ಬೇಸಿಗೆ ಕಾಲ - ಲೇಖನ : ಶ್ರುತಿಕಾ, 6ನೇ ತರಗತಿ
Tuesday, April 18, 2023
Edit
ಲೇಖನ : ಶ್ರುತಿಕಾ
6ನೇ ತರಗತಿ.
ದ.ಕ.ಜಿ.ಪಂ. ಹಿ. ಪ್ರಾ.ಶಾಲೆ ಓಜಾಲ. ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
ಈಗ ಬೇಸಿಗೆ ಕಾಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಧಗಧಗಿಸುವ ಸೂರ್ಯ. ಎಲ್ಲರಿಗೂ ಸೆಖೆ. ಸೂರ್ಯನಿಗೆ ಎಷ್ಟು ಬೈದಿರೇನೋ? ಆದರೆ ಬೇಸಿಗೆ ಎಂದರೆ ಎಲ್ಲಾ ಮಕ್ಕಳಿಗೂ ಇಷ್ಟ. ನನಗೂ ಸಹ. ಏಕೆಂದರೆ ಈಗ ಮಾವಿನ ಹಣ್ಣಿನ ಕಾಲ ಜೊತೆಗೆ ಬೇಸಿಗೆ ರಜೆ ಸಿಗುವುದರಿಂದ, ನಾವು ಮಾವಿನ ಮರದ ಬುಡದಲ್ಲಿ ಇರುವುದಂತೂ ನಿಜ.
ಅಪ್ಪ ಮನೆಗೆ, ತಂಪನ್ನೀಯುವ ಹಣ್ಣುಗಳನ್ನು ತಂದಾಗ ಭಾರೀ ಖುಷಿ. ಅಮ್ಮ ಮಾಡಿಕೊಟ್ಟ ಪಾನೀಯಗಳನ್ನು ಕುಡಿದಾಗ ಮನಸ್ಸಿಗೆ ಮತ್ತು ಹೊಟ್ಟೆಗೆ ಬಹಳ ಸಂತೋಷ. ನಾನು 1 ನೇ, 2 ನೇ, 3ನೇ ತರಗತಿಯಲ್ಲಿದ್ದಾಗ ಪ್ರತಿವರ್ಷ ಬೇಸಿಗೆಯಲ್ಲಿ ಮಧ್ಯಾಹ್ನ ಎಲ್ಲರೂ ಮಲಗಿದ್ದಾಗ ಭಟ್ಟರ ತೋಟಕ್ಕೆ ಮಾವಿನಹಣ್ಣು ಕದಿಯಲು ಹೋಗುತಿದ್ದದ್ದು ಒಂದು ಸುಂದರ ನೆನಪು.
ಮನೆಯಲ್ಲಿ ಮಾವಿನಕಾಯಿ ಇದ್ದರೆ ಅದಕ್ಕೆ ಉಪ್ಪು, ಮೆಣಸಿನ ಹುಡಿ ಹಾಕಿ ಚಪ್ಪರಿಸಿ ತಿಂದು ಹೊಟ್ಟೆ ನೋವು ಬರಿಸಿಕೊಂಡು ಅಮ್ಮನಿಂದ ಬೈಸಿಕೊಂಡು ಪಾವನರಾಗುವೆವು. ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿ ಅಲ್ಲಿ ಅಜ್ಜಿ ಮಾಡಿದ ಚಂಡ್ರು ಪುಳಿ (ಮಾವಿನಕಾಯಿಯ ಸಿಹಿ ಸಾಂಬಾರು) ಸವಿಯುವುದೇ ಒಂದು ಮಜಾ.
ಬೇಸಿಗೆಯಲ್ಲಿ ಎಲ್ಲರೂ ಐಸ್ಕ್ರೀಮ್ ತಿನ್ನುವುದು ಸಹಜ. ಆದರೆ ನಾನು ಯಾವಗೆಲ್ಲ ಅಂಗಡಿಗೆ ಹೋಗುತ್ತೇನೋ ಆವಾಗೆಲ್ಲ ಐಸ್ಕ್ರೀಮ್ ತಿಂದುಕೊಂಡು ಬರುತ್ತೇನೆ. ಅಪ್ಪನಿಗಂತೂ ದುಪ್ಪಟ್ಟು ಖರ್ಚು. ರಜೆಯಲ್ಲಿ ಗೇರುಬೀಜ, ಪುನರ್ಪುಳಿ ಸಿಗುತ್ತದೆ. ಪುನರ್ಪುಳಿ ಮತ್ತು ಗೇರುಬೀಜ ಸ್ವಲ್ಪ ಉಷ್ಣವಾದ್ದರಿಂದ ಅದನ್ನು ಜಾಸ್ತಿ ತಿನ್ನಲು ನನ್ನಮ್ಮ ಬಿಡುವುದೇ ಇಲ್ಲ.
ಹಳ್ಳಿಯಲ್ಲಿರುವ ಮಕ್ಕಳಿಗೆ ಇದೆಲ್ಲಾ ಸಿಗುವುದು ಸಹಜ. ಆದರೆ ಪಟ್ಟಣದಲ್ಲಿರುವ ಮಕ್ಕಳಿಗೆ ಈ ಎಲ್ಲಾ ಖುಷಿಗಳು ಲಭ್ಯವಾಗುವುದಿಲ್ಲ. ಮೊಬೈಲ್, ಕಂಪ್ಯೂಟರ್ಗಳಲ್ಲಿ ಮುಳುಗಿರುವಾಗ ಇದೆಲ್ಲಾ ಹೇಗೆ ಸಿಗಬೇಕು ಹೇಳಿ... ? ನಿಮ್ಮ ಮನೆಯಲ್ಲಿ ಇಂತಹವರಿದ್ದರೆ ಅವರನ್ನು ಪ್ರಕೃತಿಯಲ್ಲಿ ಬೆರೆಯಲು ಬಿಡಿ. ಆದಷ್ಟು ಗಿಡಗಳನ್ನು ಬೆಳೆಸಿ, ಸಖೆಯನ್ನು ತಣಿಸಿ. ಧನ್ಯವಾದಗಳು.
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಓಜಾಲ. ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
*******************************************