-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 60

ಸ್ಫೂರ್ತಿಯ ಮಾತುಗಳು : ಸಂಚಿಕೆ - 60

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   
            ತೂಕ, ಹೊರೆ, ಕಷ್ಟ, ನೋವು ಹೀಗೆ ಹಲವು ಅರ್ಥಗಳಲ್ಲಿ “ಭಾರ” ಪದವನ್ನು ಬಳಸುತ್ತಾರೆ. ಬಂಡೆಯ ಭಾರ, ಭಾರವಾದ ಮೂಟೆ, ಬೆಲೆ ಭಾರ, ತಲೆ ಭಾರ ಮುಂತಾದ ಅನೇಕ ಭಾರ ಜೋಡಿತ ಪದಗುಂಪುಗಳನ್ನು ಬಳಸುತ್ತೇವೆ. ಸಂದರ್ಭಾನುಸಾರ ‘ಭಾರ” ವು ಬಿಭಿನ್ನ ಅರ್ಥಗಳನ್ನು ಕೊಡುತ್ತದೆ. ಭೂಭಾರ ಎಂಬ ಪದವೂ ಇದೆ.
     ಸಮಾರಂಭದಲ್ಲಿ ಎರ್ರಾ ಬಿರ್ರಿ ತಿಂದುಂಡು ಹೊಟ್ಟೆ ಭಾರವಾಗುವವರೂ ಇದ್ದಾರೆ, ತಾಯಿಗೆ ಗರ್ಭದಲ್ಲಿರುವ ತನ್ನ ಮಗುವು ಭಾರವಾಗಿ ಕಾಣುವುದೇ ಇಲ್ಲ. ಆದರೆ ಆ ಶಿಶು ಬಲಾಢ್ಯ ಆದಾಗ ತಾನು ಹೊರದೇ ಇದ್ದರೂ ತಾಯಿ ಆತನಿಗೆ ಭಾರವಾಗುವುದಿದೆ. ಬಹಳ ಭಾರವಾದ ಮಾತು ಮತ್ತು ಬಹಳ ತೂಕವಾದ ಮಾತು ವಿಭಿನ್ನ ಅರ್ಥ ನೀಡುತ್ತದೆ. ತೂಕದ ಮಾತು ಎಂಬಲ್ಲಿ ಮಾತಿನಲ್ಲಿರುವ ಮೌಲ್ಯದ ಪ್ರತಿಬಿಂಬವಿದೆ. ಭಾರದ ಮಾತು ಎಂದಾಗ ಮಾತಿನಲ್ಲಿ ನೋವನ್ನುಂಟು ಮಾಡುವ ಲಕ್ಷಣಗಳು ಗೋಚರಿಸುತ್ತದೆ. ಆತನ ಭಾರವಾದ ಮಾತು ಇಂದಿಗೂ ಕಿವಿಗಪ್ಪಳಿಸುತ್ತಿದೆ; ನೋವಿನ ತರಂಗಗಳನ್ನು ಮನದೊಳಕ್ಕೆ ಹರಿಸುತ್ತಿದೆ ಎಂಬುದಾಗಿ ಹೇಳುವುದನ್ನು ಅನೇಕ ಸಂದರ್ಭಗಳಲ್ಲಿ ಆಲಿಸಿರುತ್ತೇವೆ.
      ಭಾರವಾದ ಬಂಡೆಗೆ ಬೇರೆ ಬೇರೆ ರೀತಿಯಲ್ಲಿ ಚಲನೆ ನೀಡಬಹುದು. ಮೂಟೆಯು ಬಹಳ ಭಾರವಾಗಿದ್ದರೂ ಆ ಭಾರವನ್ನು ವಿಭಜಿಸಿ ಹಗುರಗೊಳಿಸಬಹುದು. ಬೆಲೆಯ ಭಾರವನ್ನೂ ತಾಳಬಹುದು. ಇವೆಲ್ಲವೂ ಬಾಹ್ಯವಾಗಿರುವ ಭಾರಗಳು. ಆದರೆ ಆರೋಗ್ಯಕ್ಕೆ ಸಮಸ್ಯೆಯಾಗುವ ದೇಹಾಂತರ್ಗತ ಭಾರಗಳನ್ನು ಹಗುರಗೊಳಿಸಲು ಇತರರ ಕೈಗಳ ನೆರವು ಅಥವಾ ಹಗುರಗೊಳಿಸುವ ಪರ್ಯಾಯ ಮಾರ್ಗಗಳಿರದು. ಮನೋಶಕ್ತಿಯ ಬಲದಿಂದ ಮಾತ್ರವೇ ಅನಾರೋಗ್ಯಕರ ಭಾರವನ್ನು ಲಘುಗೊಳಿಸಲು ಅಥವಾ ದೂರೀಕರಿಸಲು ಸಾಧ್ಯ.  
