-->
ಅಕ್ಕನ ಪತ್ರ - 47ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 47ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 47 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


ಅಕ್ಕನ ಪತ್ರ 47ಕ್ಕೆ ಶಿಶಿರನ ಉತ್ತರ
   ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆ.
       ದಿನಾಂಕ 15/4/2023 ಮಧ್ಯಾಹ್ನ ಗಂಟೆ 2.30ಕ್ಕೆ SSLCಯ ಕೊನೆಯ ಪರೀಕ್ಷೆಯನ್ನು ಬರೆದು ಮನೆಗೆ ತಲುಪಿದೆ. ಆ ಕ್ಷಣ ಮಳೆ ಸುರಿಸಿ ಹಗುರವಾದ ಮುಗಿಲಿನಂತೆ  ನನ್ನ ಮೈಮನ ಹಗುರವಾದವು. ಶಾಲಾ ಶಿಕ್ಷಣದ  ಹೊರತು ಬೇರೆಲ್ಲಾ ಚಟುವಟಿಕೆಗಳು ನನ್ನ ಮನದ ಮುಂದೆ ಬಂದವು. ಕತೆ ಪುಸ್ತಕ, ಸುಡೊಕು, ಪದಬಂಧ, ಚಿತ್ರಕಲೆ, ಟಿವಿ, ಮೊಬೈಲ್ ಗಳ ನಡುವೆ ನೆನಪಾದದ್ದು ಮಕ್ಕಳ ಜಗಲಿಯ ಅಕ್ಕನ ಪತ್ರ. ನಿಮ್ಮ ಪತ್ರ ಓದಿದೆ, ರಜೆಯತ್ತ ಕಾಲು ಚಾಚುತ್ತಿರುವ ನನಗೆ ನಿಮ್ಮ ಪತ್ರ ದಿಕ್ಸೂಚಿಯಂತೆ ಕಂಡಿತು. ಮೋಜು ಮಸ್ತಿಯ ಜೊತೆಗೆ ಹೊಸ ವಿಚಾರಗಳನ್ನು ಕಲಿತರೆ ರಜೆಗೊಂದು ಅರ್ಥ ದೊರಕುವುದು.  
         ರಜೆಯನ್ನು ಸಂತೋಷದಿಂದ ಕಳೆಯಬೇಕು, ಹೊಸ ವಿಚಾರಗಳನ್ನು ತಿಳಿಯಬೇಕು, ಹೊಸ ಪುಸ್ತಕ ಓದಬೇಕು, ಹೊಸ ಸ್ಥಳಗಳನ್ನು ವೀಕ್ಷಿಸಬೇಕು,  ಅಪ್ಪ ಅಮ್ಮನಿಗೆ ಕೆಲಸಗಳಲ್ಲಿ ಸಹಾಯ ಮಾಡಬೇಕು ಎಂಬ ಏನೇನೋ ಯೋಚನೆಗಳು ನನ್ನಲ್ಲಿವೆ. ಅದರಲ್ಲಿ  ‌ಎಷ್ಟು ಕಾರ್ಯರೂಪಕ್ಕೆ  ಬರುತ್ತದೆ ಎಂಬುದು ಕಾದು ನೋಡಬೇಕು.   
      ನೀವು ಹೇಗಿದ್ದೀರಿ ಅಕ್ಕಾ ನಿಮಗೂ ಈಗ ರಜೆ ಸಿಕ್ಕಿರಬಹುದು ರಜೆಯನ್ನು ಮಜವಾಗಿ ಕಳೆಯೋಣ, ಮುಂದಿನ ಪತ್ರದಲ್ಲಿ ಭೇಟಿಯಾಗೋಣ ಅಕ್ಕಾ.
............................................... ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ  ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
******************************************



