-->
ಜೀವನ ಸಂಭ್ರಮ : ಸಂಚಿಕೆ - 82

ಜೀವನ ಸಂಭ್ರಮ : ಸಂಚಿಕೆ - 82

ಜೀವನ ಸಂಭ್ರಮ : ಸಂಚಿಕೆ - 82
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
               
           ಮಕ್ಕಳೇ, ಜಗತ್ತು ಅಪೂರ್ಣ. ಹೇಗೆಂದರೆ ಇಲ್ಲಿರುವ ಪ್ರತಿಯೊಂದು ವಸ್ತು ಅಪೂರ್ಣವೇ. ಈ ಭೂಮಿಯನ್ನು ನೋಡಿ. ಒಂದು ಕಡೆ ಇರುವಂತೆ ಮತ್ತೊಂದು ಕಡೆಯಲ್ಲಿ ಇಲ್ಲ. ಮಂಗಳೂರಿನಲ್ಲಿ ಸಾಗರವಿದೆ. ಕೊಡಗಿನಲ್ಲಿ ಸಾಗರವಿಲ್ಲ. ಕೊಡಗಿನಲ್ಲಿ ಗಿರಿ, ಕಂದರ, ಸಸ್ಯ ವೈವಿಧ್ಯ ಅಲ್ಲಿನ ವೈಭವವೇ ಬೇರೆ. ಮಂಗಳೂರಿನ ವೈಭವವೇ ಬೇರೆ. ಕೊಡಗಿನಲ್ಲಿ ಕಾಫಿ ಬೆಳೆಯುತ್ತಾರೆ. ಮಂಗಳೂರಿನಲ್ಲಿ ಇಲ್ಲ. ಮಂಡ್ಯ, ಮೈಸೂರು ಸಮತಟ್ಟಾದ ಬಯಲು ಪ್ರದೇಶ. ಅಲ್ಲಿ ಭತ್ತ, ರಾಗಿ, ಕಬ್ಬು ಮತ್ತು ತೆಂಗು ಬೆಳೆಯುತ್ತಾರೆ. ಉತ್ತರ ಕರ್ನಾಟಕದ ಮಣ್ಣು ಬೇರೆ. ಅಲ್ಲಿ ತೊಗರಿ, ಜೋಳ ಬೆಳೆಯುತ್ತಾರೆ. ಮಳೆಯ ಪ್ರಮಾಣ ಸ್ಥಳದಿಂದ ಸ್ಥಳಕ್ಕೆ ಭಿನ್ನ. ಉಷ್ಣತೆಯೂ ಕೂಡ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಎಲ್ಲಾ ಗುಣಲಕ್ಷಣ ಇರುವ ಒಂದೇ ಒಂದು ಸ್ಥಳ ಇಲ್ಲ. ಬೇರೆ ಬೇರೆ ಗುಣಲಕ್ಷಣವಿರುವ ಸ್ಥಳ ಈ ಭೂಮಿಯ ಮೇಲಿದೆ. ರಾಜಸ್ಥಾನದಲ್ಲಿ ಮರುಭೂಮಿ ಇದೆ. ಉತ್ತರ ಭಾರತದಲ್ಲಿ ಗೋಧಿ ಬೆಳೆಯುತ್ತಾರೆ. ಹವಾಮಾನ ಸ್ಥಳದಿಂದ ಸ್ಥಳಕ್ಕೆ ಬೇರೆ ಇದೆ. ಎಲ್ಲಾ ಲಕ್ಷಣ ಹೊಂದಿರುವ ಒಂದು ಸ್ಥಳ ಅಂತ ಇಲ್ಲ. ಪ್ರತಿ ಸ್ಥಳವೂ ವೈವಿಧ್ಯಮಯವಾಗಿರುವುದರಿಂದ ಯಾವುದೇ ಒಂದು ಸ್ಥಳ ಪರಿಪೂರ್ಣತೆ ಅಂತ ಇಲ್ಲ. ವಸ್ತುಗಳು ಕೂಡ ಅಪೂರ್ಣವೇ. ಒಂದು ವಸ್ತುವಿನಲ್ಲಿ ಇರುವ ಲಕ್ಷಣ ಇನ್ನೊಂದು ವಸ್ತುವಿನಲ್ಲಿ ಇಲ್ಲ. ಮಲ್ಲಿಗೆ ಹೂವು ಬಣ್ಣ, ವಾಸನೆ ಮತ್ತು ಆಕಾರ ಒಂದು ರೀತಿ ಆದರೆ, ಸಂಪಿಗೆ ಹೂವಿನ ಬಣ್ಣ, ವಾಸನೆ ಮತ್ತು ಆಕಾರ ಬೇರೊಂದು ರೀತಿ. ಹಾಗೆ ಗುಲಾಬಿ, ಕೇದಗೆ ಗಿಡಗಳ ರಚನೆಯಲ್ಲೂ ವೈವಿಧ್ಯ. ಒಂದರಲ್ಲಿ ಇನ್ನೊಂದು ಹುಡುಕಲು ಸಾಧ್ಯವಿಲ್ಲ. ಅಷ್ಟೊಂದು ವೈವಿಧ್ಯತೆ ಈ ನಿಸರ್ಗದಲ್ಲಿ. 
