-->
ಓ ಮುದ್ದು ಮನಸೇ ...…...! ಸಂಚಿಕೆ - 31

ಓ ಮುದ್ದು ಮನಸೇ ...…...! ಸಂಚಿಕೆ - 31

ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190

    ಆನ್ ಲೈನ್ ತರಗತಿಗಳ ಮಾಯಾಲೋಕದಲ್ಲಿ ಮಿಂದೇಳುತ್ತಿರುವ ನಮ್ಮ ಮುದ್ದು ಮಕ್ಕಳ ಮುಗ್ಧ ಮನಸ್ಸಿನ ಕಥೆ ಹೇಳುತ್ತೇನೆ ಕೇಳಿ. ಇದು ಕಥೆಯೋ ವ್ಯಥೆಯೋ ಗೊತ್ತಿಲ್ಲ, ಗೊತ್ತಿದ್ದರೂ ಹೇಳಲಾಗದ ಸತ್ಯ, ಮಿಥ್ಯ ಜಗತ್ತಿನ ಖತರ್ನಾಕ್ ಘಟನೆಯಿದು.
     ಆಫೀಸ್‍ನ ಬಾಗಿಲ ಬಳಿನಿಂತು ಅತ್ತಿತ್ತ ನೊಡುತ್ತ, ಭಯ ಮತ್ತು ಗಾಬರಿಗಳನ್ನು ತುಂಬಿದ್ದ ಕೆಂಪು ಕಂಗಳ ಹುಡುಗಿಯನ್ನು ಕಂಡವನೇ ಅಂದೆ, "ಐಯಮ್ ಸಾರಿ ಫಾರ್ ಬೀಇಂಗ್ ಲೇಟ್" . "ಇಟೀಸ್ ಓಕೆ ಸರ್, ಐ ವಾಂಟೆಡ್ ಟು ಟಾಕ್ ಟು ಯು" ಅಂದವಳೇ ನನ್ನನ್ನು ಹಿಂಬಾಲಿಸಿ ಆಫೀಸಿನೊಳಗೆ ಬಂದಳು. ನಿಂತೇ ಇದ್ದ ಹುಡುಗಿಯನ್ನು ಕಂಡು, "ಪ್ಲೀಸ್ ಟೇಕ್ ಯುವರ್ ಸೀಟ್" ಅಂದೆ. "ಥ್ಯಾಂಕ್ಯೂ ಸರ್" ಅನ್ನುತ್ತಾ ತನ್ನ ಎರಡೂ ಕೈಗಳಿಂದ ಕಣ್ಣುಗಳನ್ನು ಒರೆಸಿಕೊಂಡು ಕುಳಿತುಕೊಂಡವಳೇ, "ಸರ್ ನಾನು ನಿಮ್ಮಲ್ಲಿ ಹೇಳೋದನ್ನು ಯಾರಲ್ಲಿಯೂ ಹೇಳೋದಿಲ್ಲ ತಾನೇ?" ಅಂದಳು. ಅವಳಂತರಾಳದ ಗೊಂದಲ ಅರಿತ ನಾನು, "ನಿನಗೆ ನನ್ನಲ್ಲಿ ನಂಬಿಕೆಯಿಲ್ಲವೇ?" ಅಂದೆ. "ನಂಬಿಕೆಯಿದೆ ಅದಕ್ಕೆ ಯಾರಿಗೂ ಹೇಳದ ನನ್ನ ಸಮಸ್ಯೆಯನ್ನು ನಿಮ್ಮಲ್ಲಿ ಹೇಳಬೇಕೆನಿಸಿತು". ಮುಖದಲ್ಲೊಂದು ಸಣ್ಣ ನಗು ಬೀರಿ "ಥ್ಯಾಂಕ್ಯೂ ಫಾರ್ ಟ್ರಸ್ಟಿಂಗ್ ಮೀ, ನಿನ್ನ ನೇರ ನುಡಿಯ ಮಾತುಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ನಾನು ನಿನ್ನ ಜೊತೆಗಿದ್ದೇನೆ ಭಯ ಬೇಡ ಹೇಳು" ಎಂದು ಹುರಿದುಂಬಿಸಿದೆ. "ಥ್ಯಾಂಕ್ಯೂ ಸರ್, ಇವತ್ತು ಮೊಬೈಲ್ ನ ಕುರಿತು ನೀವು ತರಗತಿಯಲ್ಲಿ ನೀಡಿದ ಮಾಹಿತಿ ನನ್ನಲ್ಲಿ ಭಯ ಉಂಟು ಮಾಡಿದೆ. ಏನಾಗಿ ಬಿಡುತ್ತದೆಯೋ ಎನ್ನುವ ಗೊಂದಲ. ಐ ನೀಡ್ ಯುವರ್ ಹೆಲ್ಪ್ ಸರ್" ಅಂದಳು. "ವೈ ನಾಟ್" ಅಂದವನೇ ಕುತೂಹಲ ಭರಿತನಾಗಿ ಮಾತುಗಳ ನಿರೀಕ್ಷೆಯಲ್ಲಿ ಅವಳ ಕಣ್ಣುಗಳನ್ನು ನೋಡಿದೆ.