        ಆತ ‘ತಲೆ ಭಾರ’ ಅಥವಾ ಆಕೆ ಬಹಳ ‘ತಲೆನೋವು’ ಎಂದು ಹೇಳುವುದಿದೆ. ಇಲ್ಲಿ ಬಳಸಿ 'ಭಾರ’ ಅವನ ತೂಕವಲ್ಲ. ಇತರರ ಮನಸ್ಸನ್ನು ಹಗುರಗೊಳಿಸದೆ, ಭಾರಗೊಳಿಸುವ ಅಥವಾ ತಲೆನೋವು ತರುವ ವ್ಯಕ್ತಿತ್ವ ಅವರದಾಗಿರುತ್ತದೆ ಎಂಬುದರ ಸೂಚ್ಯ. ಅವರ ಮಾತುಗಳು, ವರ್ತನೆಗಳು, ಚರ್ಯೆಗಳು, ಕೆಲಸಗಳು ಸಂಪರ್ಕಿಸಿದವರನ್ನು ನೋವಿಗೊಳಪಡಿಸುತ್ತದೆ. ಹಳಿಯುವ, ಗೇಲಿ ಮಾಡುವ, ಚಾಡಿ ಹೇಳುವ, ಸುಳ್ಳು ಸುದ್ದಿ ಹರಡುವ, ಚಿಕ್ಕ ಚಿಕ್ಕ ಸಂಗತಿಗಳನ್ನು ಬೆಟ್ಟದಂತೆ ವರ್ಣಿಸುವ ಮನಸ್ಸಿನವರು ಇತರರಿಗೆ ತಲೆಭಾರವಾಗುತ್ತಾರೆ. ಇನ್ನೂ ಕೆಲವರಿಗೆ ಸ್ವಂತ ತಲೆಯೇ ಭಾರವಾಗುತ್ತದೆ. ತಲೆ ಭಾರವಾದರೆ ಮಿದುಳು ಕ್ರಿಯಾಶೀಲವಾಗಿರದು. ತಲೆ ನೋವು ಅನಾರೋಗ್ಯದಿಂದ ಬಂದರೂ ಅದು ಭಾರವೇ. ಬೇರೆ ಬೇರೆ ಒತ್ತಡಗಳ ಕಾರಣದಿಂದಲೂ ತಲೆ ಭಾರವಾಗುವುದಿದೆ. ಶಾಂತ ಮನಸ್ಥಿತಿಯವರಿಗೆ ಮತ್ತು ಸ್ಥಿತ ಪ್ರಜ್ಞರಿಗೆ ತಲೆಭಾರವಾಗುವುದು ಅಪರೂಪ. ಕೆಲವರಿಗೆ ಮನಸ್ಸು ಭಾರವೆನಿಸುವುದಿದೆ. ಸಹಿಸಲಾಗದ ದುಃಖದಿಂದ ಮನಸ್ಸು ಭಾರವಾಗುತ್ತದೆ. ಸಹನಾಶೀಲತೆಯೇ ಮನಸ್ಸನ್ನು ಹಗುರಗೊಳಿಸಲಿರುವ ಏಕೈಕ ದಾರಿ.
      ಪುರಾಣವು ಅಧರ್ಮವನ್ನು ‘ಭೂಭಾರ’ ಎಂದು ವ್ಯಾಖ್ಯಾನಿಸಿದೆ. ಹಿಂದೆ ರಾಕ್ಷಸರು ಭೂಭಾರಕರಾಗಿದ್ದರು. ಇಂದು ರಾಕ್ಷಸ ಮನಸ್ಸಿನವರು ‘ಭೂಭಾರ’ಕರು. ಅವರ ಅಧರ್ಮ ಕೃತ್ಯಗಳು ಜನಜೀವನ ಮತ್ತು ಪರಿಸರಕ್ಕೆ ಮಾರಕ. ಭಗವಂತನೇ ಭೂಭಾರ ಕಳೆಯಲು ಅವತಾರವೆತ್ತಿ ಅವರನ್ನು ಕೊಂದು ಭೂಭಾರ ಕಳೆದ ಕಥೆಗಳನ್ನು ಓದುತ್ತೇವೆ. ಭೂಪಾಲಕರನೇಕರು ಭೂಭಾರವಾಗಿದ್ದ ಕಥೆಗಳೂ ಪುರಾಣ ಮತ್ತು ಇತಿಹಾಸಗಳಲ್ಲಿವೆ. ಇಂದೂ ಆಳುವವರಲ್ಲಿ ಬಹು ಪಾಲು ಭೂಭಾರಕರೇ ಅಲ್ಲವೇ? ಯಾವುದೇ ತರಹದ ಭಾರವಾದರೂ ಮಿತಿ ಮೀರಿದಾಗ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಮುಂತಾದ ಅಸಂಖ್ಯ ಕ್ಷೇತ್ರಗಳು ಸೊರಗುತ್ತವೆ. ನಾವು ಎಂದಿಗೂ ಯಾರಿಗೂ “ಭಾರ” ವಾಗದಂತೆ ಜಾಗೃತರಾಗಿರೋಣ.... ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article