ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 1
Saturday, March 18, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 1
ಲೇಖನ : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಶಾಲೆಯಲ್ಲಿ ಮಕ್ಕಳ ಜೊತೆ ಬೆರೆಯುವ ಕ್ಷಣಗಳು ಅದ್ಭುತ ಅನುಭವ. ಶಾಲೆಯಲ್ಲಿ ನಡೆಸುವ ವಿಭಿನ್ನ ಪ್ರಯೋಗಗಳು, ಸೃಜನಶೀಲ ಚಟುವಟಿಕೆಗಳು ನಮ್ಮಲ್ಲಿ ಅನುಭವದ ಬುತ್ತಿಯನ್ನು ಕಟ್ಟಿಕೊಡುತ್ತವೆ.... ಶಿಕ್ಷಕರ ನೆನಪಿನ ಡೈರಿಯಲ್ಲಿ ದಾಖಲಾಗಿರುವ ಸ್ಕೂಲ್ ಅನುಭವಗಳಿಗೆ ಅಕ್ಷರ ರೂಪ ಕಾಣುವ ಅಂಕಣ ಇದು. "ಶಿಕ್ಷಕರ ಸ್ಕೂಲ್ ಡೈರಿ"
ತರಗತಿ ಎನ್ನುವ ಕೋಣೆಯ ಒಳಗೆ, ನಿಗದಿಪಡಿಸಿದ ಟೈಮ್ ಟೇಬಲ್ ಅನುಸಾರವಾಗಿ ಆಯಾ ವಿಷಯವನ್ನು ಸಂಬಂಧಿಸಿದ ಶಿಕ್ಷಕರು ಕಲಿಸಬೇಕು ಮತ್ತು ಮಕ್ಕಳು ಕಲಿಯಬೇಕು. ಅವರು ಏನು ಕಲಿತಿದ್ದಾರೆ ಎಂಬುದನ್ನು ಅಳತೆ ಮಾಡುವುದು ಮಕ್ಕಳು ಪರೀಕ್ಷೆಗೆ ನೀಡಲಾದ ಪ್ರಶ್ನೆಪತ್ರಿಕೆಯ ಪ್ರಶ್ನೆಗಳಿಗೆ ಎಷ್ಟು ಸರಿಯಾಗಿ ಉತ್ತರ ಬರೆಯುತ್ತಾರೆ, ಆ ಮೂಲಕ ಎಷ್ಟು ಅಂಕಗಳಿಸುತ್ತಾರೆ ಎಂಬ ಮಾನದಂಡದ ಆಧಾರದಲ್ಲಿ ಅಲ್ಲವೇ...? ಒಂದು ವೇಳೆ ಪರೀಕ್ಷೆಯೇ ಇಲ್ಲದಿದ್ದರೆ....? ಪರೀಕ್ಷೆಯೇ ಇಲ್ಲದಿದ್ದರೆ ಮಕ್ಕಳು ಏನನ್ನು ಕಲಿತಿದ್ದಾರೆ, ಎಷ್ಟರಮಟ್ಟಿಗೆ ಕಲಿತಿದ್ದಾರೆ ಎಂದು ತಿಳಿಯಲು ಸಾಧ್ಯ ಇಲ್ಲ ಎಂದು ಹಲವಾರು ಪೋಷಕರು ಹೇಳುತ್ತಾರೆ. ಇಷ್ಟು ಮಾತ್ರ ಆಗಿದ್ದರೆ ತೊಂದರೆ ಇರಲಿಲ್ಲ. ಆದರೆ ಅನೇಕ ಜನ ತಂದೆ ತಾಯಿ ಹೇಳುವುದು ಏನಂದರೆ, ಪರೀಕ್ಷೆ ಇಲ್ಲದೇ ಮಕ್ಕಳು ಕಲಿಯುವುದಿಲ್ಲ. ಪರೀಕ್ಷೆ ಇದೆ ಎಂಬ ಕಾರಣಕ್ಕಾಗಿ ಮಾತ್ರ ಮಕ್ಕಳು ಕಲಿಯುತ್ತಾರೆ, ಇಲ್ಲದಿದ್ರೆ ಪುಸ್ತಕವನ್ನು ಮುಟ್ಟಿಯೂ ನೋಡುವುದಿಲ್ಲ, ಹಾಗಾಗಿ ಕಲಿಕೆ ನಡೆಯಬೇಕಾದರೆ ಪರೀಕ್ಷೆ ಇರಲೇಬೇಕು ಎಂಬುದು ಒಂದು ಸಾಮಾನ್ಯ ಅಭಿಪ್ರಾಯ.
