-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 57

ಸ್ಫೂರ್ತಿಯ ಮಾತುಗಳು : ಸಂಚಿಕೆ - 57

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                 
            ಧರ್ಮಕ್ಕೆ ವಿರುದ್ಧವಾದ ಕೆಲಸವನ್ನು ಮಾಡುವ ಅನಿವಾರ್ಯ ಸಂದರ್ಭ ಇದಿರಾದಾಗ ಸಮುಚಿತ ನಿರ್ಣಯ ಮಾಡಲು ಅನುಭವಿಸುವ ಗೊಂದಲವೇ ಧರ್ಮ ಸಂಕಟ. ಬ್ರಾಹ್ಮಣ ಜಮದಗ್ನಿ ಮಹರ್ಷಿಗಳು ತನಗೆ ಇದಿರು ನುಡಿದ ಪತ್ನಿ ರಾಣಿ ರೇಣುಕಾ ದೇವಿಯ ಮೇಲೆ ಕೋಪೋದ್ರಿಕ್ತನಾದನು. ವಿಷ್ಣುವಿನ ಆರನೇಯ ಅವತಾರವಾಗಿ ತನಗೆ ಜನಿಸಿದ ಪರಶುರಾಮನಿಗೆ ರೇಣುಕಾ ದೇವಿಯ ಶಿರಚ್ಛೇದನ ಮಾಡಲು ಮಹರ್ಷಿಯು ಆಜ್ಞಾಪಿಸಿದನು. ಪರಶುರಾಮನಿಗೆ ತಾಯಿಯನ್ನು ಕೊಲ್ಲುವುದು ಧರ್ಮ ಸಂಕಟದ ಕೆಲಸ. ಪಿತೃವಾಕ್ಯ ಪರಿಪಾಲನೆ ಧರ್ಮ, ಮಾತೃಹತ್ಯೆ ಅಧರ್ಮ. ಹೀಗೆ ದರ್ಮಾಧರ್ಮಗಳ ನಡುವೆ ಭಾರ್ಗವನಿಗೆ ಉಂಟಾದ ತೊಳಲಾಟವೇ ಧರ್ಮಸಂಕಟ.
      ಇನ್ನೂ ಒಂದು ಉದಾಹರಣೆಯ ಮೂಲಕ ಧರ್ಮ ಸಂಕಟವನ್ನು ಅರ್ಥೈಸೋಣ. ರಾಮಾಯಣದ ಯುದ್ಧಕಾಂಡದ ಘಟನೆಯಿದು. ಶ್ರೀರಾಮನ ಸಹೋದರ ಲಕ್ಷ್ಮಣನು ಇಂದ್ರಜಿತುವಿನ ವಿಷಾಯುಧದ ಮಾರಕ ಹೊಡತಕ್ಕೆ ವಿಸ್ಮೃತನಾಗುತ್ತಾನೆ. ಅವನ ದೈಹಿಕ ಶಕ್ತಿಯು ಕುಸಿಯಲಾರಂಭಿಸಿತು. ಶ್ರೀರಾಮನಾದಿಯಾಗಿ ಎಲ್ಲರೂ ದಿಗ್ಭ್ರಾಂತರಾದರು. ಯಾವುದೇ ವೈದ್ಯಕೀಯ ಉಪಚಾರಗಳು ಸತ್ಪರಿಣಾಮವನ್ನು ಉಂಟುಮಾಡಲಿಲ್ಲ. ಆಗ ವಿಭೀಷಣನು ರಾವಣನ ಕುಟುಂಬ ವೈದ್ಯ ಸುಷೇಣನು ಬಂದರೆ ಲಕ್ಷ್ಮಣನ ದೇಹದೊಳಗೆ ಉಲ್ಬಣವಾಗುತ್ತಿರುವ ವಿಷವನ್ನು ಕಳೆಯಬಹುದು, ಲಕ್ಷ್ಮಣನು ಗುಣಮುಖನಾಗುವನು ಎಂದು ಸಲಹೆ ನೀಡುತ್ತಾನೆ. ತಕ್ಷಣವೇ ಹನುಮಂತನು ಸುಷೇಣನನ್ನು ಅವನ ನಿವಾಸ ಸಮೇತ ಹೊತ್ತು ತರುತ್ತಾನೆ. ರಾವಣನ ವೈರಿ ಪಾಳಯದ ನಡುವೆ ತನ್ನನ್ನು ನೋಡಿದ ಸುಷೇಣ ಗಲಿಬಿಲಿಹೊಂದುತ್ತಾನೆ. ಲಕ್ಷ್ಮಣನು ರಾವಣನಿಗೆ ಶತ್ರು. ರಾವಣನ ಆಸ್ಥಾನ ವೈದ್ಯನಾಗಿ ತಾನು ಶತ್ರುವಿನ ಚಿಕಿತ್ಸೆ ಮಾಡುವುದು ಅಧರ್ಮ. ಶತ್ರುವಾಗಿದ್ದರೂ ರೋಗಿಯನ್ನು ಗುಣಪಡಿಸಬೇಕಾದುದು ಓರ್ವ ಪ್ರಜ್ಞಾವಂತ ವೈದ್ಯನಾಗಿ ತನ್ನ ಧರ್ಮ. ಇಲ್ಲಿ ಸುಷೇಣನಿಗೆ ಉಂಟಾದುದು ಧರ್ಮ ಸಂಕಟ. ಆತನು ಲಕ್ಷ್ಮಣನಿಗೆ ಚಿಕಿತ್ಸೆ ನೀಡುವುದೇ ಉನ್ನತ ಧರ್ಮ ಎಂದು ತೀರ್ಮಾನಿಸಿದನು.
