ಜೀವನ ಸಂಭ್ರಮ : ಸಂಚಿಕೆ - 79
Sunday, April 2, 2023
Edit
ಜೀವನ ಸಂಭ್ರಮ : ಸಂಚಿಕೆ - 79 
ಲೇಖಕರು :  ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ                   
              ಇಂದು ಮೊಬೈಲ್ ಇಲ್ಲದ ಮನುಷ್ಯರಿಲ್ಲ ಎಂಬಂತಾಗಿದೆ. ಅತ್ಯಂತ ಬೆಲೆ ಬಾಳುವ ಸಂಪತ್ತು ಎಂದರೆ ಜೀವನ. ಜೀವನ ಎಂದರೆ ಅನುಭವಗಳ ಪ್ರವಾಹ. ನಮ್ಮ ದೇಹವು ಒಂದು ಸಾಧನ ಇದ್ದಂತೆ. ನಮ್ಮ ದೇಹದ ಪ್ರತಿಯೊಂದು ಅಂಗಗಳು ಸಾಧನವೇ. ಬುದ್ಧಿ, ಮನಸ್ಸು ಮತ್ತು ಭಾವನೆಗಳು ಕೂಡ ಸಾಧನವೇ. ಹಾಗೆಯೇ ಪ್ರಪಂಚದಲ್ಲಿ ಇರುವ ಪ್ರತಿಯೊಂದು ಗಿಡ, ಮರ, ಪಕ್ಷಿ, ಪ್ರಾಣಿ  ಮತ್ತು ವಸ್ತುಗಳು ಸಾಧನವೇ. ವಸ್ತುಗಳು ನಮ್ಮ ಅರಿವಿಗೆ ಬರಬೇಕಾದರೆ ಅವು ನಿರ್ದಿಷ್ಟ ಆಕಾರ, ಬಣ್ಣ, ಗಾತ್ರ, ವಾಸನೆ ಅಥವಾ ರುಚಿ ಇದ್ದಾಗ ಮಾತ್ರ. ಅವು ಇಲ್ಲದಿದ್ದರೆ ನಮ್ಮ ಅರಿವಿಗೆ ಬರುವುದಿಲ್ಲ. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿ, ವಸ್ತು ಅಪೂರ್ಣ. ಒಂದರಲ್ಲಿರುವ ಆಕಾರ, ಬಣ್ಣ, ಗಾತ್ರ, ವಾಸನೆ, ರುಚಿ ಇನ್ನೊಂದರಲ್ಲಿ ಇರುವುದಿಲ್ಲ. ಅವು ಇದ್ದಂತೆ ಇರುವುದಿಲ್ಲ ಹಾಗೂ ಸದಾ ಬದಲಾಗುತ್ತದೆ. ಅಷ್ಟೊಂದು ವೈವಿಧ್ಯಮಯವಾದ ಜಗತ್ತು ಇದು. ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಸ್ತು ಅಂತ ಇಲ್ಲ. ಹಾಗಾಗಿ ಕೆಲವುಗಳನ್ನು ನೋಡಲು ಬಳಸುತ್ತೇವೆ, ಕೆಲವನ್ನು ಕೇಳಲು, ಕೆಲವನ್ನು ಮೂಸಲು, ಕೆಲವೊಂದು ರುಚಿ ನೋಡಲು, ಕೆಲವನ್ನು ನಮಗೆ ಬೇಕಾದ ವಸ್ತು ಮಾಡಲು ಮತ್ತೆ ಕೆಲವನ್ನು ಜೀವನಕ್ಕೆ ಆಗುವ ತೊಂದರೆ ತಿಳಿಯಲು ಬಳಸುತ್ತೇವೆ.  ಹೀಗೆ ಎಲ್ಲಾ ಸಾಧನಗಳನ್ನು ಬಳಸಿ ಆನಂದ ಪಡುವುದೇ ಅನುಭವ. 
         ಅನುಭವವಾಗಲೂ ಅನೇಕ ಅಂಶಗಳಿವೆ. ವಸ್ತುಗಳು ಇರಬೇಕು. ಇಂದ್ರಿಯಗಳು ಬೇಕು. ಮನಸ್ಸು ಬೇಕು ಮತ್ತು ಭಾವನೆ ಬೇಕು. ಅನುಭವ ಇವುಗಳನ್ನು ಅವಲಂಬಿಸಿದೆ. ಇವುಗಳಲ್ಲಿ ಒಂದಿಲ್ಲದಿದ್ದರೂ ಅನುಭವ ಇಲ್ಲ. ಪ್ರೀತಿಯ ಭಾವನೆ ಇದ್ದರೆ ಸುಖಾನುಭವ, ದುಃಖದ ಭಾವನೆ ಇದ್ದರೆ ದುಃಖದ ಅನುಭವ. ನಾವು ಸುಖಾನುಭವಕ್ಕೆ ಒತ್ತು ನೀಡಬೇಕು. ಈ ಅನುಭವಗಳನ್ನು ಪ್ರಧಾನವಾಗಿ ಆರು ಭಾಗಗಳಾಗಿ ವಿಂಗಡಿಸಬಹುದು.