      ತಡಮಾಡದ ಹುಡುಗಿ, ಸರ್ ಎರಡು ತಿಂಗಳ ಹಿಂದೆ ಶಾಲೆಗೆ ರಜೆಯಿದ್ದ ಕಾರಣ ಮೈಸೂರಿನ ಹಾಸ್ಟೇಲ್ ಒಂದರಲ್ಲಿ ಇದ್ದು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ತಮ್ಮ ಊರಿಗೆ ಬಂದಿದ್ದ. ಒಮ್ಮೆ ಮನೆಯಲ್ಲಿದ್ದಾಗ ನಾನು ನಮ್ಮ ರೂಮಿಗೆ ಹೋದೆ. ಬೆಡ್ ಮೇಲೆ ಆನ್ ಆಗಿಯೇ ಬಿದ್ದಿದ್ದ ಅವನ ಮೊಬೈಲ್ ಫೋನ್ ನೋಡಿದೆ. ಅಫ್ ಮಾಡೋಣವೆಂದು ಕೈಗೆತ್ತಿಕೊಂಡಾಗ ಅದರಲ್ಲಿ ಪ್ಲೇ ಆಗುತ್ತಿದ್ದ ಅಶ್ಲೀಲ ವಿಡಿಯೋವೊಂದು ಕಣ್ಣಿಗೆ ಬಿತ್ತು. ತಕ್ಷಣ ಮೊಬೈಲ್ ಅನ್ನು ಆಫ್ ಮಾಡಿ ಅವನಿಗಾಗಿ ಕಾದು ಕುಳಿತೆ. ನಾವಿಬ್ಬರು ಮಲಗುವ ಕೋಣೆ ಒಂದೇ ಆಗಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಬಂದ ಅವನು ನನ್ನ ಪಕ್ಕದಲ್ಲೇ ಮಲಗಿದ. ಅವನು ಸ್ವಲ್ಪ ಒರಟ, ಯಾರ ಮಾತನ್ನೂ ಕೇಳದ ಹಟಮಾರಿ, ಹಾಗಾಗಿ ನನಗೆ ಅವನನ್ನು ಕಂಡರೆ ಭಯ. ಏನು ಕೇಳಬೇಕೆಂದು ತೋಚದ ನಾನು ಸುಮ್ಮನೆ ಕುಳಿತಿದ್ದೆ. ಸ್ವಲ್ಪ ಹೊತ್ತಿನ ನಂತರ ನನ್ನ ಬಳಿಬಂದು ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಅವನ ಕೆಟ್ಟ ವರ್ತನೆಯನ್ನು ಕಂಡು ಕೋಪ ಬಂದರೂ ಅವನ ಮೇಲೆ ನನಗಿದ್ದ ಭಯ ನನ್ನನ್ನು ಮತ್ತಷ್ಟು ಗೊಂದಲಕ್ಕೆ ನೂಕಿತು. ಅವನನ್ನು ದೂರ ತಳ್ಳಿ ಕೆನ್ನೆಯ ಮೇಲೊಂದು ಏಟು ಕೊಟ್ಟೆ. ಅಪ್ಪ ಅಮ್ಮ ಹೆಚ್ಚಾಗಿ ಸಪೋರ್ಟ್ ಮಾಡೋದೆ ಅವನಿಗೆ. ನಾನು ಏನೇ ಅವನ ತಪ್ಪುಗಳನ್ನು ಮುಂದಿಟ್ಟರೂ ‘ಅವನು ನಿನಗಿಂತ ಚಿಕ್ಕವನು' ಎನ್ನುವ ಅವರ ಸಲುಗೆಯೇ ಈ ಕೆಟ್ಟ ವರ್ತನೆಗೆ ಪ್ರೇರಣೆಯೇನೋ? ಕೋಪಗೊಂಡ ಅವನು ನನ್ನ ಕೆನ್ನೆಗೊಂದು ಬಾರಿಸಿದ, "ಯಾರಿಗಾದ್ರೂ ಹೇಳಿದ್ರೆ ನಿನ್ನ ಪರ್ಸನಲ್ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಬಿಡುತ್ತೇನೆ" ಎಂದು ರೇಗಿದವನೇ ಮೇಲೆದ್ದು ಮೊಬೈಲ್ ಎತ್ತಿಕೊಂಡು ಹೊರನಡೆದ. ಯಾವ ಪರ್ಸನೆಲ್ ಫೋಟೊ? ನನಗೇ ಗೊತ್ತಿಲ್ಲದೆ ಯಾವಾಗ ತೆಗೆದುಕೊಂಡ? ಒಂದೂ ಅರ್ಥವಾಗದೆ ಗೊಂದಲಕ್ಕೆ ಬಿದ್ದೆ. ಯಾರಲ್ಲಿಯೂ ಹೇಳಲಾಗದೆ, ಅವನನ್ನು ಸಹಿಸಿಕೊಳ್ಳಲೂ ಆಗದೆ ನಾನು ಪಡುತ್ತಿರುವ ಪಾಡು ನನಗೇ ಗೊತ್ತು. ನಾನಿದನ್ನು ನಿಮ್ಮಲ್ಲಿ ಹೇಳಿದ ವಿಚಾರ ಅವನಿಗೇನಾದರೂ ಗೊತ್ತಾದರೆ ನನ್ನ ಕಥೆ ಅಷ್ಟೇ ಅಂದಳು. ಅವಳ ಮುಖ ಬಾಡಿತು, ಕಣ್ಣುಗಳು ಒದ್ದೆಯಾದವು. ಹೌದು ಕಠಿಣವಾದರೂ ಒಪ್ಪಿಕೊಳ್ಳಲೇಬೇಕಾದ ಸತ್ಯವಿದು. ತಾರುಣ್ಯವೇ ಹಾಗೆ ಸರಿತಪ್ಪುಗಳ ತುಲನೆಗೆ ತಲೆಯೊಡ್ಡುವ ಮುನ್ನ ಸಂದರ್ಭದ ಸುಳಿಯಲ್ಲಿ ಮಿಂದೇಳುವ ವಯಸ್ಸು. ಅವಳೂ ಅಷ್ಟೇ ಗೊತ್ತಿದ್ದೋ ಗೊತ್ತಿಲ್ಲದೆಯೋ ತನ್ನದೇ ತಮ್ಮನ ಅಸಹಜ ವರ್ತನೆಗಳ ಸುಳಿಗೆ ಒಗ್ಗಿಕೊಂಡು ಬಿಟ್ಟಿದ್ದಾಳೆ. ಇದೆಲ್ಲದರ ಹಿಂದಿನ ಕಾರಣವೇನು ಗೊತ್ತೇ? ತಮ್ಮನ ಬರ್ತಡೆಗೆ ಅಪ್ಪ ಕೊಡಿಸಿದ್ದ ಮಾಯಾ ಪೆಟ್ಟಿಗೆ 'ಮೊಬೈಲ್ ಫೋನ್!’
      ಆಪ್ತಸಮಾಲೋಚನೆಯ ನನ್ನ ಪ್ರಾಮಾಣಿಕ ಪ್ರಯತ್ನಗಳು ಇದೊಂದು ಸಮಸ್ಯೆಗೆ ಮುಕ್ತಿನೀಡಿವೆಯಾದರೂ, ಅರಿವಿಗೆ ಬಾರದ, ಬಂದರೂ ಹೇಳಿಕೊಳ್ಳಲಾಗದ ಅದೆಷ್ಟೋ ಮುಗ್ಧ ಮಕ್ಕಳ ಮಾನಸಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಾಲುಗಳು ಹಲವಾರು ತಂದೆ ತಾಯಂದಿರ ಕಣ್ಣಂಚಿನ ಹನಿಯ ಕಹಾನಿಯಾಗಿಯೇ ಉಳಿದಿವೆ. ಮಾನವ ಲೋಕದ ಮಾಯಾ ಪೆಟ್ಟಿಗೆ ಈ ಮೊಬೈಲ್ ಫೋನ್ ಸೃಷ್ಠಿಸುತ್ತಿರುವ ಸಮಸ್ಯೆಗಳಲ್ಲಿ ಭವಿಷ್ಯತ್ತಿನ ಪೀಳಿಗೆಯ ಮೇಲೆ ಉಂಟಾಗುತ್ತಿರುವ ಅತೀ ಸೂಕ್ಷ್ಮ ಪರಿಣಾಮಗಳಿಗೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಅಭಿವೃದ್ಧಿಯ ಧಾವಂತದಲ್ಲಿ ಮುನ್ನುಗ್ಗುತ್ತಿರುವ, ಮೌಲ್ಯಾಧಾರಿತ ಸಮಾಜ ವ್ಯವಸ್ಥೆಯನ್ನು ಮೈದುಂಬಿಕೊಂಡಿರುವ, ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ತನ್ನುತ್ತುಂಗ ಕಾಣುವ, ಅತೀ ದೊಡ್ಡ ಯುವ ಸಮುದಾಯವನ್ನು ತನ್ನ ಹೆಗಲಿಗೆ ಕಟ್ಟಿಕೊಂಡು ಧಾವಂತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಇದೊಂದು ಭವಿಷ್ಯತ್ತಿನ ಸವಾಲಲ್ಲದೆ ಇನ್ನೇನು..?
