
ಶಾಲೆ ಶಿಬಿರ... ರಜಾ ಮಜಾ..
Sunday, April 2, 2023
Edit
ಲೇಖನ : ಗೋಪಾಡ್ಕರ್
ನಿರ್ದೇಶಕರು
ಸ್ವರೂಪ ಅಧ್ಯಯನ ಕೇಂದ್ರ
ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ
ಬೇಕಪ್ಪಾ ಬೇಕು
ಅಯ್ಯಯ್ಯೋ
ಮಕ್ಕಳ ದೇವರ ಆಣೆಗೂ ಬೇಕು...!!
ರಜೆ ಪೂರ್ಣ ಮಕ್ಕಳನ್ನು ಕಟ್ಟಿ ಹಾಕುವಷ್ಟು ಶಿಬಿರ ಬೇಡಪ್ಪ. ರಜೆಯಲ್ಲಿ ಅವರಿಗೂ ಸುಮ್ಮನೆ ಕಾಲ ಕಳೆಯುವ, ತನಗೆ ಬೇಕಾದ್ದು ಮಾಡಿಕೊಳ್ಳುವ ಬಿಡುವೂ ಬೇಕು. ಮಕ್ಕಳು ಮಕ್ಕಳೊಂದಿಗೆ ಆಡ್ಬೇಕು, ಏನೋ.. ಹುಡುಗಾಟ, ಹುಡುಕಾಟ ಮಾಡ್ಬೇಕು.. ಎಲ್ಲೋ ತಿರುಗಾಡ್ಬೇಕು. ಕೆಲವು ದಿನಗಳಾದ್ರೂ ಅವರೊಂದಿಗೆ, ಅವರೆಲ್ಲ ಆಟಗಳೊಂದಿಗೆ ಪೋಷಕರೂ ಇರಬೇಕು.
ಮಕ್ಕಳೇ ಜಾಗ್ರತೆ....! ನೀವು ಪುರುಸೊತ್ತೇ ಇಲ್ಲದ (ಅಗತ್ಯ - ಪ್ರಾಮುಖ್ಯತೆಯ ಅರಿವಿಲ್ಲದ..) ಪೋಷಕರ ಜೊತೆಗಿದ್ದೀರಾ....?
ನನ್ನ ಅಪ್ಪ ಅಮ್ಮನಿಗೆ ಆ ಕಾಲಕ್ಕೆ (1970) ಶಿಬಿರ ಗಿಬಿರ ಗೊತ್ತೇ ಇರ್ಲಿಲ್ಲ. ಹೋಗ್ತೇನೆ ಅಂತ ಹೇಳಿ ಶಿಬಿರಕ್ಕೆ ಸಿಕ್ಕ ಸಿಕ್ಕಲ್ಲಿಗೆ ನಾನೇ ಹೋಗ್ತಿದ್ದೆ. ಅದು ಏನ್ ಬೇಕಾದ್ರೂ ಮಾಡಿಕೋ.. ಅಂತ ನನ್ನ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದ ನನ್ನ ಅಪ್ಪ ಅಮ್ಮ ಎಷ್ಟೊಂದು ಗ್ರೇಟ್ ಅಲ್ವೇ....?
ಇಂದಿನ ಕೆಲ ಪೋಷಕರಿಗೆ ಮಕ್ಕಳನ್ನು ಶಿಬಿರಕ್ಕೆ ಕರಕೊಂಡು ಹೋಗಲು ಪುರುಸೊತ್ತೇ ಇಲ್ಲ.
ಪಾಪ ಮಕ್ಕಳಿಗಾದ್ರೂ ಎಲ್ಲಿಗೆ ಹೋಗ್ಬೇಕು ಅನ್ನೋ ಅರಿವು, ದಾರಿಯಾದ್ರೂ ಹಿರಿಯರು ಶಿಬಿರಗಳಿಗೆ ಭಾಗವಹಿಸುತ್ತಾ ತಮ್ಮ ತಮ್ಮ ಗುಣ ತೋರಿಸಿರಬೇಕಲ್ವೆ...?
