ಬದಲಾಗೋಣವೇ ಪ್ಲೀಸ್ - 90
Wednesday, March 22, 2023
Edit
ಬದಲಾಗೋಣವೇ ಪ್ಲೀಸ್ - 90
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಕಾಡೇ ನನ್ನ ಮನೆ. ಕಾಡೇ ನನ್ನ ಬದುಕು. ಕಾಡೇ ನನ್ನ ಉಸಿರು. ಕಾಡು ಬಿಟ್ಟು ನನಗೇನು ಗೊತ್ತಿಲ್ಲ. ನನ್ನ ಆರೈಕೆ ಮಾಡಿ ಗುಂಡಿ ತೆಗೆದು ಮಣ್ಣ ಮೇಲೆ ನೆಡುವವರಿಲ್ಲ ಆದರೂ ಮಣ್ಣ ಮೇಲೆ ಉಸಿರು ಪಡೆದು ಬೆಳೆದಿರುವೆ. ನನ್ನ ಇಷ್ಟ ಪಟ್ಟು ಸಾಕುವವರಿಲ್ಲ ಆದರೂ ಅಲ್ಲೋ - ಇಲ್ಲೋ ಬೇರಿಳಿಸಿ ಆಳೆತ್ತರಕ್ಕೆ ಬೆಳೆದಿರುವೆ. ನನ್ನ ಅಪ್ಪಿ ಮುದ್ದಿಸುವವರಿಲ್ಲ ಆದರೂ ಅಪ್ಪಿಕೊಳ್ಳುವವರಿಗಾಗಿ ದಿನಾಲೂ ಕಾದಿರುವೆ. ದಿನದಿನವೂ ನೀರು ಹಾಕುವವರಿಲ್ಲ ಆದರೂ ಸ್ವಸಾಮರ್ಥ್ಯದಿಂದ ನೀರ ಹೀರಿ ಬದುಕಿರುವೆ. ಕಾಲಕಾಲಕ್ಕೆ ಗೊಬ್ಬರ ಹಾಕುವವರಿಲ್ಲ. ಆದರೂ ನಾನೇ ಗೊಬ್ಬರ ಹೀರಿ ದಷ್ಟಪುಷ್ಟವಾಗಿರುವೆ. ರೋಗ ಬಂದರೆ ಉಪಚರಿಸುವವರಿಲ್ಲ ಆದರೂ ರೋಗ ಮುಕ್ತನಾಗಿರುವೆ. ಚಳಿಗೆ ಹೊದಿಕೆ ಹಾಸುವವರಿಲ್ಲ ಆದರೂ ಮುದುಡದೆ ಬದುಕಿರುವೆ. ಬಿಸಿಲ ಬೇಗೆಗೆ ನೆರಳ ಚಪ್ಪರ ಒದಗಿಸುವವರಿಲ್ಲ ಆದರೂ ಬೇಗೆ ಸಹಿಸಿ ಬೆಳಗಿರುವೆ. ಹೂವಿನ ಆಕರ್ಷಣೆಗೆ ಬರುವವರಿಲ್ಲ ಆದರೂ ತಾಳ್ಮೆಗೆಡದೆ ಬರುತ್ತಾರೆ ಎಂದು ದಾರಿ ಕಾಯುತ್ತಿರುವೆ. ನನ್ನ ಹೂ ಕೊಯ್ದ ಮುಡಿಗೆ ಮುಡಿಯುವವರಿಲ್ಲ ಆದರೂ ಮುಡಿಯುವವರಿಗಾಗಿ ಕಾಯುತ್ತಿರುವೆ. ನನ್ನ ಹೂ ದೇವರ ಪಾದಕ್ಕೆ ಅರ್ಪಿಸುವವರಿಲ್ಲ ಆದರೂ ಭಕ್ತರಿಗಾಗಿ ಹುಡುಕುತಿರುವೆ. ಹೂ ಪೋಣಿಸಿ ಮಾಲೆ ಕಟ್ಟುವವರಿಲ್ಲ ಆದರೂ ಇನ್ನೂ ಹೂಬಿಡುವುದನ್ನು ಮರೆತಿಲ್ಲ. ನನಗೂ ಜತೆಗಾರರ ಅಗತ್ಯವಿದೆ ಆದರೂ ಏಕಾಂಗಿಯಾಗಿರುವೆ... ಆದರೂ ಆದರೂ... ಬಾಡಿಹೋಗುವ ಮುನ್ನ ನನ್ನ ಹೆಜ್ಜೆ ಗುರುತು ಉಳಿಸಿ ಹೋಗುವೆ ಇದು ಖಂಡಿತಾ...
ಎಷ್ಟೊಂದು ಸ್ಫೂರ್ತಿಯ ಮಾತು ಕಾಡ ಮಲ್ಲಿಗೆಯದ್ದು. ತನ್ನೊಳಗೆ ಅದೆಷ್ಟೂ ಕೊರತೆಗಳನ್ನು ಹೊಂದಿದ್ದರೂ ಅದನ್ನೆಲ್ಲಾ ಮೀರಿ ತನ್ನ ದೃಢ ಮನಸ್ಸಿನಿಂದ, ಧನಾತ್ಮಕ ಭಾವನೆಗಳೊಂದಿಗೆ ಬದುಕಿ ತನ್ನ ಹೆಜ್ಜೆ ಗುರುತೊಂದನ್ನು ಉಳಿಸಿ... ಇತರರಿಗೆ ಬದುಕಿ ತೋರಿಸುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಪರೀಕ್ಷೆ ಎಂಬ ಹಬ್ಬವನ್ನು ಎದುರಿಸುತ್ತಿರುವ ಎಲ್ಲಾ ಮಕ್ಕಳಿಗೂ ಇದು ಸ್ಫೂರ್ತಿದಾಯಕವಾಗಿದೆ. ಕಲಿಕಾ ವಿಚಾರ ಹಾಗೂ ಕಲಿಕಾ ಪರಿಸರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿರುವ ವಿವಿಧ ಕೊರತೆಗಳನ್ನು ಬದಿಗಿರಿಸಿ ಕಾಡ ಮಲ್ಲಿಗೆಯಂತೆ ಗುರಿಯೊಂದನ್ನೇ ಮುಂದಿಟ್ಟುಕೊಂಡು, ಕೊರತೆಗಳನ್ನೇ ಮೆಟ್ಟಿಲಾಗಿಸುವ ಕಲೆಯನ್ನು ಕರಗತಗೊಳಿಸೋಣ. ಸಾಧನೆಯ ತುದಿ ತಲುಪೋಣ - ಪರೀಕ್ಷೆ ಎಂಬ ಪಯಣದಲ್ಲಿ ನಮ್ಮ ಹೆಜ್ಜೆಗುರುತುಗಳನ್ನು ಧೃಡವಾಗಿ ಮೂಡಿಸೋಣ. ಕೊರತೆಗಳನ್ನು ಮೀರಿ ಬದುಕುವ ಕಲೆ ಕಲಿಯೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************