ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 5
Friday, April 14, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 5
ಲೇಖಕರು : ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
"ಮೇಡಂ... ಅವನು ಯಾರನ್ನೂ ಹತ್ತಿರ ಹೋಗ್ಲಿಕ್ಕೆ ಬಿಡೋದಿಲ್ಲ..!ಎಲ್ಲರನ್ನೂ ದೂಡ್ತಿದ್ದಾನೆ.ಯಾರ ಮುಖವನ್ನೂ ನೋಡುತ್ತಿಲ್ಲ. ಅವನಿಗೆ ಊಟ ಬೇಡಂತೆ..!"
ಬೋರ್ಡಿನಲ್ಲಿ ಬರೆಯಲು ಕೊಟ್ಟಿದ್ದೆ. ಆಟ ಆಡ್ತಿದ್ರು ಎಲ್ಲರೂ.. ಎರಡ್ಡು ಕೊಟ್ಟೆ...! ಸೊನ್ನೆ ಮಾರ್ಕ್ ಪರೀಕ್ಷೆಯಲ್ಲಿ!
ತರಗತಿಯಲ್ಲಿ ಮಕ್ಕಳೆಲ್ಲರೂ ಸುತ್ತುವರೆದಿದ್ದರು. ಅವನು ಕಣ್ಣೀರಾಗಿದ್ದ...! ಮ್ಯಾಜಿಕ್ ಮಾಡ್ತೇನೆ.. ನೋಡ್ತಾ ಇರಿ ಅಂದೆ.
ಅವನ ಹತ್ತಿರ ಕುಳಿತೆ... ಹೆಸರು ಕೂಗಿದೆ... ತಲೆಯೆತ್ತಲಿಲ್ಲ. ಇವನು ನನ್ನ ಮಗು. ನನ್ನ ಮಾತನ್ನು ಗೌರವಿಸ್ತಾನೆ ಅಂದೆ. ಮೈಸವರಿದೆ. ಮತ್ತೊಮ್ಮೆ ಹೆಸರು ಕೂಗಿದೆ. ನಿಜವಾಗಿಯೂ ಮ್ಯಾಜಿಕ್ ನಡೆಯಿತು!
ಏನಾಯ್ತಮ್ಮ...? ಪೆಟ್ಟು ಕೊಟ್ಟರು...? ಯಾಕೆ....?
ನಾನು ಆಟ ಆಡ್ತಿದ್ದೆ ತರಗತಿಯಲ್ಲಿ...
ಅದಕ್ಕೆ ಪೆಟ್ಟು ಕೊಟ್ರಾ.... ?
ಬೋರ್ಡ್ ನಲ್ಲಿ ಬರೆಯಲು ಕೊಟ್ಟಿದ್ರು.
ನೀನು ಬರೆಯಲಿಲ್ವಾ?
ಬರ್ದಾಗಿತ್ತು ಮೇಡಂ..
ಮತ್ತೆ ಪೆಟ್ಟು?
ಅದು.. ನಾನು.. ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡ್ಕೊಂಡಿದ್ದೇನೆ.
ಯಾವ ವಿಷಯ?
ಕನ್ನಡ.
ನಿನ್ಗೆ ಓದಲು ಕಷ್ಟ ಆಗ್ತಿದೆಯಾ...?
ಹೌದು ಮೇಡಂ.. ಗುಣಿತಾಕ್ಷರ... ಒತ್ತಕ್ಷರ... ಸರಿಯಾಗಿ ಗೊತ್ತಿಲ್ಲ ಮೇಡಂ.
ನನಗೆ ನಿನ್ನ ಅಂಕ ಬೇಡ... ನೀನು ಬೇಕು.. ನಾಳೆಯಿಂದ ನಾವು ಓದುವುದು ಮತ್ತು ಬರೆಯುವುದನ್ನು ಜೊತೆಯಾಗಿ ಕಲಿಯುವ.. ನಾನು ನಿನ್ನ ಜೊತೆಗಿದ್ದೇನೆ.
ಮತ್ತೊಮ್ಮೆ ಮ್ಯಾಜಿಕ್... ಗೆಲುವಾದಂತೆ ಎದ್ದು ನಿಂತ.. ಊಟವನ್ನೂ ಮುಗಿಸಿದ.
ಊಟ ಮಾಡಿದ್ದೀಯಾ ಅಣ್ಣಾ...? ಎಂದೆ.
ಮಕ್ಕಳನ್ನು ಲೆಕ್ಕಕ್ಕಿಂತ ಹೆಚ್ಚು ಮೇಲಿಡಬಾರದು....!ಅಶರೀರವಾಣಿಗೆ ನಕ್ಕು ಬಿಟ್ಟೆ.. ನಮ್ಮಿಬ್ಬರ ಗೆಲುವಿನ ನಗು!
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************