    1. ದೃಶ್ಯಾನುಭವ: ವಸ್ತುವಿನ ಬಣ್ಣ, ಆಕಾರವನ್ನು ಕಣ್ಣನ್ನು ಬಳಸಿ ಅನುಭವ ಮಾಡಿಕೊಳ್ಳುತ್ತೇವೆ. ಅಂದರೆ ಬಣ್ಣ ಆಕಾರ ಕಣ್ಣಿನ ಮೂಲಕ ಮನಸ್ಸು ತುಂಬಿದಾಗ ಉಂಟಾಗುವ ಸಂತೋಷವೇ ದೃಶ್ಯಾನುಭವ.
    2. ಶಬ್ದಾನುಭವ: ಮಾಧುರ್ಯದ ಶಬ್ದದ ಅನುಭವವಾಗಲು ಕಿವಿ ಬಳಸುತ್ತೇವೆ. ಆ ಶಬ್ದ ಮನಸ್ಸನ್ನು ಪ್ರವೇಶಿಸಿ, ಮನಸ್ಸಿನಲ್ಲಿ ದೃಶ್ಯ ಅನುಭವ ಮೂಡಿದರೆ ಅದು ಮನಸ್ಸಿನಲ್ಲಿ ಸಂತೋಷ ಉಂಟುಮಾಡುತ್ತದೆ. ಅದೇ ಶಬ್ದಾನುಭವ.
    3. ವಾಸನಾನುಭವ: ಸುವಾಸನೆ ಅನುಭವಿಸಲು ಮೂಗನ್ನು ಬಳಸುತ್ತೇವೆ. ಆ ವಾಸನೆ ಮನಸ್ಸನ್ನು ಪ್ರವೇಶಿಸಿ, ಆನಂದ ಉಂಟು ಮಾಡಿದರೆ, ವಾಸನಾನುಭವ ಎನ್ನುತ್ತೇವೆ.
    4. ರುಚಿ ಅನುಭವ: ಯಾವುದೇ ರುಚಿಯಾದ ಆಹಾರ ಸೇವಿಸಿದಾಗ, ಆ ರುಚಿ ಮನಸ್ಸನ್ನು ಪ್ರವೇಶಿಸಿ ಆನಂದ ಉಂಟು ಮಾಡಿದರೆ, ಅದು ರುಚಿ ಅನುಭವ.
    5. ಸ್ಪರ್ಶಾನುಭವ: ಯಾವುದೇ ವಸ್ತು ಮುಟ್ಟಿದಾಗ ಚಳಿ, ಶೀತ, ಸೆಕೆ, ಮೃದು ಮತ್ತು ಒರಟು ಹೀಗೆ ಅನುಭವವಾದರೆ, ಅದನ್ನು ಸ್ಪರ್ಶಾನುಭವ ಎನ್ನುತ್ತೇವೆ.
   6. ಕಾರ್ಯಾನುಭವ: ಯಾವುದೇ ಕೆಲಸವನ್ನು ಸುಂದರವಾಗಿ, ಸ್ವಚ್ಛವಾಗಿ, ಆನಂದವಾಗಿ ಮಾಡಿದರೆ, ಅದರಿಂದ ಮನಸ್ಸಿನಲ್ಲಿಸಂತೋಷ ಉಂಟಾಗುತ್ತದೆ. ಇದನ್ನು ಕಾರ್ಯಾನುಭವ ಎನ್ನುತ್ತೇವೆ.