      ನಮಸ್ತೆ ಅಕ್ಕ..... ನಾನು ಶ್ರಾವ್ಯ. ಬದುಕು ಎಂಬುದು ನಿರಂತರ ಹರಿವ ನದಿಯಂತೆ, ಹರಿವ  ನದಿಗೆ ಸಾಕಷ್ಟು ಅಡ್ಡಿಗಳು ಒದಗುತ್ತದೆ. ಅವೆಲ್ಲವನ್ನೂ ಮೀರಿ ಸ್ವಚ್ಛಂದವಾಗಿ ಹರಿಯುತ್ತದೆ. ಇದು ನದಿಯ ತಾಕತ್ತು.
         ನಮ್ಮ ಜೀವನದಲ್ಲಿಯೂ ಆಸೆ - ಕನಸುಗಳು ಹೆಚ್ಚು, ಹೀಗಿರುವಾಗ ಎದುರಾಗುವ ಅಡ್ಡಿ- ಸಂಕಷ್ಟಗಳು ಹೆಚ್ಚು. ಅವುಗಳನ್ನು ಛಲದಿಂದ ಎದುರಿಸಿ, ಉತ್ತರ ಕಂಡುಕೊಳ್ಳುವುದೇ ಜೀವನ.
       ಪುಣ್ಯಕೋಟಿಯ ಕತೆ ಸತ್ಯ ನಿಷ್ಠೆ ಯ ಬಗ್ಗೆ ಹೇಳುತ್ತದೆ ಮತ್ತು  ಆ ಮುಗ್ದ ಹಸು ಘೋರ ವ್ಯಾಘ್ರವನ್ನು ಎದುರಿಸಿದ ಬಗೆ ನಮಗೆ ಸ್ಪೂರ್ತಿ ನೀಡುತ್ತದೆ. ಸಂಕಷ್ಟ ಎದುರಾದಾಗ ಬೆನ್ನು ತೋರಿಸಿ ಹೇಡಿಗಳಾಗುವುದಕ್ಕಿಂತ, ಎದುರಿಸಿ ಸೋಲುವುದರಲ್ಲಿ ಗೆಲುವಿದೆ.
         ಸತ್ಯದ ಹಾದಿ, ಸಹನೆಯ ಮಾತು, ಹಿರಿಯರ ಮಾರ್ಗದರ್ಶನ ಇವೆಲ್ಲ ಒಟ್ಟು ಸೇರಿದರೆ ಬದುಕು ಸುಂದರ. ಬದುಕಿನಲ್ಲಿ ಕಲಿಯುವುದು ಸಾಕಷ್ಟು ಇರುತ್ತದೆ, ಖುಷಿ - ಖುಷಿಯಿಂದ, ಆಸಕ್ತಿಯಿಂದ ಕಲಿತು, ಹೆತ್ತ ತಂದೆ ತಾಯಿಗೆ ಗೌರವ ಕೊಡುತ್ತಾ ಸರಳ, ಸುಂದರ ಬದುಕು ಬದುಕೋಣ.  ಧನ್ಯವಾದ...
............................................................ ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************         


      ನಮಸ್ತೇ ಆಕ್ಕಾ,..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
     ನಾನು ಕ್ಷೇಮದಿಂದ ಇರುವೆನು ನೀವೂ ಕೂಡ ಕ್ಷೇಮವೆಂದು ಭಾವಿಸುತ್ತೇನೆ.
      ನಿಮ್ಮ ಪತ್ರವನ್ನು ಓದಿದೆನು. ನಾವು ಯಾವಾಗಲೂ ಕಷ್ಟ ಮತ್ತು ಸೋಲು ಬಂದಾಗ ಹೆದರದೆ ಕುಗ್ಗದೇ ಧೈರ್ಯದಿಂದ ಮುಂದೆ ಸಾಗಬೇಕು ಎಂಬುದನ್ನು ಈ ಪತ್ರದಿಂದ ಅರ್ಥೈಸಿ ಕೊಳ್ಳಬಹುದು. ಡಾ. ಸಿ. ಆರ್ ಮಂಜುನಾಥ್ ಅವರ ಬಗ್ಗೆ ತಿಳಿದು ತುಂಬಾ ಸಂತೋಷವಾಯ್ತು. ಇಂದಿನ ಮಕ್ಕಳು ಚಿಕ್ಕ ಚಿಕ್ಕ ಕಾರಣಕ್ಕೆ ಕುಗ್ಗದೇ ಒಳ್ಳೆಯ ವಿದ್ಯಾವಂತರಾಗಿ ಮುಂದೆ  ಉತ್ತಮ ಸಾಧನೆಯನ್ನು ಮಾಡಬಹುದು ಎಂಬುದನ್ನು  ತಿಳಿದುಕೊಳ್ಳಬಹುದು. ಧನ್ಯವಾದಗಳು ಅಕ್ಕಾ,
......................................... ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.
******************************************         
    