ಇದೀಗ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕನಾಗಿರುವ ನಾನು, ಶಾಲೆಯಲ್ಲಿ ಹಿಂದಿ ಭಾಷಾಪಾಠವನ್ನೂ ತೆಗೆದುಕೊಳ್ಳುತ್ತೇನೆ. ಕಳೆದ ವರ್ಷ ಕೊರೊನಾ ಬಂದು ತರಗತಿಗಳು ಪ್ರಾರಂಭ ಆಗದೇ ಇದ್ದ ಸಂದರ್ಭದಲ್ಲಿ ವಟ್ಸಾಪ್ ಮೂಲಕ ಮಕ್ಕಳಿಗೆ ಚಟುವಟಿಕೆಗಳನ್ನು ಕಳುಹಿಸಿ ಮಕ್ಕಳು ಅದನ್ನು ಮಾಡುವಂತೆ ತಿಳಿಸುತ್ತಿದ್ದೆವು. ವರ್ಷದ ಆರಂಭದ ದಿನಗಳಾದ ಕಾರಣ ಕಲಿಕೆ ಸಂತಸದಾಯಕವಾಗಿರಲಿ ಎಂಬ ಕಾರಣಕ್ಕೆ ಮತ್ತು ಚಟುವಟಿಕೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಮಕ್ಕಳು ತಮಗೆ ಇಷ್ಟವಾದ ಅಥವಾ ತಾವು ಕೇಳಿದ ಯಾವುದಾದರೂ ಹಿಂದಿ ಹಾಡನ್ನು ಹಾಡಿ ನಮಗೆ ಕಳುಹಿಸಿ ಕೊಡಬೇಕು ಎಂದು ಹೇಳಿದ್ದೆ. ಆರನೇ ತರಗತಿಯ ಪೋಷಕರೊಬ್ಬರು ಸ್ವಲ್ಪ ಹೊತ್ತಿನಲ್ಲಿ ನನಗೆ ಕರೆ ಮಾಡಿದರು. "ಸರ್ ನೀವು ಮಕ್ಕಳಿಗೆ ಹಿಂದಿ ಹಾಡನ್ನು ಹಾಡಲು ಹೇಳಿದ್ದೀರಲ್ಲ ಮಕ್ಕಳು ಹೇಗೆ ಹಾಡಿ ಕಳಿಸುವುದು, ನಿಮಗೆ ಅಷ್ಟೂ ಗೊತ್ತಾಗೋದಿಲ್ವಾ" ಎಂದು ಕೇಳಿದರು. ಯಾಕೆ ಏನಾಯ್ತು ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇಲ್ಲವೇ ಎಂದು ಸಂಶಯದಿಂದಲೇ ಕೇಳಿದೆ. "ಸ್ಮಾರ್ಟ್ ಫೋನ್ ಇದೆ, ಅದು ಇರುವುದರಿಂದಲೇ ನೀವು ಕಳಿಸಿದ್ದನ್ನು ನೋಡಿ ಕಾಲ್ ಮಾಡಿದ್ದು ಎಂದರು. ಹಾಗಾದ್ರೆ ನಿಮ್ಮ ಮೊಬೈಲ್ ನಲ್ಲಿ ಹಾಡನ್ನು ರೆಕಾರ್ಡ್ ಮಾಡಿ ಕಳುಹಿಸಲು ತೊಂದರೆ ಆಗುತ್ತಿದೆಯೇ...? ವಾಯ್ಸ್ ರೆಕಾರ್ಡರ್ ಇಲ್ಲವೇ ಎಂದು ಕೇಳಿದೆ. ಅದೆಲ್ಲ ಸರೀ ಇದೆ ಅಂದರು. ಹಾಗಾದ್ರೆ ನೆಟ್ವರ್ಕ್ ಸಮಸ್ಯೆ ಏನಾದರೂ ಇದೆಯೇ ಎಂದು ಕೇಳಿದೆ. ನೆಟ್ವರ್ಕ್ ಸರಿಯಾಗಿಯೇ ಸಿಗುತ್ತದೆ ಎಂದರು. ಅರೆ ಹಾಗಿದ್ರೆ ಇನ್ನೇನು ಸಮಸ್ಯೆ ಎಂದು ಕೇಳಿದೆ. ಆಗ ಆ ಪೋಷಕರು ಕೇಳಿದ ಪ್ರಶ್ನೆ ಬಹಳ ಚೆನ್ನಾಗಿತ್ತು. ಮಾಷ್ಟ್ರೇ ನನ್ನ ಮಗಳು ಆರನೇ ಕ್ಲಾಸಿನಲ್ಲಿರುವುದು. ಅವಳಿಗೆ ಇಲ್ಲಿಯವರೆಗೆ ಹಿಂದಿ ಅಕ್ಷರವನ್ನೇ ನೀವು ಕಲಿಸಿಲ್ಲ. ಹಿಂದಿ ಅಕ್ಷರ ಬರೆಯಲು ಬರದೇ ಹಾಡು ಹಾಡಲು ಹೇಳಿದರೆ ಮಗು ಹೇಗೆ ಹಾಡುವುದು ಎಂಬ ಗಂಭೀರ ಪ್ರಶ್ನೆಯನ್ನು ನನ್ನ ತಲೆಯ ಮೇಲೆ ಹೊರಿಸಿದರು.
