-->
ಹಕ್ಕಿ ಕಥೆ : ಸಂಚಿಕೆ - 95

ಹಕ್ಕಿ ಕಥೆ : ಸಂಚಿಕೆ - 95

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

         
               ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಈ ಹಕ್ಕಿಯನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ನಮ್ಮ ಮನೆಯ ಹಿಂದೆ ಒಂದು ಅಡಿಕೆ ತೋಟ ಮತ್ತು ಸ್ವಲ್ಪ ಮರಗಳು ಇದ್ದ ಕಾಡು ಇತ್ತು. ಅಲ್ಲಿ ಯಾವಾಗಲೂ ಈ ಹಕ್ಕಿಗಳು ಹಾರಾಡುವುದನ್ನು ನೋಡುತ್ತಿದ್ದೆ. ಬೇರೆಬೇರೆ ಬಣ್ಣ, ರೂಪ ಮತ್ತು ಆಕಾರದ ಹಕ್ಕಿಗಳು ಅಲ್ಲಿ ನೋಡಲು ಸಿಗುತ್ತಿದ್ದವು. ಕಪ್ಪು ಬಣ್ಣದ ಹಕ್ಕಿಯಾದರೂ ಈ ಹಕ್ಕಿ ಮಾತ್ರ ಬಹಳ ಆಕರ್ಷಣೀಯವಾಗಿತ್ತು. ಅರೆ ಕಪ್ಪು ಬಣ್ಣದ ಹಕ್ಕಿ ಅಂದ್ರೆ ಕಾಗೆ ಅಂದುಕೊಳ್ಳಬೇಡಿ, ಇದು ಕಾಗೆಗಿಂತ ಗಾತ್ರದಲ್ಲಿ ಚಿಕ್ಕದು. ಇದರ ಉದ್ದವಾದ ಬಾಲ ಕತ್ತರಿಯಂತೆ ಕೆಳಗೆ ಎರಡು ಕವಲಾಗುತ್ತದೆ, ಆ ಕವಲುಗಳ ತುದಿಯಲ್ಲಿ ಎರಡು ಕಡ್ಡಿಯಂತಹ ರಚನೆ, ಆ ಕಡ್ಡಿಗಳ ತುದಿಯಲ್ಲಿ ಮತ್ತೊಂದು ಸಣ್ಣ ಗರಿ. ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರಾಡುವಾಗ ಎರಡು ಜೀರುಂಡೆಗಳು ಈ ಹಕ್ಕಿಯನ್ನು ಹಿಂಬಾಲಿಸುವ ಹಾಗೆ ಕಾಣುತ್ತಿತ್ತು. ಅದರ ಈ ಬಾಲ ಹಾರುವುದನ್ನು ನೋಡುವುದೇ ಚಂದ. ಬಣ್ಣ ಕಪ್ಪಾದರೂ ಸೂರ್ಯನ ಬೆಳಕು ಬಿದ್ದಾಗ ಮಿರಮಿರನೆ ಮಿಂಚುತ್ತಿತ್ತು. 
        ಒಂದು ದಿನ ಸಂಜೆ ಶಾಲೆಯಿಂದ ಬಂದಾಗ ಮನೆಯ ಹಿಂದಿನ ಸಾಗುವಾನಿ ಮರದಲ್ಲಿ ಕುಳಿತು ಹಾಡುತ್ತಿತ್ತು. ಆದರೆ ದಿನವೂ ಬೆಳಗ್ಗೆ ಇದು ಹಾಡುವ ಸ್ವರಕ್ಕೂ ಇದಕ್ಕೂ ಬಹಳ ವ್ಯತ್ಯಾಸ ಇತ್ತು. ಗಿಡುಗದ ಸ್ವರವನ್ನು ಅನುಕರಣೆ ಮಾಡುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದದ್ದು ಏನೆಂದರೆ, ಮರದಲ್ಲಿ ಈ ಹಕ್ಕಿಯ ಗೂಡು ಇತ್ತು. ಸುಮಾರು ಹದಿನೈದು ಅಡಿ ಎತ್ತರದಲ್ಲಿ ಎರಡು ಮೂರು ಕೊಂಬೆಗಳು ಕವಲು ಆಗುವ ಜಾಗದಲ್ಲಿ ಕಪ್ ಆಕಾರದ ಗೂಡು ಮಾಡಿತ್ತು. ಗೂಡಿಗಿಂತ ಎತ್ತರದಲ್ಲಿ ಕುಳಿತ ಆ ಹಕ್ಕಿ ಗೂಡಿನ ಕಡೆಗೆ ಹೊಂಚು ಹಾಕುತ್ತಿದ್ದ ಕುದುಗನ ಹಕ್ಕಿಯನ್ನು ಓಡಿಸಲು ಈ ರೀತಿ ಗಿಡುಗನ ಸ್ವರವನ್ನು ಅನುಕರಿಸುತ್ತಿತ್ತು. ಗಿಡುಗನ ಸ್ವರಕ್ಕೂ ಬೆದರದಿದ್ದಾಗ ತನ್ನ ಗೂಡಿನ ಕಡೆಗೆ ಬರುತ್ತಿದ್ದ ಹಕ್ಕಿಯನ್ನು ದೊಡ್ಡದಾಗಿ ಅರಚುತ್ತಾ ಬೆದರಿಸಿ ಬಹಳ ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಇನ್ನೊಮ್ಮೆ ಈ ಕಡೆ ತಲೆ ಹಾಕಿದರೆ ಜಾಗ್ರತೆ ಎಂಬಂತೆ ಎಚ್ಚರಿಕೆ ನೀಡಿ ಓಡಿಸಿಬಿಟ್ಟಿತ್ತು. ಗಿಡುಗನ ಸ್ವರ ಮಾತ್ರವಲ್ಲ ಇನ್ನೂ ಹಲವು ಹಕ್ಕಿಗಳು ಮತ್ತು ಪ್ರಾಣಿಗಳ ಸ್ವರವನ್ನೂ ಇದು ಅನುಕರಿಸುತ್ತದೆ ಎಂದು ಇದರ ಬಗ್ಗೆ ಅಧ್ಯಯನ ಮಾಡಿದ ವಿಜ್ಞಾನಿಗಳು ಹೇಳುತ್ತಾರೆ. 
ಮಾರ್ಚ್ ನಿಂದ ಜೂನ್ ತಿಂಗಳ ನಡುವೆ ಇದು ಗೂಡು ಮಾಡಿ ಸಂತಾನೋತ್ಪತ್ತಿ ಮಾಡುವ ಕಾಲವಂತೆ. ಈ ಕಾಲದಲ್ಲಿ ತನ್ನ ಗೂಡು ಇರುವ ಮರದ ಆಸುಪಾಸಿನಲ್ಲಿ ಬೇರೆ ಯಾವ ಬೇಟೆಗಾರ ಹಕ್ಕಿಯನ್ನೂ ಹತ್ತಿರ ಸುಳಿಯಲು ಇದು ಬಿಡುವುದಿಲ್ಲ. ಈ ಕಾರಣಕ್ಕೇ ಕೆಲವು ಪಾಪದ ಸಣ್ಣ ಪಕ್ಷಿಗಳು ರಕ್ಷಣೆ ಸಿಗುತ್ತದೆ ಎಂದು ಇದರ ಗೂಡಿನ ಆಸುಪಾಸಿಲ್ಲಿ ತಮ್ಮ ಗೂಡು ಮಾಡುತ್ತವೆ. ಈ ಸ್ವಭಾವವನ್ನು ಗಮನಿಸಿದ ಜನರು ಇದನ್ನು ರಾಜಕಾಗೆ, ರಾಜಪಕ್ಷಿ ಮತ್ತು ಭೀಮರಾಜ ಪಕ್ಷಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಇದೇ ಕಾರಣಕ್ಕೆ ಹಿಂದಿಯಲ್ಲಿ ಇದನ್ನು ಕೋತ್ವಾಲ್ (ನಗರ ರಕ್ಷಕ) ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಹಾರಾಡುವ ಕೀಟಗಳು, ಹುಳು ಹುಪ್ಪಟೆಗಳು ಇದರ ಮುಖ್ಯ ಆಹಾರ. ಆದ್ದರಿಂದಲೇ ಯಾರ ಮನೆಯಲ್ಲಿ ದನ ಸಾಕುತ್ತಾರೋ ಅವರ ಹಟ್ಟಿಯ ಹಿಂದಿನ ಗೊಬ್ಬರದ ಗುಂಡಿಯ ಆಸುಪಾಸಿನಲ್ಲಿ ಹಾರಾಡುವ ಕೀಟಗಳನ್ನು ಹಿಡಿಯುಲು ಈ ಹಕ್ಕಿಯು ಓಡಾಡುತ್ತಿರುತ್ತದೆ. ಕಾಜಾಣ ಕುಟುಂಬಕ್ಕೆ ಸೇರಿದ ಈ ಹಕ್ಕಿ ಭಾರತ ದೇಶದ ಹೆಚ್ಚಿನ ಎಲ್ಲಾ ಕಡೆ ಕಾಣಸಿಗುತ್ತದೆ. ನಿಮ್ಮ ಮನೆಯ ಆಸುಪಾಸಿನಲ್ಲೂ ಇರಬಹುದು.
ಕನ್ನಡ ಹೆಸರು: ಭೀಮರಾಜ ಪಕ್ಷಿ, ರಾಜ ಕಾಗೆ, ಕೋತ್ವಾಲ್ 
ಇಂಗ್ಲೀಷ್ ಹೆಸರು: Greater Racket-tailed Drongo
ವೈಜ್ಞಾನಿಕ ಹೆಸರು: Dicrurus paradiseus
ಚಿತ್ರ : ಅರವಿಂದ ಕುಡ್ಲ
    ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article