     ಬಹುದಿನಗಳ ಬೇಡಿಕೆಯಿತ್ತಾದರೂ ಅನಿರೀಕ್ಷಿತವಾಗಿ ಬಂದೊದಗಿದ ಅದೃಷ್ಠದಂತೆ ಕೂಲಿ ಮಾಡಿ ಕೂಡಿಟ್ಟ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಆದ್ರೂ ಪರ್ವಾಗಿಲ್ಲ ಒಂದೆರೆಡು ಸಾವಿರಕ್ಕೆ ಸಿಕ್ಕರೆ ಸಾಕು ಎನ್ನುತ್ತ ಯಾಂಡ್ರಾಯ್ಡ್ ಮೊಬೈಲ್ ಒಂದನ್ನು ತಂದ ಅಪ್ಪ, ಮಕ್ಕಳ ಕೈಗಿಟ್ಟಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೋವಿಡ್ ಲಾಕ್‍ಡೌನಿನ ಕಠಿಣ ಸಂದರ್ಭದಲ್ಲೂ ರಜೆ ಸಿಕ್ಕ ಖುಷಿಯಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ಆಟೋಟಗಳಲ್ಲಿ ಮುಳುಗಿದ್ದ ಮಕ್ಕಳು ಆನ್‍ಲೈನ್ ತರಗತಿಗಾಗಿ ಕೈಗೆ ಮೊಬೈಲ್ ಸಿಕ್ಕಾಗಿಂದ ಓದಿನಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ! ಪ್ರತಿದಿನ ಓದಲು ಅಮ್ಮನ ಬೈಗುಳ ತಿನ್ನುತ್ತಿದ್ದ ಮಕ್ಕಳು ಅಮ್ಮನೇ ಬೇಡಾ ಎಂದರೂ ಮೊಬೈಲ್ ಬಿಟ್ಟು ಏಳುತ್ತಿಲ್ಲ. ಟೀಚರ್ ನೋಟ್ಸ್ ಕಳ್ಸಿದ್ದಾರೆ, ಪ್ರಾಜೆಕ್ಟ್ ವರ್ಕ್ ಇದೆ, ಫ್ರೆಂಡ್ ಹತ್ರ ಡಿಸ್ಕಶ್ಶನ್ ಮಾಡೋದಕ್ಕಿದೆ ಒಂದೇ? ಎರೆಡೇ? ಕಾರಣಗಳು ಹಲವು, ಪಾಲಕರಿಗೆ ಇದರ ಹಿಂದಿನ ಗುಟ್ಟು ಅರ್ಥವಾಗದೇ ಇರಲಿಕ್ಕಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಬ್ಯುಸಿಯಾಗಿದ್ದಾಗ ಕದ್ದು ಮುಚ್ಚಿ ಗೆಳೆಯರೊಟ್ಟಿಗೆ ವಿಡಿಯೋಕಾಲ್ ನಲ್ಲಿ ಚಾಟಿಂಗ್, ಅನ್‍ಲೈನ್ ಆಟಗಳಲ್ಲಿ ಮಗ್ನರಾಗುವುದು, ಯು ಟ್ಯೂಬ್, ವಾಟ್ಸ್ ಆಪ್, ಫೇಸ್‍ಬುಕ್, ಇನ್ಸ್ಟಾಗ್ರಾಮ್ ನಂತಹ ಜಾಲತಾಣಗಳಲ್ಲಿನ ಕುತೂಹಲ, ಒಟ್ಟಾರೆ ಮಕ್ಕಳು ಮೊಬೈಲ್ ಫೋನಿನ ದಾಸರಾಗುತ್ತಿದ್ದಾರೆ. 