ಹೀಗೆ ಧರ್ಮ ಸಂಕಟಗಳು ಎದುರಾಗದ ವ್ಯಕ್ತಿಯಿರಲಾರನು. ಧರ್ಮವು ಸ್ವಹಿತವನ್ನು ಬಯಸದೇ ಕರ್ತವ್ಯವನ್ನು ಮಾಡು ಎಂದು ಹೇಳುತ್ತದೆ. ಧರ್ಮ ಸಂಕಟವು ಎದುರಾದಾಗ ತನ್ನ ಪ್ರಯೋಜನಗಳನ್ನು ಅಥವಾ ತನಗಾಗಬಹುದಾದ ತೊಂದರೆಗಳನ್ನು ನಿರ್ಲಕ್ಷಿಸುವುದೇ ಯೋಗ್ಯವಾದ ಮಾರ್ಗ ಎಂದು ಮೇಲಿನ ದೃಷ್ಟಾಂತಗಳು ನಿರೂಪಿಸುತ್ತವೆ. 
       ತನ್ನ ಮಕ್ಕಳು ಬಹಳ ಹಸಿವೆಯಿಂದ ಕಂಗಾಲಾಗಿದ್ದಾರೆ. ಅವರಿಗೆ ಊಟ ಬಡಿಸಿ ಮುಗಿಯುವುದರೊಳಗೆ ಹಸಿದ ಆಗಂತುಕರು ಬರುತ್ತಾರೆ. ಯಾರಿಗೆ ಊಟವನ್ನು ಹಂಚಲಿ ಎಂಬ ಧರ್ಮಸಂಕಟಕ್ಕೆ ಪರಿಹಾರ ಹೊಂದಲು ಎಲ್ಲರೂ ಶಕ್ತರಾಗಬೇಕು. ಮಕ್ಕಳಿಗೆ ಮಾತ್ರ ಊಟ ಕೊಟ್ಟು, ಹಸಿದ ಆಗಂತುಕರನ್ನು ಬರಿಗೈಲಿ ಕಳಿಸಲೇ? ಹೊಸ ಅಡುಗೆ ಮಾಡಿ ಬಳಸಲು ಮನೆಯೊಳಗೆ ಸಾಮಗ್ರಿಗಳಿಲ್ಲದಿದ್ದರೆ ಏನು ಮಾಡಬೇಕು? ಈಗಾಗಲೇ ಬಡಿಸಿರುವುದನ್ನು ಮರು ಹಂಚಿಕೆ ಮಾಡಬಹುದೇ? ಮರು ಹಂಚಿಕೆಯಿಂದ ಹಸಿವು ಇಂಗಬಹುದೇ? ಅರೆಹೊಟ್ಟೆಯ ಸತ್ಕಾರ ಸಮಂಜಸವೇ? ಈ ರೀತಿಯಾಗಿ ಹಲವು ಮುಖಗಳಿಂದ ಚಿಂತನೆ ಮಾಡುವುದು ಮತ್ತು ಮೇಲ್ಮಟ್ಟದ ಧರ್ಮದ ಆಯ್ಕೆ ಮತ್ತು ಅನುಸರಣೆ ಅತ್ಯಂತ ಯೋಗ್ಯವಾದುದು. Challenge ಮತ್ತು ದರ್ಮಸಂಕಟ ಇವುಗಳಲ್ಲಿ ಬೃಹದಂತರವಿಲ್ಲ. ಧರ್ಮಸಂಕಟದ ಸಂದರ್ಭದಲ್ಲಿ ಧರ್ಮೋಚ್ಛವಾದುದನ್ನು ಆಯ್ಕೆ ಮಾಡಿ ಕರ್ತವ್ಯವನ್ನು ಅನುಸರಿಸಬೇಕಾಗಿದೆ. ಧರ್ಮ ಸಂಕಟವು ಮೇಲ್ನೋಟಕ್ಕೆ ಗಹನವೆಂದು ಕಂಡರೂ ಆತ್ಮ ವಿಶ್ವಾಸ ಮತ್ತು ದೃಢತೆಯಿದ್ದವರಿಗೆ ನಿಭಾಯಿಸಬಹುದಾದ Challenge ಅಷ್ಟೇ. ಧರ್ಮಸಂಕಟಗಳಿಗೊಳಗಾದಾಗ ಅಧೀರರಾಗದೆ ಸ್ವಯಂ ನಿರ್ಣಯ ಕೈಗೆತ್ತುವುದರ ಬದ್ಧತೆಯಿರುತ್ತದೆ. ತನ್ನವರಿಗೆ ನೋವಾಗುವುದೆಂದೋ, ಸ್ವಹಿತಕ್ಕೆ ಧಕ್ಕೆಯಾಗುವುದೆಂದೋ, ಇತರರು ಏನು ಹೇಳುವರೆಂದೋ ಗೊಂದಲಗಳಿಗೊಳಗಾಗಬಾರದು. ಧರ್ಮಸೂಕ್ತವಾದುದರ ಆಯ್ಕೆಯೇ ಆದ್ಯತೆಯಾಗಬೇಕು. ಧರ್ಮ ಸಂಕಟವನ್ನು ಒಡ್ಡುವವರೂ ಇರುತ್ತಾರೆ. ಧರ್ಮಸಂಕಟದಿಂದ ಪಾರು ಮಾಡುವವರೂ ಇರುತ್ತಾರೆ.
............ ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article