ನನ್ನ ಶಾಲೆಯ ಮಕ್ಕಳಿಗೆ ಹಿಂದಿ ಹೊಸತೇನಲ್ಲ. ಮಕ್ಕಳು ಸಹಜವಾಗಿ ಟಿವಿ, ರೇಡಿಯೋ, ಮೊಬೈಲ್ ಗಳಲ್ಲಿ ತಾವು ಕೇಳಿದ ಹಲವು ಹಿಂದಿ ಹಾಡುಗಳನ್ನು ಸಹಜವಾಗಿ ಗುನುಗುತ್ತಿರುತ್ತಾರೆ. ಹಿಂದಿ ಸಿನೆಮಾಗಳಲ್ಲಿ ಬರುವ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಅಂತ್ಯಾಕ್ಷರಿ ಆಟ ಆಡುವಾಗ ಹಾಡುವುದನ್ನು ಗಮನಿಸಿಯೇ ಅಂತಹ ಯಾವುದೇ ಹಿಂದಿ ಹಾಡನ್ನು ಹಾಡುವ ಕೆಲಸವನ್ನು ನಾನು ಮಕ್ಕಳಿಗೆ ನೀಡಿದ್ದೆ. ನನ್ನ ಶಾಲೆಯ ಮಕ್ಕಳ ಮನೆಮಾತು ತುಳು ಅಥವಾ ಮಲಯಾಳಂ. ಮಕ್ಕಳು ಅವರ ಮನೆ ಮಾತನ್ನು ಬಹಳ ಸುಲಲಿತವಾಗಿ ಮಾತನಾಡುತ್ತಾರೆ. ಅದೇ ರೀತಿ ತಾವು ಕೇಳಿಸಿಕೊಂಡ ಭಾಷೆಯನ್ನು ತಮಗೆ ಅರಿವಿಲ್ಲದಂತೆಯೇ ತಮ್ಮ ಮಾತಿನಲ್ಲಿ ಮಕ್ಕಳು ಬಳಸುತ್ತಾರೆ. ಅವರ ಮನೆಮಾತನ್ನೂ ಹಾಗೆಯೇ ಕೇಳಿಸಿಕೊಳ್ಳುತ್ತಲೇ ಮಕ್ಕಳು ಕಲಿತಿರುತ್ತಾರೆ. ಮನೆಮಾತಿಗೆ ಬರವಣಿಗೆಯ ಲಿಪಿಯ ಹಂಗಿಲ್ಲ. ಹಿಂದಿಯನ್ನು ಬರೆಯಲು ಕಲಿಸದೆ ಹಾಡು ಹಾಡುವುದು ಹೇಗೆ ಎಂಬ ಪೋಷಕರ ಪ್ರಶ್ನೆಗೆ ಹೀಗೆ ಉತ್ತರಿಸಿದೆ.
"ನೀವು ಕೇಳಿದ ಪ್ರಶ್ನೆ ಸರಿಯಾಗಿದೆ. ಅಕ್ಷರ ಬರೆಯಲು ಹೇಳಿಕೊಡದೇ ನಾನು ಹಾಡು ಹೇಳಲು ಹೇಳಿದ್ದು ತಪ್ಪು. ತುಳು ಮನೆಮಾತಿನವರು ನೀವಲ್ಲವೇ...? ನಾನೊಂದು ತುಳು ಹಾಡನ್ನು ಕಳಹಿಸಿಕೊಡುತ್ತೇನೆ. ಅದನ್ನು ತುಳು ಲಿಪಿಯಲ್ಲಿ ಬರೆದು ಕಳುಹಿಸಿ ಕೊಡಿ ಆಗದೇ..?" ಎಂದು ಅವರಿಗೊಂದು ಸವಾಲು ಹಾಕಿದೆ.
