-->
ಹಕ್ಕಿ ಕಥೆ : ಸಂಚಿಕೆ - 93

ಹಕ್ಕಿ ಕಥೆ : ಸಂಚಿಕೆ - 93

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
           
               ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ.. ನಾನು ಕಳಸದಲ್ಲಿ ಇದ್ದಾಗ ಪ್ರತಿದಿನ ಶಾಲೆಗೆ ನನ್ನ ಕ್ಯಾಮರಾ ಹಿಡಿದುಕೊಂಡೇ ಹೋಗುತ್ತಿದ್ದೆ. ಗುಡ್ಡದ ಮೇಲೆ ನಮ್ಮ ಸಂಸೆ ಶಾಲೆ. ಅಲ್ಲಿ ನಿಂತು ನೋಡಿದರೆ ಇಡೀ ಸಂಸೆ ಹಳ್ಳಿ ಮತ್ತು ಮಧ್ಯೆ ಹರಿಯುವ ಸೋಮಾವತೀ ನದಿಯ ಸುಂದರ ದೃಶ್ಯ ಕಾಣುತ್ತಿತ್ತು. ಶಾಲೆಯ ಆಫೀಸಿನ ಮುಂದೆ ನಿಂತರೆ ದೂರದಿಂದ ಬಲ್ಲಾಳರಾಯನ ದುರ್ಗ ಸ್ಪಷ್ಟವಾಗಿ ಕಾಣುತ್ತಿತ್ತು. ಶಾಲೆಯ ಹಿಂದಿನ ಗುಡ್ಡ ಹತ್ತಿದರೆ ಕುದುರೆಮುಖ ಶಿಖರದ ತುದಿಯೂ ಕಾಣುತ್ತಿತ್ತು. ಮಳೆಗಾಲದ ಮೂರುತಿಂಗಳು ಸೂರ್ಯನನ್ನು ಮೋಡಗಳು ಮರೆಮಾಡುತ್ತಿದ್ದವು. ಮಾರ್ಚ್ ತಿಂಗಳು ಬರುವವರೆಗೂ ಚಳಿ ಬಿಡುತ್ತಿರಲಿಲ್ಲ, ಕೋಟು ಸದಾ ಮೈಲೇಲೆ ಇರಬೇಕಿತ್ತು. ಚಳಿಗಾಲದಲ್ಲಿ ಬೆಳಗ್ಗೆ ಬಿಸಿಲಿಗೆ ಮೈ ಒಡ್ಡಿ ನಿಂತರೆ ಅಲ್ಲಿಂದ ನೆರಳಿಗೆ ಬರಲು ಮನಸ್ಸೇ ಬರುತ್ತಿರಲಿಲ್ಲ. ಕಣಿವೆ ಗುಡ್ಡಗಳ ದೃಷ್ಯ ನೋಡುತ್ತಾ ಹಾಗೇ ನಿಂತಿರಬೇಕೆಂದು ಮನಸ್ಸಾಗುತ್ತಿತ್ತು. 
ಶಾಲೆಯಲ್ಲಿ ಬಿಡುವಿನ ಅವಧಿ ಇದ್ದಾಗಲೆಲ್ಲ ಕ್ಯಾಮರಾ ಹಿಡಿದುಕೊಂಡು ಕಣಿವೆಯ ದೃಷ್ಯವನ್ನು ನೋಡುತ್ತಾ ನಿಂತಿರುತ್ತಿದ್ದೆ. ಒಂದು ದಿನ ಹೀಗೇ ಕುಳಿತಿದ್ದಾಗ ಅಲ್ಲೇ ಸ್ವಲ್ಪ ದೂರದ ಮರದಲ್ಲಿ ಒಂದು ಹಕ್ಕಿ ಕುಳಿತದ್ದು ಕಾಣಿಸಿತು. ಬುಲ್ ಬುಲ್ ಹಕ್ಕಿಗಿಂತ ಸ್ವಲ್ಪ ದೊಡ್ಡದು. ಹಸಿರುಬಣ್ಣದ ರೆಕ್ಕೆಗಳು, ಬೆನ್ನಿನಲ್ಲಿ ಚಂದದ ನೀಲಿ ಬಣ್ಣ, ತಲೆಯಿಂದ ಬೆನ್ನಿನವರೆಗೂ ಚಂದದ ಕಂದು ಮಿಶ್ರಿತ ಕೇಸರಿ ಬಣ್ಣ, ಗುದ್ದಲಿ ಅಥವಾ ಪಿಕಾಸಿಯಂಥ ಉದ್ದನೆಯ ಕಪ್ಪು ಕೊಕ್ಕು, ಕೊಕ್ಕಿನಿಂದ ಕಣ್ಣಿನವರೆಗೂ ಕಪ್ಪು ಬಣ್ಣದ ಗೆರೆ, ಎದೆ ಮತ್ತು ಕುತ್ತಿಗೆಯಲ್ಲಿ ಬಿಳಿಬಣ್ಣದ ಮೇಲೆ ಹಳದಿ ಬಣ್ಣದ ಛಾಯೆಗಳು, ನಡುವೆ ಕಾಲರ್ ಹಾಕಿದಂತೆ ಕಾಣುವ ಕಪ್ಪು ಗೆರೆ. ಕ್ಯಾಮರಾ ಕೈಯಲ್ಲೇ ಇದ್ದುದರಿಂದ ಕಾದು ಒಳ್ಳೆಯ ಚಿತ್ರ ಸಿಕ್ಕಿತು.
