ಒಗ್ಗಟ್ಟಿನಲ್ಲಿ ಬಲವಿದೆ - ಕಥೆ ರಚನೆ : ದೀಕ್ಷಾ ಎಂ.ಡಿ, 9ನೇ ತರಗತಿ
Monday, April 3, 2023
Edit
ಕಥೆ ರಚನೆ : ದೀಕ್ಷಾ ಎಂ.ಡಿ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಒಂದು ದಟ್ಟವಾದ ಅಡವಿಯಲ್ಲಿ ಹಸಿರಿನಿಂದ ಕೂಡಿದ ಗಿಡಮರಗಳು, ತಣ್ಣನೆ ಬೀಸುವ ಗಾಳಿ, ಜುಳುಜುಳು ನಾದದೊಂದಿಗೆ ಹರಿಯುವ ನದಿ, ಸುತ್ತ ಕಣ್ಣು ಹಾಯಿಸಿದರೆ ಕಾಣ ಸಿಗುವ ಆನೆ, ಮೊಲ, ಜಿಂಕೆ, ನವಿಲು, ಪಾರಿವಾಳ, ಜಿರಾಫೆ, ಕಾಡೆಮ್ಮೆ ಮೊದಲಾದ ಪ್ರಾಣಿ ಪಕ್ಷಿಗಳು. ಬಲಿಷ್ಠವಾದ ಮೈ, ಕಡು ಕೇಸರಿ ಬಣ್ಣದ ತೊಗಲು, ಪೌರುಷತ್ವ ಕಾಣುವ ಕಂದು ಬಣ್ಣದ ಮುಖ ಹಾಗೂ ಘರ್ಜನೆಯ ಕೂಗನ್ನು ಒಳಗೊಂಡ ಕಾಡಿನ ರಾಜನಾದ ಸಿಂಹ ಹೇಳಿದ ಮಾತನ್ನು ಮೀರಿ ಉಳಿದ ಯಾವ ಪ್ರಾಣಿಗಳು ನಡೆಯುವಂತಿರಲಿಲ್ಲ. ಹಾಗೆಂದು ಸಿಂಹ ಕ್ರೂರವಾಗಿರದೆ, ಎಲ್ಲಾ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸುತಿತ್ತು. ಒಂದು ಕಡೆ ರಾಜನಿಗಿರುವ ಗತ್ತು, ಇನ್ನೊಂದು ಕಡೆ ಪ್ರೀತಿ, ಸಹಕಾರ, ತಾಳ್ಮೆಯಂತಹ ಗುಣಗಳನ್ನು ಒಳಗೊಂಡಿತ್ತು. ಹಾಗಾಗಿ ರಾಜನ ಮಾತನ್ನೇ ಶಾಸನವಾಗಿ ತಿಳಿದು, ಚಾಚೂ ತಪ್ಪದೇ ನಿರ್ವಹಿಸುತಿತ್ತು.
ಈ ಕಾಡಿನ ಆರಂಭದಲ್ಲಿ ಒಂದು ಮನೆಯಿತ್ತು. ಅದು ಜೋಸೆಫ್ ಎಂಬ ಅರಣ್ಯಧಿಕಾರಿಯವರ ಮನೆಯಾಗಿತ್ತು. ಇವರು ಕಾಡನ್ನು ನೋಡಿಕೊಳ್ಳುವುದರ ಜೊತೆಗೆ ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚು ಕನಿಕರವನ್ನು ಹೊಂದಿದ್ದರು. ಹಾಗಾಗಿ ಮಾಂಸ ಹಾಗೂ ಇತರ ಆಹಾರವನ್ನು ಕೊಡುತ್ತಿದ್ದರು. ಹೀಗೆ ಸಹಬಾಳ್ವೆ, ಪರಸ್ಪರ ಸಹಕಾರದಿಂದ ಒಗ್ಗಟ್ಟಾಗಿ ಬದುಕುತಿದ್ದವು. ಕಾಡಿನಲ್ಲಿ ಯಾವುದಾದರೂ ಪ್ರಾಣಿಗಳ ನಡುವೆ ಜಗಳವಾಗುತ್ತಿದ್ದರೆ, ಸಿಂಹವು ನ್ಯಾಯವಾಗಿ ತೀರ್ಪನ್ನು ನೀಡುವ ಕೌಶಲ್ಯವನ್ನು ಹೊಂದಿತ್ತು.
