ಹಕ್ಕಿ ಕಥೆ : ಸಂಚಿಕೆ - 98
Tuesday, May 9, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ನಮ್ಮ ಶಾಲೆಯ ಹಿಂದೆ ತೆಂಗಿನ ಮರಗಳ ತೋಟ. ಶಾಲೆಯ ಸಭಾಂಗಣದ ಕಿಟಕಿಯಿಂದ ಆ ತೋಟ ಬಹಳ ಸೊಗಸಾಗಿ ಕಾಣುತ್ತದೆ. ಆ ತೋಟದ ಅಂಚಿನಲ್ಲೊಂದು ಗುಡ್ಡ. ಆ ಗುಡ್ಡದಲ್ಲಿ ಸಹಜವಾಗಿ ಬೆಳೆದ ಚಂದದ ಕಾಡು. ಆ ಕಾಡಿನಿಂದ ಮಂಗ, ಕೆಂಜಳಿಲು ನಮ್ಮ ತೆಂಗಿನ ಮರಗಳು ಮತ್ತು ಹಣ್ಣಿನ ಮರಗಳಿಗೆ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಒಂದು ದಿನ ಮಕ್ಕಳಿಗೆ ತರಗತಿ ಮಾಡಿ ಬರೆಯಲು ಕೊಟ್ಟಿದ್ದೆ. ಮಕ್ಕಳು ಬರೆಯುತ್ತಿದ್ದಾಗ ಗಾಢ ಮೌನ ಆವರಿಸಿತ್ತು. ತೆಂಗಿನ ತೋಟದ ಅಂಚಿನಿಂದ ಟ್ರೀಕ್ ಪೀಕ್ ಎಂಬ ಕೂಗು ಕೇಳಿಸಿತು. ಬೆಳಗ್ಗಿನ ತರಗತಿ ಮುಗಿಯುವ ವರೆಗೂ ಆ ಕೂಗು ಆಗಾಗ ಕೇಳುತ್ತಿತ್ತು. ಹಕ್ಕಿಯ ಕೂಗು ಆಗಾಗ ಕೇಳಿದರೂ ಹಕ್ಕಿ ಕಾಣುತ್ತಿರಲಿಲ್ಲ. ಕೇವಲ ಒಂದಲ್ಲ ಎರಡು ಅಥವಾ ಮೂರು ಹಕ್ಕಿಗಳು ಇರುವುದು ಕೂಗಿನಿಂದ ಸ್ಪಷ್ಟವಾಗಿ ತಿಳಿಯುತ್ತಿತ್ತು. ಇದ್ಯಾವ ಹಕ್ಕಿ ಇರಬಹುದು ಎಂಬ ಕುತೂಹಲ ನನ್ನನ್ನು ಕಾಡುತ್ತಿತ್ತು.
ಮರುದಿನವೂ ಮತ್ತೆ ಅದೇ ಸದ್ದು ತೆಂಗಿನ ತೋಟದ ಪಕ್ಕದ ಕಾಡಿನಿಂದ ಕೇಳುತ್ತಿತ್ತು. ಅದು ಕುಂಟಾಲ ಹಣ್ಣು ಎಂಬ ಒಂದು ಜಾತಿಯ ಕಾಡುನೇರಳೆ ಹಣ್ಣುಗಳು ಹೆಚ್ಚಾಗಿರುತ್ತಿದ್ದ ಕಾಲ. ಕುಂಟಾಲ ಮರಗಳ ಕಡೆಯಿಂದಲೇ ಈ ಟ್ರೀಕ್ ಪೀಕ್ ಸದ್ದು ಆಗಾಗ ಕೇಳುತ್ತಿತ್ತು. ಇದು ಯಾವ ಹಕ್ಕಿ ನೋಡಿಯೇ ಬಿಡಬೇಕು ಎಂದು ಒಂದು ದಿನ ಕ್ಯಾಮರಾ ಹಾಗೂ ಬೈನಾಕುಲರ್ ಹಿಡಿದುಕೊಂಡು ಬಂದಿದ್ದೆ. ತೋಟದಲ್ಲಿ ಬಿದ್ದ ತೆಂಗಿನಕಾಯಿಗಳನ್ನು ಹೆಕ್ಕಲು ಮಕ್ಕಳು ತೋಟಕ್ಕೆ ಹೊರಟಿದ್ದರು. ನಾನೂ ಅವರ ಜೊತೆ ಹೋದೆ. ಮತ್ತೆ ಅದೇ ಟ್ರೀಕ್ ಪೀಕ್ ಕೂಗು ಕೇಳಿಸಿತು. ಮಕ್ಕಳ ಕಣ್ಣು ಬಹಳ ಚುರುಕು. ಅಗೋ ಅಲ್ಲಿ ನೋಡಿ ಸರ್. ಮೊನ್ನೆಯಿಂದ ನಾವು ಕೇಳುತ್ತಿರುವ ಸದ್ದು ಅದೇ ಹಕ್ಕಿಯದ್ದು ಇರಬೇಕು ಎಂದು ಆ ಕಡೆ ಕೈಮಾಡಿ ತೋರಿಸಿದ. ಅವನು ಕೈ ಮಾಡಿದ್ದೇ ತಡ ಹಕ್ಕಿ ಅಲ್ಲಿಂದ ಹಾರಿ ಪೊದೆಗಳ ನಡುವೆ ಅಡಗಿಕೊಂಡಿತು. ಬೈನಾಕುಲರ್ ನಿಂದ ನೋಡಿದಾಗ ಅಸ್ಪಷ್ಟವಾಗಿ ಹಕ್ಕಿಯೊಂದು ಕಾಣಿಸಿತು. ಹಸುರುಮಿಶ್ರಿತ ಹಳದಿ ಬಣ್ಣದ ಶರೀರ. ಪಿಕಳಾರ ಹಕ್ಕಿಯ ಗಾತ್ರ, ತಲೆ ಮತ್ತು ಮುಖದ ಬಾಗದಲ್ಲಿ ಬೂದು ಬಣ್ಣ, ಬಿಳೀ ಬಣ್ಣದ ಕಣ್ಣಿನ ನಡುವೆ ಪುಟಾಣಿ ಕಪ್ಪು ಚುಕ್ಕೆ.