      ನಮಸ್ತೆ ಅಕ್ಕಾ ನಾನು ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿರಿ ಎಂದು ಹಾರೈಸುತ್ತೇನೆ. ನಿಮ್ಮ ಪತ್ರವನ್ನು ಓದಿ ನನಗೆ ತುಂಬಾ ಖುಷಿ ಅನ್ನಿಸಿತು. ನನ್ನ ಹೆಸರು ಸಿಂಚನ. ಈಗ ಬೇಸರದ ಸಂಗತಿ ಏನೆಂದರೆ ನಾವು ನಾಳೆ ನಮ್ಮ ಶಾಲೆಯನ್ನು ಬಿಡುತ್ತಿದ್ದೇವೆ. ನಾಳೆ ನಮ್ಮ ಬೀಳ್ಕೊಡುಗೆ ಸಮಾರಂಭವು ಇರುವುದು. ನೀವೆಲ್ಲರೂ ಕೂಡ ಬರುತ್ತೀರಿ ಎಂದು ನಾನು ಕಾಯುತ್ತಿರುತ್ತೇನೆ. ನನಗೆ ರಗಸದಅ ಕಲಿಸಿದ ಶಿಕ್ಷಕರಿಗಾಗಿ ತುಂಬಾ ಧನ್ಯವಾದಗಳು. ನಂತರ ನನ್ನ ಶಾಲೆಯ  ಗೆಳೆಯರನ್ನು  ಶಾಲೆಯನ್ನು ಮತ್ತು ಬಿಡುತ್ತಿದ್ದೇನೆ. ನನಗೆ ತುಂಬಾ ಬೇಸರ ವಾಗುತ್ತದೆ. ನನ್ನ ಶಾಲೆ ಶಿಕ್ಷಕರಿಗೆ ನಾನು ಯಾವಾಗಲೂ ಕೃತಜ್ಞತೆಯನ್ನು ಹೇಳುತ್ತಿದ್ದೆ. ನಮ್ಮ ಶಾಲೆಯ ಯಾರನ್ನೂ ಕೂಡ ಮರೆಯುವುದಿಲ್ಲ. ಮುಂದಿನ ಪತ್ರದಲ್ಲಿ ಮತ್ತೊಮ್ಮೆ ಸಿಗುವ ಧನ್ಯವಾದಗಳು ಅಕ್ಕಾ...
....................................... ಸಿಂಚನಾ  ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
******************************************



    ನಮಸ್ತೆ ಅಕ್ಕ... ನಾನು ಭವ್ಯಶ್ರೀ.... ನಿಮ್ಮ ಪತ್ರ ತಲುಪಿತು. ಈ ವರ್ಷದ ಕಲಿಕಾ ಚಟುವಟಿಕೆ ಗೊಂದು ಪೂರ್ಣ ವಿರಾಮ. ಪುಸ್ತಕದ ಅಕ್ಷರ ಮರೆಯಬಹುದು ಆದರೆ ಬದುಕಿನ ಪಾಠ ಕಲಿಸಲು ಎಷ್ಟು ಮಂದಿ ಇದ್ದಾರೆ ಅಲ್ವಾ. ಅನುಭವಗಳು ಸಹ ನಮಗೆ ಉತ್ತಮ ಪಾಠಗಳೇ. ನಿಮ್ಮ ಈ ಬಾರಿಯ ಪತ್ರದಿಂದಲೂ ಹಲವು ವಿಷಯಗಳನ್ನು ಕಲಿತೆ. ಭಯ..... ಸಾಧನೆಗೆ ಸ್ಫೂರ್ತಿ. ಹೀಗೆ ಹಲವು ವಿಷಯಗಳು. ನಾವೆಷ್ಟು ಭಾಗ್ಯವಂತರು, ರಜೆಯ ಮನರಂಜನೆಯ ಜೊತೆಗೆ ತಮ್ಮ ಮಕ್ಕಳಷ್ಟೇ ಕಾಳಜಿ ಪ್ರೀತಿ ಸಮಯ ನೀಡಿ ನಮಗೆ ಕಿವಿಮಾತು ಮಾರ್ಗದರ್ಶನ ನೀಡುವ ನಿಮ್ಮ ಪತ್ರ. ಓದಿ ಖುಷಿ ಪಟ್ಟೆ. ಬದುಕಿನ ದಾರಿ ಮರೆತಾಗಲೆಲ್ಲ ಮತ್ತೆ ನೆನಪಿಸುವವರು ಗುರುಗಳು. ರಜೆಯ ದಿನಗಳನ್ನು ಸಂತಸದಿಂದ ಕಳೆಯೋಣ. ನಮ್ಮ ಮನರಂಜನೆಗೆ ಹಲವಾರು ಸುಂದರ ಅವಕಾಶಗಳಿವೆ. ತುಂಬಾ ಮಾತಾಡಿದೆ ಅಲ್ವಾ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ.... ನಮಸ್ಕಾರ....
................................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೋಣಾಲು
ಕಡಬ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ.
******************************************