ಕೆಲವು ಪೋಷಕರಿಗೆ ಶಿಬಿರ ಎಲ್ಲೇ ಇದ್ದರೂ ಕಳುಹಿಸೋ ಧೈರ್ಯ ಇರ್ತದೆ. ಎಷ್ಟು ಹೆಚ್ಚು ಶಿಬಿರಗಳಲ್ಲಿ ಮಕ್ಕಳು ಭಾಗವಹಿಸುತ್ತಾರೋ.. ಅಷ್ಟೂ ಮಕ್ಕಳಿಗೆ, ಸ್ವತಂತ್ರ ನಿರ್ಧಾರಕ್ಕೆ, ಹಲವು ಪ್ರತಿಭೆ ಹುಟ್ಟಿಕೊಳ್ಳಲು ಆಧಾರಗಳು, ಶಾಲಾ ಪಠ್ಯ ಕಲಿಕೆಗೆ ಆಸಕ್ತಿ - ಕಾರಣಗಳು ಬೇಕಾದಷ್ಟು ಸಿಗುತ್ತವೆ.
ಶಾಲೆ ನಿಜವಾಗಿಯೂ ಶಿಬಿರ
(ಮಿಲಿಟರಿಯಲ್ಲಿ ಶಿಸ್ತಿಗೆ ಶಿಬಿರ ಅಂತ ಮಾಡಿಕೊಂಡಿದ್ದಾರೆ). ರಜಾ ದಿನದ ಶಾಲೆ (ಶಿಬಿರ) ಪ್ರೀತಿಯ ಸಂಭ್ರಮದ ಶಾಲೆ. ನಿತ್ಯ ಶಾಲೆ ಹೀಗಿರಲು ವ್ಯವಸ್ಥೆ - ಮನಸ್ಥಿತಿಗಳು ಬಿಡಲ್ವೇ..?. ಯಾರ್ಯಾರದೋ ಕಲಿಸುವ ದೌರ್ಬಲ್ಯ ಗಳು ಮಕ್ಕಳ ಪಾಲಾಗುತ್ತಿದೆ. ಮಕ್ಕಳು ಯಾರ ಜೊತೆಗೆ ಎಲ್ಲಿ ಇದ್ದರೆ ಸರಿ ಅಂತ ಮುಂದೆ ನಿರ್ಧಾರ ಆಗಬೇಕಾಗಿದೆ.
"ರಜಾ ಶಿಬಿರದಲ್ಲಿ ನಾನು ಕಲಿತದ್ದು ಬೆಲೂನ್ ನಿಂದ ಗೊಂಬೆ ತಯಾರಿ ಮಾಡಲು. ಆದರೆ ಆ ಆಸಕ್ತಿ ಬೆಳೆದು ಏನೋ ಮಾಡ್ತಾ ಮಾಡ್ತಾ ವಿಜ್ಞಾನಿಯಾದೆ." ಅಂತ ಸುಳ್ಯದ ಬಾಳಿಲದ ಶಾಲೆಯಲ್ಲಿ ಶಿಬಿರಕ್ಕೆ ಬಂದ ಪ್ರಶಾಂತ್ ನಾಯಕ್ ಇಂದು ವಿಜ್ಞಾನಿಯಾಗಲು ಕಾರಣವಾದ ಕತೆ ಹೇಳುತ್ತಿದ್ದಾರೆ. ಅವರ ಜೊತೆಗಿದ್ದ ಮತೊಬ್ಬ ಶಿಬಿರಾರ್ಥಿ ಮನೋಜ್ ಹೇಳಿದ್ದು ಹೀಗಿದೆ.. "ನಾನು ಹಳ್ಳಿಯ ಶಾಲೆಯ ಶಿಬಿರದಲ್ಲಿ ಕಲಿತದ್ದು ಬೊಗಳಲು (ಮಿಮಿಕ್ರಿ) ಆದರೆ ನಾನು ಡೆಲ್ಲಿಯಲ್ಲೂ ಬೊಗಳಿ ಸಂಪಾದನೆ ಮಾಡಿದೆ ಅಂತಾರೆ. ಶಿಬಿರಗಳು ಮಕ್ಕಳಲ್ಲಿ ಪ್ರತಿಭೆ, ಸಾಮರ್ಥ್ಯ ಹೆಚ್ಚಾಗಲು, ಬೆಳೆಯಲು ಖಂಡಿತಾ ಕಾರಣವಾಗಿವೆ ಅನ್ನೋದಕ್ಕೆ ಸಾವಿರಾರು ಉದಾಹರಣೆಗಳಿವೆ.
