ಮಕ್ಕಳು ರಜೆಯನ್ನು ಎಂಜಾಯ್ ಮಾಡಲು ಬಿಡಿ.. ಪ್ಲೀಸ್..
Tuesday, April 18, 2023
Edit
ಲೇಖನ : ಇಸ್ಮತ್ ಪಜೀರ್
ಪೆರ್ನಪಾಡಿ ಮನೆ , ಪಜೀರು ಅಂಚೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಗಳು ಮಧ್ಯಾಹ್ನ ಶಾಲೆಯಿಂದ ಬಂದವಳೇ ಮಾರ್ಚ್ ಮೂವತ್ತೊಂದರಿಂದ summer holidays ಎನ್ನುತ್ತಾ ನನಗೆ ಕರೆ ಮಾಡಿ ಹೇಳಿದಳು. "ಹೇಗೆ ಬೇಕೋ ಹಾಗೆ ಆಡು ನಲಿ.. ಒಟ್ನಲ್ಲಿ ರಜೆ ಫುಲ್ ಎಂಜಾಯ್ ಮಾಡು ಮಗಳೇ ಎಂದೆ. ರಮಝಾನ್ ಮುಗಿದ ಬಳಿಕ ನಿನಗೆ ಇಷ್ಟ ಇರುವಲ್ಲಿಗೆ ಕರೆದುಕೊಂಡು ಹೋಗ್ತೇನೆ" ಎಂದೆ.
"ಬಾಪಾ.. ಹಾಲಿಡೇಸ್ ಮಾತ್ರವಲ್ಲ.. ಫುಲ್ ಹಾಲಿಡೇಸಲ್ಲಿ ಎಲ್ಲಾ ಸಬ್ಜೆಕ್ಟೂ ಬರೆಯಲಿಕ್ಕೆ ಕೊಟ್ಟಿದ್ದಾರೆ. ಅಷ್ಟು ಹೋಂ ವರ್ಕ್ ಇದೆ" ಎಂದಳು..
ನನಗೆ ಸಿಟ್ಟು ಎಲ್ಲಿತ್ತೋ.... ನೆಕ್ಸ್ಟ್ ಕ್ಲಾಸ್ ಸ್ಟಾರ್ಟ್ ಆಗುವಾಗ ನಾನೇ ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ಜೊತೆ ಮಾತಾಡ್ತೀನಿ. ಹೋಂ ವರ್ಕ್ ಬಾಕಿಯಾದರೆ ನಾನಿದ್ದೇನೆಂದು ಮಗಳಿಗೆ ಧೈರ್ಯ ತುಂಬಿದೆ.
ಮಕ್ಕಳ ಕುರಿತ ಪತ್ರಿಕೆ, ವೆಬ್ಸೈಟುಗಳಿಗೆ ಹತ್ತಾರು ಲೇಖನ ಬರೆದು ಎಲ್ಲರಿಗೂ ತಲುಪಿಸಿದೆ. ಮಕ್ಕಳನ್ನು ಹೋಂ ವರ್ಕ್ ಮೂಲಕ ಹಿಂಸಿಸಬೇಡಿ, ಅವರ ಬಾಲ್ಯವನ್ನು ಕಿತ್ತುಕೊಳ್ಳಬೇಡಿ, ಅವರ ರಜೆಯನ್ನು ಕಸಿಯಬೇಡಿ. ಅವರ ಖುಷಿಯನ್ನು ಕೊಲ್ಲಬೇಡಿ.. ಆದರೆ ಯಾರಿಗೂ ನಮ್ಮ ಕಾಳಜಿ ಅರ್ಥವಾಗಲ್ಲ. ಹೇಳಿದ್ರೆ "ನಾವೇನು ಮಾಡುವುದು ಸರ್.. ನಮಗೆ ಪ್ರಿನ್ಸಿಪಾಲ್ ಇನ್‌ಸ್ಟ್ರಕ್ಟ್ ಮಾಡ್ತಾರೆ, ಅವರಿಗೆ ಒಳ್ಳೆಯ ರಿಸಲ್ಟ್ ತರಬೇಕೆಂದು ಮ್ಯಾನೇಜ್ಮೆಂಟ್ ಪ್ರೆಶರ್ ಹಾಕ್ತಿದೆ."
