ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 6
Friday, April 21, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 6
ಲೇಖಕರು : ಹರಿಣಾಕ್ಷಿ ಕಕ್ಯಪದವು
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಶಿಕ್ಷಕ ವೃತ್ತಿಯ ಆರಂಭದ ದಿನಗಳವು. ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಅಡಿ ಇಟ್ಟು ಸಮಾಜ ಮುಖಿಯಾಗಿ ಕನಕಪುರ ತಾಲೂಕಿನ ಸಾಸಲಪುರದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. 1 ರಿಂದ 7ನೇ ತರಗತಿಯವರೆಗೆ ಕೇವಲ ಎರಡೇ ಶಿಕ್ಷಕರಿದ್ದ ಶಾಲೆಯಾದುದರಿಂದ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಓದಲಾಗಲಿ, ಬರೆಯಲಾಗಲಿ ಬರುತ್ತಿರಲಿಲ್ಲ.. ಮುಖ್ಯ ಶಿಕ್ಷಕರ ಸೂಚನೆಯಂತೆ ಆರನೇ ತರಗತಿಗೆ ಇಂಗ್ಲಿಷ್ ಬೋಧನೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡೆ. ಮಕ್ಕಳಿಗೆ ಹೇಗಾದರೂ ಮಾಡಿ ಇಂಗ್ಲೀಷ್ ಓದಲು ಬರೆಯಲು ಹೇಳಿಕೊಡಲೇಬೇಕೆಂಬ ಹಠಕ್ಕೆ ನಾನು ಬಿದ್ದೆ. ಹೀಗಾಗಿ ಪ್ರತಿದಿನ ಮಕ್ಕಳಿಗೆ ಫೋನಿಕ್ ಸೌಂಡ್ಸ್ ಅಭ್ಯಾಸ ಮಾಡಿಸುತ್ತಿದ್ದೆ. ನಾನು ಮಾತನಾಡುತ್ತಿದ್ದ ಭಾಷೆ ಹಾಗೂ ಅಲ್ಲಿ ಬಳಕೆಯಾಗುತ್ತಿದ್ದಂತಹ ಗ್ರಾಮೀಣ ಭಾಷೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದ ಕಾರಣ ಕೆಲವೊಂದು ಬಾರಿ ಕಲಿಕೆಯ ವರ್ಗಾವಣೆಯಲ್ಲಿ ಅಡೆತಡೆ ಉಂಟಾಗುತ್ತಿತ್ತು. ಒಂದೆರಡು ತಿಂಗಳಲ್ಲಿ ಹೆಚ್ಚಿನ ಮಕ್ಕಳು ಇಂಗ್ಲಿಷ್ ಓದಲು ಬರೆಯಲು ಕಲಿತರಾದರೂ 'ಶಿವರಾಜು' ಎಂಬ ವಿದ್ಯಾರ್ಥಿಗೆ ನಾನು ಹೇಳುತ್ತಿದ್ದ ವಿಚಾರ ತಲೆಯೊಳಗೆ ಇಳಿಯುತ್ತಲೇ ಇರಲಿಲ್ಲ. ಬಹಳಷ್ಟು ಸಾರಿ ಹೇಳಿದ ಕಲಿಕಾಂಶವನ್ನೇ ಹೇಳಿದರೂ ಕೂಡ ಮಗು ಅರ್ಥೈಸಿಕೊಳ್ಳಲು ಅಸಮರ್ಥನಾಗಿದ್ದ. ನನಗೂ ರೋಸಿಹೋಗಿತ್ತು. ತಾಳ್ಮೆ ಕೆಟ್ಟಿತು. ನನ್ನ ಕೋಪಕ್ಕೆ ಗುರಿಯಾದ ಹುಡುಗನ ಮುಖ ಸಪ್ಪಗಾಗಿ ಹೋಯಿತು. ತಲೆ ಕೆಳಮುಖವಾಗಿ ಹಾಕಿ ಕುಳಿತಿದ್ದ. ಸಂಜೆಯಾಗುತ್ತಾ ಬಂತು. ಶಾಲೆಯ ಬೆಲ್ ಹೊಡೆಯಿತು. ಮಕ್ಕಳೆಲ್ಲರೂ ಕೂಡ ಮನೆಗೆ ಹೊರಟರು. ನಾನು ಶಾಲೆಯಿಂದ ಮನೆಗೆ ಹೊರಡಲು ಅಣಿಯಾಗುತ್ತಿದ್ದೆ. ಆ ಶಾಲೆಯಿಂದ ಮುಖ್ಯ ರಸ್ತೆಗೆ ಬರಬೇಕಾದರೆ ಎರಡೂವರೆ ಕಿಲೋಮೀಟರಿನಷ್ಟು ಕಾಲು ಹಾದಿಯಲ್ಲಿ. ನಡೆದುಕೊಂಡು ಬರಬೇಕಿತ್ತು. ದಾರಿಯುದ್ದಕ್ಕೂ ಜೋಳ ಹಾಗೂ ಸೂರ್ಯಕಾಂತಿಯ ಗದ್ದೆಯನ್ನು ಹೊರತುಪಡಿಸಿದರೆ ಮನೆಗಳು ಇದ್ದದ್ದು ಕೇವಲ ಬೆರಳೆಣಿಕೆಯಷ್ಟು ಅಲ್ಲೊಂದು ಇಲ್ಲೊಂದು ಮಾತ್ರ. ಅಲ್ಲಿ ಒಬ್ಬಳೇ ಹುಡುಗಿ ನಡೆದುಕೊಂಡು ಬರುವುದು ಸುರಕ್ಷತೆಯ ದೃಷ್ಟಿಯಿಂದ ಸರಿಯೆನಿಸುತ್ತಿರಲಿಲ್ಲ. ಶಾಲೆಯ ಗೇಟನ್ನು ದಾಟಿ ಹೊರಗಡೆ ಅಡಿ ಇಟ್ಟ ಕೂಡಲೇ ಅದೇ ಶಿವರಾಜು ನನ್ನ ಬಳಿ ಓಡಿ ಬಂದ. "ಮಿಸ್, ನಾನೂ ನಿಮ್ಮ ಜೊತೆ ಬರ್ತೇನೆ." ಎಂದು ಮೆಲ್ಲನುಸುರಿದ. ನನಗೆ ಆಶ್ಚರ್ಯ ಆಗಿತ್ತು.!! ನನ್ನಿಂದ ಯಾವುದೇ ಉತ್ತರ ಬಾರದಿದ್ದರೂ ಆ ಹುಡುಗ ಹಾಗೇ ನಿಂತುಕೊಂಡಿದ್ದ. ಆತ ಬೆಳಿಗ್ಗೆ ನಡೆದುದೆಲ್ಲವನ್ನು ಆಗಲೇ ಮರೆತುಬಿಟ್ಟಿದ್ದ. ನಾನೊಬ್ಬಳೇ ಅಲ್ಲಿ ಮಹಿಳಾ ಉದ್ಯೋಗಿಯಾಗಿದ್ದು ನನ್ನ ಜೊತೆ ದಿನವೂ ಬರುತ್ತಿದ್ದಂತಹ ಸಹೋದ್ಯೋಗಿಗಳು ಅಂದು ರಜೆಯಲ್ಲಿದ್ದರು. ಅದನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಆ ಬಾಲಕ ಅಂದು ಆ ಎರಡೂವರೆ ಕಿಲೋಮೀಟರ್ ದಾರಿಯನ್ನ ನನ್ನ ಜೊತೆ ಸವೆಸಿದ. ನೋವನ್ನು ಮರೆತು ಶಿಕ್ಷಕಿಯ ರಕ್ಷಣೆಯ ಜವಾಬ್ದಾರಿ ಹೊತ್ತು ನಡಿಗೆಯಲ್ಲಿ ಜೊತೆಯಾದ ಆ ಮುಗ್ಧ ಬಾಲಕನ ಪ್ರೀತಿ ಇನ್ನೂ ನನ್ನೊಳಗೆ ಹಾಗೆ ಹಸಿರಾಗಿದೆ. ನಂತರದ ದಿನಗಳಲ್ಲಿ ಬಹಳ ಶ್ರದ್ಧೆ ಇಟ್ಟು ಇಂಗ್ಲಿಷ್ ಕಲಿತ ಆತ ಇಂದು ಯುವಕನಾಗಿ ಒಂದೊಳ್ಳೆ ಉದ್ಯೋಗದಲ್ಲಿದ್ದರೂ, ಹಲವಾರು ಶಿಕ್ಷಕರನ್ನು ತನ್ನ ಜೀವನದಲ್ಲಿ ಕಂಡಿದ್ದರೂ ಕೂಡ ಈಗಲೂ "ನನ್ನ ಇಂಗ್ಲಿಷ್ ಟೀಚರ್ ಇವರು" ಎಂದು ಅಭಿಮಾನದಿಂದ ಹೇಳಿಕೊಳ್ಳುವಾಗ ನನಗೂ ಸಂತೃಪ್ತಿ ಎನಿಸುತ್ತದೆ.
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************