ಬದಲಾಗೋಣವೇ ಪ್ಲೀಸ್ - 92
Wednesday, April 5, 2023
Edit
ಬದಲಾಗೋಣವೇ ಪ್ಲೀಸ್ - 92
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಅರರೆ... ಅರರೆ... ಬಂದೆ ಬಿಟ್ಟಿತು ಮಾರ್ಚ್ - 31. ಈ ದಿನ ಪ್ರಪಂಚದೆಲ್ಲೆಡೆ ಆರ್ಥಿಕ ಲೆಕ್ಕಾಚಾರಗಳ ಮುಕ್ತಾಯದ ದಿನ. ಲಾಭ-ನಷ್ಟಗಳ ಲೆಕ್ಕಾಚಾರ... ಸೋಲು- ಗೆಲುವಿನ ಲೆಕ್ಕಾಚಾರ.... ಮುಂದಿನ ಭವಿತವದ ದಿನಗಳ ಲೆಕ್ಕಾಚಾರ... ವರ್ಷದ ಲೆಕ್ಕಾಚಾರದ ದಿನ. ವಾರ್ಷಿಕ ಖಾತೆಯ ಕೊನೆಯ ದಿನ. ಎಪ್ರಿಲ್ - 1 ರಿಂದ ಹೊಸ ಲೆಕ್ಕಾಚಾರ ಅಂಬೆಗಾಲಿಡುವ ದಿನ. ಹೊಸತನದ ಪ್ರಾರಂಭ ದಿನ.
ಅಂದ ಹಾಗೆ ನಾವೆಲ್ಲರೂ ಕೂಡಾ ವಾರ್ಷಿಕ ಲೆಕ್ಕಾಚಾರಗಳನ್ನು ಮಾಡಿ ಹೊಸ ದೃಷ್ಟಿಯಲ್ಲಿ ನೋಡಬೇಕಾದ ಹಾಗೂ ಬಾಳಬೇಕಾದ ದಿನ. ಈ ದಿನವು ನಮ್ಮಲ್ಲಿರುವ ಎಲ್ಲಾ ಪೂರ್ವಾಗ್ರಹ ಪೀಡಿತ ತಪ್ಪುಗ್ರಹಿಕೆಗಳನ್ನು ತೆರವುಗೊಳಿಸುವ ದಿನವಾಗಲಿ. ವರ್ಷವಿಡಿ ಕ್ಷಣ ಕ್ಷಣವು ಹಿಂಡಿ ಹಿಂಡುತ್ತಿದ್ದ ನೂರಾರು ನೋವಿಗೆ ಗುಡ್ ಬೈ ಹೇಳುವ ದಿನವಾಗಲಿ. ಕೋಪದಿಂದ ಕುದಿದು ಕೆಂಡದಂತಿರುವ ಭಾವಗಳಿಗೆ ಪ್ರೀತಿಯ ನೀರು ಉಣಿಸಿ ಶಾಂತಗೊಳಿಸುವ ದಿನವಾಗಲಿ. ನಾನಾ ಆಶೆಗಳ ಅತೃಪ್ತ ಭಾವಗಳಿಗೆ ತೃಪ್ತತೆ ನೀಡುವ ದಿನವಾಗಲಿ. ಅಸಮಾಧಾನದಿಂದ ಕಂಗೆಟ್ಟಿರುವ ಆತ್ಮಕ್ಕೆ ಸಮಧಾನದ ಸ್ಪರ್ಶಧಾರೆ ಸುರಿಯುವ ದಿನವಾಗಲಿ. ಅಹಂಕಾರಗಳು ಅಳಿದು ಸರಳತೆ ಬೆಳೆದು ಬೀಗುವ ದಿನವಾಗಲಿ. ನಾನಾ ಅಪರಾಧ ಪ್ರಜ್ಞೆಗಳಿಗೆ ತೀಲಾಂಜಲಿ ನೀಡಿ ಪ್ರಜ್ಞೆ ಬೆಳಗುವ ದಿನವಾಗಲಿ. ಕತ್ತಲಿನ ದಿನಗಳಿಗೆ ಬೆಳಕಿನ ಬಟ್ಟೆಯನ್ನು ಹರಡಿ ಉಲ್ಲಾಸ ಹೊದಿಸುವ ದಿನವಾಗಲಿ. ಋಣಾತ್ಮಕ ನಿರಾಕರಣೆಗಳು ಕರಗಿ ಧನಾತ್ಮಕ ಸ್ಟೀಕಾರವು ಮನದಿ ಮೂಡುವ ದಿನವಾಗಲಿ. ಸತತ ವೈಫಲ್ಯಗಳು ಸಾಕಾಗಿ ನಿರಂತರ ಸಾಫಲ್ಯತೆಗೆ ಬದಲಾಗುವ ದಿನವಾಗಲಿ. ಬದುಕನ್ನು ದುರ್ಬಲಗೊಳಿಸುವ ಅನಂತ ಅಸೂಯೆಗಳು ಮಾಯವಾಗಿ ಪ್ರಬಲ ಆತ್ಮಸ್ಥೆರ್ಯ ಬೆಳೆಯುವ ದಿನವಾಗಲಿ. ನಮ್ಮೊಳಗಿರುವ ಅನುಚಿತ ವರ್ತನೆಗಳು ಅನಾಯಾಸವಾಗಿ ಔಚಿತ್ಯಪೂರ್ಣ ವರ್ತನೆಗಳಾಗಿ ಬದಲಾಗುವ ದಿನವಾಗಲಿ. ನನ್ನ ತಪ್ಪುಗಳು ತನ್ನಿಂತಾನೆ ಒಪ್ಪುಗಳಾಗಿ ಬದಲಾಗುವ ದಿನವಾಗಲಿ. ನನ್ನ ಬದುಕಿನ ಖಾತೆಯಲ್ಲಿ ಪ್ರೀತಿ - ಪ್ರೇಮ, ನೀತಿ-ನಿಯಮ, ನ್ಯಾಯ - ಪ್ರಾಮಾಣಿಕತೆ, ಸ್ವಾತಂತ್ರ - ಹೊಂದಾಣಿಕೆ, ಸಂಸ್ಕಾರ- ಸಂಸ್ಕೃತಿ, ಇನ್ನೊಬ್ಬರ ಬಗೆಗೆ ಗೌರವ, ಹಿರಿಯರಿಗೆ ಆಸರೆ ಭಾವ, ಕಿರಿಯರಿಗೆ ಪ್ರೋತ್ಸಾಹ ಭಾವ... ಇತ್ಯಾದಿ ಮೌಲ್ಯಗಳು ದಿನಾಲೂ ಡಿಪಾಸಿಟ್ ಗಳಾಗಿ ಬೀಳಲಿ.
ನಕರಾತ್ಮಕ ಅಂಶಗಳಾದ ದ್ವೇಷ , ಅಸೂಯೆ, ಅನುಚಿತ ಭಾವ, ಅಸಡ್ಡೆ, ಅಗೌರವ, ಅನ್ಯಾಯ, ಅಮಾನವೀಯತೆ, ದರ್ಪ - ಅಹಂಕಾರ ಇತ್ಯಾದಿ ಗಳಿರುವ ಖಾತೆಗಳು ನಿಷ್ಕ್ರಿಯವಾಗಿ ಮತ್ತು ಶಾಶ್ವತವಾಗಿ ಮುಚ್ಚಿ ಹೋಗಲಿ. ಬದುಕಿನ ಮುಂದಿನ ವರ್ಷದ ಲೆಕ್ಕಾಚಾರಗಳಲ್ಲಿ ಧನಾತ್ಮಕ ಲಾಭಗಳು ಹೆಚ್ಚಾಗಲಿ- ಋಣಾತ್ಮಕ ನಷ್ಟಗಳು ಶೂನ್ಯವಾಗಲಿ.
ಎಲ್ಲರಿಗೂ ಮುಂದಿನ ವಾರ್ಷಿಕ ಲೆಕ್ಕಾಚಾರಗಳು ಧನಾತ್ಮಕವಾಗಿ ಬದಲಾಗಲಿ ಅದಕ್ಕಾಗಿ ಶುಭ ಹಾರೈಸುತ್ತೇನೆ. ಆ ಧನಾತ್ಮಕ ಬದಲಾವಣೆಯ ದಿನಗಳನ್ನು ಇಂದೇ ಪ್ರಾರಂಭಿಸೋಣ. ಈ ವಾರ್ಷಿಕ ಬದುಕು ಸದಾ ಸಂತಸದಾಯಕವಾಗಲಿ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************