       ಮರದ ಕೊಂಬೆಯ ತುದಿಯಲ್ಲಿ ಕುಳಿತು ಸುತ್ತಲೂ ನೋಡುತ್ತಿತ್ತು. ಆಕಾಶದಲ್ಲಿ ಹಾರುವ ಯಾವುದೋ ಹುಳು ಕಂಡರೆ ಬಾಣಬಿಟ್ಟಂತೆ ಒಂದೇ ನೆಗೆತಕ್ಕೆ ಹಾರಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಿತ್ತು, ಮತ್ತೆ ಅದೇ ಕೊಂಬೆಯ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು. ಹಲವು ಬಾರಿ ಪ್ರಯತ್ನಿಸಿದ ನಂತರ ಕೊನೆಗೊಂದು ಜೇನುಹುಳವನ್ನು ಹಿಡಿಯಿತು. ಹಕ್ಕಿಗಳು ಸಿಕ್ಕ ಆಹಾರವನ್ನು ಇಡಿಯಾಗಿ ನುಂಗುತ್ತವೆ. ಈ ಜೇನುಹುಳುವನ್ನು ನುಂಗುವಾಗ ಜೇನುಹುಳ ಕಚ್ಚಿಬಿಟ್ಟರೆ ಎಂದು ನಾನು ಯೋಚಿಸುತ್ತಿದ್ದೆ. ಹಕ್ಕಿ ತಾನು ಹಿಡಿದ ಜೇನು ಹುಳುವನ್ನು ಕೊಕ್ಕಿನಲ್ಲಿ ಹಿಡಿದು, ಕುಳಿತ ಮರದ ಕೊಂಬೆಗೆ ಉಜ್ಜಿ ಜೇನುಹುಳುವಿನ ಚುಚ್ಚುವ ಸೂಜಿಯನ್ನು ತೆಗೆದು ಆಮೇಲೆ ನುಂಗಿಬಿಟ್ಟಿತು. ಹಕ್ಕಿಯ ಬುಧ್ಧಿವಂತಿಕೆ ನೋಡಿ ನನಗೂ ಆಶ್ಚರ್ಯವಾಯಿತು. ಇದೇ ಕಾರಣಕ್ಕೇ ಈ ಹಕ್ಕಿಗೆ ಜೇನುಹಿಡುಕ ಎಂಬ ಹೆಸರು ಇದೆ. 
