-->
ಹಕ್ಕಿ ಕಥೆ : ಸಂಚಿಕೆ - 91

ಹಕ್ಕಿ ಕಥೆ : ಸಂಚಿಕೆ - 91

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
             ಮಕ್ಕಳೇ ನಮಸ್ತೇ... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಮೊನ್ನೆ ಅಂದರೆ ಮಾರ್ಚ್ 20ನ್ನು ಪಕ್ಷಿ ಪ್ರಿಯರು ಪ್ರತಿ ವರ್ಷ ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸುತ್ತಾರೆ. ಗುಬ್ಬಚ್ಚಿಗಳು ಮಾನವನ ಕೃಷಿಯನ್ನು ಆಶ್ರಯಿಸಿ ಬದುಕುವ ಮತ್ತು ಮನುಷ್ಯನ ಜೊತೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿರುವ ಹಕ್ಕಿ. ಮೊನ್ನೆ ಶನಿವಾರ ಮಂಗಳೂರಿನಲ್ಲಿ ನಮ್ಮ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮನೆಯ ಪಕ್ಕದಲ್ಲೊಂದು ಖಾಲಿ ನಿವೇಶನ ಇತ್ತು. ಆ ನಿವೇಶನದಲ್ಲಿ ಒಂದಷ್ಟು ಗಿಡಗಂಟಿಗಳು ತಾನಾಗಿಯೇ ಬೆಳೆದುಕೊಂಡಿದ್ದವು. ಮಾತನಾಡುತ್ತಾ ಹೊರಗೆ ನೋಡಿದವನಿಗೆ ಯಾವುದೋ ಪುಟಾಣಿ ಹಕ್ಕಿ ಹಾರಿ ಮನೆಯ ಸಮೀಪ ಬಂದದ್ದು ಕಾಣಿಸಿತು. ನಿಧಾನವಾಗಿ ಮನೆಯ ಜಗಲಿಗೆ ಬಂದು ನೋಡಿದರೆ ಪಕ್ಕದ ಪೇರಳೆ ಹಣ್ಣಿನ ಮರದಲ್ಲಿ ಹೆಣ್ಣು ಗುಬ್ಬಚ್ಚಿಯೊಂದು ಕಾಣಿಸಿತು. ಬಾಯಲ್ಲಿ ಒಂದೆರಡು ಹುಳಗಳು ಇದ್ದವು. ಅರೆ ಹುಳುಗಳನ್ನು ಹಿಡಿದುಕೊಂಡು ಯಾವಕಡೆ ಹೋಗುತ್ತಿದೆ ಎಂದು ನೋಡಿದರೆ ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದ ಪುಟ್ಟ ಗೂಡೊಂದು ಕಾಣಿಸಿತು. ಅಷ್ಟರಲ್ಲಿ ಚಹಾ ಹಿಡಿದುಕೊಂಡು ಬಂದ ಮನೆಯವರು ಗುಬ್ಬಚ್ಚಿ ಸಂಸಾರದ ಕಥೆ ಹೇಳಿದರು.
