-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 59

ಸ್ಫೂರ್ತಿಯ ಮಾತುಗಳು : ಸಂಚಿಕೆ - 59

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                 
              ಕೈಗೆಟುಕದ ಸಂಗತಿಗಳನ್ನು ದುಬಾರಿ ಎಂದೇ ವಿವರಿಸುತ್ತೇವೆ. ದುಬಾರಿಯಾದುದೇ ಬೇಕೆಂಬ ಬಯಕೆ ಎಲ್ಲರಲ್ಲೂ ಅಗಾಧವಾಗಿಯೇ ಇದೆ. ಸಿರಿವಂತಿಕೆಯಿದ್ದರೆ ದುಬಾರಿಯಾದುದು ಯಾವುದೂ ಇಲ್ಲ. ಸಿರಿವಂತಿಕೆಯೆಂದರೆ ಆರ್ಥಿಕ ಸಂಪತ್ತು. ಆದರೆ ಹಣ ಎಷ್ಟು ಕೊಟ್ಟರೂ ದೊರೆಯದ, ಬಹಳ ದುಬಾರಿಯಾದ ವಸ್ತುಗಳೂ ಈ ನೆಲದಲ್ಲಿವೆ. ಅವುಗಳನ್ನು ಪಡೆಯಲು ಮಾನಸಿಕ ಸಿರಿವಂತಿಕೆಯೇ ಹೆಚ್ಚು ಅಗತ್ಯ ಎಂಬುದನ್ನು ನಾವು ಅರಿತಿರಬೇಕು. ಸಕಾರಾತ್ಮಕ ಮಾನಸಿಕತೆಗೂ ದುಬಾರಿಗೂ ಅವಿನಾಭಾವವಾದ ಸಂಬಂಧದ ಕೊಂಡಿಯಿದೆ. ದುಬಾರಿಯಾದುದನ್ನೂ ಅಗ್ಗವಾಗಿಸಲು ನಾವು ಮನಸ್ಸು ಮಾಡಿದರೆ ಸಾಧ್ಯವಿದೆ.
      ಶತಮಾನ ಕಾಲ ಆರೋಗ್ಯದಿಂದ ಬಾಳಬೇಕು ಎಂಬುದು ನಮ್ಮೆಲ್ಲರ ಮೊದಲ ಆಸೆ. ಆದರೆ ಇದು ಬಹಳ ದುಬಾರಿ. ಆರೋಗ್ಯವು ಹಣದಿಂದ ಬರಲಾರದು. ಮಾನಸಿಕತೆಯಿಂದ ಸಾಧಿಸಬಹುದು. ನಮ್ಮ ಆಹಾರ ಕ್ರಮ ಮತ್ತು ಆಹಾರ ವಸ್ತುಗಳು ನಮ್ಮ ಹಿರಿಯರಿಗಿಂತ ಸಂಪೂರ್ಣ ಭಿನ್ನವಾಗಿದೆ. ನಾವು ಹಣ ಕೊಟ್ಟು ವಿಷವನ್ನು ತಿನ್ನುತ್ತಿದ್ದೇವೆ. ನಮ್ಮ ಹಿರಿಯರು ಬೆವರನ್ನು ಕೊಟ್ಟು ಅಮೃತವನ್ನು ಆಸ್ವಾದಿಸುತ್ತಿದ್ದರು. ನಾವು ವಿಷದಿಂದ ಮುಕ್ತರಾಗಲು ನಮ್ಮ ಹಿರಿಯರಂತೆ ಮನೆಯ ಹಿತ್ತಿಲಲ್ಲೇ ಆಹಾರ ಬೆಳೆಯಬೇಕು. ಖರೀದಿಸುವುದನ್ನು ಮಿತಿಗೊಳಪಡಿಸಬೇಕು. ಮನೆಯಂಗಳದ ಬೆಳೆ ಬಹಳ ದುಬಾರಿಯಾಗಿದೆ. ಮನೆಯಂಗಳದ ತರಕಾರಿಗಳಾಗಲೀ, ಮನೆಯ ಹಟ್ಟಿಯ ಹಾಲಾಗಲೀ, ಮನೆಯ ಕೈತೋಟದ ಹಣ್ಣುಗಳಾಗಲೀ ಕೈಗೆಟುಕದ ಗಗನ ಕುಸುಮಗಳಾಗಿವೆ. ಮನಸ್ಸು ಮಾಡಿದರೆ ಮತ್ತೆ ಗಗನ ಕುಸುಮಗಳನ್ನು ಹಸ್ತಗತ ಮಾಡುವುದು ಕಷ್ಟವಲ್ಲ. ದಿನದಲ್ಲಿ ಗರಿಷ್ಠ ಒಂದು ಘಂಟೆಯ ಕಾಲ ಜಾಲತಾಣ ಮತ್ತು ಮೊಬೈಲುಗಳನ್ನು ದೂರ ಇರಿಸಿದರೆ ಮನೆಯ ಕೈತೋಟ ರಚಿಸಿ ಆರೋಗ್ಯವನ್ನು ಮರಳಿಸಲು ಶ್ರಮಿಸಬಹುದಾಗಿದೆ. 
