-->
ಪರೀಕ್ಷಾ ಹಬ್ಬಕ್ಕೊಂದು ಸಂಭ್ರಮದ ತಯಾರಿ

ಪರೀಕ್ಷಾ ಹಬ್ಬಕ್ಕೊಂದು ಸಂಭ್ರಮದ ತಯಾರಿ

ಲೇಖಕರು : ವೈ. ಶಿವರಾಮಯ್ಯ
ಸಹನಿರ್ದೇಶಕರು (ಕಾರ್ಯಕ್ರಮ)
ಸಮಗ್ರ ಶಿಕ್ಷಣ ಕರ್ನಾಟಕ
ಬೆಂಗಳೂರು

           ಶಿಕ್ಷಣ ತಜ್ಞರು, ತತ್ವಜ್ಞಾನಿಗಳು, ಶಿಕ್ಷಣ ಕ್ಷೇತ್ರದಲ್ಲಿ ನಿರ್ವಹಿಸಿದ ಹಲವರು ತಮ್ಮ ಜೀವನದ ಅನುಭವ ಆಧಾರಿಸಿ ‘ಶಿಕ್ಷಣ’ ದ ಅರ್ಥವನ್ನು ತಮ್ಮದೇ ಆದ ವ್ಯಾಖ್ಯಾನ ನೀಡಿರುವುದನ್ನು ಕಾಣಬಹುದಾಗಿದೆ. ಈ ಎಲ್ಲಾ ವ್ಯಾಖ್ಯಾನಗಳ ಒಟ್ಟಾರೆ ಸಾರಾಂಶ “ಮಗುವಿನ ಸರ್ವಾಂಗೀಣ ಬೆಳವಣಿಗೆಯೇ ಆಗಿರುತ್ತದೆ” ವಿದ್ಯಾರ್ಥಿಯ ಕಲಿಕೆಯ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ಮೌಲ್ಯಮಾಪನಕ್ಕೆ ಒಳಪಡಿಸುವುದು ಶಿಕ್ಷಣದ ಒಂದು ಭಾಗವಾಗಿದೆ. ಮೌಲ್ಯಮಾಪನ ಎಂದರೆ ಸರಳವಾಗಿ ಹೇಳುವುದಾದರೆ ಅಳತೆ ಮಾಡುವುದು, ಒರೆ ಹಚ್ಚುವುದು, ಎಂದು ಅರ್ಥ, ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಾಗಿ ‘ಪರೀಕ್ಷೆ’ ಅಥವಾ ಮೌಲ್ಯಾಂಕನ ಈ ಪದಗಳನ್ನು ಬಳಸಲಾಗುತ್ತಿದೆ.
        ಜೀವನದ ಪ್ರತಿಯೊಂದು ಹಂತದಲ್ಲಿಯೂ ಎದುರಾಗುವ ಸವಾಲುಗಳ ಮೆಟ್ಟಿಲುಗಳನ್ನು ದಾಟಿ ಮುಂದೆ ಬಂದಿರುವ ಅನುಭವಗಳು ಪ್ರತಿಯೊಬ್ಬರಿಗೂ ಸಹಜವಾಗಿಯೇ ಆಗಿರುತ್ತದೆ. ಶಾಲಾ ಶಿಕ್ಷಣದಲ್ಲಿ ‘ಪರೀಕ್ಷೆ’ ಎಂಬುದೂ ಸಹ ಸಹಜವಾದ ಪ್ರಕ್ರಿಯೆ ಎಂದು ಪರಿಗಣಿಸಬೇಕು, ಹೊರತು ಇದನ್ನು ಸೋಲು-ಗೆಲುವು, ಉತ್ತೀರ್ಣ-ಅನುತ್ತೀರ್ಣ, ವ್ಯಕ್ತಿತ್ವವನ್ನು ಅಳೆಯುವ ಮಾನದಂಡವಾಗಲಾರದು. ಪ್ರತೀ ವರ್ಷ ಮಾರ್ಚ್ ತಿಂಗಳು ಬಂತು ಎಂದರೆ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಪೋಷಕರಲ್ಲಿಯೂ ಒಂದು ರೀತಿಯ ಸ್ಪರ್ಧೆಯನ್ನು ಎದುರಿಸುವ ಭಾವ, ಜಿಜ್ಞಾಸೆ ಆತಂಕ, ಭಯ ಕೆಲವರನ್ನು ಕಾಡುವುದಂತೂ ನಿಜ.
        ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ಪರೀಕ್ಷೆಯನ್ನು ಮಕ್ಕಳ ಸ್ನೇಹಿಯಾಗಿ ಶೈಕ್ಷಣಿಕವಾಗಿ ಉತ್ತಮ ವಾತಾವರಣದಲ್ಲಿ ನಡೆಸಲು ಸಿದ್ದತೆಯನ್ನು ಮಾಡುತ್ತದೆ. ವಿದ್ಯಾರ್ಥಿಗಳು ‘ಪರೀಕ್ಷೆ’ ಎಂಬ ಆತಂಕ, ಗುಮ್ಮದಿಂದ ಹೊರಬರಲು ಮತ್ತು ತಮ್ಮ ಯಶಸ್ಸಿನ ಹಾದಿಗೆ ಕೆಳಕಂಡ ಕಿವಿಮಾತನ್ನು ನೆನಪಿನಲ್ಲಿಟ್ಟುಕೊಂಡು ಮುನ್ನಡೆಯಲೆಂದು ಆಶಿಸಲಾಗಿದೆ.
