-->
ಗಣಿತದ ಗೆಲುವಿಗೆ ಇಲ್ಲಿದೆ ಪೂರ್ಣ ಸೂತ್ರ

ಗಣಿತದ ಗೆಲುವಿಗೆ ಇಲ್ಲಿದೆ ಪೂರ್ಣ ಸೂತ್ರ

ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ             
                ವಿದ್ಯಾರ್ಥಿಗಳೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಸನ್ನಿಹಿತವಾಗಿದೆ. ನಿಮ್ಮಲ್ಲಿ ಹಲವು ಮಂದಿಯ ಮನಸ್ಸಲ್ಲಿ ಒಂದಷ್ಟು ದಿಗಿಲು, ಆತಂಕ, ಭಯ ಮೂಡುವುದು ಸಹಜ. ಇದಕ್ಕೆ ನಿಮ್ಮ ಪೋಷಕರ ಒತ್ತಡವೂ ಕಾರಣ. ಪರೀಕ್ಷೆ ಎಂಬುವುದು ಶಿಕ್ಷಣ ವ್ಯವಸ್ಥೆಯೊಳಗಿನ ಒಂದು ಪ್ರಕ್ರಿಯೆ. ನಮ್ಮ ಕಲಿಕೆಯ ಮಟ್ಟವನ್ನು ತಿಳಿದುಕೊಳ್ಳುವ ಒಂದು ಉತ್ತಮ ಅವಕಾಶ. ಆದ್ದರಿಂದಲೇ ಭಯ ಮುಕ್ತವಾಗಿ ಪರೀಕ್ಷೆ ಬರೆಯಿರಿ. ಅದರಲ್ಲೂ ಪರೀಕ್ಷೆಗೆ ಗಣಿತ ವಿಷಯದಲ್ಲಿ ತಯಾರಿ ಬಗ್ಗೆ ನೋಡೋಣ.
       ಗಣಿತ ವಿಷಯ ಕಷ್ಟವೆಂಬುವುದು ನಿಮ್ಮ ಬಹುತೇಕರ ಅಭಿಪ್ರಾಯ. ಆದರೆ ನೀವು ಸ್ವಲ್ಪ ಯೋಚಿಸಿದರೆ ಬಹುಶಃ ಉತ್ತೀರ್ಣಗೊಳ್ಳಲು ಅತ್ಯಂತ ಸುಲಭದ ವಿಷಯವೇ ಗಣಿತ. ಹೌದು ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ. ಗಣಿತ ಕಲಿಸುವಿಕೆ ಮತ್ತು ಕಲಿಯುವಿಕೆ ಎರಡಲ್ಲೂ ಎಡವಿದ ಕಾರಣ ವಿಷಯ ಇಂದು ಕಷ್ಟಕರವಾಗಿ ತೋಚುತ್ತಿದೆ ಅಷ್ಟೇ.
       ಎಸ್.ಎಸ್.ಎಲ್.ಸಿ. ಗಣಿತ ಅದೊಂದು ಸುಂದರ ಕಾವ್ಯವಿದ್ದಂತೆ. ನೂರಕ್ಕೆ ನೂರು ಪಡೆಯುವವರೂ ಅದೆಷ್ಟೋ ಮಂದಿ ಇದ್ದಾರೆಂದರೆ ಅದು ಸುಲಭವೇ. ಇನ್ನು ಫೇಲಾಗುವುದಂತೂ ತುಂಬಾನೇ ಕಷ್ಟ. ಗಣಿತ ಕಲಿಕೆ ಕಷ್ಟ ಎಂಬ ಭಾವನೆ ಇದ್ದರೆ, ಸ್ವಲ್ಪ ಯೋಜನೆ ಪ್ರಕಾರ ಸಿದ್ಧರಾದರೆ ಲೀಲಾಜಾಲವಾಗಿ 40/80 ಪಡೆಯಬಹುದು. ಅದಕ್ಕಾಗಿ ನಾವೊಂದಷ್ಟು ಸಿದ್ಧತೆ ಮಾಡಿಕೊಂಡರಾಯಿತು.
      ವಿದ್ಯಾರ್ಥಿಗಳೇ ನಿಮಗೆ 80/80 ತೆಗೆಯುವ ಸಾಮರ್ಥ್ಯವಿದ್ದರೆ ಸಂತೋಷ. ಆದರೆ ಪಾಸಾಗುವುದೇ ಕಷ್ಟ ಎಂಬ ಮನೋಭಾವ ನಿಮ್ಮದಾಗಿದ್ದರೆ ಈ ಲೇಖನ ನಿಮಗೆ ಉಪಯುಕ್ತ. ಆಗ ನೀವು ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಿ.
      ಉತ್ತೀರ್ಣಗೊಳ್ಳಲು ಮುಖ್ಯವಾಗಿ ನಾವು ಕೆಲವು ಪಾಠ/ಪರಿಕಲ್ಪನೆಗಳನ್ನು ಆದ್ಯತೆಯ ದೃಷ್ಡಿಯಿಂದ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
1. ಸಮಾಂತರ ಶ್ರೇಢಿಯ ಸೂತ್ರಗಳು.
2. ಸಮಾಂತರ ಶ್ರೇಢಿಯ n'ನೇ ಪದ ಕಂಡುಹಿಡಿಯುವುದು
3. ಮೊದಲ n'ಪದಗಳ ಮೊತ್ತ
4. ಪ್ರಮೇಯಗಳು
5. ನಕ್ಷೆಯ ಮೂಲಕ ಸಮೀಕರಣ ಬಿಡಿಸುವುದು.
6. ವರ್ಜ್ಯ ವಿಧಾನದಿಂದ ಸಮೀಕರಣ     
     ಬಿಡಿಸುವುದು
7. ಸಮರೂಪಿ ತ್ರಿಭುಜ ರಚನೆ