       ಉಸಿರಾಡಲು ಬೇಕಾದ ಆಮ್ಲಜನಕ ಕೈಗೆಟುಕದ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಒಂದು ಕಾಲದಲ್ಲಿ ನಗರಪ್ರದೇಶಗಳಲ್ಲಿ ಮಾತ್ರ ಆಮ್ಲಜನಕ ದುಬಾರಿಯಾಗಿತ್ತು. ದೆಹಲಿಯಲ್ಲಿ ಆಮ್ಲಜನಕ ತುಟ್ಟಿಯಾಗುತ್ತಿರುವ ಭೀಕರ ಸಮಸ್ಯೆಯನ್ನು ಗಮನಿಸಿದ್ದೇವೆ. ಆದರೆ ಇಂದು ಹಳ್ಳಿಗಳಲ್ಲೂ ಅರಣ್ಯ ನಾಶದಿಂದ ಉಸಿರಾಟ ದುಬಾರಿಯಾಗುತ್ತಿದೆ, ಮನೆಯ ಸುತ್ತ ಅಲಂಕಾರಿಕ ಗಿಡಗಳನ್ನದರೂ ಬೆಳೆಸಿದರೆ ಸಣ್ಣ ಪ್ರಯೋಜನ ಸಿಗಬಹುದು. ಆದರೆ ಅಂಗಳಾದಿಯಾಗಿ ಎಲ್ಲಡೆ ಕಾಂಕ್ರೀಟ್ ಕಾಡೇ ಬೆಳೆಯುತ್ತಿರುವುದು ದಿನಗಳೆದಂತೆ ಆಮ್ಲಜನಕವನ್ನು ದುಬಾರಿಗೊಳಿಸುತ್ತಲೇ ಇದೆ.
ನಾವು ಬಳಸಿದ ಪ್ಲಾಸ್ಟಿಕ್ ನೀರಿನ ಮೂಲಕ ಸಮುದ್ರ ಮತ್ತು ಸಾಗರಗಳನ್ನು ಸೇರುತ್ತಿದೆ. ಸಾಗರದ ತೆರೆಗಳಿಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಿಂದೂಡಲಾಗದೆ ಅವು ಒಂದನ್ನೊಂದು ಗಟ್ಟಿಯಾಗಿ ತಬ್ಬಿಕೊಂಡು ಸಾಗರದ ತೆರೆಗಳಿಗೆ ಪರ್ವತೋಪಾದಿಯಲ್ಲಿ ಸೆಟೆದು ನಿಂತು ಪರ್ವತಗಳಾಗುತ್ತಿವೆ. ಸಮುದ್ರಗಳು, ಸಾಗರಗಳು ಪ್ಲಾಸ್ಟಿಕ್ ಮತ್ತು ಅವುಗಳ ಜೊತೆ ಸೇರಿದ ಕಸಗಳೊಂದಿಗೆ ಪರ್ವತಗಳಾಗಿ ಎದ್ದು ನಿಲ್ಲಲಾರಂಭಿಸಿವೆ. ಇದರಿಂದ ಭಾವೀ ಮನುಕುಲದ ಬದುಕು ಭಾರೀ ದುಬಾರಿಯಾಗಲಿದೆ. ನಮ್ಮ ಶೋಕಿಗಾಗಿ ಬಳಸುವ ಪ್ಲಾಸ್ಟಿಕ್ ವಸ್ತುಗಳು ನಮಗೆ ತಿರುಮಂತ್ರವಾಗುತ್ತಿದ್ದರೂ ನಾವು ಅವುಗಳನ್ನೇ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿರುವುದು ದುರ್ದೈವ.
       ಜೈವಿಕ ಬದುಕು ನೀರು, ಗಾಳಿ, ಆಹಾರ, ಪರಿಸರ ಇತ್ಯಾದಿಗಳ ಶುಚಿತ್ವವನ್ನು ಆಧರಿಸಿದೆ. ವಿಕೃತ ಮನಸ್ಸುಗಳು ಇವೆಲ್ಲವನ್ನೂ ಹಾಳುಗೆಡವಿ ಆಗಿದೆ. ವಿಕೃತಿಗೆ ಸಂಸ್ಕೃತಿಯೇ ಮದ್ದು. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭಾವೀ ಜನಾಂಗವು ಅವರ ಬದುಕನ್ನು ದುಬಾರಿಗೊಳಿಸಿದ ನಮ್ಮನ್ನು ಪ್ರತಿ ದಿನವೂ ಶಪಿಸಲಿದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article