       ಕೆಲವು ವಸ್ತುಗಳು ಒಂದು ಅನುಭವ ನೀಡಿದರೆ, ಮತ್ತೆ ಕೆಲವು ವಸ್ತುಗಳು ಎರಡು ಅನುಭವ ನೀಡುತ್ತವೆ, ಮತ್ತೆ ಕೆಲವು ಮೂರು ಅಥವಾ ನಾಲ್ಕು ಅನುಭವ ನೀಡಬಹುದು. ಉದಾಹರಣೆಗೆ: ಮಲ್ಲಿಗೆ ಹೂವು ದೃಶ್ಯಾನುಭವ, ವಾಸನಾನುಭವ ಮತ್ತು ಕಾರ್ಯಾನುಭವ (ಹೂವನ್ನು ಸುಂದರವಾಗಿ ಮಾಲೆ ಕಟ್ಟಿದಾಗ) ನೀಡುತ್ತದೆ. ಮಸಾಲ ದೋಸೆ ದೃಶ್ಯ ಅನುಭವ, ವಾಸನಾ ಅನುಭವ ಮತ್ತು ರುಚಿ ಅನುಭವ ನೀಡುತ್ತದೆ. ಹೀಗೆ ನಾವು ಪ್ರತಿಯೊಂದು ವಸ್ತುವಿನ ಅನುಭವ ಪಡೆಯಬೇಕು. ಈ ಸೌಂದರ್ಯದ, ಮಾಧುರ್ಯದ ಮತ್ತು ಸವಿ ಸವಿಯನ್ನ ಮನಸ್ಸಿನಲ್ಲಿ ತುಂಬುವುದು. ಇದರಿಂದ ಮಧುರ ಭಾವ ಬೆಳೆಸಿಕೊಳ್ಳುವುದೇ ಶ್ರೀಮಂತ ಜೀವನ.      
     ಒಬ್ಬ ವಿದೇಶಿ ತತ್ವಜ್ಞಾನಿ ಹೇಳುತ್ತಾನೆ, "we are user of the world, not owner of the world."  ನಾವು ಬಳಕೆದಾರರೇ ವಿನಃ ಮಾಲೀಕರಲ್ಲ. ಹೀಗೆ ಬಳಸಿ ಅನುಭವ ಹೆಚ್ಚು ಮಾಡಿಕೊಳ್ಳುವುದೇ ಶ್ರೀಮಂತ ಸೌಂದರ್ಯದ ಜೀವನ. ವಸ್ತು, ಸಂಪತ್ತು, ಹಣ ಗಳಿಕೆ ಶ್ರೀಮಂತಿಕೆಯಲ್ಲ. ಇದಕ್ಕೆ ಸರ್ವಜ್ಞ ಹೇಳುವುದನ್ನು ಗಮನಿಸಿ, "ಉಣ್ಣದೊಡವೆಯ ಗಳಿಸಿ! ಮಣ್ಣೊಳಗೆ ಬಚ್ಚಿಟ್ಟು! ಚೆನ್ನಾಗಿ ನೆಲವ ಸಾಧಿಸಿದವನ ಬಾಯೊಳಗೆ ಮಣ್ಣು ಕಾಣೆಯ ಸರ್ವಜ್ಞ!
       ಈಗ ಮೊಬೈಲ್ ಬಗ್ಗೆ ಬರೋಣ.....
ನಾವು ಯಾವುದೇ ಸ್ಥಳಗಳಿಗೆ ಹೋದಾಗ ನೆನಪಿಗಾಗಿ ಫೋಟೋ ತೆಗೆಯುತ್ತೇವೆ. ಫೋಟೋ ತೆಗೆಯುವುದರಲ್ಲಿ ಅಪಾಯವನ್ನು ಲೆಕ್ಕಿಸದೆ ಫೋಟೋ ತೆಗೆಯಲು ಹೋಗಿ ಅತ್ಯಂತ ಬೆಲೆ ಬಾಳುವ ಸಂಪತ್ತು ಜೀವವನ್ನೇ ಕಳೆದುಕೊಂಡಿರುವುದನ್ನು ನೋಡಿರುತ್ತೇವೆ. ಇದರ ಅನುಕೂಲ ಮತ್ತು ಅನಾನುಕೂಲತೆ ನೋಡೋಣ
    1. ಮೊಬೈಲ್ ನಿಗದಿತ ಜಿಬಿ ಸಾಮರ್ಥ್ಯವಿದೆ. ಅದಕ್ಕಿಂತ ಹೆಚ್ಚಿಗೆ ಸಂಗ್ರಹಿಸುವುದು ಸಾಧ್ಯವಿಲ್ಲ. ನಮ್ಮ ನೆನಪಿನ ಶಕ್ತಿ, ಮನಸ್ಸಿಗೆ ಸಾಟಿಯಾದ ಯಾವ ಮೊಬೈಲ್ ಇಲ್ಲ. ಇದರ ಸಂಗ್ರಹ ಸಾಮರ್ಥ್ಯ ಹೇಳಲು ಬರುವುದಿಲ್ಲ. ಅಷ್ಟು ಸಾಮರ್ಥ್ಯ ನಮ್ಮ ಮನಸ್ಸಿಗೆ.
