ಯುಗಾದಿ : ಪ್ರಕೃತಿಗೇ ಹಬ್ಬ
Tuesday, March 21, 2023
Edit
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇರಾ ಬಾಳೆಪುಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಜಗಲಿಯ ತಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೌದು.. ನಾವಿಂದು ಶೋಭನ ಸಂವತ್ಸರಾರಂಭದ ಚೈತ್ರ ಶುಕ್ಲ ಪಾಡ್ಯದ ಮೊದಲ ಸೂರ್ಯೋದಯವನ್ನು ಕಾಣುತ್ತಿದ್ದೇವೆ. ಇಳೆಗೆ ಚೆಲುವಿಕೆಯ ಬೆಳಕ ಕಿರಣಗಳ ಚೆಲ್ಲುತ್ತ ರವಿಯು ನಿಧಾನಕ್ಕೆ ಬಾನಪಥದಲ್ಲಿ ಮಂದಸ್ಮಿತನಾಗಿ ಸಾಗುತ್ತಿರುವುದನ್ನು ನೋಡುವುದೇ ಒಂದು ಸೊಗಸಲ್ವಾ...!
ಯುಗಾದಿ ಅಂದರೆ ಯುಗದ ಆದಿ. ಆದಿ ಎಂದರೆ ಆರಂಭ. ನಮ್ಮ ಸಂವತ್ಸರಗಳ ಲೆಕ್ಕಾಚಾರಗಳು ಆರಂಭಗೊಳ್ಳುವುದೇ ಈ ಯುಗಾದಿಯಿಂದ. ಯುಗಾದಿ ಹಬ್ಬವಾಗಿಯೂ, ಆಚರಣೆಯಾಗಿಯೂ ನಮ್ಮ ನಡುವೆ ಥಳಕು ಹಾಕಿಕೊಂಡಿದೆ. ವಾರ್ಷಿಕಾವರ್ತನೆಯ ಆಚರಣೆಯಾಗಿದೆ.
ಯುಗಾದಿಯನ್ನು ನಾವು ತಾರೀಕು ಪಟ್ಟಿ ನೋಡಿ ನಿಖರವಾಗಿ ಗುರುತಿಸುವುದಕ್ಕಿಂತಲೂ ನಿಸರ್ಗ ಹೆಚ್ಚು ಆಪ್ತವಾಗಿ, ಅನುಭವಿಸುತ್ತಾ ಸಡಗರದಿಂದ ಆಚರಿಸಿಕೊಳ್ಳುತ್ತದೆ ಎಂಬುವುದನ್ನು ಗಮನಿಸಿದ್ದೀರಾ?
ಪ್ರಕೃತಿಯ ಸಂಭ್ರಮ ಕ್ಕೆ 'ಕಾಲ' ದ ಜೊತೆಯಿದೆ. ಕಾಲವು ಆಗಸದ ಸೂರ್ಯ ಚಂದ್ರರ ಭ್ರಮಣೆ ಹಾಗೂ ಪೃಥ್ವಿಯ ಚಲನೆಗಳಿಂದ ಪ್ರೇರಿತವಾಗಿವೆ. ನಮ್ಮ ಹಿರಿಯರು ಇವುಗಳ ಲೆಕ್ಕಾಚಾರ ಮಾಡಿ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಗಳನ್ನು ಗುರುತಿಸಿರುವುದು ಆವರ್ತನಗಳಲ್ಲಿ ಹಬ್ಬಗಳನ್ನು ಹಾಗೂ ಆಚರಣೆಗಳನ್ನು ರೂಢಿಗತಗೊಳಿಸಿರುವುದು ವಿಶೇಷವಲ್ಲವೇ!
