ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 48
Sunday, April 23, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 48
ಬಿಸಿಲಿನ ಬೇಗೆ...! ನೀರಿಗಾಗಿ ಪರದಾಟ... ರಜೆಯ ಈ ಹೊತ್ತು ನೀರಿನ ಸಮಸ್ಯೆ ನಿಮಗೂ ಅನುಭವ ಆಗಿರ್ಬಹುದಲ್ವಾ? ಎಲ್ಲವೂ ಹಾಗೆಯೇ... ಇರುವಾಗ ಅದರ ಮೌಲ್ಯ ಅರ್ಥವಾಗೋದಿಲ್ಲ!
ಒಂದು ಹನಿ ನೀರಿಗಾಗಿ ಬಾಯಿಬಿಟ್ಟು ಕುಳಿತಿರುವ ಸಕಲ ಜೀವರಾಶಿಗಳ ನಡುವೆ ಉಳಿಸುವ ದೊಡ್ಡ ಮನಸ್ಸು ಮಾಡಬೇಕಾದವರು ನಾವು ಮನುಷ್ಯರು. ಬಹಳಷ್ಟು ದಾರಿಗಳಿವೆ ಅಲ್ವಾ? ಮುಂದಿನ ಪತ್ರದಲ್ಲಿ ಹಂಚಿಕೊಳ್ಳಿ.. ಈ ನೀರಿನ ವಿಚಾರ ಬಂದಾಗ ನಮ್ಮೂರು ಬಂಟ್ವಾಳದ 17 ವರ್ಷದ ಸೃಜನ್ ಪೂಜಾರಿ ಎನ್ನುವ ಛಲಗಾರನ ನೆನಪಾಗ್ತಿದೆ. ಸುಮಾರು 24 ಅಡಿ ಆಳದ ಬಾವಿಯನ್ನು ಅಗೆದು, ಮನೆಗೊದಗಿದ ನೀರಿನ ಕೊರತೆಯನ್ನು ನೀಗಿಸಿದ. ಅವನ ಪರಿಶ್ರಮ ಸಾಧಕರಿಗೆ ಸ್ಫೂರ್ತಿ. ಬಹಳಷ್ಟು ಸಲ ನಮ್ಮ ಶಕ್ತಿ ನಮಗೇ ಗೊತ್ತಿರುವುದಿಲ್ಲ. ಮೊನ್ನೆ ಊರಿಗೆ ಹೋಗಿದ್ದೆ. ಹಳ್ಳಿ ಮನೆ. ತೆಂಗಿನಕಾಯಿ ಸಿಪ್ಪೆ ತೆಗೆಯೋಣ ಅಂದುಕೊಂಡಿರುವಾಗ ಅಲ್ಲಿಯೇ ಹತ್ತನೇ ತರಗತಿಯ ನಮ್ಮ ಹುಡುಗನಿದ್ದ. ಒಂದೆರಡು ಕಾಯಿ ಸಿಪ್ಪೆ ತೆಗೆದುಕೊಡು ಮಗಾ.. ಅಂದೆ! ಅವನಿಗೆ ಅದೆಲ್ಲ ಅಭ್ಯಾಸ ಇಲ್ಲ... ಕಷ್ಟ ಆಗ್ಬಹುದು ಅಂದ್ರು... ಅವನ ಅಜ್ಜಿ! ನೀನು ಇದುವರೆಗೆ ಹೀಗೆ ತೆಂಗಿನಕಾಯಿ ಸುಲಿದಿದ್ದೀಯಾ? ಮನೆಯಲ್ಲಿ ಇಂತಹ ಕೆಲಸ ಮಾಡೋದಿಲ್ಲ ಅಲ್ವಾ? ಕಷ್ಟ ಆಗ್ತಿದೆಯಾ?ಅಂತೆಲ್ಲಾ ಕೇಳಿದ್ರು! ಅಭ್ಯಾಸ ಆದರೆ ಒಳ್ಳೆಯದು ಪ್ರಯತ್ನಿಸಲಿ ಅಂದೆ. ಐದು ತೆಂಗಿನಕಾಯಿಗಳನ್ನು 10 ನಿಮಿಷದಲ್ಲಿ ಸಿಪ್ಪೆ ತೆಗೆದು ಕೊಟ್ಟ! ಯಾವುದು ಸಾಧ್ಯವಿಲ್ಲದ್ದು?ಬಹಳಷ್ಟು ಬಾರಿ ನಮ್ಮಲ್ಲಿರುವ ಶಕ್ತಿಯನ್ನು ಕೆಲವು ಹಿರಿಯರು ಹೀಗೆ ಕುಗ್ಗಿಸುವುದಿದೆ.! ನಿನ್ನಿಂದ ಸಾಧ್ಯವಿಲ್ಲ. ನೀನಿನ್ನೂ ಚಿಕ್ಕವಳು! ನಿನ್ಗೆ ಇದೆಲ್ಲಾ ಆಗ್ಲಿಕ್ಕಿಲ್ಲ. ಬೇರೆ ಕೆಲಸ ನೋಡ್ಕೋ ಅನ್ನೋದು...!