    2. ಮೊಬೈಲ್ ನಲ್ಲಿ ದೃಶ್ಯ ಅನುಭವ ಮತ್ತು ಶಬ್ದಾನುಭವ ಹೊರತುಪಡಿಸಿ ಇನ್ಯಾವುದೇ ಅನುಭವ ದೊರಕುವುದಿಲ್ಲ.
    3. ಮೊಬೈಲ್ ನಲ್ಲಿ ಸೆರೆಹಿಡಿದ ದೃಶ್ಯದಲ್ಲಿ ಗಾತ್ರದ ಅನುಭವ ನಮಗೆ ಆಗುವುದಿಲ್ಲ. ಬಣ್ಣದ ಮತ್ತು ಶಬ್ದದ ಅನುಭವವಾಗುತ್ತದೆ. ಇದರಿಂದ ವಾಸ್ತವಿಕ ಗಾತ್ರದ ಅನುಭವವಾಗುವುದಿಲ್ಲ. ರುಚಿ ಅನುಭವ, ವಾಸನೆ ಅನುಭವ, ನಾವೇ ಮಾಡಿ ಪಡೆಯುವ ಕಾರ್ಯಾನುಭವ ಇರುವುದಿಲ್ಲ (ಕೆಲವನ್ನು ಹೊರತುಪಡಿಸಿ).
    4. ಮೊಬೈಲ್ ನಲ್ಲಿ ಸೆರೆ ಹಿಡಿದ ಚಿತ್ರದಲ್ಲಿ ಹಳೆಯದು ಬಿಟ್ಟರೆ ವಾಸ್ತವಿಕ ಅನುಭವ ಇರುವುದಿಲ್ಲ. ಹಾಳಾದರೆ ಅದು ಇರುವುದಿಲ್ಲ.
    5. ಮೊಬೈಲ್ ನಲ್ಲಿ ಜ್ಞಾನ ದೊರಕುತ್ತದೆ ಆದರೆ ಅನುಭವದ ಕೊರತೆ ಇದೆ. ದೃಶ್ಯ ಮತ್ತು ಶಬ್ದದ ಅನುಭವ ಬಿಟ್ಟು, ಬೇರೆ ಯಾವುದೇ ಅನುಭವವಿಲ್ಲ.
    6. ಮೊಬೈಲ್ ನಿಂದಾಗಿ ಸಹಜ ಅನುಭವದ ಕೊರತೆಯಾಗುತ್ತದೆ. ನಾವು ಈಗಾಗಲೇ ತಿಳಿದಿರುವಂತೆ ಕಾಣುವ ಪ್ರತಿಯೊಂದು ವಸ್ತು ಬದಲಾಗುತ್ತದೆ. ಕಡೆಗೆ ಇಲ್ಲವಾಗುತ್ತದೆ. ಹಾಗೆಯೇ ನಮ್ಮ ದೇಹ ಪ್ರತಿ ಕ್ಷಣ ಬದಲಾಗುತ್ತದೆ. ಅಂಗಗಳು ಬಲಿಷ್ಠತೆ ಕಳೆದುಕೊಂಡು, ಸಾಮರ್ಥ್ಯ ಕಳೆದುಕೊಂಡು, ಕ್ಷೀಣವಾಗುತ್ತದೆ. ಕಣ್ಣು, ಕಿವಿ, ನಾಲಿಗೆ, ಮೂಗು  ಕ್ರಮೇಣ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಆಗ ಮೊಬೈಲ್ ನಲ್ಲಿರುವುದನ್ನು ನೋಡಲು ಕೇಳಲು ಆಗುವುದಿಲ್ಲ. ಆದರೆ ನಮ್ಮ ಮನಸ್ಸಿನಲ್ಲಿ ತುಂಬಿದ ದೃಶ್ಯ, ವಾಸನೆ, ರುಚಿ ನಮ್ಮ ಕಣ್ಣು ಮುಂದೆ ರೂಪ ತಾಳುತ್ತದೆ. ನಮ್ಮ ಕಣ್ಣು, ಕಿವಿ ಕೇಳದಿದ್ದರು, ನಮ್ಮ ಮನಸ್ಸು ಆ ಅನುಭವ ಮಾಡಿಕೊಡುತ್ತದೆ. ಆದ್ದರಿಂದ ಮೊಬೈಲ್ನಲ್ಲಿ ಸೆರೆ ಹಿಡಿಯುವುದಕ್ಕಿಂತ ಮನಸ್ಸಿನಲ್ಲಿ ತುಂಬಿಕೊಂಡು ನೈಜ ಅನುಭವ ಮಾಡಿಕೊಳ್ಳುವುದು ಶ್ರೇಷ್ಠ ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************