ಶಿಶಿರ, ವಸಂತ, ಗ್ರೀಷ್ಮ ಋತುಗಳು ಉತ್ತರಾಯಣವನ್ನು ರೂಪಿಸಿದರೆ ವರ್ಷ, ಶರದ್, ಹೇಮಂತ ದಕ್ಷಿಣಾಯನದ ಋತುಗಳಾಗಿವೆ. ವಸಂತ ಋತುವಿನ ಚೈತ್ರ ಶುಕ್ಲ ಪಾಡ್ಯದ ಈ ಶುಭ ದಿನವೇ ಚಾಂದ್ರಮಾನ ಯುಗಾದಿ.
ಯುಗಾದಿ ಹೊಸ ಸಂವತ್ಸರದ ಆರಂಭ. ಅರವತ್ತು ಸಂವತ್ಸರಗಳಲ್ಲಿ 2023 ರಲ್ಲಿ ಬಂದಿರುವುದು ಶೋಭನಾಕೃತ್ ಸಂವತ್ಸರ. ಈ ಹಿಂದೆ ಇದು 1963ರಲ್ಲಿ ಬಂದಿತ್ತು. ಆಚರಣೆಗಳು ಮನುಷ್ಯ ಲೋಕಕ್ಕೆ ಮಾತ್ರ ಸೀಮಿತವಾದ ಸಾಂಸ್ಕೃತಿಕ ಸಂಬಂಧವುಳ್ಳ ಪರಂಪರಾಗತ ಕಟ್ಟುಪಾಡುಗಳು. ಇವುಗಳನ್ನು ಮುಂದುವರಿಸಿಕೊಂಡು ಬರುವುದರಿಂದ ಇವುಗಳ ಹಿನ್ನೆಲೆಯಲ್ಲಿ ಬಲವಾದ ನಂಬಿಕೆಗಳೂ ಇರುತ್ತವೆ. ಸೋಮಕಾಸುರನೆಂಬ ರಾಕ್ಷಸ ವೇದಗಳನ್ನು ಕದ್ದು ಸಾಗರದ ತಳದಲ್ಲಿ ಬಚ್ಚಿಟ್ಟಾಗ ಮಹಾವಿಷ್ಣುವು ಆತನನ್ನು ಕೊಂದು ವೇದಗಳನ್ನು ಬ್ರಹ್ಮದೇವನಿಗೆ ತಂದೊಪ್ಪಿಸಿದಾಗ ಬ್ರಹ್ಮದೇವನು ಸೃಷ್ಠಿಯನ್ನು ಆರಂಭಿಸಿದ ದಿನವೇ ಯುಗಾದಿ ಎನ್ನಲಾಗುತ್ತದೆ. ಹಾಗೆಯೇ ಶ್ರೀ ರಾಮನು ಲಂಕಾಧಿಪತಿ ರಾವಣನನ್ನು ಕೊಂದು ತನ್ನ ಸಾಮ್ರಾಜ್ಯ ವಾಸ ಅಯೋಧ್ಯೆ ಗೆ ಮರಳಿದ ದಿನವೂ ಯುಗಾದಿಯಾಗಿತ್ತೆನ್ನಲಾಗುತ್ತದೆ. ಶಾತವಾಹನರ ರಾಜ ಶಾಲಿವಾಹನ ಪ್ರಚಂಡ ಜಯ ಸಾಧಿಸಿದ ಬಳಿಕ ದಕ್ಷಿಣದಲ್ಲಿ ತನ್ನದೇ ಆದ ಶಾಲಿವಾಹನ ಶಕೆಯನ್ನಾರಂಭಿಸಿದ ದಿನವೂ ಯುಗಾದಿ. ನಾವು ಸಾಮಾನ್ಯವಾಗಿ ಆಚರಿಸುವ ಕಾಲಗಣನೆಗಿಂತ ಇದು 78 ವರ್ಷಗಳ ನಂತರ ಆರಂಭವಾಯಿತು.
