಕೂಡ ಇಲ್ಲ ಅಂದರು. ಆಗ ಮೈಕಲ್ ಹೇಳಿದ, ಈ ಕ್ಷಣ, ಈ ಸಂದರ್ಭದಲ್ಲಿ, ನಿಮ್ಮ ದೃಷ್ಟಿಯಲ್ಲಿ ಇದು ಸುಂದರವಾಗಿದೆ. ನೋಡಿ ಇದನ್ನು ಪರಿಶೀಲನೆಗೆ ಒಳಪಡಿಸುವ ಎಂದನು. ಒಂದು ದೊಡ್ಡ ಚಿತ್ರಕಲಾ ಮೇಳ ಏರ್ಪಡಿಸಿದರು. ಅದರಲ್ಲಿ ಹೆಸರಾಂತ ಚಿತ್ರ ಕಲಾವಿದರ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟರು. ಅದರ ಕೇಂದ್ರದಲ್ಲಿ ಈ ಚಿತ್ರವನ್ನು ಟೇಬಲ್ ಮೇಲೆ ಇಟ್ಟರು. ಆ ಚಿತ್ರದ ಮುಂಭಾಗ ಒಂದು ಪುಸ್ತಕ ಪೆನ್ನು ಇಟ್ಟರು. ಆ ಪುಸ್ತಕದಲ್ಲಿ ಹೀಗೆ ಬರೆಯಲಾಗಿತ್ತು. "ಈ ಚಿತ್ರದಲ್ಲಿ ಏನಾದರೂ ದೋಷ ಕಂಡು ಬಂದರೆ ಈ ಪೆನ್ನಿನಿಂದ ಗುರುತು ಮಾಡಿ". ಬೆಳಗ್ಗೆಯಿಂದ ಜನಸಾಗರವೇ ಚಿತ್ರಕಲೆ ನೋಡಲು ಬಂದರು. ಮೊದಲು ಈ ಚಿತ್ರ ನೋಡಿದಾಗ ಅಬ್ಬ, ಎಷ್ಟು ಸೊಗಸಾಗಿದೆ ಎನ್ನುತ್ತಿದ್ದರು. ನಂತರ ಅದರಲ್ಲಿ ಬರೆದಿದ್ದನ್ನು ಓದಿ, ಗುರುತು ಮಾಡಲು ಶುರು ಮಾಡಿದರು. ಕಣ್ಣು ಸ್ವಲ್ಪ ಹೀಗಿದೆ, ಬೆರಳು ಉದ್ದವಾಗಿದೆ, ಹೀಗೆ ದೋಷಗಳನ್ನು ಗುರುತಿಸುತ್ತಾ ಸಂಜೆ ವೇಳೆಗೆ ಆ ಚಿತ್ರದ ರೂಪವೇ ಇರಲಿಲ್ಲ. ನಂತರ ಸ್ನೇಹಿತರನ್ನು ಕರೆತಂದು ತೋರಿಸಿದ. ಒಳ್ಳೆಯದು ಗುರುತಿಸಿ ಎಂದರೆ ಕಷ್ಟ. ದೋಷ ಗುರುತಿಸಿ ಎಂದರೆ ಜಗತ್ತಿನ ಜನರೆಲ್ಲ ತಾ ಮುಂದು ನಾ ಮುಂದು ಎಂದು ಮುಂದೆ ಬರುತ್ತಾರೆ. ಈ ಜಗತ್ತಿನ ಜನ ಸೂರ್ಯನನ್ನೇ ಬಿಟ್ಟಿಲ್ಲ. ಏನು ಉರಿಯುತ್ತಾನೆ ಎನ್ನುತ್ತಾರೆ. ಯಾರೇ ಬಂದರೂ, ಎಂತವರೇ ಆದರೂ ದೋಷಗಳನ್ನು ಗುರುತಿಸುತ್ತಾರೆ.