          
      ಅದೆಂತಹ ಸಂದರ್ಭಗಳನ್ನೂ ಭಾರತ ಎದುರಿಸಬಲ್ಲದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಡಲು ಕೋವಿಡ್‍ನ ಲಾಕ್‍ಡೌನ್ ಒಂದು ಅವಕಾಶವಾಗಿ ಮಾರ್ಪಟ್ಟಿದ್ದರ ಪ್ರತಿಫಲವೇ ಈ ಆನ್‍ಲೈನ್ ಶಿಕ್ಷಣ. ಇದೊಂದು ಸಹಜ ಸನ್ನಿವೇಶದ ಪ್ರತಿಕ್ರಿಯೆಯೂ, ಅವಶ್ಯಕವೂ ಆದ ಪ್ರಯತ್ನವಾಗಿ ಎಲ್ ಕೆ ಜಿ ಯಿಂದ ಹಿಡಿದು ಪದವಿಯ ಬಹುದೊಡ್ದ ಶಿಕ್ಷಕರ ಸಮೂಹ ದಿನಗಳಂತರದಲ್ಲಿ ಕಂಪ್ಯೂಟರ್ ಕ್ಯಾಮೆರಾದ ಮುಂದೆ ಇಣುಕಿದ್ದು ಸಾಧನೆಯೇ ಸರಿ. ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ ಮತ್ತು ಇನ್ನಿತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಸಾಂಪ್ರದಾಯಿಕ ತರಗತಿಗಳಿಲ್ಲದ ಭೋಧನಾ ವ್ಯವಸ್ಥೆ ಈ ಆನ್‍ಲೈನ್ ಎಜ್ಯುಕೇಶನ್. ಸಾಮಾನ್ಯವಾಗಿ ಉನ್ನತ ಶಿಕ್ಷಣಕ್ಕೆ ಸೀಮಿತವಾಗಿದ್ದ ಈ ವ್ಯವಸ್ಥೆಯು ಕೋವಿಡ್‍ನ ಕಾರಣದಿಂದಾಗಿ ಭಾರತದ ಸಂಪೂರ್ಣ ಶಿಕ್ಷಣ ಸಮುದಾಯವನ್ನೇ ಆವರಿಸಿಕೊಂಡು ಬಿಟ್ಟಿತು. ಅಭಿವೃದ್ಧಿಯ ಭಾಗವಾಗಿ ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನಗಳನ್ನು ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಶಿಕ್ಷಣ ಪದ್ಧತಿಯಲ್ಲಿಯೂ ಬಳಸಲು ಒತ್ತು ನೀಡಲಾಗಿತ್ತಾದರೂ ಅದು ಕೇವಲ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಬೋರ್ಡ್ ಅಥವಾ ಡಿಜಿಟಲ್ ಬೋರ್ಡ್ ಟೀಚಿಂಗಿಗೆ ಮಾತ್ರ ಸೀಮಿತವಾಗಿತ್ತು. ಸಂಸ್ಕರಿತ ಮಾಹಿತಿಗಳನ್ನಷ್ಟೇ ಅಳವಡಿಸಲ್ಪಟ್ಟಿದ್ದ ಈ ತಂತ್ರಜ್ಞಾನಗಳು ಶಿಕ್ಷಕರ ಉಪಸ್ಥಿತಿಯಲ್ಲಿ ಮಾತ್ರ ಬಳಕೆಯಲ್ಲಿದ್ದವು. ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಸಂಪೂರ್ಣ ಶಿಕ್ಷಣ ಕ್ಷೇತ್ರವನ್ನು ಆವರಿಸಿಕೊಂಡಿರುವ ಆನ್ ಲೈನ್ ಶಿಕ್ಷಣ ವ್ಯವಸ್ಥೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಒಂದು ಬಹುದೊಡ್ಡ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
         