        ಪರೀಕ್ಷೆಯು ಒಂದು ಸಹಜವಾದ ಪ್ರಕ್ರಿಯೆ ಇದನ್ನು ಹಬ್ಬದ ರೀತಿಯಲ್ಲಿ ಸ್ವಾಗತಿಸಿ ಆನಂದಿಸಬೇಕು.
      ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಈವರೆಗೆ ಶಿಕ್ಷಕರು ಬೋಧಿಸಿದ ಪಠ್ಯವಿಷಯದ ಜೊತೆಗೆ ಪರೀಕ್ಷೆಯ ಸಿದ್ದತೆಗೆ ತಯಾರಿ ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ವಿಧಾನಗಳ ಬಗ್ಗೆ ಗಮನಹರಿಸಬೇಕು.
       ಕ್ಲಿಷ್ಣತೆ ಇರುವ ವಿಷಯಗಳ ಬಗ್ಗೆ ಶಿಕ್ಷಕರ, ಸಹಪಾಠಿಗಳ ನೆರವನ್ನು ಸಂಕೋಚಿಸದೇ ಪಡೆಯಬೇಕು.
      ಮನಸ್ಸಿಲ್ಲದೆ ಕಷ್ಟಪಟ್ಟು ಓದುವ ಬದಲಾಗಿ ಮನಸ್ಸಿಟ್ಟು ಇಷ್ಟಪಟ್ಟು ಕಲಿಯಬೇಕು.
ಕಲಿಕೆಯಲ್ಲಿ ಎದುರಾಗುವ ಸಮಸ್ಯೆಗಳು, ಅಡಚಣೆಗಳ ಬಗ್ಗೆ ಪೋಷಕರು, ಶಿಕ್ಷಕರು, ಸಹಪಾಠಿಗಳೊಂದಿಗೆ ಮುಕ್ತವಾಗಿ ವಿಷಯ ವಿನಿಮಯ ಮಾಡಿಕೊಳ್ಳಿ.
     ಸಮಾಜವಿಜ್ಞಾನದಲ್ಲಿ ಬರುವ ಕಾಲಾನುಕ್ರಮಣಿಕೆ ಇಸವಿ, ಘಟನೆಗಳು, ಗಣಿತದ ಸೂತ್ರಗಳು, ಪ್ರಮೇಯಗಳು, ವಿಜ್ಞಾನದ ಸಮೀಕರಣಗಳ ಪಟ್ಟಿ ಮಾಡಿ ಏಕಾಂತದಲ್ಲಿ ಮನಸ್ಸಿನಲ್ಲಿ ಪುನರ್ ಮನನ ಮಾಡಿ.
      ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಮಾದರಿಗಳನ್ನು ಅವಲೋಕಿಸಿ ನಿಗದಿಪಡಿಸಿದ ಅಂಕಕ್ಕೆ ಸೀಮಿತವಾಗಿ ಸರಳವಾಗಿ ಉತ್ತರಿಸುವ ವಿಧಾನದ ಬಗ್ಗೆ ಶಿಕ್ಷಕರ ಸಲಹೆ ಪಡೆಯಿರಿ.
        ನಿಮ್ಮ ಗಮನವನ್ನು ಬೇರೆ ಕಡೆಗೆ ಸೆಳೆದು ಆಕರ್ಷಿಸುವ ಘಟನೆಗಳು ಸನ್ನಿವೇಶ, ಸಂದರ್ಭಗಳನ್ನು ಊಹಿಸಿ ಅಭ್ಯಾಸದ ಕಡೆಗೆ ಕೇಂದ್ರೀಕರಿಸಲು ಪ್ರಯತ್ನಿಸಿ, ಉದಾಹರಣೆಗೆ: ಜಾತ್ರೆ, ಹಬ್ಬ, ಪ್ರಯಾಣ, ಕ್ರಿಕೆಟ್ ವೀಕ್ಷಣೆ, TV , ಮೊಬೈಲ್ ವೀಕ್ಷಣೆ ಇತ್ಯಾದಿ.
      ಪರೀಕ್ಷಾ ಸಂದರ್ಭವಾಗಿರುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸುಸ್ಥಿತಿಯಲ್ಲಿರಿಸಿಕೊಳ್ಳಲು ಆದ್ಯತೆಯನ್ನು ಕೊಡಿ, ಅತಿಯಾಗಿ ನಿದ್ದೆಕೆಡುವುದು ಒಳ್ಳೆಯದಲ್ಲ, ಅಹಿತಕರವಾದ ಘಟನೆಗಳಿಗೆ ಚಿಂತಿಸದಿರಿ. ನಿಮ್ಮದೇಹ ಒಪ್ಪದೇ ಇರುವ ಪದಾರ್ಥಗಳನ್ನು ಸೇವಿಸದೇ ಇರುವುದು ಒಳಿತು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನದೇ ಇರುವುದು ಉತ್ತಮ. 