      ಈ ನಿಸರ್ಗದಲ್ಲಿ ಕೆಲವು ಹೂ ಹಗಲಲ್ಲಿ ಅರಳಿ ಹೂವಿನ ಸುವಾಸನೆ ಹರಡಿದರೆ, ಕೆಲವು ರಾತ್ರಿಯಲ್ಲಿ ಅರಳಿ ಸುವಾಸನೆ ಹರಡುತ್ತದೆ. ಅವುಗಳ ಜೀವಿತಾವಧಿ ಭಿನ್ನಭಿನ್ನ. ಹಣ್ಣುಗಳಲ್ಲಿ ಆಕಾರ, ಬಣ್ಣ ಮತ್ತು ರುಚಿಯಲ್ಲಿ ಭಿನ್ನ-ಭಿನ್ನ. ಮಾವಿನ ಹಣ್ಣಿನಲ್ಲಿ ಎಷ್ಟೊಂದು ತಳಿಗಳಿವೆ...... ತಿಳಿದಿದೆ. ಅವುಗಳ ಆಕಾರ, ಬಣ್ಣ ಮತ್ತು ರುಚಿ ಬೇರೆ ಬೇರೆ. ಮರದ ಎಲೆ ಹಸಿರು ಬಣ್ಣವಿದ್ದರೂ ಸಹ ಹಸಿರಿನಲ್ಲಿ ಎಷ್ಟೊಂದು ವೈವಿಧ್ಯ. ಮುತ್ತು, ರತ್ನ ಮತ್ತು ಚಿನ್ನ ಹೊಳೆಯುತ್ತದೆ ಆದರೆ ವಾಸನೆ ಇಲ್ಲ. ಹಕ್ಕಿಗಳ ಬಣ್ಣ, ಧ್ವನಿ ಮತ್ತು ಆಕಾರ ಭಿನ್ನ ಭಿನ್ನ. ಪ್ರಾಣಿ-ಪಕ್ಷಿಗಳಲ್ಲೂ ಅವುಗಳ ಗಾತ್ರ, ಬಣ್ಣ ಮತ್ತು ಧ್ವನಿ ಭಿನ್ನಭಿನ್ನ. ಎಲ್ಲಾ ರೂಪವನ್ನು ಹೊಂದಿರುವ ಒಂದು ಪ್ರಾಣಿ ಇಲ್ಲ. ಎಲ್ಲಾ ಬಣ್ಣ, ಧ್ವನಿ ಮತ್ತು ಆಕಾರ ಹೊಂದಿರುವ ಒಂದು ಪಕ್ಷಿ ಇಲ್ಲ. ಎಷ್ಟೊಂದು ವೈವಿಧ್ಯ ವೈಭವ ಈ ಜಗತ್ತು?.