        ಅಧ್ಯಯನದ ಪ್ರಕಾರ ಜಗತ್ತಿನಾದ್ಯಂತ ಸುಮಾರು 6.9 ಬಿಲಿಯನ್ ಜನರು ಮೊಬೈಲ್ ಫೋನನ್ನು ಬಳಸುತ್ತಿದ್ದಾರೆ. ಪ್ರತೀ ವರ್ಷವೂ ಇದರ ಬಳಕೆಯು ಹೆಚ್ಚುತ್ತಲೇ ಇದೆ. ಹೀಗೆ ನಿರಂತರವಾಗಿ ಮೊಬೈಲ್ ಬಳಸುವ ಬಹುತೇಕೆರಲ್ಲಿ ಹಲವಾರು ಮಾನಸಿಕ, ಸಾಮಾಜಿಕ ಮತ್ತು ದೈಹಿಕ ಸಮಸ್ಯೆಗಳು ಕಂಡು ಬಂದಿವೆ. ಭಾರತದಲ್ಲಿಯೂ ಹೆಚ್ಚುತ್ತಿರುವ ಸೈಬರ್ ಕ್ರೈಂ ಇದಕ್ಕೊಂದು ತಾಜಾ ಉದಾಹರಣೆ. ಹಲವಾರು ಸಂಶೋಧನೆಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ಸ್ ಗಳಿಂದ ಮಾನವನ ದೇಹದ ಮೇಲಾಗಬಹುದಾದ ದುಷ್ಪರಿಣಾಮಗಳನ್ನು ಕಂಡುಕೊಂಡಿವೆ ಯಾದರೂ ಇವುಗಳನ್ನು ಒಪ್ಪಿಕೊಳ್ಳದ ವಿಶ್ವ ಆರೋಗ್ಯ ಸಂಸ್ಥೆಯ ಹಿಂದಿನ ಉದ್ದೇಶವನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಇಂಟರ್ ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎನ್ನುವ ಸಂಸ್ಥೆಯು ಮೊಬೈಲ್ ಬಳಕೆಯಿಂದ ಉಂಟಾಗಬಹುದಾದ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‍ನ ಕುರಿತಾಗಿ ಅಧ್ಯಯನ ನಡೆಸುತ್ತಿದೆ. ಅತೀಯಾದ ಮೊಬೈಲ್ ಬಳಕೆಯಿಂದ ತಲೆ ನೋವು, ಮೈಗ್ರೇನ್, ಚರ್ಮ ರೋಗಗಳು, ಲೋ ಸೆಲ್ಫ್ ಎಸ್ಟೀಮ್, ಆಕ್ರಮಣಕಾರಿ ವರ್ತನೆ, ಸಮಾಜದಿಂದ ಬೇರ್ಪಡುವುದು, ನಿದ್ರಾ ಹೀನತೆ, ಲೈಂಗಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಕ್ಕಳಲ್ಲಿನ ಮಾನಸಿಕ ಒತ್ತಡಕ್ಕೂ ಕಾರಣವಾಗಿರುವುದನ್ನು ಹಲವಾರು ಅಧ್ಯಯನಗಳು ದೃಢಪಡಿಸಿವೆ. ಮಕ್ಕಳ ವರ್ತನೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಮೊಬೈಲ್ ಬಳಕೆ ಶೈಕ್ಷಣಿಕ ಒತ್ತಡಕ್ಕೂ ಕಾರಣೀಕರ್ತವಾಗಿದೆ. ಬ್ಲ್ಯೂ ವೇಲ್, ಪಬ್ ಜೀ ಯಂತಹ ಡೆಡ್ಲಿ ಆನ್ ಲೈನ್ ಆಟಗಳು ಮಕ್ಕಳ ಮೇಲೆ ಬೀರಿದ ಪರಿಣಾಮಗಳನ್ನೂ ನಾವು ನೋಡಿದ್ದೇವೆ. ಸಂಸ್ಕರಿಸಲ್ಪಡದ, ನಿಯಂತ್ರಣವಿಲ್ಲದ, ಒಳ್ಳೆಯದು ಕೆಟ್ಟದ್ದೆಲ್ಲವನ್ನೂ ತನ್ನೊಳಗಿಟ್ಟುಕೊಂಡಿರುವ ಮೊಬೈಲ್, ಕಂಪ್ಯೂಟರ್ ನಂತಹ ಅಪಾಯಕಾರಿ ತಂತ್ರಜ್ಞಾನಗಳು ಈಗಷ್ಟೇ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಉಂಟುಮಾಡಬಹುದಾದ ಅತೀಸೂಕ್ಷ್ಮ ಪರಿಣಾಮಗಳ ಕುರಿತು ಚಿಂತಿಸುವ ಅವಶ್ಯಕತೆಯಿದೆ.  