ನಾವು ಬಹಳಷ್ಟು ಸಲ ರಂಗೋಲಿ ಸ್ಪರ್ಧೆ ನೋಡಲು ಹೋಗುತ್ತೇವೆ. ನಮಗೆ ರಂಗೋಲಿ ಬರೆಯಲು ಬರುವುದಿಲ್ಲ. ನೋಡಿ ಸಂತೋಷಪಡಲಿ ಎಂದು ಕರೆದಿರುತ್ತಾರೆ. ಸರಿ ತಪ್ಪು ಗುರುತಿಸುವ ತೀರ್ಪುಗಾರರು ಬೇರೆ ಇರುತ್ತಾರೆ. ನಾವು ನೋಡಿ ಸಂತೋಷ ಪಡುವುದನ್ನು ಬಿಟ್ಟು, ಇಲ್ಲಿ ಈ ಬಣ್ಣ ಸರಿ ಇಲ್ಲ. ಇಲ್ಲಿ ಇದು ಚಿಕ್ಕದಾಯಿತು. ಇದು ಬಹಳ ದೊಡ್ಡದಾಯಿತು ಎಂದು ದೋಷ ಗುರುತಿಸಿದರೆ, ಸಂತೋಷವಾಗುವುದು ಹೇಗೆ..? ಕೆಲವರು ಮನೆಯನ್ನು ಹೊಸದಾಗಿ ನಿರ್ಮಿಸಿ, ಗೃಹಪ್ರವೇಶಕ್ಕೆ ಕರೆದಿರುತ್ತಾರೆ. ನಾವು ಆ ಮನೆಯನ್ನು ನೋಡಿ ಸಂತೋಷ ಪಡಲಿ ಎನ್ನುವುದು ಅವರ ಆಸೆ. ಆದರೆ ನಾವು ಹೋಗಿ ಸಂತೋಷಪಡುವುದನ್ನು ಬಿಟ್ಟು ಈ ಕೋಣೆ ಚಿಕ್ಕದು, ಕಿಟಕಿ ಸರಿ ಇಲ್ಲ, ಬಾಗಿಲು ಈ ದಿಕ್ಕಿನಲ್ಲಿ ಬರಬಾರದು. ಅಡುಗೆಮನೆ ಇಲ್ಲಿ ಇರಬಾರದು ಎಂದು ದೋಷ ಗುರುತಿಸಿದರೆ, ಸಂತೋಷ ಹೇಗಾಗುತ್ತದೆ...? ಅವರು ಕರೆದಿರುವುದು ಸಂತೋಷಪಡಲಿ ಎಂದು. ದೋಷ ಗುರುತಿಸಲು ಅಲ್ಲ ಅನ್ನುವ ತಿಳುವಳಿಕೆ ಬರುವುದು ಯಾವಾಗ...? ದೋಷ ಗುರ್ತಿಸು ಅಥವಾ ತಿದ್ದು ಎಂದು ಕರೆದವರು ಯಾರು...? ಇದನ್ನು ಕೇಳಿದ ಮನೆ ಮಾಲೀಕನಿಗೆ ಸಂತೋಷವಾಗುವುದಾದರೂ ಹೇಗೆ...?