ಹೀಗಿರುವಾಗ ಒಂದು ದಿನ ಬೇರೆ ಬೇರೆ ಕಾಡುಗಳ ಮರಗಳ ಮೇಲೆ ಬಾಣಗಳನ್ನು ಹೂಡುತಿದ್ದ ಮರ ಕಡಿಯುವವರ ಗುಂಪಿನ ಕಣ್ಣು ಈಗ ಈ ಕಾಡಿನ ಮೇಲೆ ಹೊರಳಿತು. ಈಗಾಗಲೇ ನಮ್ಮ ಅದೃಷ್ಟ ಖುಲಾಯಿಸಿತೆಂದು ಅವರ ಸಂತೋಷ ಮುಗಿಲು ಮುಟ್ಟಿತು. ಹಣ ಬೆಳೆಯುವ ಕೌಶಲ್ಯವನ್ನು ಹೊಂದಿದ ಇವರು ಮರಗಳ ಬೆಲೆ ಕಡಿಮೆಯಾಗುವ ಮುನ್ನ ಮಾರಾಟ ಮಾಡಿ ಐದಾರು ಪಟ್ಟು ಲಾಭ ಪಡೆದುಕೊಳ್ಳುವ ತರಾತುರಿಯಲ್ಲಿದ್ದರು. ಈ ಗುಂಪಿನಲ್ಲಿ ದೊಡ್ಡ ಪ್ರಮಾಣದ ಜನ ಸಂಖ್ಯೆಇತ್ತು. ಅದರಂತೆಯೇ ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು ಹಾಗೂ ಇತರ ಮರಗಳನ್ನು ಕಡಿದು ಕಡಿದು ಅರ್ಧದಷ್ಟು ಜಾಗ ಖಾಲಿಯಾಗಿ ಪ್ರಾಣಿಗಳಿಗೆ ಜೀವಿಸಲು ಕಷ್ಟವಾಗುತಿತ್ತು.
ಈ ಸಮಸ್ಯೆಯನ್ನು ಪರಿಹರಿಸುವ ಕುರಿತು ಸಿಂಹವು ಎಲ್ಲಾ ಪ್ರಾಣಿಗಳ ಸಭೆ ಕರೆಯಿತು. ತಲೆಮಾರುಗಳಿಂದ ನೆರಳಾಗಿ ತಮ್ಮನ್ನು ಕಾಯುತಿದ್ದ ಕಾಡನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಯೋಚನೆಯಲ್ಲಿ ಪ್ರಾಣಿ-ಪಕ್ಷಿಗಳು ವ್ಯಸ್ತವಾಗಿದ್ದವು. ಆಗ ಬುದ್ದಿವಂತ ನರಿಯು ''ಸಿಂಹರಾಯ ಈ ಕೆಟ್ಟ ಮನುಷ್ಯರನ್ನು ನೀನೆ ಎದುರಿಸಬೇಕು. ಇದಲ್ಲದೆ ಬೇರೆ ಮಾರ್ಗವಿಲ್ಲ. ಅರಣ್ಯಾಧಿಕಾರಿ ಬೇರೆ ಇಲ್ಲಿಲ್ಲ'' ಎಂದು ತನ್ನ ಉಪಾಯವನ್ನು ಮುಂದಿಟ್ಟಿತು. ಸಿಂಹವು 'ಪ್ರಜೆಗಳನ್ನು ರಕ್ಷಿಸುವುದು ರಾಜನಾದವನ ಕರ್ತವ್ಯ. ಪ್ರಜೆಗಳ ರಕ್ಷಣೆಯ ವಿಷಯದಲ್ಲಿ ನಾನು ಯಾವ ಕಾರ್ಯಕ್ಕೂ ಸಿದ್ದನಾಗಿರಬೇಕು' ಎಂದು ಮನದಲ್ಲೇ ನೆನೆಯುತ್ತಾ, ''ನನಗೆ ಇದು ಸರಿ ಎನಿಸುತ್ತಿದೆ, ನಿಮ್ಮ ಅಭಿಪ್ರಾಯವೇನು? ತಿಳಿಸಿ'' ಎಂದಿತು. ಇದಕ್ಕೆ ಉಳಿದ ಪ್ರಾಣಿಗಳು ''ನಮಗೆ ಒಪ್ಪಿಗೆ ಇದೆ '' ಎಂದವು. ಇವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದುಕೊಂಡು ಮರ ಕಡಿಯುವ ಸಂಧರ್ಭದಲ್ಲೇ ದಾಳಿ ಮಾಡಿತು. ಇವರ ಜೊತೆ ಸೆಣಸಾಡಿತು. ಬಲಿಷ್ಠವಾದ ಗುಂಪನ್ನು ಏಕಾಂಗಿಯಾಗಿ ಎದುರಿಸುವುದು ಕಷ್ಟವಾಗಿ, ಮನುಷ್ಯರ ಬಲಿಗೆ ಈಡಾಯಿತು.