"ಅರೆ ಅದು ಹೇಗಾಗ್ತದೆ...? ತುಳುವಿನಲ್ಲಿ ಯಾರಿಗಾದ್ರೂ ಬರೆಯಲು ಬರ್ತದಾ. ಅಷ್ಟಕ್ಕೂ ಚೆನ್ನಾಗಿ ಮಾತನಾಡಲು ಬರುವ ಭಾಷೆಯನ್ನು ಬರೆಯುವ ಅಗತ್ಯ ಏನಿದೆ, ಮಾತನಾಡ್ಲಿಕ್ಕೆ ಬಂದರೆ ಸಾಕಲ್ಲಾ" ಎಂದರು.
ನಾನು ಸ್ವಲ್ಪ ಗಂಭೀರವಾಗಿಯೇ ಹೇಳಿದೆ. "ತುಳುವನ್ನು ಯಾರೂ ಬರೆಯಲು ಕಲಿಸಿಲ್ಲ ಅಂತ ಹೇಳ್ತೀರಿ, ಬರೆಯಲಿಕ್ಕೆ ಯಾರೂ ಅಕ್ಷರ ಕಲಿಸದ ಭಾಷೆಯನ್ನು ಹೇಗೆ ಮಾತನಾಡಲು ಸಾದ್ಯ? ಹಾಗಿರುವಾಗ ನೀವು ಯಾವ ಧೈರ್ಯದಲ್ಲಿ ತುಳು ಮಾತನಾಡ್ತೀರಿ" ಎಂದು ಅವರು ಕೇಳಿದ ಪ್ರಶ್ನೆಯನ್ನೇ ಮತ್ತೆ ಅವರ ಮುಂದಿಟ್ಟೆ.
ಅಷ್ಟಾದಾಗ ಆ ಪೋಷಕರ ಮಾತಿನ ಧಾಟಿ ಸ್ವಲ್ಪ ಬದಲಾಯಿತು. "ಅದು ಹಾಗಲ್ಲ ಮಾಷ್ಟ್ರೇ ಮಗಳು ಹೇಳಿದ್ಲು ನಮಗಿನ್ನೂ ಹಿಂದಿ ಅಕ್ಷರವನ್ನೇ ಹೇಳಿಕೊಟ್ಟಿಲ್ಲ, ಅಕ್ಷರ ಗೊತ್ತಿಲ್ಲದೆ ಹಾಡನ್ನು ಓದಲು ಬರುವುದಿಲ್ಲ, ಮತ್ತೆ ಹಾಡುವುದು ಹೇಗೆ ಅಂತ. ಅದಕ್ಕೇ ಕೇಳಿದೆ ಅಷ್ಟೇ. ಅವಳು ಕೆಲವು ಹಿಂದಿ ಹಾಡು ಹಾಡ್ತಿರ್ತಾಳೆ ಯಾವುದಾದರೂ ಒಂದನ್ನು ಹಾಡಿ ಕಳಿಸ್ಲಿಕ್ಕೆ ಹೇಳ್ತೇನೆ" ಎಂದು ಫೋನ್ ಕಟ್ ಮಾಡಿದರು.
ಪಾಠಪುಸ್ತಕಗಳಿಂದಲೇ ಕಲಿಕೆ, ಅಂಕಗಳಿಕೆಯೇ ಕಲಿಕೆ, ಕಲಿಸದೇ ಕಲಿಯಲು ಸಾದ್ಯವಿಲ್ಲ ಎಂದು ಬಲವಾಗಿ ನಂಬಿದವರ ಮಧ್ಯೆ ಬೆಳೆದ ಮಗುವನ್ನು ಸಹಜವಾಗಿ ಕಲಿಯಲು ಆಗುವ ವಾತಾವರಣ ನಿರ್ಮಿಸುವುದು ಹೇಗೆ... ಎಂದು ದೊಡ್ಡವರಾದ ನಾವು ಕಲಿಯಬೇಕಿದೆ. ಅಲ್ಲವೇ...?
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************