     ನಮಸ್ತೆ ಅಕ್ಕ..... ಹೇಗಿದ್ದೀರಿ.......? ನಾನು ಪೂಜಾ. ನೀವು ಹೇಳಿದ ಕತೆಯು ಏನು ತಿಳಿಸುತ್ತದೆ ಎಂದರೆ.., ನಮಗೆ ಎಷ್ಟೇ ಕಷ್ಟ ಬಂದರೂ ನಾವು ಅದನ್ನು ಧೈರ್ಯದಿಂದ ಎದುರಿಸಬೇಕು. ನಾವು ಎಷ್ಟು ಹೆದುರುತ್ತೇವೆಯೂ ನಾವು ಅಷ್ಟು ಕುಗ್ಗುತ್ತೇವೆ. ಒಂದು ಒಂದು ಕ್ಷಣವೂ ಅಮೂಲ್ಯವದದ್ದು. ನಾವು ಅದನ್ನು ಸದುಪಯೋಗ ಮಾಡಬೇಕು. ಒಂದು ಒಂದು ಅನುಭವ ಕೂಡಾ ನಮ್ಮ ಬದುಕಿನ ಪಾಠವಾಗಬಹುದು. ನಾನಂತೂ ಈ ರಜೆಯಲ್ಲಿ ಅನೇಕ ಹೊಸ ಹೊಸ ವಿಷಯಗಳನ್ನು ಕಲಿಯುತ್ತೇನೆ. ಹಾಗೆಯೇ ರಜೆಯನ್ನು ಕೂಡಾ ಮಜಾ ಮಾಡುತ್ತೇನೆ ಎನ್ನುತ್ತಾ ಅಕ್ಕನ ಪತ್ರಕ್ಕೆ ನನ್ನ ನಮನಗಳು.....
................................................... ಪೂಜಾ 
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



ಅಕ್ಕನ ಪತ್ರ ಸಂಚಿಕೆ 47: ಮಕ್ಕಳ ಉತ್ತರ
    ನಮಸ್ತೆ ಅಕ್ಕ ನಾನು ಅಕ್ಷರ ಪಟ್ವಾಲ್.
ಶಾಲೆಯ ಕಲಿಕೆಗೆ ಈಗ ಬಿಡುವು. ರಜೆ ಆರಂಭ ಮಜಾದ ಜೊತೆ ಹೊಸದನ್ನು ಕಲಿಯೋಣ.
ನಿಮ್ಮ ಕಥೆಯ ನೀತಿ ನಮಗೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಾವು ಅದನ್ನು ಧೈರ್ಯದಿಂದ ಎದುರಿಸಿ ನಿಲ್ಲಬೇಕು. ಹಾಗೆಯೇ ಜೀವನದಲ್ಲಿ ಯಶಸ್ಸು ಗಳಿಸುವ ಇನ್ನೊಂದು ಕಥೆಯನ್ನು ಬರೆಯುತ್ತೇನೆ. ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಒಬ್ಬ ಶಿಲ್ಪಿಯು ಕಲ್ಲಿನ ಕೆತ್ತನೆಯನ್ನು ಮಾಡುತ್ತಿದ್ದ. ಆಗ ಪರಮಹಂಸರು ಅವನಲ್ಲಿ ನೀನು ಯಾವ ಕೆತ್ತನೆಯನ್ನು ಮಾಡುತ್ತಿದ್ದೀಯಾ ಎಂದು ಕೇಳಿದರು. ಆಗ ಶಿಲ್ಪಿಯು ರಾಜನ ಪ್ರತಿಮೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಆಗ ಪರಿಮಹಂಸರು ಅವರ ಚಿತ್ರ ಅಥವಾ ಪ್ರತಿರೂಪ ಇಲ್ಲದೆ ಹೇಗೆ ಕೆತ್ತನೆ ಮಾಡುತ್ತೀಯ ಎಂದು ಕೇಳಿದರು. ಆಗ ಶಿಲ್ಪಿಯು ನನ್ನ ಮನಸ್ಸಿನಲ್ಲಿ ರಾಜನ ಚಿತ್ರವನ್ನು ಕಲ್ಪಿಸಿಕೊಂಡು ಕೆತ್ತನೆಯನ್ನು ಮಾಡುತ್ತಿರುವೆ ಎಂದು ಹೇಳಿದನು. ಸ್ವಾಮೀಜಿಯವರು ಗಮನಿಸುತ್ತಿರುವಂತೆ ಸುಂದರವಾದ ರಾಜನ ಚಿತ್ರವನ್ನು ಕೆತ್ತಿದನು. ಸ್ವಾಮೀಜಿ ಸುಮ್ಮನೇ ನಿಂತು ಯೋಚನೆ ಮಾಡಿ ಅವರ ಪ್ರಶ್ನೆಗೆ ಉತ್ತರ ಸಿಕ್ಕಿತು. ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನಾದರೂ ಮಾಡಬೇಕೆಂದರೆ ಆ ಕೆಲಸದಲ್ಲಿ ನೋಟ ಸರಿಯಾಗಿರಬೇಕು. ಆಗ ಮಾತ್ರ ಏನಾದರೂ ಮಾಡಿದರೆ ಯಶಸ್ಸು ಸಾಧ್ಯ.
......................................... ಅಕ್ಷರ ಪಟ್ಬಾಲ್
7ನೇ ತರಗತಿ
ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಬೈಂದೂರು
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************