ಊಟ ಆದ ಕೂಡಲೇ ಊಟ ಮಾಡಿದ ಸ್ಥಳವನ್ನು, ಊಟದ ಟೇಬಲ್ ನ್ನು ಸ್ವಚ್ಛಗೊಳಿಸಲು ಇನ್ನೊಬ್ಬರು ಹೇಳುವವರೆಗೆ ಕಾಯುವುದು, ಮನೆ ತುಂಬಾ ಅಸ್ತವ್ಯಸ್ತವಾಗಿದ್ದರೆ ಓರಣವಾಗಿ ಜೋಡಿಸಿಡಲು ಪ್ರಯತ್ನಿಸದಿರುವುದು ಮಕ್ಕಳ ತಪ್ಪಲ್ಲ..!ದೊಡ್ಡವರು ಈ ಕೆಲಸವನ್ನು ಮಾಡಲು ಅವಕಾಶ ಕೊಡಲಿಲ್ಲ ಅಷ್ಟೇ...!
ಇದೆಲ್ಲವೂ ಕಲಿಕೆಯೇ ಅಲ್ವಾ? ರಜೆಯಲ್ಲಿ ಅಡುಗೆ ಮಾಡುವುದು, ಬಾವಿಯಿಂದ ನೀರು ಸೇದುವುದು, ಸೈಕಲ್ ತುಳಿಯವುದು, ಕರಕುಶಲ ಕಲೆಗಳನ್ನು ತಿಳಿದುಕೊಳ್ಳುವುದು, ಅಡಿಕೆ ಸುಲಿಯುವುದು, ಈಜುವುದು.... ಹೀಗೆ ಏನೇನೋ ಹೊಸದಾಗಿ ಕಲಿತವರ ರಜಾದಿನಗಳು ಹೊಸತನವನ್ನು ಕೊಡುತ್ತವೆ ಅಲ್ವಾ?
ಎಲ್ಲ ಕಲಿಕೆಗಳೂ ಈ ಖುಷಿಯನ್ನು ನೀಡಲಿ.
ರಜೆಯಲ್ಲಿ ನೀವೇನು ಕಲಿತುಕೊಂಡಿದ್ದೀರಿ? ನೀರಿನ ಸಮಸ್ಯೆಗೆ ನೀವೇನಾದರೂ ಪ್ರಾಯೋಗಿಕ ಕೆಲಸಗಳನ್ನು ಮಾಡಿದ್ದೀರಾ? ಹಂಚಿಕೊಳ್ತೀರಲ್ಲಾ?
ಪರೀಕ್ಷೆಗಳ ನಡುವೆಯೂ ಕಳೆದ ಬಾರಿಯ ಪತ್ರಕ್ಕೆ ಅದೇ ಪ್ರೀತಿಯಿಂದ ಉತ್ತರಿಸಿದ ಶಿಶಿರ್, ಶ್ರಾವ್ಯ, ಸಾತ್ವಿಕ್ ಗಣೇಶ, ಸಿಂಚನಾ ಶೆಟ್ಟಿ, ಭವ್ಯಶ್ರೀ, ಪೂಜಾ, ಅಕ್ಷರ ಪಟ್ಟಾಲ್, ಜನನಿ ಪಿ, ಧನ್ವಿತಾ ಕಾರಂತ್, ವೈಷ್ಣವಿ ಕಾಮತ್, ನಿಭಾ, ಶಾನ್ವಿ ಶೆಟ್ಟಿ, ಲಹರಿ ಜಿ ಕೆ, ಸುಪ್ರಿಯಾ.... ಎಲ್ಲರಿಗೂ ಧನ್ಯವಾದಗಳು. ಇತರರಿಗೂ ಜಗಲಿಯನ್ನು ಪರಿಚಯಿಸಿ. ಅವರೂ ಬರಲಿ. ಎಲ್ಲರೂ ಇನ್ನಷ್ಟು ಮಾತನಾಡೋಣ.
ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************