      ಕಳೆದ ತಿಂಗಳು ನಾಗರಹೊಳೆ ಅಭಯಾರಣ್ಯದಲ್ಲಿ ಪಕ್ಷಿಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ನನ್ನ ಪಾಲಿಗೆ ಒದಗಿಬಂದಿತ್ತು. ನಾಗರಹೊಳೆಯ ವೀರನಹೊಸಳ್ಳಿ ವಿಭಾಗದ ಕಳ್ಳಬೇಟೆ ತಡೆ ಶಿಬಿರವೊಂದರಲ್ಲಿ ನಮಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ನಾವು ಉಳಿದುಕೊಂಡಿದ್ದ ಶಿಬಿರದ ತಾರಸಿಯ ಮೇಲೆ ನಿಂತರೆ ಸುತ್ತಲಿನ ಹತ್ತಾರು ಕಿಲೋಮೀಟರ್ ದೂರದವರೆಗೂ ಕಾಣುತ್ತಿತ್ತು. ರಾತ್ರೆ ತಣ್ಣನೆ ಬೀಸುವ ಗಾಳಿಗೆ ಸೊಂಪಾದ ನಿದ್ದೆ ಬಂದಿತ್ತು. ಬೆಳಗ್ಗೆ ಯಾವುದೋ ಹಕ್ಕಿಯ ಮಧುರವಾದ ಹಾಡಿಗೆ ಎಚ್ಚರವಾಗಿ ನಿಧಾನಕ್ಕೆ ಹೊರಬಂದೆ. ಆಗತಾನೇ ಸೂರ್ಯ ಪೂರ್ವದಲ್ಲಿ ಕಾಣಲು ಪ್ರಾರಂಭಮಾಡಿದ್ದ. ಬೆಳಗ್ಗೆ ಚಳಿ ಚೆನ್ನಾಗಿಯೇ ಇತ್ತು. ನಮ್ಮ ಶಿಬಿರದ ಬೇಲಿಯ ಹತ್ತಿರದ ಮರದಲ್ಲಿ ಗುಬ್ಬಚ್ಚಿಯೊಂದು ಕೂಗಿದ ಶಬ್ದ ಕೇಳಿಸಿತು. ಬೈನಾಕುಲರ್ ತಂದು ನೋಡಿದರೆ ಗುಬ್ಬಚ್ಚಿ ಹೌದು ಆದರೆ ಬಣ್ಣ ಸ್ವಲ್ಪ ಡಲ್ ಇತ್ತು. ಗುಬ್ಬಚ್ಚಿ ನನ್ನಕಡೆಗೇ ತಿರುಗಿ ಹಾಡಲು ಶುರು ಮಾಡಿದಾಗ ಆಶ್ಚರ್ಯ. ಆ ಗುಬ್ಬಚ್ಚಿಯ ಕತ್ತಿನ ಬಾಗದಲ್ಲಿ ಹಳದಿ ಬಣ್ಣ. ಅರೆ ಇದು ಮಾಮೂಲಿ ಗುಬ್ಬಚ್ಚಿ ಅಲ್ಲ. ನನ್ನ ಜೊತೆಗಿದ್ದ ಗೆಳೆಯ ಹರ್ಷ ಅವರನ್ನು ಕರೆದೆ. ಅವರೂ ತಮ್ಮ ಬೈನಾಕುಲರ್ ಹಿಡಿದು ನೋಡಿದರು. ಅರೆ ಹೌದು. ಇದು ಹಳದಿ ಕತ್ತಿನ ಗುಬ್ಬಚ್ಚಿ ಎಂದರು. ನಮ್ಮ ಪಕ್ಷಿಗಣತಿಗೆ ತಯಾರಾಗಿ ಚಹಾ ಕುಡಿದು ಹೊರಡುವಾಗ ಅದೇ ಗುಬ್ಬಚ್ಚಿ ಬಾಯಲ್ಲೇನೋ ಹಿಡಿದುಕಂಡು ಅಲ್ಲೇ ಇದ್ದ ಕಬ್ಬಿಣದ ಕಂಬದೊಳಗೆ ಹೋಯಿತು. ಆನೆಗಳು ಕಾಡಿನಿಂದ ಹೊರಗಡೆ ಹೋಗದಿರಲಿ ಎಂದು ಅಳವಡಿಸಿದ್ದ ಸೋಲಾರ್ ವಿದ್ಯುತ್ ಬೇಲಿಯ ಕಂಬವಾಗಿತ್ತು. ಆದರೆ ಅದು ಆನೆಗಳ ಉಪಟಳದಿಂದ ಮುರಿದು ಒಂದೇ ಅನಾಥ ಕಂಬ ಉಳಿದಿತ್ತು. ಅದರ ಅಡ್ಡ ಕೊಳವೆಯ ಒಳಗೆ ಹಳದಿ ಕತ್ತಿನ ಗುಬ್ಬಚ್ಚಿ ಹೊಸ ಸಂಸಾರ ಆರಂಭಮಾಡಿತ್ತು. ಎಲೆ ಉದುರುವ ಮತ್ತು ಕುರುಚಲು ಕಾಡುಗಳು ಇರುವಲ್ಲಿ ಈ ಹಕ್ಕಿ ಹೆಚ್ಚಾಗಿ ಕಾಣಸಿಗುತ್ತದೆಯಂತೆ. ಕರಾವಳಿಯವನಾದ ನನಗೆ ಇದು ಅಪರೂಪದ ಹಕ್ಕಿ.
