-->
ಬದಲಾಗೋಣವೇ ಪ್ಲೀಸ್ - 100

ಬದಲಾಗೋಣವೇ ಪ್ಲೀಸ್ - 100

ಬದಲಾಗೋಣವೇ ಪ್ಲೀಸ್ - 100
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
         
      ಬದುಕು ಅಂದರೇನು... ? ನಾವು ಇದ್ದಂತೆ ಪ್ರಾಕೃತಿಕವಾಗಿ ಇರುವುದೇ... ಅಥವಾ ನಮ್ಮಿಷ್ಟದಂತೆ ಭ್ರಮಾಲೋಕದಲ್ಲಿ ಕಲ್ಪನಾತ್ಮಕವಾಗಿರುವುದೇ... ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮಹಾನಗರದೊಳಗೆ ಏಕಾಂತ ಹುಡುಕಾಟ ನಡೆಸಿದೆ.
      ನರವ್ಯೂಹದೊಳಗಿನ ಅಸಂಖ್ಯಾತ ನರನಾಡಿಗಳಂತೆ ಮಹಾ ನಗರದೊಳಗಿರುವ ಅಸಂಖ್ಯಾತ ನಗರಗಳನ್ನು, ಬೀದಿಗಳನ್ನು ನೋಡಬೇಕೆಂದು ಏಕಾಂಗಿಯಾಗಿ ನಗರ ಪ್ರದಕ್ಷಿಣೆ ಹಾಕಿದೆ. ಪ್ರತಿಷ್ಠಿತ ಬಡಾವಣೆ, ಮಧ್ಯಮ ಬಡಾವಣೆ ಹಾಗೂ ಸ್ಲಮ್ ಏರಿಯಾಗಳ ಅನುಭವ ಪಡೆದೆ. ಹೆಚ್ಚಿನೆಡೆ ಮಹಡಿ ಮೇಲೆ ಮಹಡಿ ಕಟ್ಟಿಕೊಂಡು ಐಶಾರಾಮಿ ಜೀವನದ ಮುದ್ರೆ ಹಾಕಿಕೊಂಡು ಮುಖವಾಡದ ಬದುಕನ್ನು ಕಟ್ಟಿಕೊಂಡವರು. ಇದಕ್ಕೆ ಎದುರಾಗಿ ಸೂರಿಲ್ಲದೆ ಮಳೆ - ಚಳಿ - ಬಿಸಿಲಿನಲ್ಲಿ ಚಿಂತಿತರಾಗಿರುವವರು. ಕೆಲವೆಡೆ ಹತ್ತಾರು ಕೋಣೆಗಳಿರುವ ವಿಶಾಲ ಬಂಗಲೆ ಮನೆಗಳಲ್ಲಿ ವೃದ್ಧರಿಬ್ಬರೇ "ನಾನಿನಗೆ ನೀನೆನಗೆ" ಎಂದು ವಾಸಿಸುವವರು. ಕೆಲವೆಡೆ ಒಂದೇ ಕೋಣೆಯಲ್ಲಿ ಬೆಡ್ ರೂಂ - ಕಿಚನ್ ರೂಂ - ಹಾಲ್ - ದೇವರ ಕೋಣೆ - ಓದುವ ಕೋಣೆ - ಡೈನಿಂಗ್ ಹಾಲ್ ಎಲ್ಲವನ್ನು ಹತ್ತಾರು ಅಡಿಯ ಒಂದೇ ಕೋಣೆಯಲ್ಲಿಯೇ ಕಲ್ಪಿಸಿಕೊಂಡು ಬದುಕು ಸವೆಸುವ ಮನೆಗಳು.... ಮಾನವರೆಲ್ಲರೂ ಒಂದೇಯಾದರು ಈ ರೀತಿಯ ವ್ಯತ್ಯಾಸ ಏಕೆ ಉಂಟಾಗಿದೆ...? ಇದಕ್ಕೆ ಕಾರಣ ತಿಳಿಯಬೇಕಾಗಿದೆ.