    ವಿಕಾಸವಾದದ ಇತ್ತೀಚಿನ ಜೀವಿ ಮಾನವ. ವಿಕಾಸವಾಗುವ ಮೊದಲೇ ಈ ವೈಭವದ ಜಗತ್ತು ಇತ್ತು. ಪಕ್ಷಿ, ಪ್ರಾಣಿ ಮತ್ತು ಸಸ್ಯ ಎಲ್ಲಾ ಅಸ್ತಿತ್ವದಲ್ಲಿ ಇದ್ದವು. ಮನುಷ್ಯ ಇತ್ತೀಚಿಗೆ ಬಂದು, ಈ ನಿಸರ್ಗದ ಮೇಲೆ ಪ್ರಭುತ್ವ ಸ್ಥಾಪಿಸಲು ಹೊರಟಿದ್ದಾನೆ. ಅದು ಎಂದಿಗೂ ಸಾಧ್ಯವಿಲ್ಲ. ಈ ಭೂಮಿ, ಮಾನವ ಬರುವುದಕ್ಕಿಂತ ಅಂದರೆ ವಿಕಾಸವಾಗುವುದಕ್ಕಿಂತ ಮೊದಲಿನಿಂದಲೂ ಇದೆ. ಅದೇ ಇತ್ತೀಚಿಗೆ ಬಂದ ಮಾನವ ಈ ಭೂಮಿಯ ಮಾಲೀಕನೆಂದು ಹೋರಾಡಿದ. ಮಾಲೀಕ ಎಂದು ಹೆಸರು ಬರೆಸಿಕೊಂಡ. ನಂತರ ಸತ್ತ. ಹೀಗೆ ನನ್ನದು ಎಂದು ಹೇಳಿಕೊಂಡವರೆಲ್ಲ ಸತ್ತಿದ್ದಾರೆ. ಭೂಮಿ ಮಾತ್ರ ಹಾಗೆ ಇದೆ. ನಾವು ಬಳಕೆದಾರರೇ ವಿನಹ ಮಾಲೀಕರಲ್ಲ ಎಂದು ಇನ್ನೂ ತಿಳಿದಿಲ್ಲ. ಈ ಭೂಮಿಯ ಮೇಲಿರುವ ಯಾವುದೇ ವಸ್ತುವಿಗೆ ಮಾನವ ಮಾಲೀಕನಲ್ಲ. ನಾವು ಮನೆ ನಿರ್ಮಿಸುತ್ತೇವೆ. ಈ ಮನೆಗೆ ಬಳಸುವ ಕಲ್ಲು, ಮಣ್ಣು ಮತ್ತು ನೀರು ಸೇರಿದಂತೆ ಎಲ್ಲಾ ವಸ್ತು ನಿಸರ್ಗವೇ ಆದಮೇಲೆ ನಮ್ಮದು ಹೇಗೆ ಆಗುತ್ತದೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು, ನಾವು ಕೂಡ, ನಿಸರ್ಗದ ಸ್ವತ್ತು. ಹಾಗಾಗಿ ನಾವು ಆ ವಸ್ತುಗಳನ್ನು ಸುಂದರವಾಗಿ, ಸ್ವಚ್ಛವಾಗಿ ಬಳಸಿ ಹಾಗೆ ಉಳಿಸಿ ಹೋಗಬೇಕು.
       ಇಷ್ಟೊಂದು ವೈಭವ ಪೂರ್ಣ ಜಗತ್ತಿನಲ್ಲಿ ಪರಿಪೂರ್ಣ ಜೀವನ ಸಾಧಿಸುವುದು ಹೇಗೆ...? ಬಹಳ ಸುಲಭವಿದೆ.... ವಸ್ತುಗಳು ವೈವಿಧ್ಯವಿರುವುದರಿಂದ ಸಂಗ್ರಹಿಸಲು ಜೀವನ ಹಾಳು ಮಾಡಿ ಕೊಳ್ಳದೆ, ಮಾಲೀಕರಾಗಲು ಪ್ರಯತ್ನಿಸದೆ, ಜಗತ್ತಿನಲ್ಲಿರುವ ಎಲ್ಲಾ ಸೌಂದರ್ಯ, ಮಾಧುರ್ಯ ಸುರುಚಿ, ಸುವಾಸನೆ ಮತ್ತು ಸುಸ್ಪರ್ಶ ವನ್ನು ಮನಸ್ಸಿನಲ್ಲಿ ತುಂಬಿಕೊಂಡರೆ. ಜಗತ್ತಿನ ಸೌಂದರ್ಯ ಮಾಧುರ್ಯ ಇರುವಲ್ಲೇ ಹೋಗಿ ಅನುಭವ ಮಾಡಿಕೊಂಡರೆ ಸಾಕು... ಅದೇ ಶ್ರೀಮಂತ ಬದುಕು. ಪರಿಪೂರ್ಣ ಬದುಕು. ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article