ನಾನು ಹೈಸ್ಕೂಲ್ ಶಿಕ್ಷಕನಾಗಿದ್ದ ಒಂದು ಶಾಲೆಯಲ್ಲಿ ಒಂದು ವರ್ಷ 20 ದಿನದ ಶಿಬಿರ ಮಾಡಿದಾಗ... "ಮಕ್ಕಳಿಗೆ ರಜೆಯಲ್ಲಿ ಕೊಟ್ಟ ರಾಶಿ, ರಾಶಿ ಹೋಂವರ್ಕ್ ಮುಗಿಯಲ್ಲ... ಈ ವರ್ಷ ಮಕ್ಕಳು ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾಗಲ್ಲ" ಅಂತ ಎಲ್ಲರೂ ಮಾತಾಡಿಕೊಂಡಾಗ ಮೌನವೇ ಉತ್ತರ ಕೊಟ್ಟಿತು. ಆದರೆ.. ಮಕ್ಕಳ ಕಲಿಕೆಗೆ ಬೇಕಾಗಿರುವುದು ಒತ್ತಡ ತುಂಬಿದ ಶಿಕ್ಷಣವಲ್ಲವೆಂಬುದು ಗೊತ್ತಾಗಿದ್ದು ಆ ವರ್ಷ ದಾಖಲೆ ಫಲಿತಾಂಶ ಬಂದಾಗ. ಕಲಿಕೆಗೆ ಆಸಕ್ತಿ ಹುಟ್ಟಿಕೊಳ್ಳಲು ಕಾರಣನಾದ ನಾನು ಮಾತ್ರ ನನ್ನೊಳಗೇ ಸಂಭ್ರಮಪಟ್ಟೆ. ಅಯ್ಯೋ.. ಈ ಸತ್ಯ ಗೊತ್ತಿರುವವರಿಗೆ ಮಾತ್ರ ಗೊತ್ತು...!!
ಶಿಬಿರ ಎಲ್ಲೇ ಯಾವ ದೂರದ ಊರಲ್ಲೇ ಇದ್ದರೂ ಮಕ್ಕಳನ್ನು ಕರಕೊಂಡು ಹೋಗಿ. ಅದೇ ಅದೇ ಹರಕೆಗೆ ಮಾಡಿದ್ದನ್ನೇ ಮಾಡುವ ಅಥವಾ ವ್ಯವಹಾರಕ್ಕೆ ಮಾತ್ರ ಶಿಬಿರ ಮಾಡುವಲ್ಲಿಗೆ ಕಳುಹಿಸಲು ಸ್ವಲ್ಪ ಯೋಚಿಸಿರಿ. ಶಿಬಿರದಲ್ಲಿ ಏನು ಕಲಿತಿದ್ದಾರೆ ಅಂತ ಮಕ್ಕಳನ್ನು ಕೇಳಬೇಕಾದ್ದಿಲ್ಲ. ಅಳತೆಮಾಡಬೇಕಾದದ್ದು ಏನೂ ಇಲ್ಲ. ಏನು ಬದಲಾಗಿದ್ದಾರೆ ಅಂತ ಗಮನಿಸಿ ಪ್ರಶಂಶಿಸಿ ಸಂತಸಪಡಿರಿ. ಒಳಗೊಳಗೇ ಆತ್ಮಸ್ಥೈರ್ಯ ತುಂಬಿಕೊಳ್ಳುವುದಂತೂ ನಿಜ.
ನಾನು ಬೆಳೆದದ್ದು ನೂರಾರು ಶಿಬಿರಗಳಲ್ಲಿ ಭಾಗವಹಿಸಿ ಮತ್ತು ಸಾವಿರಾರು ಶಿಬಿರಗಳನ್ನು ಮಾಡಿ. ನಾನು ಒಬ್ಬ ಬೆಳೆದರೆ ಸಾಲದು. ಇತರರನ್ನೂ ಬೆಳೆಸುವುದರೊಂದಿಗೆ ಬೆಳೆಯಬೇಕಾದ್ದು ನನ್ನ ಕೈಯಲ್ಲೇ ಇದೆ. ನನ್ನ ಜೊತೆಗಿದ್ದ ಮಕ್ಕಳು ಬೆಳೆದು ಸಾಧಕರಾಗುತ್ತಿರುವುದನ್ನು ಮತ್ತು ನನ್ನನ್ನು ನನ್ನ ಮಗಳು ಕ್ಷಣ ಕ್ಷಣವೂ ಗಮನಿಸುತ್ತಿದ್ದಾಳೆ. ಅಲ್ಲೇ.. ನಾನು ಯಾರು ಅಂತ ಕಾಣುತ್ತಿದ್ದೇನೆ.
ನಿರ್ದೇಶಕರು
ಸ್ವರೂಪ ಅಧ್ಯಯನ ಕೇಂದ್ರ
ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ
Mob: +91 98452 03472
********************************************