-->
ಮತ್ತೊಮ್ಮೆ ಶಾಲಾ ಜಗಲಿಯಲ್ಲಿ ಕಲರವ...!!

ಮತ್ತೊಮ್ಮೆ ಶಾಲಾ ಜಗಲಿಯಲ್ಲಿ ಕಲರವ...!!

ಲೇಖಕರು : ಸುರೇಶ್ ಮರಕಾಲ ಸಾಯ್ಬರಕಟ್ಟೆ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರು.
ಸರಕಾರಿ ಪದವಿ ಪೂರ್ವ ಕಾಲೇಜು, ಕುಕ್ಕುಜೆ,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Mob : 9481511921

  
           ಹತ್ತಿರತ್ತಿರ ಒಂದೂವರೆ ತಿಂಗಳುಗಳ ಕಾಲ ಮೌನವಾಗಿ ಸಪ್ಪೆಯಾಗಿದ್ದ ‘ಶಾಲೆ’ ಎಂಬ ಚಿಣ್ಣರ ಜಗಲಿಯಲ್ಲಿ ಮತ್ತೊಮ್ಮೆ ಕಲರವದ ಚಿತ್ತಾರಗಳು ತುಂಬಿಕೊಳ್ಳಲಿವೆ..! ಮಕ್ಕಳ ಬಗೆಬಗೆಯ ಸಂತಸದ ಸದ್ದು, ವಿಧವಿಧದ ಸಡಗರ, ಕೇಕೆಗಳು ಮತ್ತೊಮ್ಮೆ ಶಾಲೆ ಎಂಬ ಸ್ಥಳವನ್ನು ನಲಿಕೆಯ ಸ್ವರ್ಗವನ್ನಾಗಿ ಮಾಡಲಿವೆ..! ಸುಮಾರು ಐವತ್ತು ದಿನಗಳಿಂದ ಪೋಕರಿಗಳ ಓಡಾಟವಿಲ್ಲದೆ ಬಣ್ಣ ಕಳೆದುಕೊಂಡಿದ್ದ ಶಾಲೆಯ ಅಂಗಳ ಮತ್ತೊಮ್ಮೆ ಮಕ್ಕಳ ಪುಟ್ಟಪುಟ್ಟ ಹೆಜ್ಜೆಗಳೆಂಬ ರಂಗೋಲಿಗಳಿಂದ ಸಿಂಗರಿಸಿಕೊಳ್ಳಲಿಕ್ಕಿದೆ..!!
       ತಿಂಗಳಿನಿಂದ ದೂರವಾಗಿದ್ದ ಜೀವದ ಗೆಳೆಯನೊಂದಿಗೆ ಮತ್ತೊಮ್ಮೆ ಕುಣಿದು ಸಂಭ್ರಮಿಸುವ ಖುಷಿ ಪುಟಾಣಿಗಳಿಗೆ..! ರಜೆಯಲ್ಲಿ ಊರೂರು ಸುತ್ತಿದ, ಪ್ರವಾಸಕ್ಕೆ ಹೋದ, ಈಜು ಕಲಿತ, ಸೈಕಲ್ ಕಲಿತ, ಮರ ಹತ್ತಿ ಹಾರಿದ – ಹೀಗೆ ನೂರಾರು ರೋಮಾಂಚನ ಅನುಭವಗಳನ್ನು ಗೆಳೆಯ ಗೆಳತಿಯರೊಡನೆ ಹಂಚಿಕೊಳ್ಳುವ ಕಾತುರ..! ಇವೆಲ್ಲದರ ಮಧ್ಯದಲ್ಲಿ ತಿಂಗಳಿನಿಂದ ಮನೆಯಲ್ಲಿ ಆಟವಾಡಿ ರೂಢಿಯಾಗಿ, “ನನಗೆ ಶಾಲೆ ಬೇಡಾ, ನಾನು ಮನೆಗೆ ಹೋಗ್ತೇ.....” ಎಂದು ರಚ್ಚೆ ಹಿಡಿದು ಅಳುವ ಅಲ್ಲೊಂದಿಲ್ಲೊಂದು ಕಂದಮ್ಮಗಳು! ಇವೆಲ್ಲದರ ಮಧ್ಯೆ “ರಜೆ ಹೇಗಾಯ್ತು ಮಕ್ಕಳೇ?, ಎಲ್ಲರೂ ರಜೆಯಲ್ಲಿ ಕೊಟ್ಟ ಹೋಮ್ ವರ್ಕ್ ಮಾಡಿಕೊಂಡು ಬಂದಿದ್ದೀರಾ...?” ಎಂದು ಕೇಳುವ ಪ್ರೀತಿಯ ಗುರುಗಳು..! ತಿಂಗಳಿನಿಂದ ಮಕ್ಕಳೊಂದಿಗಿನ ಸಾಂಗತ್ಯವನ್ನು ಕಳೆದುಕೊಂಡಿದ್ದ ಶಿಕ್ಷಕರಿಗೆ ಇಂದಿನಿಂದ ಮತ್ತೆ ಪುಟಾಣಿಗಳೊಂದಿಗೆ ಒಡನಾಡುವ ಖುಷಿ..! ಇವೆಲ್ಲಕ್ಕಿಂತ ಮಿಗಿಲಾಗಿ, ಇಷ್ಟು ದಿನ ಮನೆ ಮಕ್ಕಳು ಮಾಯವಾಗಿ ಇಂದು ಮತ್ತೆ ವಾಪಾಸ್ಸಾಗುತ್ತಿರುವ ಖುಷಿ ಸ್ವತಃ ‘ಶಾಲೆ’ ಎಂಬೋ ತವರು ಮನೆಗೆ..!! ಹಾಗೆ ನೋಡಿದರೆ, ಮಕ್ಕಳ ಅಗಣಿತ ಸಡಗರ ಒಂದೆಡೆಯಾದರೆ, ಅದನ್ನೂ ಮೀರಿಸುವ ಸಂಭ್ರಮ ‘ಶಾಲೆ’ ಎನ್ನೋ ಆಶ್ರಯ ನೀಡುವ ಅಶ್ವತ್ಥ ಮರಕ್ಕೆ..!
         ರಜೆ ಮುಗಿದು ಮತ್ತೊಮ್ಮೆ ಶಾಲೆ ಆರಂಭಗೊಂಡಿದೆ. ಮನೆಯಲ್ಲಿ ಮಕ್ಕಳು ಬ್ಯಾಗ್ ಬೆನ್ನಿಗೇರಿಸಿಕೊಂಡು ಶಾಲೆಗೆ ಹೊರಡುವ ಗಡಿಬಿಡಿ ಆರಂಭಗೊಂಡಿದೆ. ತಿಂಗಳಿನಿಂದ ಮನೆಯಲ್ಲಿ ಅಸಾಮಾನ್ಯ ತುಂಟಾಟವ ಮಾಡಿ ಹುಸಿ ಕೋಪದಿಂದ ಬೈಸಿಕೊಂಡಿದ್ದ ಪುಟಾಣಿಗಳನ್ನು ಪ್ರೀತಿಯಿಂದ ತಾಯಿ, ಅಜ್ಜಿಯಂದಿರು ಶಾಲೆ ಎನ್ನುವ ಮತ್ತೊಂದು ಮನೆಗೆ ಕಳಿಸಿಕೊಡುವ ಮಧುರ ಕ್ಷಣಗಳು. ಇಷ್ಟು ದಿನ ಮನೆಯಲ್ಲಿ ಕೈಕಾಲುಗಳೆಡೆಯಲ್ಲಿ ಓಡಾಡಿಕೊಂಡಿದ್ದ ಮಗು ಇಂದು ಶಾಲೆಗೆ ಹೋಗುವುದರಿಂದ, ಇನ್ನು ಮನೆ ಇಡೀ ಬಿಕೋ ಅನಿಸಲು ಆರಂಭವಾಗುತ್ತದೆ ಎಂದೆನಿಸಿ, ಯಾರಿಗೂ ಕಾಣದ ಹಾಗೆ ಕಣ್ಣಂಚಿನಲ್ಲಿ ಇಳಿಯಬೇಕೋ ಬೇಡವೋ ಎಂದು ಹನಿಯುತ್ತಿರುವ ಕಣ್ಣೀರನ್ನು ಒರೆಸಿಕೊಳ್ಳುವ ಅಮ್ಮಂದಿರು. ಆದರೆ ಮತ್ತೆ ಮರುಕ್ಷಣದಲ್ಲಿ, “ಮಗು ಶಾಲೆಗೆ ಹೋಗದಿದ್ರೆ ಕಲಿಯುವುದು ಹೇಗೆ?, ಕಲಿಯದಿದ್ದರೆ ಈ ಸಮಾಜದಲ್ಲಿ ದೊಡ್ಡ ಮನುಷ್ಯ ಆಗುವುದು ಹೇಗೆ?” ಎಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡು, “ಓ ಪುಟ್ಟಾ, ಇನ್ನೂ ತಿಂಡಿ ತಿಂದಾಗಿಲ್ವ ನಿಂದು? ಆಚೆ ಮನೆ ಅಕ್ಷೋಭ್ಯ ಶಾಲೆಗೆ ಹೊರಟು ಎಷ್ಟು ಹೊತ್ತಾಯ್ತು?” ಎಂದು ಮಗುವನ್ನು ಮುದ್ದಿಸಿ ಶಾಲೆಗೆ ಹೊರಡಿಸುವ ಸಾಮಾನ್ಯ ದೃಶ್ಯ ಎಲ್ಲರ ಮನೆಯಲ್ಲಿ..! ಇಷ್ಟು ದಿನ ಮಕ್ಕಳ ಗೌಜು ಗದ್ದಲವಿಲ್ಲದೆ ಸಪ್ಪೆಯಾಗಿದ್ದ ಶಾಲಾ ಬಸ್ಸುಗಳು, ಟೆಂಪೋ, ಓಮ್ನಿ, ರಿಕ್ಷಾಗಳಿಗೆ ಮಕ್ಕಳ ಚಿಲಿಪಿಲಿಯಿಂದ ತಾನು ಮತ್ತೊಮ್ಮೆ ನಂದನವನ ಆಗಲಿದ್ದೇನೆ ಎಂಬ ಆನಂದ.!
     ಮಕ್ಕಳೇ, ಶಾಲೆಯೆಂಬ ತಾಯಿ ಪುಟಾಣಿಗಳಾದ ನಿಮ್ಮೆಲ್ಲರ ಬರುವಿಕೆಗಾಗಿ ವಾತ್ಸಲ್ಯದಿಂದ ಕಾಯುತ್ತಿದ್ದಾಳೆ! ಶಾಲೆ ಆರಂಭ ಎಂದರೆ ಅದು ಖುಷಿಯ ಆರಂಭ, ಅದು ಸಂಭ್ರಮದ ಆರಂಭ, ಅದು ಕಲಿಕೆಯ ಆರಂಭ! ನೀವೆಲ್ಲರೂ ಖುಷಿಯಿಂದ ನಲಿಯುತ್ತಾ ಕಲಿಯುವಂತಾಗಲಿ, ನಿಮ್ಮ ಕಲಿಕೆ ನಿಮ್ಮನ್ನು ಒಳ್ಳೆಯ ಪ್ರಜೆಗಳನ್ನಾಗಿಸಲಿ!
.................. ಸುರೇಶ್ ಮರಕಾಲ ಸಾಯ್ಬರಕಟ್ಟೆ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರು.
ಸರಕಾರಿ ಪದವಿ ಪೂರ್ವ ಕಾಲೇಜು, ಕುಕ್ಕುಜೆ,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Mob : 9481511921
******************************************** 


Ads on article

Advertise in articles 1

advertising articles 2

Advertise under the article