ಜಗತ್ತನ್ನು, ವಸ್ತುವನ್ನು ನೋಡುವುದು ಒಂದು ಕಲೆ. ಬಹಳ ಹತ್ತಿರದಿಂದ ನೋಡಿದರೆ ಸಂತೋಷ ಕೊಡುವುದಿಲ್ಲ. ಒಂದು ಅಂತರದಿಂದ ನೋಡಿದರೆ ಬಹಳ ಸುಂದರವಾಗಿರುತ್ತದೆ. ದೂರದಿಂದ ನೋಡಿದರೆ ಸಂತೋಷ ಕೊಡುತ್ತದೆ. ಪ್ರತಿಯೊಂದನ್ನು ಸೂಕ್ಷ್ಮದರ್ಶಕದಿಂದ ನೋಡಿದರೆ ಸೌಂದರ್ಯ ಕಾಣುವುದಿಲ್ಲ. ಜಗತ್ತು ಇರುವುದು ಹೀಗೆ. ಪ್ರತಿಯೊಂದರಲ್ಲೂ ದೋಷ ಇದ್ದೇ ಇರುತ್ತದೆ. "ನಾವು ಜಗತ್ತಿಗೆ ಬಂದಿರುವುದು ಜಗತ್ತನ್ನು ತಿದ್ದಲು ಅಲ್ಲ, ತಿದ್ದಲಾರದ ಜಗತ್ತಿನಲ್ಲಿ ಸಂತೋಷವಾಗಿ ಬಾಳುವುದಕ್ಕೆ ಬಂದವರು ಎನ್ನುವ ತಿಳುವಳಿಕೆ ಬರಲಿ". ಯಾರನ್ನು ತಿದ್ದುವುದು..? ಸರಿ ಕಾಣಿಸದಿದ್ದರೆ ಹೇಳೋದು. ತಿದ್ದಿಕೊಳ್ಳದಿದ್ದರೆ ಇದು ಹೀಗೆ ಇರೋದು ಎಂದು ಒಪ್ಪಿಕೊಂಡು, ಸುಮ್ಮನೆ ಇದ್ದು ಬಿಡುವುದು.
ಅದಕ್ಕೆ ಬಸವಣ್ಣ ಹೇಳಿದ್ದು......
ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆ ಮನೆಯ ದುಃಖಕ್ಕೆ ಅಳುವವರ ಕಂಡು
ಮೆಚ್ಚ ನಮ್ಮ ಕೂಡಲಸಂಗಮದೇವ.
ನಾವು ಇನ್ನೊಬ್ಬರ ದೋಷ ಗುರುತಿಸಿದರೆ, ಅವರು ನಮ್ಮ ದೋಷ ಗುರುತಿಸುತ್ತಾರೆ. ದೋಷವೇ ಇಲ್ಲದ ವ್ಯಕ್ತಿ ಜಗತ್ತಿನಲ್ಲಿ ಇಲ್ಲವೆಂದಾಗ, ದೋಷಕ್ಕೆ ಮಹತ್ವ ನೀಡಬಾರದು. ಒಳ್ಳೆಯದನ್ನು ಗುರುತಿಸಿದರೆ ಸಂತೋಷವಾಗುತ್ತದೆ. ದೋಷಗಳನ್ನು ಗುರುತಿಸಿದರೆ ದುಃಖವಾಗುತ್ತದೆ.
ನಮ್ಮ ಹಿರಿಯರು ಹೇಳಿದ್ದು ಜೀವನಕ್ಕೆ ಭೂಷಣ ಯಾವುದು...? ನಮ್ಮ ದೇಹಕ್ಕೆ ಆರೋಗ್ಯಭೂಷಣ. ಆರೋಗ್ಯ ಹೊಂದಿದ್ದರೆ ಸಾಲದು ಗುಣ ಬೇಕು. ಆರೋಗ್ಯ, ಗುಣ ಇದ್ದು ಸುಳ್ಳು ಹೇಳುತ್ತಿದ್ದರೆ ಏನು ಪ್ರಯೋಜನ..?ಆರೋಗ್ಯ ಗುಣದ ಜೊತೆಗೆ ತಿಳುವಳಿಕೆ ಜ್ಞಾನ ಇದ್ದರೆ ಭೂಷಣ. ಜ್ಞಾನ ಇದ್ದು ಬರಿ ದೋಷ ಗುರುತಿಸಿ ಬೈಯುತ್ತಿದ್ದರೆ ಏನು ಪ್ರಯೋಜನ..? ಆರೋಗ್ಯ, ಗುಣ, ಜ್ಞಾನದ ಜೊತೆಗೆ ದೋಷ ಕಂಡು ಬಂದಾಗ ಕ್ಷಮಿಸುವ ಗುಣ ಇದ್ದರೆ, ಅದೇ ಭೂಷಣ. ನಮ್ಮ ಜೀವನದ ಭೂಷಣ ಆರೋಗ್ಯ, ಗುಣ ಮತ್ತು ಕ್ಷಮೆ ಅಲ್ಲವೇ ಮಕ್ಕಳೇ....?
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************