       ಫೆಬ್ರವರಿ ತಿಂಗಳು ದಾಟಿದರೆ ನಮ್ಮ ಶಾಲೆಯ ಗುಡ್ಡ ಹತ್ತುವ ದಾರಿಯ ಆಸುಪಾಸಿನಲ್ಲಿ ಈ ಹಕ್ಕಿ ಪ್ರತಿದಿನ ನೋಡಲು ಸಿಗುತ್ತಿತ್ತು. ಮಾರ್ಚ್ ತಿಂಗಳಿನ ಮಧ್ಯೆ ಹತ್ತನೇ ತರಗತಿಯ ಮಕ್ಕಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು, ಹಾಗಾಗಿ ಶಾಲೆ ನಿಶ್ಶಬ್ದವಾಗಿತ್ತು. ನಾನು ಶಿಕ್ಷಕರ ಕೊಠಡಿಯಲ್ಲಿ ಕುಳಿತು ಏನೋ ಬರೆಯುತ್ತಿದ್ದೆ. ಜೇನುಹಿಡುಕ ನಿರಂತರವಾಗಿ ಕೂಗುವ ಸದ್ದು ಕೇಳಿಸಿತು. ಬಸ್ ಅಥವಾ ಲಾರಿಯನ್ನು ಹಿಂದಕ್ಕೆ ಚಲಿಸಬೇಕಾದ ಅದರ ಕಂಡೆಕ್ಟರ್ ಬರಲಿ, ಬರಲಿ ಎಂಬಂತೆ ವಿಶಲ್ ಊದುವ ಸದ್ದಿನ ಹಾಗೆ ಹಕ್ಕಿಯ ಕೂಗು ಕೇಳುತ್ತಿತ್ತು. ನಿಧಾನವಾಗಿ ಕಿಟಕಿಯಿಂದ ಇಣುಕಿ ನೋಡಿದರೆ, ಒಂದು ಹಕ್ಕಿ ಮರದ ಮೇಲೆ ಕುಳಿತು ಕೂಗುತ್ತಿತ್ತು, ಇನ್ನೊಂದು ಗುಡ್ಡದ ಬದಿಯಲ್ಲಿ ಮಣ್ಣನ್ನು ಅಗೆಯುತ್ತಾ ತೂತು ಕೊರೆಯುತ್ತಿತ್ತು. ಹಲವಾರು ದಿನಗಳ ವರೆಗೂ ಹೀಗೇ ನಡೆದಿತ್ತು. ಬೆಳಗ್ಗಿನ ಆಹಾರ ಹಿಡಿಯುವ ಕೆಲಸ ಮುಗಿಸಿ ಹಕ್ಕಿಗಳು ಗುಡ್ಡ ಕೊರೆದು ಗೂಡು ಮಾಡುತ್ತಿದ್ದವು. ಕೆಲವು ಕಡೆ ಅರ್ಧ ಗೂಡುಮಾಡಿ ಅದನ್ನು ಬಿಟ್ಟು ಬೇರೆ ಜಾಗದಲ್ಲಿ ಗೂಡು ಮಾಡುತ್ತಿದ್ದವು. ಎಪ್ರಿಲ್ ರಜೆಗೆ ನಾವು ಹೋಗುವವರೆಗೂ ಹೀಗೆ ಪಿಕಾಸಿಯಂಥ ಕೊಕ್ಕಿನಿಂದ ಎರಡೂ ಹಕ್ಕಿಗಳು ಸೇರಿ ಮಣ್ಣಿನಲ್ಲಿ ಉದ್ದಕ್ಕೆ ತೂತು ಕೊರೆದು ಗೂಡುಮಾಡುತ್ತಿದ್ದವು. ಜೂನ್ ತಿಂಗಳಿನಲ್ಲಿ ಶಾಲೆ ಪ್ರಾರಂಭಕ್ಕೆ ಬಂದಾಗ ಹಕ್ಕಿಗಳ ಸುಳಿವೇ ಇರುತ್ತಿರಲಿಲ್ಲ. ಮೊಟ್ಟೆ ಇಟ್ಟು ಮರಿ ಮಾಡಿ ಹೋಗಿರುತ್ತಿದ್ದವು. ಜೂನ್ ತಿಂಗಳಿನಲ್ಲಿ ಒಂದುದಿನ ಕುತೂಹಲಕ್ಕೆ ಅಲ್ಲೇ ಇದ್ದ ಒಂದು ತೂತಿನಲ್ಲಿ ಉದ್ದನೆಯ ಕೋಲು ಹಾಕಿ ನೋಡಿದೆ, ಸುಮಾರು ಒಂದು ಮೀಟರ್ ಉದ್ದಕ್ಕೆ ತೂತು ಕೊರೆದಿತ್ತು. ಇದೇ ಕಾರಣಕ್ಕೆ ಈ ಹಕ್ಕಿಯನ್ನು ಗಣಿಗಾರ್ಲೆ ಹಕ್ಕಿ ಅಂತ ಕರೀತಾರೆ.
       ನಿಮ್ಮ ಮನೆಯ ಆಸುಪಾಸಿನಲ್ಲೂ ಈ ಹಕ್ಕಿ ನೋಡಲು ಸಿಗಬಹುದು.. 
ಕನ್ನಡ ಹೆಸರು: ಗಣಿಗಾರ್ಲೆ ಹಕ್ಕಿ, ಜೇನು ಹಿಡುಕ
ಇಂಗ್ಲೀಷ್ ಹೆಸರು: Chestnut-headed Bee-eater
ವೈಜ್ಞಾನಿಕ ಹೆಸರು:  Merops leschenaulti
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
............................................. ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article