8. ಸ್ಪರ್ಶಕಗಳ ರಚನೆ
9. ದೂರ ಸೂತ್ರ, ಭಾಗ ಪ್ರಮಾಣ ಸೂತ್ರ, 
    ತ್ರಿಭುಜದ ವಿಸ್ತೀರ್ಣ
10. ಅಭಾಗಲಬ್ಧ ಎಂದು ಸಾಧಿಸುವ ಸರಳ 
      ಲೆಕ್ಕಗಳು
11. ಸೂತ್ರದ ಸಹಾಯದಿಂದ ವರ್ಗಸಮೀಕರಣ 
      ಬಿಡಿಸುವುದು.
12. ಸರಾಸರಿ, ಮಧ್ಯಾಂಕ, ಬಹುಲಕ     
      ಕಂಡುಹಿಡಿಯುವುದು
13. ಓಜೀವ್ ರಚನೆ
                 ಇವುಗಳಲ್ಲದೆ ಒಂದು ಅಂಕಗಳಿಗೆ ಸಂಬಂಧಿಸಿದ ಕೆಲವು ಸರಳ ಲೆಕ್ಕಗಳನ್ನು ನೀವು ಅಭ್ಯಾಸಮಾಡಿದರೆ 50 ಅಂಕಗಳನ್ನು ಸರಾಗವಾಗಿ ಪಡೆಯಬಹುದು.
       ಉತ್ತಮ ಅಂಕಗಳಿಸಲು ಮಾನಸಿಕ ಸ್ಥೈರ್ಯ ಬಹುಮುಖ್ಯ. ಗೆಲ್ಲುವ ಆತ್ಮವಿಶ್ವಾಸ ಇರಬೇಕು. ನಿರಂತರ ಪ್ರಯತ್ನ ನಮ್ಮದಾಗಬೇಕು. ಗಣಿತ ಇತರ ವಿಷಯಗಳಂತೆ ಓದಿ ಕಲಿಯುವ ವಿಷಯವಲ್ಲ. ಹೆಚ್ವಿನ ವಿದ್ಯಾರ್ಥಿಗಳು ಗಣಿತವನ್ನು ಓದಿ ಕಂಠ ಮಾಡುವುದನ್ನು ಗಮನಿಸಿದ್ದೇವೆ. ಗಣಿತವನ್ನು ಬರೆದು ಕಲಿತಾಗ ಅದು ಸಲೀಸಾಗಿ ಅರ್ಥವಾಗತೊಡಗುತ್ತದೆ. 
       ಎಸ್.ಎಸ್.ಎಲ್.ಸಿ. ಪರೀಕ್ಷೆ ಕೇವಲ ಗಣಿತ ಒಂದೇ ವಿಷಯಕ್ಕೆ ಸೀಮಿತವಲ್ಲ. ಆದರೆ ಗಣಿತ ಕಷ್ಟವೆಂದು ಹಲವು ಮಂದಿ ವಿದ್ಯಾರ್ಥಿಗಳು, ಸರಿಯಾಗಿ ಅಭ್ಯಾಸ ಮಾಡದೆ ಫಲಿತಾಂಶ ಕೈ ಚೆಲ್ಲುತ್ತಿರುವುದು ಖೇದಕರ. ಗಣಿತದಲ್ಲಿ ಬೆಳೆಸಿಕೊಂಡ ಆತ್ಮವಿಶ್ವಾಸ ಇತರ ವಿಷಯಗಳಿಗೂ ವ್ಯಾಪಿಸಿ ಫಲಿತಾಂಶದ ಮಟ್ಟ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ.
        ಇನ್ನು ಸೋಲು ಗೆಲುವು ಜೀವನದ ಎರಡು ಅವಿಭಾಜ್ಯ ಅಂಶಗಳು. ಅವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಗೆದ್ದರೆ ಮಂದಹಾಸ‌ ಮೂಡಬಹುದು. ಆದರೆ ಸೋತವನು ಇತಿಹಾಸವಾಗಬಲ್ಲ. ಅವೆರಡೂ ಸಹಜ ಅಂಶಗಳೆಂದು ತಿಳಿದು ಗೆಲುವಿಗಾಗಿ ಹೆಜ್ಜೆಯಿಟ್ಟಾಗ ಗುರಿಮುಟ್ಟುವುದು ನಿಸ್ಸಂಶಯ.
       ವಿದ್ಯಾರ್ಥಿಗಳೇ ನೀವು ಈಗಾಗಲೇ ನಿಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಕಷ್ಟು ತಯಾರಿ ನಡೆಸಿದ್ದೀರಿ. ಒಂದು ಉತ್ತಮ ಫೈನಲ್ ಟಚ್ ಕೊಟ್ಟಲ್ಲಿ ನಿಮ್ಮ ಫಲಿತಾಂಶ ಅದ್ಭುತವಾಗಿರುತ್ತದೆ. ಇನ್ನು ಕೆಲವೇ ದಿನಗಳು ಪರೀಕ್ಷೆಗಿದೆ. ಸಾಹಸ ಕಾರ್ಯಗಳಾದ ಸೈಕಲ್ ತುಳಿತ, ಮರ ಹತ್ತುವುದು ಮುಂತಾದವುಗಳನ್ನು ಮಾಡಬೇಡಿ. ಆರೋಗ್ಯದ ಕಡೆ ಗಮನವಿರಲಿ. ಉತ್ತಮ ಪ್ರಯತ್ನ ನಿಮ್ಮನ್ನು ವಿಜಯದ ದಡ ತಲುಪಿಸುವುದರಲ್ಲಿ ಸಂಶಯಬೇಡ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


Ads on article

Advertise in articles 1

advertising articles 2

Advertise under the article