      ತನ್ನಷ್ಟಕ್ಕೆ ಏಕಾಂತವಾಗಿದ್ದ ಮನಸ್ಸಿನಲ್ಲಿ ಏನೇನೋ ಕನಸಿನ ಬೀಜಗಳನ್ನು ಬಿತ್ತಿ, ಹತ್ತಾರು ವರುಷಗಳಿಂದ ಸ್ಫೂರ್ತಿ ಮೂಡಿಸಿ, ಬಣ್ಣ ಬಣ್ಣದ ಕನಸುಗಳನ್ನು ಹೆಣೆದು, ಭರವಸೆಯ ಹೊನ್ನಿನ ಬದುಕನ್ನು ಬೆಳೆಸಿ, ಬಣ್ಣದ ಬದುಕನ್ನು ಕಟ್ಟಿ ಕೊಟ್ಟು ಕೊನೆಗೆ ಯಾವುದೇ ಕಾರಣ ಹೇಳದೆ ಕೈಕೊಟ್ಟು ಮೌನಿಯಾಗಿ ಹೋಗುವ ಹಾಗೂ ಕಳೆದು ಹೋಗುವ ಗೆಳೆಯ-ಗೆಳತಿ - ಬಂಧು - ಬಳಗ - ಅಣ್ಣ- ಅಕ್ಕ......ಇತ್ಯಾದಿಯವರ ಈ ನಂಬಲಸಾಧ್ಯವಾದ ವಿಚಿತ್ರ ವರ್ತನೆಗೆ ಕಾರಣ ಏನು...? ಕಾರಣವಿಲ್ಲದೆ ದೂರವಾಗುವವರ ಬಗ್ಗೆ ಕಾರಣ ತಿಳಿಯಬೇಕಾಗಿದೆ.
      ಬಾನಂಚಿನಲ್ಲಿ ಸ್ವಚ್ಚಂದವಾಗಿ ತನ್ನಷ್ಟಕ್ಕೆ ಹಾರಿ ಖುಷಿ ಪಡುತ್ತಿದ್ದ ಪಕ್ಷಿಗಳನ್ನು - ಪ್ರಾಣಿಗಳನ್ನು ಗೂಡಿನೊಳಗೆ ಬಂಧಿಸಿ ಅದರ ಸಹಜ ಸ್ವಾತಂತ್ರ್ಯವನ್ನು ಕಿತ್ತು, ಬಂಗಾರದ ಪಂಜರದೊಳಗೆ ಅವುಗಳನ್ನು ಬಂಧಿಸಿ ಅದರ ನೋವಿನಿಂದ ತನ್ನ ಆನಂದವನ್ನು ಕಾಣುವ ಮನುಜರ ವಿಕೃತ ಮನಸ್ಸಿಗೆ ಕಾರಣ ಏನು...? ಇದಕ್ಕೆ ಕಾರಣ ತಿಳಿಯಬೇಕಾಗಿದೆ.
     ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ತನ್ನ ಮಕ್ಕಳು ವಿದ್ಯಾವಂತರಾಗಿ, ಉತ್ತಮ ಉದ್ಯೋಗಸ್ಥರಾಗಲಿ ಎಂದು ಹಗಲಿರುಳು ದುಡಿದು ತಾನು ಯಾವುದನ್ನೂ ಅನುಭವಿಸದೆ ಎಲ್ಲವನ್ನು ಮಕ್ಕಳಿಗಾಗಿ ಖರ್ಚು ಮಾಡಿದ ತಂದೆ- ತಾಯಿಯರನ್ನು, ಅದೇ ಮಕ್ಕಳು ತಮ್ಮ ಕೈಯಲ್ಲಿ ದುಡ್ಡು ಬಂದಾಗ ಅವರನ್ನು ಸಾಕದೇ ವೃದ್ಧಾಶ್ರಮದಲ್ಲಿ ಬಿಟ್ಟು ಕೈತೊಳೆದುಕೊಳ್ಳುವ ಕಲ್ಲು ಬಂಡೆಯ ಮನಸ್ಸಿಗೆ ಕಾರಣ ಏನು....? ಕಾರಣ ತಿಳಿಯಬೇಕಾಗಿದೆ.