        ಚಿಕ್ಕವರಿದ್ದಾಗ ಪಕ್ಷಿತಜ್ಞ ಸಲೀಂ ಅಲಿ ಒಮ್ಮೆ ಏರ್ ಗನ್ ನಿಂದ ಈ ಹಕ್ಕಿಯನ್ನು ಹೊಡೆದು ಮನೆಗೆ ತಂದಿದ್ದರಂತೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಸದಸ್ಯರಾದ ಅವರ ಸಾಕುತಂದೆ ಅಮೀರುದ್ದೀನ್ ಈ ವಿಶಿಷ್ಟ ಹಕ್ಕಿಯನ್ನೂ ಸೊಸೈಟಿಗೆ ಕೊಡಲು ಮಗನನ್ನೂ ಕರೆದುಕೊಂಡು ಹೋದರಂತೆ. ಆಗ BNHS ಕಾರ್ಯದರ್ಶಿಗಳಾದ W S Millard ಈ ಹಕ್ಕಿಯನ್ನು ಹಳದಿ ಕತ್ತಿನ ಹುಬ್ಬಚ್ಚಿ ಎಂದು ಗುರುತಿಸಿದರು ಮತ್ತು ಬಾಲಕ ಸಲೀಂ ಅಲಿಯವರಿಗೆ ಸೊಸೈಟಿಯ ಸಂಗ್ರಹದಲ್ಲಿದ್ದ ಹಕ್ಕಿಗಳನ್ನು ತೋರಿಸಿ ಪರಿಚಯಿಸಿ ಬಾಂಬೆಯ ಹಕ್ಕಿಗಳ ಕುರಿತಾದ ಪುಸ್ತಕವೊಂದನ್ನು ನೀಡಿ ಹೆಚ್ಚಿನ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದರಂತೆ. ಇದೇ ಮುಂದೆ ಸಲೀಂ ಅಲಿ ಭಾರತದ ಶ್ರೇಷ್ಠ ಪಕ್ಷಿತಜ್ಞರಾಗಿ ಬೆಳೆಯಲು ಕಾರಣವಾಯಿತು ಎಂದು ಹೇಳುತ್ತಾರೆ. 
ಕನ್ನಡ ಹೆಸರು : ಹಳದಿಕತ್ತಿನ ಗುಬ್ಬಚ್ಚಿ
ಇಂಗ್ಲೀಷ್ ಹೆಸರು: Yellow-throated Sparrow ( Chestnut–shouldered Petronia)
ವೈಜ್ಞಾನಿಕ ಹೆಸರು: Gymnoris xanthocollis
ಚಿತ್ರ : ಅರವಿಂದ ಕುಡ್ಲ
      ಈ ಹಕ್ಕಿಯನ್ನು ನೋಡಿ ನಾನಂತೂ ಬಹಳ ಸಂತೋಷ ಪಟ್ಟಿದ್ದೇನೆ. ಬೇಸಗೆಯಲ್ಲಿ ನಿಮ್ಮ ಮನೆಯ ಹತ್ತಿರ ನೆರಳಿನಲ್ಲಿ ಬಟ್ಟಲಿನಂತಹ ಪಾತ್ರೆಯಲ್ಲಿ ನೀರನ್ನಿಟ್ಟರೆ ಹಲವಾರು ಹಕ್ಕಿಗಳು ಬಿಸಿಲನ್ನೂ ದಾಹವನ್ನೂ ತಣಿಸಿಕೊಳ್ಳಲು ಬರುತ್ತವೆ. ಜಾಗ ಮತ್ತು ಆಹಾರ ಸಿಕ್ಕರೆ ನಿಮ್ಮ ಮನೆಯ ಆಸುಪಾಸಿನಲ್ಲಿ ಗೂಡನ್ನೂ ಮಾಡುತ್ತವೆ. 
        ಅಂದ ಹಾಗೆ ಹೇಳುವುದು ಮರೆತಿದ್ದೆ. ನಿನ್ನೆ ಅಂದರೆ ಮಾರ್ಚ್ 21 ವಿಶ್ವ ಅರಣ್ಯ ದಿನ. 
ಮಾತ್ರವಲ್ಲ ಇಂದು ಅಂದರೆ ಮಾರ್ಚ್ 22 ವಿಶ್ವ ಜಲದಿನ. ನೀರು, ಕಾಡು ಎರಡೂ ಇದ್ದರೆ ಹಕ್ಕಿಗಳು ಮಾತ್ರವಲ್ಲ ನಾವೂ ನೆಮ್ಮದಿಯಿಂದ ಬಹುಕಬಹುದು. ನೀರು ಉಳಿಸಿ, ಕಾಡು ಬೆಳೆಸಿ, ಜೀವ ಉಳಿಸಿ
       ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article