      ಪ್ರೀತಿಯ ಜಗಲಿಯ ಮುದ್ದು ಅಕ್ಕನಿಗೆ ಜನನಿ ಮಾಡುವ ನಮಸ್ಕಾರಗಳು. ಅಕ್ಕನ ಪತ್ರ : ಸಂಚಿಕೆ - 47 ನೇ ಅಕ್ಕನ ಪತ್ರವನ್ನು ಮನೆಯವರೆಲ್ಲಾ ಒಟ್ಟಿಗೆ ಸೇರಿ ಓದಿ ನಾವು ತುಂಬಾ ಖುಷಿಪಟ್ಟೆವು. ಅಕ್ಕನ ಪತ್ರದಲ್ಲಿ ಕೋತಿಯ ಕಥೆಯನ್ನು ಓದಿ ತಿಳಿಯಿತು ನಮಗೆ ಕಷ್ಟ ಬಂದಾಗ ಹೆದರದೆ ಧೈರ್ಯವಾಗಿ ಎದುರಿಸಬೇಕು. ಆಗ ಕಷ್ಟ ತಾನಾಗಿಯೇ ಮಂಜಿನಂತೆ ಕರಗಿ  ಹೋಗುತ್ತದೆ. ಈ ಕಥೆಯ ನೀತಿ-ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಎದುರಿಸಬೇಕು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಸಿ.ಆರ್ ಮಂಜುನಾಥ್ ಅವರು ಮಾಡಿದ ಸಾಧನೆಯನ್ನು ಕಂಡು  ನನಗೂ ಸಮಾಜದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಜನರ ಪ್ರೀತಿ ಗಳಿಸಬೇಕು ಎಂಬ ಕನಸು ಮೂಡಿತು . ನನ್ನ ಪ್ರೀತಿಯ ಅಕ್ಕನಿಗೆ ಧನ್ಯವಾದಗಳು.
................................................... ಜನನಿ. ಪಿ
7ನೇ ತರಗತಿ 
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೊಯಿಲ ಕೆ.ಸಿ.ಫಾರ್ಮ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



     ಪ್ರೀತಿಯ ತೇಜಸ್ವಿ ಅಕ್ಕನಿಗೆ ನನ್ನ ನಮಸ್ಕಾರಗಳು..... ನಾನು ಧನ್ವಿತಾ ಕಾರಂತ್. ಪ್ರತಿದಿನ ಏನಾದರೂ ಹೊಸ ಕಲಿಕೆಯಲ್ಲಿ ತೊಡಗಿಸಿಕೊಂಡರೆ ನಾವು ಕ್ರಿಯಾಶೀಲರಾಗಬಹುದು.  ಇದನ್ನು ಎಳವೆಯಲ್ಲೇ ಮಾಡಿದರೆ ಇನ್ನೂ ಚೆನ್ನ. ಎಂಬುದನ್ನು ತಮ್ಮ ಪತ್ರದಲ್ಲಿ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ. ನಮಗೆ ಈಗ ಬಿಡುವಿನ ಸಮಯ. ಈ ಹೊತ್ತಿನಲ್ಲಿ ನಮ್ಮ ಗುರಿಯು ಪೂರ್ಣವಾಗಲು ತಯಾರಿ ನಡೆಸಬಹುದು. ಜೀವನದಲ್ಲಿ ಹೊಸತೊಂದನ್ನು ಸಾಧಿಸಬಹುದು. ಎಂಬುದನ್ನು ಸಾಧಕರ ನಿದರ್ಶನದ ಮೂಲಕ ಹೇಳಿ ಪ್ರೇರೇಪಿಸಿದ್ದೀರಿ. ನಿಮ್ಮ ಈ ಪತ್ರ ನನ್ನನ್ನು ಜಾಗೃತಗೊಳಿಸಿ ಹೊಸ ಶಕ್ತಿಯನ್ನು ತುಂಬಿದೆ. ನನ್ನ ಗುರಿಗೆ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿಕೊಟ್ಟಿದೆ. ಆದ್ದರಿಂದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.
........................................ ಧನ್ವಿತಾ ಕಾರಂತ್
8ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



         ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನಾವು ಯಾವುದೇ ಕೆಲಸಗಳನ್ನು ಮಾಡುವಾಗ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಗಳು ಬಂತೆಂದು ಆ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಾರದು. ಇನ್ನೊಂದು ಸಲ ಪ್ರಯತ್ನ ಪಟ್ಟು, ಎದೆ ಗುಂದದೆ ಮುನ್ನಡೆದರೆ ನಾವು ಅಂದುಕೊಂಡ ಕೆಲಸಗಳು ಸರಾಗವಾಗಿವಾಗಿ ನಡೆಯುತ್ತವೆ. ನಾವು ಯಾವಾಗಲೂ ಧೈರ್ಯಗೆಡಬಾರದು. ನಮ್ಮಿಂದಾಗುವುದಿಲ್ಲ ಎಂದು ಅಂದುಕೊಳ್ಳಬಾರದು. ಹಿಂಜರಿಯದೆ ಮುಂದಡಿಯಿಟ್ಟರೆ, ನಮ್ಮ ವ್ಯಕ್ತಿತ್ವಕ್ಕೊಂದು ಮೆರುಗು. ಧನ್ಯವಾದಗಳೊಂದಿಗೆ,
...................................... ವೈಷ್ಣವಿ ಕಾಮತ್
6ನೇ ತರಗತಿ 
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



    ನಮಸ್ತೆ ಅಕ್ಕಾ.... ನಾನು ನಿಭಾ. ನಿಮ್ಮ ಪತ್ರ ಓದಿ ಸಂತೋಷವಾಯಿತು. ನೀವು ಹೇಳಿದಂತೆ ಕಷ್ಟ ಬಂತು ಎಂದು ಓಡುವ ಬದಲು ಎದುರಿಸಿ ನಿಂತರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಕೆಲವೊಮ್ಮೆ ಹೀಗೂ ಸಂಭವಿಸಬಹುದು.. ನಾವು ಕಷ್ಟಕ್ಕೆ ಹೆದರಿ ಓಡಿದ ಮೇಲೆ ಅದೇ ಕಷ್ಟ ಇನ್ನೊಬ್ಬರಿಗೆ ಬಂದು ಅವರು ಅದನ್ನು ಎದುರಿಸಿದಾಗ ನಮಗೆ ಹೀಗನಿಸುತ್ತದೆ. ನಾನು ಅಂದು ಕಷ್ಟವನ್ನು ಎದುರಿಸುತ್ತಿದ್ದರೆ ಇಂದು ನಾನು ಕೂಡ ಒಳ್ಳೆಯ ಜೀವನ ನಡೆಸಬಹುದಿತ್ತು ಎಂದು.. ಆದರೆ ಹೀಗೆ ಕೊರಗುವ ಬದಲಿಗೆ ಕಷ್ಟ ಬಂದಾಗಲೇ ಎದುರಿಸಿ ಬಿಡಬೇಕು. ನಾನು ಕೂಡ ಇಲ್ಲಿಯವರೆಗೆ ಇದರ ಬಗ್ಗೆ ಯೋಚಿಸಿರಲಿಲ್ಲ ಇನ್ನು ಗಮನಹರಿಸುತ್ತೇನೆ. ಹಾಗೆಯೇ ಸಾಧಕರ ಸೀಟ್ ನಲ್ಲಿದ್ದ ಡಾ. ಸಿ. ಆರ್ ಮಂಜುನಾಥ್ ಅವರ ಜೀವನ ಶೈಲಿ ಸೇವೆಗಳು ಮಾತುಗಳು ಸ್ಫೂರ್ತಿದಾಯಕವಾಗಿಯೂ ಆದರ್ಶವಾಗಿಯೂ ಇತ್ತು.
      ಈಗ ರಜೆಯನ್ನು ಆನಂದಿಸುತ್ತಿದ್ದೇವೆ. ನೀವು ಕೂಡ ಯಾವಾಗಲೂ ಖುಷಿಯಾಗಿರಿ ಎಂದು ಹೇಳುತ್ತಾ ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಧನ್ಯವಾದಗಳು ಅಕ್ಕಾ...
...................................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



