ಪ್ರೀತಿಯ ಪುಸ್ತಕ : ಸಂಚಿಕೆ - 56
Friday, April 28, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 56
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಅಳಿಲು ಸೇವೆ – ಅಂದ ತಕ್ಷಣ ರಾಮಾಯಣದ ಕಥೆ ನೆನಪಾಗುತ್ತದೆ. ರಾಮ ಕಡಲಿಗೆ ಸೇತುವೆ ಕಟ್ಟುವಾಗ, ಅಳಿಲು ಕೂಡಾ ಮರಳಿನಲ್ಲಿ ಹೊರಳಾಡಿ, ತನ್ನ ಮೈಗೆ ಮರಳು ಅಂಟಿಸಿಕೊಂಡು ಆ ಮರಳನ್ನು ಸೇತುವೆಗೆ ಹಾಕುತ್ತದೆ. ಸಹಾಯ ಮಾಡುವ ಮನಸ್ಸಿದ್ದರೆ, ಇಷ್ಟು ಪುಟ್ಟ ಪ್ರಾಣಿ ಕೂಡಾ ಸಹಾಯ ಮಾಡಬಹುದು ಅಲ್ಲವೇ..? ಈ ಪುಸ್ತಕದಲ್ಲೂ ಚಿನ್ನಿ ಮತ್ತು ಅವಳ ಅಪ್ಪ ಮಾರುಕಟ್ಟೆಗೆ ಹೋದಾಗ, ಮಾಡುವ ನೋಡುವ ಸಣ್ಣಪುಟ್ಟ ಸೇವೆಗಳ ಕಥೆ ಇದೆ. ಚಿನ್ನಿ ಇದರಲ್ಲಿ ಎಳನೀರು ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ ಬಳಸುವುದಿಲ್ಲ. ತನ್ನ ಹತ್ತಿರ ಸ್ಟೀಲ್ ಸ್ಟ್ರಾ ಇಟ್ಟುಕೊಂಡಿರುತ್ತಾಳೆ. ಇದು ಪರಿಸರಕ್ಕೆ ಮಾಡುವ ಸೇವೆ, ಒಂದು ರೀತಿಯಲ್ಲಿ ನಮಗೆ ನಾವೇ ಮಾಡಿಕೊಳ್ಳುವ ಸೇವೆ. ಅಲ್ಲಿ ಎಳನೀರು ಮಾರುವವನು ಇಂತಹ ಇನ್ನೂ ಬೇರೆ ಸೇವೆ ಮಾಡುತ್ತಿರುತ್ತಾನೆ. ಅದನ್ನು ನೋಡಿ ಚಿನ್ನಿಗೆ ಬಹಳ ಖುಷಿಯಾಗಿ ತಾನೂ ಹಾಗೆ ಮಾಡಲು ಹೊರಡುತ್ತಾಳೆ. ಪುಸ್ತಕ ಓದಿದರೆ ನಿಮಗೂ ತಿಳಿಯುತ್ತದೆ, ನೀವು ಕೂಡಾ ಇಂತಹ ಸೇವೆ ಮಾಡುತ್ತಿರಬಹುದು, ಇನ್ನೂ ಮಾಡಬಹುದು. ಪುಟ ತುಂಬಾ ದೊಡ್ಡ ದೊಡ್ಡ ಚಿತ್ರಗಳು ಸುಂದರವಾಗಿವೆ.
ಲೇಖಕರು: ಯಶಸ್ವಿನಿ ಎಸ್.ಎನ್
ಚಿತ್ರಗಳು: ರೆನೆಸಾ ಗುಹಾ
ಪ್ರಕಾಶಕರು: ಹರಿವು ಬುಕ್ಸ್, ಮೊಬೈಲ್ ಸಂ. 8088822171
ಬೆಲೆ: ರೂ.95/
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************