ಈ ಬೇಸಿಗೆ ರಜೆಯ ಉದ್ದೇಶವೇನು..? ಮಕ್ಕಳಿಗೆ ಕನಿಷ್ಠ ರಜೆಯನ್ನು ಎಂಜಾಯ್ ಮಾಡಲೂ ಈಗಿನ ಶಿಕ್ಷಣ ಪದ್ಧತಿ ಬಿಡುತ್ತಿಲ್ಲ. ಶಿಕ್ಷಣ ಮಕ್ಕಳ ಪಾಲಿಗೆ ಶಿಕ್ಷೆಯಾಗಿ ಬಿಟ್ಟಿದೆ. ನಮ್ಮ ಬಾಲ್ಯ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ನಮ್ಮ ಹೆತ್ತವರಿಗೆ ಈತ ಯಾರ ಮನೆಯ ಮಾಡು ಒಡೆಯುತ್ತಾನೋ, ಯಾರ ಗಾಜು ಒಡೆಯುತ್ತಾನೋ, ಯಾರು ದೂರು ಹಿಡ್ಕೊಂಡು ಬರ್ತಾರೋ, ಎಲ್ಲಿ ಕೈ ಕಾಲು ಮುರಿದುಕೊಂಡು ಬರ್ತಾನೋ ಎಂಬ ಭಯವಿತ್ತು. ನಮಗೆ ಬೆಳಗ್ಗಿಂದ ಸಂಜೆಯ ವರೆಗಿನ ಸಮಯವೂ ಆಟವಾಡಲು ಸಾಲುತ್ತಿರಲಿಲ್ಲ. ಬಿಸಿಲೋ ಸೆಕೆಯೋ ನಮಗ್ಯಾವುದೂ ನಾಟುತ್ತಿರಲಿಲ್ಲ. ಗೋಧಿ ಮೈ ಬಣ್ಣದ ನನ್ನ ಮುಖ ಬೇಸಿಗೆ ರಜೆ ಮುಗಿಯುವಾಗ ಇದ್ದಿಲಿನ ಬಣ್ಣಕ್ಕೆ ತಿರುಗುತ್ತಿತ್ತು. ಒಂದೇ ಒಂದು ದಿನವನ್ನೂ ಆಡದೇ ಕುಣಿಯದೇ ನಲಿಯದೇ ನಾವು ವ್ಯರ್ಥ ಮಾಡಿದ್ದಿಲ್ಲ. ಸಖತ್ತಾಗಿ ಎಂಜಾಯ್ ಮಾಡಿದ್ದೇವೆ. ಈಗಿನ ಮಕ್ಕಳೇ ಮನೆಯಿಂದ ಹೊರಗಿಳಿಯಲು ಕೇಳುವುದಿಲ್ಲ. ಆಡಿದ್ರೆ ಮೊಬೈಲ್ ಗೇಂಸ್, ನೋಡಿದ್ರೆ ಟಿವಿ.. ಅದು ಬಿಟ್ರೆ ಸುಮ್ಮನೆ ಹಾಸಿಗೆಯಲ್ಲಿ ಬಿದ್ದುಕೊಳ್ಳುವುದು. ಇನ್ನು ಕೆಲವು ಹೆತ್ತವರು ಮಕ್ಕಳ ಮೇಲೆ ವಿಶೇಷ ತರಬೇತಿ ಇನ್ನೊಂದು ಮತ್ತೊಂದು ಎಂದು ಹೇರಿ ಅವರ ರಜೆಯನ್ನು ಕಿತ್ಕೊಳ್ಳುತ್ತಾರೆ. ಇನ್ನು ಕೆಲವು ಬಂಡವಾಳಶಾಹಿಗಳು ಅರ್ಥವಿಲ್ಲದ ಶಿಬಿರಗಳ ಮೂಲಕ ನಮ್ಮ ದುಡ್ಡು ಮತ್ತು ಮಕ್ಕಳ ಸಹಜ ಬಾಲ್ಯವನ್ನು ಕಸಿಯುತ್ತಾರೆ.
ಮಧ್ಯಾವಧಿ ರಜೆ, ಕ್ರಿಸ್ಮಸ್ ರಜೆಯಲ್ಲಿ ಪುರುಸೊತ್ತಿಲ್ಲದಷ್ಟು ಹೋಂ ವರ್ಕ್ ಇರುತ್ತದೆ. ಈ ಬೇಸಿಗೆ ರಜೆಯೆಂದರೆ ಒಂದು ಶೈಕ್ಷಣಿಕ ವರ್ಷ ಮುಗಿದು ಇನ್ನೊಂದು ಶೈಕ್ಷಣಿಕ ವರ್ಷಕ್ಕೆ ಕಾಲಿಡುವುದರ ನಡುವೆ ಸಿಗುವ ಒಂದಿಷ್ಟು ವಿರಾಮ. ಈ ವಿರಾಮದ ಖುಷಿಯನ್ನು ಮಕ್ಕಳಿಂದ ಕಸಿದುಕೊಳ್ಳುವುದು ಅನ್ಯಾಯ. ಇದರ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತನೂ ಧ್ವನಿಯೆತ್ತಬೇಕಾಗಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಹೌದು. ಈ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಬಾಲ್ಯವನ್ನು ಕಸಿಯದಿರಿ, ಹೋಂ ವರ್ಕ್ ಹೆಸರಲ್ಲಿ ಮಕ್ಕಳನ್ನು ರಜೆಯಲ್ಲೂ ಮಕ್ಕಳನ್ನು ಶಿಕ್ಷಿಸದಿರಿ ಎಂದು ಸುತ್ತೋಲೆ ಹೊರಡಿಸಬೇಕಿದೆ ಮತ್ತು ಆದೇಶ ಉಲ್ಲಂಘಿಸಿದ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 98808 42203
********************************************