ಭಾರತದಲ್ಲಿ ಯುಗಾದಿಯನ್ನು ಎಲ್ಲೆಡೆಯೂ ಆಚರಿಸಲಾಗುತ್ತದೆ. ಹೊಸವರ್ಷ, ಬೈಸಾಕಿಯೆಂದೂ ಉತ್ತರ ಭಾರತದಲ್ಲಿ ಕರೆಯಲಾಗುತ್ತದೆ. ಬೇವು ಬೆಲ್ಲ ನೀಡುವುದು ವಿಶೇಷ ಆಚರಣೆಯಾಗಿದೆ. ಕಷ್ಟ ಸುಖಗಳು, ಹಗಲು ರಾತ್ರಿಗಳಂತೆ ಬದುಕಿನಲ್ಲಿ ಬಂದೇ ಬರುತ್ತವೆ. ಅವುಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಮುನ್ನಡೆಯಬೇಕೆಂಬ ಸಂದೇಶವೂ ಇದರಲ್ಲಿದೆ. ಹೊಸ ಬಟ್ಟೆ ಧರಿಸಿ ಗುರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಹಾಗೂ ದೇವಾಲಯಗಳಿಗೆ ಭೇಟಿನೀಡುವುದು ಸಾಮಾನ್ಯವಾಗಿದೆ. ಪಂಚಾಂಗ ಶ್ರವಣ ಮಾಡುವುದು, ಮಳೆ ಬೆಳೆಯ ಬಗ್ಗೆ ತಿಳಿದುಕೊಂಡು ಭವಿಷ್ಯದ ಯೋಜನೆಗಳಿಗೆ ಯೋಚನೆ ಮಾಡಲು ಆರಂಭಿಸುವ ಪುಣ್ಯಕಾಲವೂ ಈ ಯುಗಾದಿಯಾಗಿದೆ.
ನಮ್ಮ ಕ್ಯಾಲೆಂಡರ್ ಗಳಲ್ಲಿ ಎರಡು ಯುಗಾದಿಗಳನ್ನು ಕಾಣುತ್ತೇವೆ. ಒಂದು ಚಾಂದ್ರಮಾನ ಯುಗಾದಿಯಾದರೆ ಇನ್ನೊಂದು ಸೌರಮಾನ ಯುಗಾದಿ. ಮೇಷ ಸಂಕ್ರಾಂತಿ ಯಿಂದ ವೃಷಭ ಸಂಕ್ರಾಂತಿಯ ನಡುವಿನ ಎರಡು ಸಂಕ್ರಾಂತಿಗಳ ಕಾಲದ ಲೆಕ್ಕಾಚಾರ ಸೌರಮಾನವಾದರೆ ಫಾಲ್ಗುಣ ಮಾಸದ ನಂತರ ಬರುವ ಅಮವಾಸ್ಯೆ ಹಾಗೂ ಚೈತ್ರ ಮಾಸದ ಅಮವಾಸ್ಯೆ ಈ ಎರಡು ಅಮವಾಸ್ಯೆಗಳ ನಡುವಿನ ಕಾಲ ಚಾಂದ್ರಮಾನ ಆಗಿದೆ. ಕರಾವಳಿಯಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಿದರೆ ಉಳಿದೆಡೆ ಚಾಂದ್ರಮಾನ ಯುಗಾದಿಯ ಆಚರಣೆಯನ್ನು ಕಾಣಬಹುದು. ಚಂದ್ರನ ಮತ್ತು ಸೂರ್ಯನ ಚಲನೆಗಳನ್ನು ಆಧಾರವಾಗಿಟ್ಟುಕೊಂಡು ಈ ಲೆಕ್ಕಾಚಾರವನ್ನು ನಿಖರವಾಗಿ ಹೇಳಲಾಗುತ್ತದೆ.
ಪರಿವರ್ತನಾ ಪ್ರವೃತ್ತಿಯನ್ನು ಹೊಂದಿರುವ ವಸುಂಧರೆಯು ಮಾನವನಿಗೆ ನೀಡಿರುವ ಅದ್ಭುತ ಕೊಡುಗೆ ಈ ನಿಸರ್ಗ. ಇಲ್ಲಿ ಕವಿಯು ಕಂಡುಂಡಂತೆ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರಾ ಬಾಳೆಪುಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************