ಪ್ರಾಣಿ-ಪಕ್ಷಿಗಳ ಕಣ್ಣೀರು ಈ ಸ್ವಾರ್ಥ ಮಾನವರಿಗೆ ಕಾಣಿಸದೇ ಹೋಯಿತು. ಸಿಂಹ ಸತ್ತ ಮೇಲೆ ಕಾಡಿನ ಎಲ್ಲಾ ಜೀವಿಗಳು ಸ್ತಬ್ದವಾಗಿ, ದುಃಖದಲ್ಲಿದ್ದವು. ಕಾಡಿನ ರಾಜನ ಇಲ್ಲದಿರುವಿಕೆಯನ್ನು ತಿಳಿದ ಇವರು ತಮ್ಮ ಕೆಲಸವನ್ನು ಸುಲಭವಾಗಿಸಲು ಒಂದೊಂದೇ ಪ್ರಾಣಿಗಳನ್ನು ಕೊಲ್ಲಲು ಮುಂದಾದರು. ಆದ್ದರಿಂದ ಎಲ್ಲಾ ಪ್ರಾಣಿಗಳು 'ನಾವಿನ್ನು ಸುಮ್ಮನಿದ್ದರೆ ಆಗುವುದಿಲ್ಲ' ಎಂದು ಎಲ್ಲಾ ಪ್ರಾಣಿ-ಪಕ್ಷಿಗಳು ಒಗ್ಗಟ್ಟಾಗಿ ಆ ಗುಂಪಿನ ಮೇಲೆ ಉಪಾಯದಿಂದ ದಾಳಿ ಮಾಡಿದವು. ಹೀಗೆ ಆ ಗುಂಪಿನ ಜನರು ಗಾಯಗೊಂಡು ಮತ್ತೆಂದೂ ಆ ಕಡೆ ತಿರುಗಿ ನೋಡಲಿಲ್ಲ.
ಹೀಗಿರುವಾಗ ಅರಣ್ಯಧಿಕಾರಿ ರಜೆಯನ್ನು ಮುಗಿಸಿ ಕಾಡಿಗೆ ಬಂದರು. ಅಲ್ಲಿಯ ಸ್ಥಿತಿಯನ್ನು ಕಂಡು ಬೆರಗಾದರು. ಮನಸ್ಸು ತಳಮಳಗೊಂಡು, ವಿಷಯವನ್ನು ತಿಳಿದು ಇವರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದರು. ಇವರ ತಪ್ಪಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿ, ಪುನಃ ಗಿಡಗಳನ್ನು ನೆಟ್ಟು ಬೆಳೆಸಿದರು. ಮತ್ತೆ ಎಲ್ಲಾ ಪ್ರಾಣಿ-ಪಕ್ಷಿಗಳು ಸಂತೋಷದಿಂದ ಬಾಳುತ್ತಿದ್ದವು. ಆದ್ದರಿಂದ ನಾವು ಅರಣ್ಯವನ್ನು ರಕ್ಷಿಸುವಲ್ಲಿ ಮುಂದಾಗಬೇಕು. ಒಗ್ಗಟ್ಟಿನಿಂದ ಇದ್ದರೆ ಯಾವ ಕಾರ್ಯವನ್ನಾದರೂ ಸಾಧಿಸಬಹುದು.
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ: ದೀಕ್ಷಾ ಎಂ.ಡಿ
*******************************************