-->
ಬದಲಾಗೋಣವೇ ಪ್ಲೀಸ್ - 94

ಬದಲಾಗೋಣವೇ ಪ್ಲೀಸ್ - 94

ಬದಲಾಗೋಣವೇ ಪ್ಲೀಸ್ - 94
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
           ನದಿ ತೀರದಲ್ಲಿ ಇಬ್ಬರು ಯುವಕರ ವಾಸ್ತವ್ಯವಿತ್ತು. ಅವರೆದುರು ಸುಮಾರು 20 ಮೀಟರ್ ಅಗಲದ ನದಿ ಹರಿಯುತಿತ್ತು. ಇನ್ನೊಂದು ತೀರದಾಚೆ ಇರುವ ಮನೆಗೆ ಪ್ರತಿನಿತ್ಯ ದೋಣಿ ಮೂಲಕ ನದಿ ದಾಟಿಕೊಂಡು ಹೋಗಬೇಕಿತ್ತು. ಯಾವಾಗಲೂ ದೋಣಿಯ ಸಹಾಯದಿಂದ ಸುಲಭವಾಗಿ ತನ್ನ ಮನೆ ಸೇರುತ್ತಿದ್ದರು. ಒಂದು ದಿನ ದೋಣಿಯವನು ಬರಲಿಲ್ಲ. ಎಷ್ಟು ಕಾದರೂ ದೋಣಿಯವನ ಬರುವಿಕೆಯ ದಾರಿಯನ್ನು ಕಾದು ಕಾದು ಸುಸ್ತಾದ ಅವರು ನದಿ ದಾಟುವ ಬಗ್ಗೆ ಚಿಂತಿತರಾದರು. ಒಬ್ಬಾತನಿಗೆ ಈಜು ಬರುತಿತ್ತು. ಇನ್ನೊಬ್ಬನಿಗೆ ಈಜು ಬರುತ್ತಿರಲಿಲ್ಲ. ಈಜು ಬರುವಾತ ತನ್ನ ಶಕ್ತಿಯ ಆತ್ಮವಿಶ್ವಾಸದಿಂದ ನದಿಗೆ ಧುಮುಕಿ ಆಚೆ ಬದಿಯ ನೆಮ್ಮದಿಯ ಮನೆ ತಲುಪಿದ. ಈಜು ಬಾರದಾತ ಹೆದರಿ... ಚಿಂತಿತನಾಗಿ ಅಲ್ಲೇ ಬಾಕಿಯಾದ. ಮತ್ತು ಈಜು ಕಲಿಕೆಯ ಅಗತ್ಯತೆ ಕಂಡ 
       ನಾವು ಕೂಡಾ ಪ್ರತಿನಿತ್ಯ ಹಲವಾರು ವಿಧದಲ್ಲಿ ಹಾಗೂ ವಿವಿಧ ರೀತಿಯಲ್ಲಿ ಇನ್ನೊಬ್ಬರ ಸಹಾಯ ಎಂಬ ದೋಣಿಯ ಮೂಲಕ ಸುಲಭವಾಗಿ ನಮ್ಮ ನಮ್ಮ ನೆಮ್ಮದಿಯ ಮನೆಯನ್ನು ತಲುಪಿ ಆರಾಮವಾಗಿರುತ್ತೇವೆ. ಆದರೆ ಕೆಲವೊಮ್ಮೆ ದೋಣಿ ಕೈಕೊಟ್ಟಾಗ ಚಿಂತಿತರಾಗುತ್ತೇವೆ. ಆದರೆ ನದಿಯನ್ನು ದಾಟಲೇಬೇಕಾಗಿದೆ... ಮನೆಯನ್ನು ಸೇರಲೇ ಬೇಕಾಗಿದೆ.... ಏನ್ಮಾಡುವುದು... ಈಸಬೇಕು ಇದ್ದು ಜೈಸಬೇಕು.
       ಈಜುವುದು ನಾವೆಲ್ಲ ಕಲಿತಿರಲೇಬೇಕಾದ ವಿದ್ಯೆ. ಏಕೆಂದರೆ ಯಾವಾಗಲೂ ದೋಣಿಯ ಮೂಲಕ ಸುಲಭವಾಗಿ ಗಮ್ಯತಾಣಕ್ಕೆ ತಲುಪಬಹುದು. ಆದರೆ ಪ್ರತಿದಿನವು ನಮಗೆ ನದಿ ದಾಟಲು ದೋಣಿಯ ಸಹಾಯ ಸಿಗದು. ಕೆಲವೊಮ್ಮೆ ದೋಣಿಯ ಸಹಾಯ ಸಿಗದಿದ್ದಾಗ ಅಥವಾ ದೋಣಿಯು ಕೈ ಕೊಟ್ಟಾಗ ನಾವು ನೆಮ್ಮದಿಯ ತಾಣ ಮುಟ್ಟಲು ಸಾಧ್ಯವಿಲ್ಲ. ಆ ಹೊತ್ತಿನಲ್ಲಿ ನಾವು ಈಜುವ ವಿದ್ಯೆ ಕಲಿತಿದ್ದರೆ ಯಾರನ್ನೂ ಅವಲಂಬಿಸದೆ ನೆಮ್ಮದಿಯ ತಾಣ ಮುಟ್ಟಬಹುದು. ಆಕಸ್ಮಿಕ ಸಂದರ್ಭದಲ್ಲಿ ಈಜು ವಿದ್ಯೆ ಉಪಯೋಗಕ್ಕೆ ಬರುವುದು ಖಂಡಿತಾ. ಇಂತಹ ಅನಿವಾರ್ಯ ಕ್ಷಣಗಳಲ್ಲಿ ಸಮಯ ಸಂದರ್ಭಗಳೇ ಪಾಠಗಳು. ಅವಮಾನ ಅಪಮಾನ ನಿರ್ಲಕ್ಷ್ಯಗಳೇ ಪರೀಕ್ಷೆಗಳು. ಅವುಗಳನ್ನೆಲ್ಲ ಹೇಗೆ ಎದುರಿಸುತ್ತೇವೋ ಅದೇ ಉತ್ತರಗಳು. ಅನಗತ್ಯವಾಗಿರುವುದನ್ನು ಮರೆತು... ಅಗತ್ಯವಾದುವುಗಳನ್ನು ಅರಿತು... ಬೇಕಾದೆಡೆ ಬೆರೆತು ಮುನ್ನಡೆಯುತ್ತೇವೋ ಅದೇ ಫಲಿತಾಂಶ. ಆ ಗುಣಾತ್ಮಕ ಫಲಿತಾಂಶಕ್ಕಾಗಿ ಬದಲಾಗಬೇಕಾಗಿದೆ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article