      ಹರಿ ಓಂ... ನಾನು ಶಾನ್ವಿ ಶೆಟ್ಟಿ.  ಓಂ ಜನ ಹಿತಾಯ ಶಾಲೆಗುಡ್ಡೆಯಂಗಡಿ. ನಮಸ್ತೇ ಅಕ್ಕ                  ನಾವು ಚೆನ್ನಾಗಿದ್ದೇವೆ. ನೀವು ಹೇಗಿದ್ದೀರ.                                   ನಿಮ್ಮ ಕತೆ ಓದಿದೆ ಅಕ್ಕ. ಈ ಕತೆಯನ್ನು ಮುಂಚೆಯೂ ಕೇಳಿದ್ದೆ. ನಮಗೆ ಬರುವ  ಯಾವುದೇ ಕಷ್ಟಗಳಾಗಲಿ ಅಥವಾ ಪಾಠವಾಗಲಿ  ಕಷ್ಟ ಇದೆ ಎಂದು ಹಿಂದೆ ಸರಿದರೆ ಮತ್ತೆ ಮುಂದೆ ಸಾಧ್ಯವಾಗುವುದಿಲ್ಲ. ನನಗೆ ಇದು ಸಾದ್ಯ  ಎಂದು ಅಂದುಕೊಂಡರೆ  ಖಂಡಿತ ಸಾದ್ಯ.  ಧನ್ಯವಾದ  ಅಕ್ಕ ಇದಕ್ಕಿಂತ ಜಾಸ್ತಿ ಬರೆಯಲು ನನಗೆ ಗೊತ್ತಿಲ್ಲ. ಆದರೆ ನಿಮ್ಮ ಕತೆಗಳಲ್ಲಿ ತುಂಬಾ ಅರ್ಥ ಇರುತ್ತೆ.        ಧನ್ಯವಾದ ಅಕ್ಕ.
................................................. ಶಾನ್ವಿ ಶೆಟ್ಟಿ    
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