       
       ಬಹುತೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮೊಬೈಲ್ ಹಿಡಿದೇ ಶಾಲೆಗೆ ಹೋಗುವ ಮಕ್ಕಳನ್ನು ಕಂಡಿದ್ದೇವೆ. ಇನ್ನು ಮಾಡರ್ನ್ ಶಿಕ್ಷಣದ ಭಾಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಹಾಗೂ ಮಾಹಿತಿ ತಂತ್ರಜ್ಞಾನಗಳನ್ನು ಅಲ್ಲಿನ ಶಿಕ್ಷಣ ಕ್ಷೇತ್ರದಲ್ಲಿ ಅತೀಹೆಚ್ಚು ಅಳವಡಿಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಅವಶ್ಯಕತೆಯ ಅರಿವು ಅವರೆಲ್ಲರಿಗೂ ಇದೆ, ಆದರೂ ಬಹುತೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪಾಲಕರು ಭಯವಿಲ್ಲದೆ ಅವರ ಮಕ್ಕಳ ಕೈಯ್ಯಲ್ಲಿ ಮೊಬೈಲ್ ಇಡುತ್ತಿರುವುದು ವಿಶೇಷವೆನಿಸಿದರೂ ಅದು ಅಲ್ಲಿಯ ಸಂಸ್ಕೃತಿ, ಜೀವನ ಶೈಲಿ, ಮಾನವ ಸಂಬಂಧ ಮತ್ತು ಸಾಮಾಜಿಕ ನಿಯಮಗಳಿಗೆ ಸೂಕ್ತವಾಗಿರಬಹುದು. ಜಗತ್ತಿನ ಅತ್ಯಂತ ಮುಂದುವರಿದ ರಾಷ್ಟ್ರವಾದ ಅಮೇರಿಕಾ 23 ಶೇಕಡಾ ಸೈಬರ್ ಕ್ರೈಂ ಹೊಂದುವ ಮೂಲಕ ನಂಬರ್ ವನ್ ಸ್ಥಾನದಲ್ಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇಗಷ್ಟೇ ಬೆಳೆಯುತ್ತಿರುವ ಭಾರತಕ್ಕೆ ಮತ್ತು ಇಲ್ಲಿನ ಜನರ ಜೀವನ ಪದ್ಧತಿ, ಸಾಮಾಜಿಕ ನಿಯಮಾವಳಿಗಳು, ಕಾನೂನು ವ್ಯವಸ್ಥೆ ಮತ್ತು ಜನರ ಗುಣ-ವರ್ತನೆಗಳಿಗೆ ಹೋಲಿಸಿದರೆ ಆನ್‍ಲೈನ್ ಶಿಕ್ಷಣ ಸಾಂಧರ್ಭಿಕ ಅನಿವಾರ್ಯತೆಯೇ ಹೊರತು ಪ್ರಸ್ತುತವಲ್ಲ. ಅನಿವಾರ್ಯತೆಗಳ ಗೊಂದಲದಲ್ಲಿ ಮುಗ್ಧ ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವುದು ಅದೆಷ್ಟು ಸರಿ....? ಭಾರತದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಕ್ಷೇತ್ರದ ಮೇಲೆ ಸರಿಯಾದ ಹಿಡಿತವಿಲ್ಲದ, ನಿಯಮಾವಳಿಗಳಿದ್ದರೂ ಪಾಲಿಸದ, ವರ್ಷ ದಿಂದ ವರ್ಷಕ್ಕೆ ಸೈಬರ್ ಕ್ರೈಂ ನಂತಹ ಅಪರಾಧಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅಶ್ಲೀಲ ವೆಬ್‍ಸೈಟ್ ಗಳಿಂದ ಹಿಡಿದು ಅಪಾಯಕಾರಿ ವಿಡಿಯೋ ಗೇಮ್ಸ್ ಗಳನ್ನೂ ಒಳಗೊಂಡಿರುವ ಯಾರು ಬೇಕಾದರೂ ಯಾವಾಗ ಬೇಕಾದರೂ ಇಂತಹ ಅಪಾಯಕಾರಿ ಮಾಹಿತಿಗಳನ್ನು ಹುಡುಕಲು ಅವಕಾಶವಿರುವ ಮೊಬೈಲ್ ಅನ್ನುವ ಮಾಯಾ ಪೆಟ್ಟಿಗೆಯನ್ನು ಸುಸಂಸ್ಕೃತರಾಗಿ ರೂಪುಗೊಳ್ಳಬೇಕಾಗಿರುವ ಮುಗ್ಧ ಮಕ್ಕಳ ಕೈಗೆ ಕೊಡುವುದು ಅದೆಷ್ಟು ಸಮಂಜಸ? 