        ಪ್ರತಿ ದಿವಸ ಕನಿಷ್ಠ ಸರಳ ವ್ಯಾಯಾಮ, ಯೋಗಾಭ್ಯಾಸ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳಿರಿ.
         ಇತ್ತೀಚಿಗೆ ಹೆಚ್ಚಿನ ಮಕ್ಕಳು ಓದಿನಲ್ಲಿ ತಲ್ಲೀನರಾಗಿರುತ್ತಾರೆ. ಬರವಣಿಗೆಗೆ ಗಮನಹರಿಸಿರುವುದಿಲ್ಲ, ಲಿಖಿತ ಪರೀಕ್ಷೆಯಲ್ಲಿ ಬರವಣಿಗೆಯೇ ಪ್ರಮುಖ ಅಸ್ತ್ರವಾಗಿದೆ ಎಂಬುದನ್ನು ಮರೆಯಬಾರದು.
       ‘ಸಮಯ ಪ್ರಜ್ಞೆ’ ಬಗ್ಗೆ ಹೆಚ್ಚುಗಮನ ಇರಲಿ, ಸಮಯವನ್ನು ವ್ಯವಸ್ಥಿತವಾಗಿ ಹೊಂದಾಣಿಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ವಿನಿಯೋಗಿಸಿದರೆ Golden Period ನಿಮ್ಮದಾಗುತ್ತದೆ. Time and tide waits none’ ಎಂಬುದನ್ನು ಮರೆಯಬೇಡಿ.
        ಪರೀಕ್ಷಾ ಕೇಂದ್ರದ ಸ್ಥಳ, ಆಸನ ನಿಮ್ಮ ಶಾಲೆ ಆಗದೇ ಇರಬಹುದು, ಹೊಸ ಸ್ಥಳವನ್ನು ಆನಂದದಿಂದ ಅನುಭವಿಸಿ.
      ನ್ಯೂನತೆ ಇರುವ ವಿಶೇಷ ಮಕ್ಕಳಿಗೆ ಪರೀಕ್ಷೆಯನ್ನು ಸುಗಮವಾಗಿ ಬರೆಯಲು ಕೆಲವು ವಿನಾಯಿತಿ ಮತ್ತು ಅವಕಾಶಗಳನ್ನು ಸರ್ಕಾರದ ಆದೇಶದಲ್ಲಿ ಒದಗಿಸಲಾಗಿದ್ದು ಸದುಪಯೋಗ ಪಡಿಸಿಕೊಳ್ಳುವುದು.
      ಪರೀಕ್ಷೆಗೆ ಹಾಜರಾಗಲು ಬೇಕಾಗಿರುವ ಪ್ರವೇಶ ಪತ್ರ, ಲೇಖನ ಸಾಮಗ್ರಿಗಳೊಂದಿಗೆ ಆತ್ಮವಿಶ್ವಾಸದಿಂದ ನಡೆಯಿರಿ, ಅನಗತ್ಯ ವಸ್ತುಗಳನ್ನು ಕೊಂಡೊಯ್ಯುವುದು ಬೇಡ. ಸದ್ಯಕ್ಕೆ ಇಷ್ಟು ಸಾಕು, ಮುಂಬರುವ ಪರೀಕ್ಷಾ ಹಬ್ಬಕ್ಕೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು......
.......................................... ವೈ. ಶಿವರಾಮಯ್ಯ 
ಸಹನಿರ್ದೇಶಕರು (ಕಾರ್ಯಕ್ರಮ)
ಸಮಗ್ರ ಶಿಕ್ಷಣ ಕರ್ನಾಟಕ
ಬೆಂಗಳೂರು
Mob: +91 94481 52791
*******************************************


Ads on article

Advertise in articles 1

advertising articles 2

Advertise under the article