        ಮಕ್ಕಳ ಜಗಲಿ... ಅಕ್ಕನ ಪತ್ರ--47.
ಪ್ರೀತಿಯ ಅಕ್ಕ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು.... ನಿಮ್ಮನ್ನು ಪತ್ರದ ಮೂಲಕ ಭೇಟಿಯಾಗದೆ ತುಂಬಾ ಸಮಯ ಆಯಿತು ಎಂದು ನನಗೆ ಅನಿಸುತ್ತಿದೆ.... ಯಾವುದೋ ಸಣ್ಣ ಪುಟ್ಟ ಕಾರಣಕ್ಕೆ ಪತ್ರ ಬರೆಯಲು ನನಗೆ ಕೆಲವು ಸಲ ಅನನುಕೂಲವಾಗುತ್ತದೆ ಬೇಸರವೂ ಆಗುತ್ತದೆ... ಈ ಸಲ ಒಬ್ಬರು ಸನ್ಯಾಸಿಯ ಕಥೆಯ ಮೂಲಕ ಹಾಗೂ ವೈದ್ಯರಾದ ಮಂಜುನಾಥರವರ ಕಥೆಯ ಮೂಲಕ ನಮಗೆ ಬಹಳಷ್ಟು ಸ್ಪೂರ್ತಿಯನ್ನು ತುಂಬಿದ್ದೀರಿ. ನಿಮ್ಮ ಪತ್ರ ಓದುವಾಗಲೇ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಲೇಬೇಕು ಎಂದು ಮನಸ್ಸಲ್ಲಿ ಹುಮ್ಮಸ್ಸು, ಪುಟಿದು ನಿಲ್ಲುತ್ತದೆ. ಈ ಸಲ 8ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಯಲ್ಲಿ ತರಗತಿಗೇ ಮೊದಲ ಸ್ಥಾನ ಪಡೆದಿರುತ್ತೇನೆ. ಅಕ್ಕ ನಿಮ್ಮ ಮಾತಿನಂತೆ ಈ ಸಲ ರಜೆಯನ್ನು ತುಂಬಾ ಸಂತೋಷದಿಂದ ಕಳೆಯುತ್ತೇವೆ. ಅಜ್ಜಿ ಮನೆಗೆ ಹೋಗಿ ಅಲ್ಲಿ ಎಲ್ಲಾ ಸ್ನೇಹಿತರೊಂದಿಗೆ ಎಲ್ಲಾ ಬಗೆಯ ಆಟ ಆಡಿ ಖುಷಿ ಪಡುತ್ತೇವೆ. ನಿಮಗೆ ದೇವರು ಆಯುರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಸದಾ ಬೇಡುತ್ತೇನೆ. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ. ಇಂತೀ ನಿಮ್ಮ ಪ್ರೀತಿಯ ಲಹರಿ.
............................................. ಲಹರಿ ಜಿ.ಕೆ.
8ನೇ ತರಗತಿ
ತುಂಬೆ ಆಂಗ್ಲ ಮಾಧ್ಯಮ ಶಾಲೆ ತುಂಬೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



        ನಮಸ್ತೆ ಅಕ್ಕ. ನಾನು ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿರುವಿರಿಂದು ಹಾರೈಸುತ್ತೇನೆ. ನನ್ನ ಹೆಸರು ಸುಪ್ರೀಯ. ನಿಮ್ಮ ಈ ಪತ್ರ ನನಗೆ ತುಂಬಾ ಇಷ್ಟವಾಯಿತು. ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಅವಳ ಹೆಸರು ಸಿಂಚನಾ ಅವಳು ಕೂಡ ಮಕ್ಕಳ ಜಗಲಿಯ ವಿದ್ಯಾರ್ಥಿ. ನನ್ನ ಶಾಲೆಯನ್ನು ಬಿಟ್ಟು ಹೋಗಲು ನನಗೆ ಮನಸ್ಸಿಲ್ಲ. ಆದರೆ ನಾನು ಏನು ಮಾಡುವುದು ಹೋಗಲೇಬೇಕಾದ ಪರಿಸ್ಥಿತಿ ಇದೆ. ಅಲ್ಲಿ ಒಂದರಿಂದ ಐದನೇ ತರಗತಿಯಲ್ಲಿ ಇರುವುದರಿಂದ ಮಾತ್ರ ನಾವು ಆರನೇ ತರಗತಿಗೆ ಮತ್ತೊಂದು ಶಾಲೆಗೆ ಹೋಗುತ್ತಿದ್ದೇವೆ. ನಮ್ಮ ಶಾಲೆ ಎಂದರೆ ನಮಗೆ ತುಂಬಾ ಪ್ರೀತಿಯ ಸ್ಥಳ. ರಜೆಯಲ್ಲಿ ನಾನು ಒಳ್ಳೆಯ ವಿಷಯಗಳನ್ನು ಕಲಿಯುತ್ತೇನೆ. ಧನ್ಯವಾದ ಅಕ್ಕಾ....  ನನ್ನ ಮಾತನ್ನು ಕೊನೆಗೊಳಿಸುತ್ತೇನೆ.
............................................... ಸುಪ್ರೀಯ
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ  ತಾಲೂಕು, ದಕ್ಷಿಣ ಕನ್ನಡ  ಜಿಲ್ಲೆ
******************************************



Ads on article

Advertise in articles 1

advertising articles 2

Advertise under the article