       ತನ್ನ ಮನೆಯನ್ನು ಸ್ವಚ್ಛ ಮಾಡಿ ಅದರ ನಂತರ ಸಂಗ್ರಹಿಸಿದ ಕಸಗಳನ್ನೆಲ್ಲ ವ್ಯವಸ್ಥಿತವಾಗಿ ನಿರ್ವಹಣೆ ಮಾಡದೆ ತನ್ನದೆ ಮನೆಯ ಎದುರಿನ ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿ ಗಬ್ಬುನಾತ ಬರುವಂತೆ ಮಾಡುವ ಹಲವರನ್ನು ನೋಡಿದೆ. ಇಂತಹ ಇಬ್ಬಗೆಯ ಮನೋಸ್ಥಿತಿಗೆ ಕಾರಣ ಏನು...? ಕಾರಣ ತಿಳಿಯಬೇಕಾಗಿದೆ.
       ವಾಸ್ತವವಾಗಿ ನಮ್ಮ ಬದುಕಿನಲ್ಲಿ ಸದಾ ಧನಾತ್ಮಕವಾಗಿ ಮುನ್ನಡೆಯಲು ಪೂರಕವಾಗಿರುವ ಪ್ರೀತಿ, ಸಹಬಾಳ್ವೆ, ನಂಬಿಕೆ, ತಾಳ್ಮೆ, ಶಾಂತಿ, ಸಮಾಧಾನ, ಸ್ಫೂರ್ತಿ ಇವುಗಳನ್ನು ಬಹಳ ಬೇಗ ಕಾರಣಗಳಿಲ್ಲದೆ ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಏನು....? ಕಾರಣ ತಿಳಿಯಬೇಕಾಗಿದೆ.
      ಜೀವನದಲ್ಲಿ ನಾವು ಅಗತ್ಯವಿರುವ ಹಲವಾರು ಸಂಬಂಧಗಳನ್ನು ಯಾವುದೇ ಕಾರಣಗಳಿಲ್ಲದೆ ಅಥವಾ ಕ್ಷುಲಕ ಕಾರಣಗಳಿಂದಾಗಿ ಕಳೆದುಕೊಳ್ಳುವುದು ತುಂಬಾ ಸುಲಭ. ಆದರೆ ಅದನ್ನು ಉಳಿಸುವುದು ಅಥವಾ ಮರುಗಳಿಸುವುದು ತುಂಬಾ ಕಷ್ಟ. ನಮ್ಮ ಬದುಕಿನಲ್ಲಿ ವ್ಯಕ್ತಿ ಅಥವಾ ಸಂಬಂಧ ಅಥವಾ ವಸ್ತುವೇ ಆಗಲಿ, ಅದು ಇದ್ದಾಗ ಬೆಲೆ ಗೊತ್ತಾಗುವುದಿಲ್ಲ. ಅದನ್ನು ಕಳೆದುಕೊಂಡಾಗ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ. ಹಾಗಾಗಿ ಕಳೆದುಕೊಳ್ಳಲು ಕಾರಣಗಳೇನು...? ಕಾರಣ ತಿಳಿಯಬೇಕಾಗಿದೆ.
      ಕಾರಣ ಏನು...? ಕಾರಣ ತಿಳಿಯಬೇಕಾಗಿದೆ..... ಕಾರಣ ತಿಳಿಯುವ ಹಾದಿಯತ್ತ ಮುನ್ನಡೆಯ ಬೇಕಾಗಿದೆ... ಕಾರಣ ತಿಳಿಯುವ ಕುತೂಹಲವು ಇದೆ... ಕಾರಣ ತಿಳಿಯುವ ಹಾದಿಗೆ ಬದಲಾಗೋಣ. ಕಾರಣ ತಿಳಿಯುವ ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article