           
      ಯಾವುದೇ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ಅದರ ಪ್ರಯೋಜನಗಳು ಮನುಷ್ಯನ ಉನ್ನತ ಬದುಕಿಗೆ ಪೂರಕವಾಗಿಯೇ ಇರುತ್ತವೆ. ಸಾಂದರ್ಭಿಕ ಅನಿವಾರ್ಯತೆಗೆ ಒಗ್ಗಿಕೊಳ್ಳಲೇ ಬೇಕಾದ ಸನ್ನಿವೇಷ ನಮ್ಮದಾದಾಗ ಸಾಧ್ಯತೆಗಳೊಳಗೆ ಜಾಗೃತೆಯನ್ನು ಪಾಲಿಸಿದರೆ ಬಂದೊದಗಬಹುದಾದ ಕೆಟ್ಟ ಪರಿಣಾಮಗಳ ಪ್ರಮಾಣವನ್ನೂ ತಗ್ಗಿಸಲು ಸಾಧ್ಯವಿದೆ. ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಭಾದಕವಾಗಿದ್ದರೂ ಅನಿವಾರ್ಯತೆಯಿಂದ ಬಳಸಿದರೂ ಬಳಕೆಯ ಸಮಯಕ್ಕೊಂದು ಮಿತಿಹೇರಿದರೆ ಚೆನ್ನ. ಮಕ್ಕಳು ಬಳಸುವ ಮೊಬೈಲ್ ನಲ್ಲಿ ಅನಾವಶ್ಯಕ ಮಾಹಿತಿಯನ್ನು ಮತ್ತು ಪಾಲಕರು ತಮ್ಮ ವೈಯುಕ್ತಿಕ ವಿಚಾರಕ್ಕೆ ಸಂಬಂದಿಸಿದ ಯಾವುದೇ ಫೋಟೊ, ವಿಡಿಯೋ ಗಳನ್ನು ಇಡದಿದ್ದರೆ ಒಳಿತು. ಯೂಟ್ಯೂಬ್, ವಾಟ್ಸ್ ಆಪ್, ಫೇಸ್ ಬುಕ್ ನಂತಹ ಆಪ್ ಗಳನ್ನು ಡಿಲೀಟ್ ಮಾಡಿದರೆ ಉತ್ತಮ. ಆನ್ ಲೈನ್ ತರಗತಿ ನಡೆಯುವ ಆಪ್ ಮಾತ್ರ ಬಳಕೆಗೆ ಇರಲಿ. ಬಳಸುವಾಗ ಅದರ ಸ್ಕ್ರೀನ್ ಬ್ರೈಟ್ ನೆಸ್ ಕಡಿಮೆ ಮಾಡಿ ಮತ್ತು ಇಯರ್ ಪೋನ್ ಬಳಸಿ. ಬಳಸುವಾಗ ಮೊಬೈಲ್ ಪೋನ್ ದೇಹದಿಂದ ಕನಿಷ್ಟ ನಲವತ್ತು ಸೆಂಟೀ ಮೀಟರ್ ದೂರವಿರುವಂತೆ ಜಾಗೃತೆ ವಹಿಸಿ. ತರಗತಿ ಇಲ್ಲದ ಸಮಯದಲ್ಲಿ ಮೊಬೈಲ್ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ. ಮಕ್ಕಳು ಹೆಚ್ಚು ಹೆಚ್ಚು ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಒಳಿತು. ಸಾಧ್ಯವಾದರೆ ಪಾಲಕರೂ ಅವರೊಟ್ಟಿಗೆ ಸೇರಿಕೊಳ್ಳಿ. ಮೊಬೈಲ್ ನಿಂದಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಹೇಳಿ. ಮಕ್ಕಳಿರುವಾಗ ನೀವೂ ಕೂಡ ಮೊಬೈಲ್ ಬಳಕೆ ಕಡಿಮೆ ಮಾಡಿ. ಮಕ್ಕಳನ್ನು ವಿವಿಧ ಆಟೋಟಗಳ ಜೊತೆ ಜೊತೆಗೆ ಆತ್ಮರಕ್ಷಣಾ ಕಲೆಗಳಂತಹ ದೈಹಿಕ ಕಸರತ್ತುಗಳಲ್ಲೂ ಪಾಲ್ಗೊಳ್ಳುವಂತೆ ಮಾಡಿ. ಹೆಚ್ಚಿನ ಸಮಸ್ಯೆಗಳಿದ್ದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.        
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************


Ads on article

Advertise in articles 1

advertising articles 2

Advertise under the article