ಹಾಗೂ ಹೀಗೂ ಕಷ್ಟಪಟ್ಟು ಹಕ್ಕಿ ಸ್ವಲ್ಪ ತೆರೆದ ಜಾಗಕ್ಕೆ ಬರುವುದನ್ನೇ ಕಾದು ಒಂದು ಪೋಟೋ ತೆಗೆದೆ. ತೆಗೆದ ಫೋಟೋವನ್ನು ಪುಸ್ತಕದಲ್ಲಿ ನೋಡಿ ಹುಡುಕಿದಾಗ ತಿಳಿದದ್ದು ಇದೂ ಪಿಕಳಾರ ಜಾತಿಗೆ ಸೇರಿದ ಹಕ್ಕಿ. ಆದರೂ ಸಂಶಯದಿಂದ ಅದರ ಚಿತ್ರವನ್ನು ಇತರ ಪಕ್ಷಿಮಿತ್ರರ ಗುಂಪಿನಲ್ಲಿ ಹಾಕಿ ಇದು ಬೂದುತಲೆ ಪಿಕಳಾರ ಹೌದೇ ಎಂದು ಕೇಳಿದೆ. ಎಲ್ಲರೂ ಹೌದು ಎಂದು ಕೈ ಎತ್ತಿದರು. ಈ ಬೂದುತಲೆ ಪಿಕಳಾರ ಕೇವಲ ಭಾರತದ ಪಶ್ಚಿಮ ಘಟ್ಟ ಪ್ರದೇಶದ ಆಸುಪಾಸಿನಲ್ಲಿ ಮಾತ್ರ ಕಾಣಸಿಗುವ ಪಿಕಳಾರ ಜಾತಿಯ ಪ್ರಬೇಧ. ಇವುಗಳು ಕಾಡುಪ್ರದೇಶದಲ್ಲಿ ಮಾತ್ರ ವಾಸಿಸುತ್ತವೆ. ಸ್ವಚ್ಛಂದವಾಗಿ ಬೆಳೆದ ಕಾಡುಗಳಲ್ಲಿ ಕಾಡುಹಣ್ಣಿನ ಮರಗಳಲ್ಲಿ ಇದನ್ನು ಇತರೆ ಹಕ್ಕಿಗಳ ಜೊತೆಗೆ ನೋಡಬಹುದು. ಮಾರ್ಚ್ ನಿಂದ ಜುಲೈ ತಿಂಗಳ ನಡುವೆ ಅತೀಹೆಚ್ಚು ಕಾಡುಹಣ್ಣುಗಳು ಸಿಗುವ ಕಾಲದಲ್ಲೇ ಇವುಗಳು ಸಂತಾನೋತ್ಪತ್ತಿ ಮಾಡುತ್ತವೆ. ನಿನ್ನೆ ಏನೋ ಕೆಲಸಕ್ಕಾಗಿ ಶಾಲೆ ಕಡೆ ಹೋಗಿದ್ದೆ. ಕಾಡಿನ ಕಡೆಯಿಂದ ಟ್ರೀಕ್ ಪೀಕ್ ಶಬ್ದ ಕೇಳುತ್ತಿತ್ತು. ನಿಮ್ಮ ಮನೆಯ ಪಕ್ಕದ ಕಾಡಲ್ಲೂ ಈ ಶಬ್ದ ಕೇಳುತ್ತದೆಯೇ ?
ಇಂಗ್ಲೀಷ್ ಹೆಸರು: Grey-headed Bulbul
ವೈಜ್ಷಾನಿಕ ಹೆಸರು: Pycnontus priocephalus
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************